ಐಎಸ್‌ಐ ವರದಿ ಬಳಿಕ ಮತಗಟ್ಟೆಗಳನ್ನು ಹೆಚ್ಚಿಸುವ ಬಗ್ಗೆ ನಿರ್ಧಾರ: ಚುನಾವಣಾ ಆಯೋಗ

Update: 2018-12-01 16:23 GMT

ಹೊಸದಿಲ್ಲಿ,ಡಿ.1: ವಿವಿಪ್ಯಾಟ್ ಚೀಟಿಗಳನ್ನು ಇವಿಎಂ ಫಲಿತಾಂಶಗಳೊಂದಿಗೆ ತಾಳೆ ನೋಡಲು ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ರಾಜಕೀಯ ಪಕ್ಷಗಳ ಬೇಡಿಕೆಗಳ ನಡುವೆಯೇ ನಿವೃತ್ತರಾಗುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರು,ಭಾರತೀಯ ಅಂಕಿಅಂಶ ಸಂಸ್ಥೆ(ಐಎಸ್‌ಐ)ಯು ತನ್ನ ವರದಿಯನ್ನು ಸಲ್ಲಿಸಿದ ಬಳಿಕ ಆಯೋಗವು ಈ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಶನಿವಾರ ಇಲ್ಲಿ ತಿಳಿಸಿದರು.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಗಿದ ಬಳಿಕ ಐಎಸ್‌ಐ ವರದಿಯನ್ನು ಸಲ್ಲಿಸಲಿದೆ ಮತ್ತು ಆ ಬಳಿಕವೇ ನಿರ್ಧಾರವೊಂದನ್ನು ಕೈಗೊಳ್ಳಲು ಆಯೋಗಕ್ಕೆ ಸಾಧ್ಯವಾಗಲಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.

ವಿವಿಪ್ಯಾಟ್ ಚೀಟಿಗಳನ್ನು ತಾಳೆ ನೋಡುವ ಮತಗಟ್ಟೆಗಳ ಸಂಖ್ಯೆ ಹೆಚ್ಚಲಿದೆಯೇ ಎಂಬ ಪ್ರಶ್ನೆಗೆ,ಅದು ಹೆಚ್ಚುತ್ತದೋ ಯಥಾಸ್ಥಿತಿಯಲ್ಲಿರುತ್ತದೋ ಅಥವಾ ಕಡಿಮೆಯಾಗುತ್ತದೋ ಎನ್ನುವುದನ್ನು ತಾನು ಹೇಳಲು ಸಾಧ್ಯವಿಲ್ಲ. ಅದು ಐಎಸ್‌ಐ ವರದಿಯನ್ನು ಅವಲಂಬಿಸಿದೆ ಎಂದು ರಾವತ್ ಉತ್ತರಿಸಿದರು.

ಮತಗಟ್ಟೆಗಳಲ್ಲಿ ಅಕ್ರಮಗಳು ನಡೆದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಇವಿಎಂಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಮತ್ತು ಅವುಗಳನ್ನು ತಿರುಚಲಾಗಿಲ್ಲ ಎಂದು ಮತದಾರರಲ್ಲ್ಲಿ ಭರವಸೆ ಮೂಡಿಸಲು ಪ್ರತಿ ಕ್ಷೇತ್ರದಲ್ಲಿ ಶೇ.10ರಿಂದ ಶೇ.30ಷ್ಟು ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಚೀಟಿಗಳನ್ನು ಫಲಿತಾಂಶದೊಂದಿಗೆ ತಾಳೆ ಹಾಕಬೇಕು ಎಂದು ಪಕ್ಷಗಳು ಆಗ್ರಹಿಸಿವೆ.

ಈಗ ಎಲ್ಲ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದೆ ಮತ್ತು ಪ್ರತಿ ಮತಕ್ಷೇತ್ರದಲ್ಲಿ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ. ಮತದಾರ ಮತದಾನ ಮಾಡಿರುವ ಪಕ್ಷದ ಚಿಹ್ನೆಯನ್ನು ಹೊಂದಿರುವ ಚೀಟಿಯನ್ನು ಈ ಯಂತ್ರವು ಪ್ರದರ್ಶಿಸುತ್ತದೆ. ಏಳು ಸೆಕೆಂಡ್‌ಗಳ ಕಾಲ ಯಂತ್ರದಲ್ಲಿನ ಪುಟ್ಟ ಕಿಂಡಿಯಲ್ಲಿ ಕಾಣುವ ಈ ಚೀಟಿಯು ಬಳಿಕ ಪೆಟ್ಟಿಗೆಯೊಂದನ್ನು ಸೇರುತ್ತದೆ. ಮತದಾರ ಅದನ್ನು ಒಯ್ಯುವಂತಿಲ್ಲ.

ವಿವಿಪ್ಯಾಟ್ ಯಂತ್ರಗಳನ್ನು ಎಲ್ಲ ಮತಗಟೆಗಳಲ್ಲಿ ಬಳಸಲಾಗುತ್ತಿದೆಯಾದರೂ ಪ್ರತಿ ಕ್ಷೇತ್ರದ ಒಂದು ಮತಗಟ್ಟೆಯಲ್ಲಿನ ಇವಿಎಂ ಫಲಿತಾಂಶವನ್ನು ಮಾತ್ರ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಹಾಕಲಾಗುತ್ತಿದೆ.

ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಅನುಕೂಲವಾಗುವಂತೆ ಇವಿಎಮ್‌ಗಳನ್ನು ತಿರುಚಲಾಗುತ್ತಿದೆ ಎಂಬ ಬಗ್ಗೆ ಮತದಾರರಲ್ಲಿಯ ಭೀತಿಯನ್ನು ನಿವಾರಿಸಲು ಇಂತಹ ಮತಗಟ್ಟೆಗಳ ಸಂಖ್ಯೆಗಳನ್ನು ಹೆಚ್ಚಿಸಬೇಕು ಎನ್ನುವುದು ರಾಜಕೀಯ ಪಕ್ಷಗಳ ಬೇಡಿಕೆಯಾಗಿದೆ. ಚುನಾವಣಾ ಆಯೋಗವೂ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಲು 2016ರಿಂದಲೂ ಚಿಂತನೆಯನ್ನು ನಡೆಸುತ್ತಿದೆ. ಆಗಿನ ಮುಖ್ಯ ಚುನಾವಣಾ ಆಯುಕ್ತ ನಸೀಂ ಝೈದಿ ಅವರು ಈ ಬಗ್ಗೆ ಶೀಘ್ರ ನಿರ್ಣಯಕ್ಕಾಗಿ ಒತ್ತು ನೀಡಿದ್ದರಾದರೂ ಹೆಚ್ಚಿನ ಪ್ರಗತಿಯುಂಟಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News