ಶಿಕ್ಷಣ ಮಾಧ್ಯಮ ಮತ್ತು ಗುಣಮಟ್ಟ

Update: 2018-12-15 18:54 GMT

ಸರಕಾರಿ ಶಾಲೆಗಳಲ್ಲಿ ಅರ್ಹರಾದ ಉತ್ತಮ ಶಿಕ್ಷಕರಿದ್ದೂ ಕಲಿಕೆಯ ಮಟ್ಟ ಸುಧಾರಿಸದಿರಲು ಕಾರಣಗಳೇನಿರಬಹುದು? ಸರಕಾರಿ ಶಾಲೆಗಳು ಮುಚ್ಚಲು ಅಥವಾ ಒಂದು ಸರಕಾರಿ ಶಾಲೆಯನ್ನು ಪಕ್ಕದೂರಿನ ಇನ್ನೊಂದು ಶಾಲೆಯೊಳಗೆ ವಿಲೀನಗೊಳಿಸಲು ಕಾರಣಗಳೇನಿರಬಹುದು? ಕಾರಣಗಳನ್ನು ದೀಪ ಹಿಡಿದುಕೊಂಡು ಹುಡುಕ ಬೇಕಿಲ್ಲ. ಸರಕಾರಿ ಶಿಕ್ಷಕರನ್ನು ಚುನಾವಣೆ, ಜನಗಣತಿ, ಜಾನುವಾರು ಗಣತಿ ಇತ್ಯಾದಿ ಬೋಧಕೇತರ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣ ಮಟ್ಟ ಕುಸಿತಕ್ಕೆ ಪ್ರಮುಖ ಕಾರಣ. ಸರಕಾರಿ ಶಾಲೆಗಳ ಶಿಕ್ಷಕರನ್ನು ಇಂಥ ಅನ್ಯ ಕೆಲಸಗಳಿಗೆ ಬಳಸಿಕೊಳ್ಳುವ ಪದ್ಧತಿ ನಿಲ್ಲಬೇಕು. ಉಪಾಧ್ಯಾಯರ ಸೇವೆ ಸಂಪೂರ್ಣವಾಗಿ ಬೋಧನೆಗೇ ಮೀಸಲಾಗಬೇಕು.


ಚುನಾವಣೆಗಳು ಬರುತ್ತವೆ-ಹೋಗುತ್ತವೆ. ಹೊಸ ಸರಕಾರಗಳು ಬರುತ್ತವೆ. ಪ್ರತಿ ಸರಕಾರವೂ ಹಲವು ಹನ್ನೊಂದು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಮಾತನಾಡುತ್ತವೆ. ಆದರೆ ಬಹುತೇಕ ಈ ಮಾತುಗಳೆಲ್ಲ ಆರಂಭ ಶೂರತ್ವದವು. ಶಿಕ್ಷಣ ಗುಣಮಟ್ಟ ಸುಧಾರಣೆ, ಸರಕಾರಿ ಶಾಲೆಗಳಿಗೆ ಕಾಯಕಲ್ಪ, ಶಿಕ್ಷಣ ಮಾಧ್ಯಮವಾಗಿ ಕನ್ನಡ-ಇಂಥ ಮಾತುಗಳನ್ನು ನಾವು ಅನೇಕ ವರ್ಷಗಳಿಂದ ಕೇಳುತ್ತಿದ್ದೇವೆ. ಆದರೆ ಕರ್ನಾಟಕದಲ್ಲಿ ಕನ್ನಡ ಶಾಲೆಗಳ ಸೂರುಗಳು ಕಳಚಿಬೀಳುತ್ತಲೇ ಇವೆ. ಇನ್ನು ಶಿಕ್ಷಣದ ಗುಣಮಟ್ಟ....ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಕುರಿತ ರಾಷ್ಟ್ರೀಯ ಮಂಡಲಿಯ ಇತ್ತೀಚಿನ ವರದಿ ಕರ್ನಾಟಕದಲ್ಲಿನ ಶಿಕ್ಷಣದ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.

ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಕುರಿತ ರಾಷ್ಟ್ರೀಯ ಮಂಡಲಿ ಕಳೆದ ಫೆಬ್ರವರಿಯಲ್ಲಿ ದೇಶದ ಮುವತ್ನಾಲ್ಕು ರಾಜ್ಯಗಳ 610 ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹತ್ತನೇ ತರಗತಿ ವಿದ್ಯಾಥಿಗಳಿಗೆ ಪರೀಕ್ಷೆಯೊಂದನ್ನು ನಡೆಸಿತು. ಆಧುನಿಕ ಭಾರತೀಯ ಭಾಷೆಗಳು, ಇಂಗ್ಲಿಷ್, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಗಳಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಸಾಧನೆ ದಿಗಿಲು ಹುಟ್ಟಿಸುವಂತಿದೆ ಎನ್ನುತ್ತದೆ ಮಂಡಲಿಯ ವರದಿ. ಈ ವರದಿ ಪ್ರಕಾರ, ವಿಜ್ಞಾನ ಮತ್ತು ಗಣಿತಗಳಲ್ಲಿ ಕರ್ನಾಟಕದ ಶೇ.62ರಷ್ಟು ವಿದ್ಯಾರ್ಥಿಗಳು ನಿರೀಕ್ಷಿತ ಮಟ್ಟ ಮುಟ್ಟದೆ ಹಿಂದಿದ್ದಾರೆ.ಶೇ.55ರಷ್ಟು ಮಂದಿ ವಿದ್ಯಾರ್ಥಿಗಳು ಸಮಾಜ ವಿಜ್ಞಾನದಲ್ಲಿ, ಶೇ.58ರಷ್ಟು ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಹಾಗೂ ಶೇ. 45ರಷ್ಟು ವಿದ್ಯಾರ್ಥಿಗಳು ಆಧುನಿಕ ಭಾರತೀಯ ಭಾಷೆಗಳಲ್ಲಿ ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ಹತ್ತನೆಯ ತರಗತಿಯ ಪರೀಕ್ಷೆ ಫಲಿತಾಂಶ ಹುಡುಗರ ಭವಿಷ್ಯದಲ್ಲಿ ನಿರ್ಣಾಯಕವಾದುದು.ಎಂದೇ ಮಂಡಲಿಯ ವರದಿ ಕಳವಳಕಾರಿಯಾದುದು. ವಿದ್ಯಾರ್ಥಿಗಳು ಈ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲವೆಂದರೆ, ಇಲ್ಲಿಯವರೆಗಿನ ಅವರ ಕಲಿಕೆ ಮತ್ತು ಶಿಕ್ಷಣ ಗುಣಮಟ್ಟ ಕಳಪೆಯದಾಗಿದೆ ಎಂದೇ ಅರ್ಥ. ಇಂಥ ಕಳಪೆ ಶಿಕ್ಷಣಕ್ಕೆ ಸುವ್ಯವಸ್ಥಿತ ಶಾಲೆಗಳು ಮತ್ತು ಉತ್ತಮ ಅರ್ಹತೆಯುಳ್ಳ ಶಿಕ್ಷಕರ ಕೊರತೆಯೇ ಕಾರಣವೆಂದು ವರದಿ ಬೆರಳು ಮಾಡಿ ಹೇಳಿದೆ.

ಖಾಸಗಿ ಶಾಲೆಗಳಲ್ಲಿ ಸೂಕ್ತ ಅರ್ಹತೆಯುಳ್ಳ ಶಿಕ್ಷಕರನ್ನು ನೇಮಿಸಿಕೊಳ್ಳದಿರುವುದೇ ಇದಕ್ಕೆ ಕಾರಣ ಎನ್ನುವ ಸಮಿತಿಯ ವರದಿಯ ಇನ್ನೊಂದು ಆಂಶ ವಿಸ್ಮಯಕಾರಿಯಾದುದು. ಸರಕಾರಿ ಶಾಲೆಗಳಲ್ಲಿ ಸೂಕ್ತ ಅರ್ಹತೆಯುಳ್ಳ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆಯಾದರೂ ಸಾಮರ್ಥ್ಯ ಪರೀಕ್ಷೆಯಲ್ಲಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಹಿಂದಿದ್ದಾರೆ. ಹೀಗೇಕೆ? ಸರಕಾರ ನಡೆಸುವ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆ ಇದಕ್ಕೆ ಮುಖ್ಯ ಕಾರಣ. ಬಹುತೇಕ ವಿದ್ಯಾರ್ಥಿಗಳು ಬಡತನ ಮೂಲದವರಾಗಿದ್ದು, ಅವರ ತಂದೆತಾಯಿಯರೂ ಶೈಕ್ಷಣಿಕವಾಗಿಯೂ ಹಿಂದುಳಿದವರಾಗಿರುತ್ತಾರೆ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಂತೂ ಕೃಷಿ ಇತ್ಯಾದಿ ಕೆಲಸಕಾರ್ಯಗಳಲ್ಲಿ ಪೋಷಕರಿಗೆ ನೆರವಾಗಬೇಕಾದ್ದು ಅನಿವಾರ್ಯವಾದ್ದರಿಂದ ಇದು ಅವರ ವ್ಯಾಸಂಗದ ಮೇಲೆ ಪರಿಣಾಮ ಬೀರದೆ ಇರುವುದಿಲ್ಲ. ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಮತ್ತು ಲಭ್ಯವಿರುವ ಶಿಕ್ಷಣ ಸೌಲಭ್ಯಗಳನ್ನು ಕುರಿತು ಈ ಹಿಂದೆಯೂ ಇಂಥ ಹಲವಾರು ವರದಿಗಳು ಬಂದಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಇದು ತಿಳಿದಿರುವ ಸಂಗತಿಯೇ ಆಗಿದೆ. ಆದರೂ ಹತ್ತನೇ ತರಗತಿವರೆಗಿನ ಶಿಕ್ಷಣ ಸೌಲಭ್ಯಗಳು ಮತ್ತು ಕಲಿಕೆಯ ಮಟ್ಟ ಸುಧಾರಣೆ ಬಗ್ಗೆ ಗಮನಾರ್ಹವಾದ ಪ್ರಗತಿ ಏನೂ ಆದಂತಿಲ್ಲ.

