ಬಿಜೆಪಿ ನಿಷ್ಠ ಆರ್ಥಿಕ ತಜ್ಞ ಕೃಷ್ಣಮೂರ್ತಿ ಸುಬ್ರಮಣಿಯನ್

Update: 2018-12-10 18:37 GMT

ನೋಟು ನಿಷೇಧವನ್ನು ಬೆಂಬಲಿಸಿದ, ಅದನ್ನು ಪ್ರಶಂಸಿಸಿದ ಬೆರಳೆಣಿಕೆಯ ಅರ್ಥ ಶಾಸ್ತ್ರಜ್ಞರಲ್ಲಿ ಕೃಷ್ಣಮೂರ್ತಿ ಸುಬ್ರಮಣಿಯನ್ ಒಬ್ಬರು. ಬಹುಶಃ ಮೋದಿಸರಕಾರ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕವಾಗಲು ಸುಬ್ರಮಣಿಯನ್ ಅವರಿಗೆ ಈ ಒಂದು ಅರ್ಹತೆ ಧಾರಾಳ ಸಾಕು. ವಿಪರ್ಯಾಸವೆಂದರೆ ನೋಟು ನಿಷೇಧವನ್ನು ಕಟುವಾಗಿ ಖಂಡಿಸಿದವರಲ್ಲಿ ಒಬ್ಬರಾದ ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪದವಿ ಪಡೆದಿರುವವರು ಕೃಷ್ಣಮೂರ್ತಿ. ಆರ್ಥಿಕ ಸಲಹೆಗಾರ ಎಷ್ಟರಮಟ್ಟಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಲ್ಲ ಎನ್ನುವುದು ಸದ್ಯದ ರಾಜಕೀಯ ದಿನಗಳಲ್ಲಿ ಅನುಮಾನವಾಗಿಯೇ ಉಳಿದಿದೆ. ಈ ಹಿಂದಿನ ಆರ್ಥಿಕ ಸಲಹೆಗಾರರು, ನೋಟು ನಿಷೇಧದ ಕುರಿತಂತೆ ತನ್ನ ಸಲಹೆಯನ್ನು ಕೇಂದ್ರ ಸ್ವೀಕರಿಸಿರಲಿಲ್ಲ ಎಂದು ಆರೋಪಿಸಿದ್ದಾರೆ. ಹೀಗಿರುವಾಗ ಸುಬ್ರಮಣಿಯನ್ ಅವರು ದೇಶದ ಅರ್ಥಿಕತೆಗೆ ಎಷ್ಟರಮಟ್ಟಿಗೆ ನೆರವಾಗಬಲ್ಲರು?

ಇಷ್ಟಾದರೂ ಸುಬ್ರಮಣಿಯನ್, ಓರ್ವ ಸ್ವಂತಿಕೆಯ, ಪ್ರಚೋದನಾತ್ಮಕ ಹಾಗೂ ಸಂಶೋಧನಾತ್ಮಕ ದೃಷ್ಟಿಕೋನಗಳನ್ನು ಹೊಂದಿರುವ ಅರ್ಥಶಾಸ್ತ್ರಜ್ಞ. ತನಗೆ ಸರಿಕಂಡದ್ದೆಂದು ಅನಿಸಿದ್ದನ್ನು ಬಹಿರಂಗವಾಗಿ ಹೇಳಿಕೊಳ್ಳುವುದರಲ್ಲಿ ಅವರು ಯಾವತ್ತೂ ಹಿಂದೇಟು ಹಾಕಿದವರಲ್ಲ. ಅವರು ಆರ್‌ಬಿಐ ಗವರ್ನರ್ ಆಗಿ ರಘುರಾಮ್ ರಾಜನ್ ಅವರ ಸಾಧನೆಯನ್ನು ಪ್ರಶಂಸಿಸಿದ್ದರು.

ಆಂಗ್ಲ ದಿನಪತ್ರಿಕೆಗಳಿಗೆ ಕೃಷ್ಣಮೂರ್ತಿ ಸುಬ್ರಮಣಿಯನ್ ಹಲವಾರು ಅಂಕಣ ಬರಹಗಳನ್ನು ಬರೆಯುತ್ತಿರುತ್ತಾರೆ. ಈ ಅಂಕಣಗಳಲ್ಲಿ ನಗದು ಅಮಾನ್ಯತೆ, ವಂಶಾಡಳಿತ ರಾಜಕಾರಣ, ಕಾರ್ಮಿಕ ಸಂಘಟನೆಗಳ ಧೋರಣೆ ಇತ್ಯಾದಿ ವಿಷಯಗಳ ಬಗ್ಗೆ ತನ್ನ ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸುವ ವಿವಾದಾತ್ಮಕ ಕ್ರಮವನ್ನು ಘೋಷಿಸಿದ ಕೆಲವೇ ದಿನಗಳ ಆನಂತರ ಸುಬ್ರಮಣಿಯನ್ ನಗದು ಅಮಾನ್ಯತೆಯು ಭ್ರಷ್ಟಾಚಾರದ ವಿರುದ್ಧ ಭಾರತದ ಕ್ರಾಂತಿಕಾರಿ ಹೋರಾಟವಾಗಲಿದೆಯೆಂದು ಹೇಳಿದ್ದರು.

