ಮಂದಿರ, ಚರ್ಚ್‌ಗಳ ನಿರ್ಮಾಣ ಸರಕಾರದ ಕೆಲಸವಲ್ಲ: ಸಚಿನ್ ಪೈಲಟ್

Update: 2018-11-27 18:11 GMT

ಜೈಪುರ,ನ.27: ಧರ್ಮವನ್ನು ರಾಜಕಾರಣದೊಂದಿಗೆ ಬೆರೆಸುತ್ತಿರುವುದಕ್ಕಾಗಿ ರಾಜ್ಯ ಮತ್ತು ಕೇಂದ್ರದಲ್ಲಿಯ ಬಿಜೆಪಿ ಸರಕಾರಗಳ ವಿರುದ್ಧ ಮಂಗಳವಾರ ತೀವ್ರ ದಾಳಿ ನಡೆಸಿದ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಚಿನ್ ಪೈಲಟ್ ಅವರು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ವ್ಯಕ್ತಿಯ ಧರ್ಮ ಮತ್ತು ಆತ ಏನು ತಿನ್ನುತ್ತಾನೆ ಎನ್ನುವುದು ಮುಖ್ಯವಾಗಿಬಿಟ್ಟಿದೆ ಎಂದು ಹೇಳಿದರು.

ಗುರುದ್ವಾರಾಗಳು, ಚರ್ಚ್‌ಗಳು ಮತ್ತು ಮಂದಿರಗಳನ್ನು ನಿರ್ಮಿಸುವುದು ರಾಜಕೀಯ ಪಕ್ಷಗಳು ಅಥವಾ ಸರಕಾರಗಳ ಕೆಲಸವೆಂದು ತಾನು ಭಾವಿಸಿಲ್ಲ. ಅವರು ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕವಾಗಿರಿಸಬೇಕು. ಆದರೆ ಇತರ ಎಲ್ಲವೂ....ಜಿಎಸ್‌ಟಿ, ನೋಟು ನಿಷೇಧ, ಸ್ಟಾಂಡ್-ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಈ ಎಲ್ಲವೂ ವಿಫಲಗೊಂಡಾಗ ಮತ್ತು ನಿರುದ್ಯೋಗವುಂಟಾದಾಗ ಮತ್ತು ರೈತರಲ್ಲಿ ಕ್ರೋಧ ತುಂಬಿದಾಗ ಅವರ ಬಳಿ ಯಾವುದೇ ಉತ್ತರವಿಲ್ಲ. ಹೀಗಾಗಿ ಅವರು ಮಸೀದಿ, ಮಂದಿರ ಇತ್ಯಾದಿಗಳ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ ಎಂದರು. ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಟೊಂಕ್ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕಾಂಗ್ರೆಸ್ ನಿರ್ಧಾರದ ಕುರಿತು ಸುದ್ದಿಗಾರರ ಪ್ರಶ್ನೆಗೆ, ಚುನಾವಣೆಗಳನ್ನು ಕುಡಿಯುವ ನೀರು, ರಸ್ತೆಗಳು ಮತ್ತು ಕೈಗಾರಿಕೆಗಳನ್ನು ವಿಷಯವನ್ನಾಗಿಟ್ಟುಕೊಂಡು ಹೋರಾಡಬೇಕೇ ಹೊರತು ಧರ್ಮವನ್ನಲ್ಲ. ತೋರಿಸುವಂತಹ ಯಾವುದೇ ಸಾಧನೆಯಿಲ್ಲ ಎನ್ನುವುದೇ ಬಿಜೆಪಿಯ ಸಮಸ್ಯೆಯಾಗಿದೆ. ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಸರಕಾರವು ಎಲ್ಲ ರಂಗಗಳಲ್ಲಿಯೂ ದಯನೀಯವಾಗಿ ವಿಫಲಗೊಂಡಿದೆ. ಹೀಗಾಗಿ ಮಂದಿರ,ಮಸೀದಿ,ಜಾತಿ ಮತ್ತು ಭಾಷೆಯ ಕುರಿತು ವಿವಾದವೆಬ್ಬಿಸುವುದು ಅವರಿಗೆ ಇರುವ ಕೊನೆಯ ಆಸರೆಯಾಗಿದೆ. ಅವೆಲ್ಲವೂ ಅಸಂಗತವಾಗಿವೆ, ಜನರು ವಿಷಯಗಳನ್ನು ಆಧರಿಸಿ ಚುನಾವಣೆಗಳಲ್ಲಿ ಹೋರಾಡಬೇಕೇ ಹೊರತು ಧರ್ಮವನ್ನಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News