ಸರಕಾರಿ ಶಾಲೆಗಳಲ್ಲಿ ಅರ್ಹರಾದ ಉತ್ತಮ ಶಿಕ್ಷಕರಿದ್ದೂ ಕಲಿಕೆಯ ಮಟ್ಟ ಸುಧಾರಿಸದಿರಲು ಕಾರಣಗಳೇನಿರಬಹುದು? ಸರಕಾರಿ ಶಾಲೆಗಳು ಮುಚ್ಚಲು ಅಥವಾ ಒಂದು ಸರಕಾರಿ ಶಾಲೆಯನ್ನು ಪಕ್ಕದೂರಿನ ಇನ್ನೊಂದು ಶಾಲೆಯೊಳಗೆ ವಿಲೀನಗೊಳಿಸಲು ಕಾರಣಗಳೇನಿರಬಹುದು? ಕಾರಣಗಳನ್ನು ದೀಪ ಹಿಡಿದುಕೊಂಡು ಹುಡುಕ ಬೇಕಿಲ್ಲ. ಸರಕಾರಿ ಶಿಕ್ಷಕರನ್ನು ಚುನಾವಣೆ, ಜನಗಣತಿ, ಜಾನುವಾರು ಗಣತಿ ಇತ್ಯಾದಿ ಬೋಧಕೇತರ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣ ಮಟ್ಟ ಕುಸಿತಕ್ಕೆ ಪ್ರಮುಖ ಕಾರಣ. ಸರಕಾರಿ ಶಾಲೆಗಳ ಶಿಕ್ಷಕರನ್ನು ಇಂಥ ಅನ್ಯ ಕೆಲಸಗಳಿಗೆ ಬಳಸಿಕೊಳ್ಳುವ ಪದ್ಧತಿ ನಿಲ್ಲಬೇಕು. ಉಪಾಧ್ಯಾಯರ ಸೇವೆ ಸಂಪೂರ್ಣವಾಗಿ ಬೋಧನೆಗೇ ಮೀಸಲಾಗಬೇಕು. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಶಾಲೆಗಳ ವಿಲೀನ ಪ್ರಕ್ರಿಯೆಗೆ ಒಂದು ಮುಖ್ಯ ಕಾರಣ. ಮಧ್ಯಮ ವರ್ಗದ ಪೋಷಕರ ಒಲವು ಇಂಗ್ಲಿಷ್ ಶಿಕ್ಷಣ ಮಾಧ್ಯಮದತ್ತ. ಈಗ ಶಿಕ್ಷಣ ಹಕ್ಕು ಕಾಯ್ದೆಯನ್ವಯ ದೊರೆಯುತ್ತಿರುವ ಸೌಲಭ್ಯದಿಂದಾಗಿ ಇಂಗ್ಲಿಷ್ ಶಿಕ್ಷಣ ಮಾಧ್ಯಮದ ಶಾಲೆಗಳು ಬಡವರ ಮಕ್ಕಳಿಗೆ ಗಗನ ಕುಸುಮವಾಗಿ ಉಳಿದಿಲ್ಲ. ಎಂದೇ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ, ಸರಕಾರಿ ಶಾಲೆಗಳ ವಿಲೀನ ಪ್ರಕ್ರಿಯೆ.