‘‘ಅಪರೂಪದ ನಿದರ್ಶನವೆಂಬಂತೆ ಸರಕಾರವು ಒಂದೆಡೆ ಶ್ರೀಸಾಮಾನ್ಯರು, ಕಾನೂನಿಗೆ ವಿಧೇಯರಾಗಿರುವವರು ಭಾವನೆಗಳಿಗೆ ಸ್ಪಂದಿಸಿದ್ದರೆ, ಇನ್ನೊಂದೆಡೆ ಹಲವು ತಜ್ಞರ ಶಿಫಾರಸುಗಳಿಗೆ ಮಾನ್ಯತೆ ನೀಡಿದೆ’’ ಎಂದವರು, ನಗದು ಅಮಾನ್ಯತೆಯ ಬಳಿಕ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಅಂಕಣ ಬರಹದಲ್ಲಿ ತಿಳಿಸಿದ್ದಾರೆ.

 2016ರ ನವೆಂಬರ್‌ನಲ್ಲಿ, ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಕೃಷ್ಣಮೂರ್ತಿ ಸುಬ್ರಮಣಿಯನ್, ತನ್ನ ಅಂಕಣ ಬರಹವೊಂದರಲ್ಲಿ, ಆ ರಾಜ್ಯದಲ್ಲಿ ಅಪರಾಧ ನಿಯಂತ್ರಣದಲ್ಲಿ ಹಿಂದಿನ ಬಿಜೆಪಿ ಸರಕಾರದ ಸಾಧನೆ, ಇತರ ಎಲ್ಲಾ ಸರಕಾರಗಳಿಗಿಂತ ಚೆನ್ನಾಗಿತ್ತು ಎಂದು ಸರ್ಟಿಫಿಕೇಟ್ ಕೊಟ್ಟಿದ್ದರು. 1999-2003ರಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಉತ್ತರಪ್ರದೇಶದಲ್ಲಿ ಹಿಂಸಾತ್ಮಕ ಅಪರಾಧದ ಪ್ರಮಾಣ ವಾರ್ಷಿಕವಾಗಿ ಶೇ.16ರಷ್ಟು ಇಳಿಕೆಯಾಗಿತ್ತು. ಆದರೆ ಆನಂತರ ಅಧಿಕಾರಕ್ಕೇರಿದ ಎಸ್ಪಿ ಹಾಗೂ ಬಿಎಸ್ಪಿ ಸರಕಾರಗಳ ಅವಧಿಗಳಲ್ಲಿ ಅಪರಾಧದ ಪ್ರಮಾಣವು ಗಣನೀಯವಾಗಿ ಹೆಚ್ಚಿದ್ದು, ವಾರ್ಷಿಕವಾಗಿ ಶೇ. 7 ಏರಿಕೆ ಕಂಡಿದ್ದಾಗಿ ಪ್ರತಿಪಾದಿಸಿದ್ದರು.

ಆಂಗ್ಲ ದಿನಪತ್ರಿಕೆಯಲ್ಲಿ ಪ್ರಕಟವಾದ ಸುಬ್ರಮಣಿಯನ್ ಅವರ ಇನ್ನೊಂದು ಅಂಕಣದಲ್ಲಿ, ಸುಬ್ರಮಣಿಯನ್ ಅವರು ಸರಕಾರವು ಕಾರ್ಮಿಕ ಸಂಘಟನೆಗಳನ್ನು ಅತಿಯಾಗಿ ಒಲೈಕೆ ಮಾಡುತ್ತಿರುವುದನ್ನು ಕಟುವಾಗಿ ಖಂಡಿಸಿದ್ದರು. ಕಾರ್ಮಿಕ ಒಕ್ಕೂಟಗಳು ಸಂಘಟಿತ ವಲಯದಲ್ಲಿರುವ ಶೇ. 15ರಷ್ಟು ಕಾರ್ಮಿಕ ಒಕ್ಕೂಟಗಳನ್ನು ಪ್ರತಿನಿಧಿಸುತ್ತವೆ. ಅವು ವೌನವಾಗಿರುವ ಬಹುಸಂಖ್ಯಾತ ಕಾರ್ಮಿಕ ಸಮುದಾಯವು ಕನಸಿನಲ್ಲೂ ಯೋಚಿಸಲು ಸಾಧ್ಯವಿಲ್ಲದಂತಹ, ರಜೆ, ನಿವೃತ್ತಿ ಸೌಲಭ್ಯಗಳು, ವಿಮೆ ಇತ್ಯಾದಿಗಳನ್ನು ಹೊಂದಿರುವ ಸ್ಥಿತಿವಂತ ಕಾರ್ಮಿಕರ ಒಂದು ಸಣ್ಣ ಸಮುದಾಯವನ್ನು ಮಾತ್ರವೇ ಪ್ರತಿನಿಧಿಸುತ್ತವೆ ಎಂದು ಬರೆದಿದ್ದರು. ವಂಶಾಡಳಿತ ಪ್ರಬಲ ವಿರೋಧಿ

ವಂಶಾಡಳಿತ ರಾಜಕಾರಣದ ಪ್ರಬಲ ಟೀಕಾಕಾರರಾದ ಕೃಷ್ಣಮೂರ್ತಿ 2016ರ ಜುಲೈನಲ್ಲಿ ಬರೆದ ತನ್ನ ಅಂಕಣದಲ್ಲಿ, ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷವು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಳಸಿಕೊಳ್ಳುವುದನ್ನು ಟೀಕಿಸಿದ್ದರು. ಚುನಾವಣೆಯನ್ನು ಗೆಲ್ಲುವ ಹತಾಶ ಪ್ರಯತ್ನವಾಗಿ ಕಾಂಗ್ರೆಸ್‌ನ ವಂಶಾಡಳಿತ ರಾಜಕಾರಣವು ತನ್ನ ಕೊನೆಯ ದಾಳವನ್ನು ಎಸೆದಿದೆಯೆಂದು ಅವರು ಕಟಕಿಯಾಡಿದ್ದರು.

ಹಿಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ ರಾಜನ್ ಅವರ ಆರ್ಥಿಕ ನೀತಿಗಳು 20016ರಲ್ಲಿ ವ್ಯಾಪಕ ಟೀಕೆಗೊಳಗಾಗಿದ್ದವು. ಆದರೆ ತನ್ನ ಗುರು ಹಾಗೂ ಮಾರ್ಗದರ್ಶಕರೂ ಆದ ರಘುರಾಮ್‌ರಾಜನ್‌ರನ್ನು ಆ ಸಂದರ್ಭದಲ್ಲಿ ಕೃಷ್ಣಮೂರ್ತಿ ಬಲವಾಗಿ ಸಮರ್ಥಿಸಿದ್ದರು. ತನ್ನ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ರಘುರಾಮ್ ರಾಜನ್, ಹಣದುಬ್ಬರವನ್ನು ಶೇ.11ರಿಂದ ಶೇ.5ಕ್ಕೆ ಇಳಿಸಿದ್ದಲ್ಲದೆ, ಆರ್ಥಿಕ ಬೆಳವಣಿಗೆಯನ್ನು ಶೇ.5ರಿಂದ ಶೇ.8ಕ್ಕೆ ಏರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದಾಗ್ಯೂ, ಸ್ಥಾಪಿತ ಹಿತಾಸಕ್ತಿಗಳು ಅವರ ಮೇಲೆ ಆರ್ಥಿಕ ಬೆಳವಣಿಗೆಯನ್ನು ಅದುಮಿದ್ದಾರೆಂಬ ಹುಸಿ ಆರೋಪವನ್ನು ಮಾಡುತ್ತಿವೆ ಎಂದು ಕಟಕಿಯಾಡಿದ್ದರು.

ವಿತ್ತ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗಾಗಿ ಕೃಷ್ಣಮೂರ್ತಿ ರಘುರಾಮ್ ರಾಜನ್‌ರನ್ನು ಕ್ರಿಕೆಟ್‌ನ ಜೀವಂತ ದಂತಕತೆ ಸಚಿನ್ ತೆಂಡುಲ್ಕರ್‌ಗೆ ಹೋಲಿಸಿದ್ದರು. 23 ಹೊಸ ಬ್ಯಾಂಕ್‌ಗಳಿಗೆ ಪರವಾನಿಗೆ ನೀಡುವ ಮೂಲಕ, ದೇಶದ ವಿತ್ತ ವ್ಯವಸ್ಥೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆಂದು ಪ್ರಶಂಸಿಸಿದ್ದರು.ಹಲವು ರಾಜಕೀಯ ವಿರೋಧಾಭಾಸಗಳ ಗಣಿಯಾಗಿರುವ, ಬಿಜೆಪಿಗೆ ಅತಿ ನಿಷ್ಠ ನಿಲುವುಗಳನ್ನು ತಳೆದುಕೊಂಡು ಬಂದಿರುವ ಸುಬ್ರಮಣಿಯನ್ ಭಾರತದ ಆರ್ಥಿಕ ವಿಷಮ ಘಟ್ಟದಲ್ಲಿ ಸಲಹೆಗಾರರಾಗಿದ್ದಾರೆ. ಬಿಜೆಪಿ ನಿಷ್ಠೆ ಭಾರತದ ಆರ್ಥಿಕ ಬೆಳವಣಿಗೆಗೆ ಯಾವ ರೀತಿಯಲ್ಲೂ ಸಹಕಾರಿಯಾಗಲಾರದು ಎನ್ನುವ ಅರಿವನ್ನು ಅವರು ಬೆಳೆಸಿಕೊಂಡರೆ, ಅವರಿಂದ ಒಂದಿಷ್ಟು ಕ್ರಾಂತಿಯನ್ನು ನಿರೀಕ್ಷಿಸಬಹುದು.

Writer - ಆರ್. ಎನ್.

contributor

Editor - ಆರ್. ಎನ್.

contributor

Similar News