ಈಗ ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ಆಡಳಿತ ಪರ್ವ. ಅಧಿಕಾರವಹಿಸಿಕೊಂಡ ತರುವಾಯದಲ್ಲೇ ಅವರು ಇಂಗ್ಲಿಷ್ ಶಿಕ್ಷಣ ಮಾಧ್ಯಮ ಜಾರಿಗೆ ತರುವ ಮಾತನಾಡಿದ್ದಾರೆ. ಆಯ್ದ ಕೆಲವು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತರುವುದು ಸರಕಾರದ ಉದ್ದೇಶವಿರುವಂತಿದೆ. ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಸೇರಿಸದೆ ಇಂಗ್ಲಿಷ್ ಶಿಕ್ಷಣ ಮಾಧ್ಯಮ ಇರುವ ಖಾಸಗಿ ಶಾಲೆಗಳತ್ತ ಒಲಿಯುತ್ತಿರುವುದು ಹೊಸ ಪ್ರವೃತ್ತಿ ಏನಲ್ಲ. ಆದರೆ ಮೊದಲು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಪ್ರವೃತ್ತಿ ಈಗ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ. ಇದರಿಂದಾಗಿ ಕನ್ನಡ ಮಾಧ್ಯಮದ ಸರಕಾರಿ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವಂಥ ಪರಿಸ್ಥಿತಿ ತಲೆದೋರಿದೆ. ಈ ಪರಿಸ್ಥಿತಿ ನಿವಾರಣೆಗೆ ಇಂಗ್ಲಿಷ್ ಶಿಕ್ಷಣ ಮಾಧ್ಯಮವೇ ಸಿದ್ಧೌಷಧವೆಂದು ಕುಮಾರಸ್ವಾಮಿಯವರ ಸರಕಾರದ ನಿರ್ಧಾರ. ಸಹಜವಾಗಿಯೇ ಈ ನಿರ್ಧಾರ ಕನ್ನಡಿಗರಿಗೆ ಆಘಾತಕಾರಿ ಬೆಳವಣಿಗೆಯಾಗಿ ಕಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಶಿಕ್ಷಣವನ್ನು ಇಂಗ್ಲಿಷ್ ಭಾಷಾ ಪರಿಣಿತಿಯೊಂದಿಗೆ ಸಮೀಕರಿಸಿರುವುದು ಇಂದಿನ ದುರಂತಗಳಲ್ಲಿ ಒಂದು. ಮಕ್ಕಳು ಇಂಗ್ಲಿಷ್‌ನಲ್ಲಿ ಕಲಿತರೆ ಮಾತ್ರ ಅದು ಶಿಕ್ಷಣ, ಇಂಗ್ಲಿಷ್ ಶಿಕ್ಷಣದಿಂದ ಮಾತ್ರ ಭವ್ಯಭವಿಷ್ಯ ಎನ್ನುವುದು ತಪ್ಪುಕಲ್ಪನೆ. ಶಿಕ್ಷಣವೆಂದರೆ ಏನು? ಶಿಕ್ಷಣವೆಂದರೆ ಬುದ್ಧಿ, ಹೃದಯ ಮತ್ತು ಹಸ್ತಗಳ ವಿಕಾಸ ಎನ್ನುತ್ತಾರೆ ಗಾಂಧೀಜಿ. ಇಂಥ ವಿಕಾಸಕ್ಕೆ ಇಂಗ್ಲಿಷ್ ಮಾಧ್ಯಮದ ಬೋಧನೆಯೇ ಬೇಕು ಎನ್ನುವಂತಿಲ್ಲ. ಮಾತೃಭಾಷೆಯಲ್ಲಿ ಕಲಿತವರೂ ಈ ವಿಕಾಸದ ನಿಚ್ಚಣಿಕೆಯನ್ನು ಏರಿ ಬದುಕಿನಲ್ಲಿ ಪ್ರವರ್ಧಮಾನಕ್ಕೆ ಬರಬಹುದು. ಇದಕ್ಕೆ ಕನ್ನಡ ಮಾಧ್ಯಮದಲ್ಲೇ ಕಲಿತ ನಮ್ಮ ಸರ್.ಎಂ.ವಿಶ್ವೇಶ್ವರಯ್ಯ, ಖ್ಯಾತ ವಿಜ್ಞಾನಿ ಸಿ.ಎನ್.ಆರ್.ರಾವ್, ಸುಪ್ರಸಿದ್ಧ ಕವಿ ಕುವೆಂಪು ಮೊದಲಾದವರ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಿರಬೇಕೆಂಬುದು ವಿಶ್ವದಾದ್ಯಂತ ಒಪ್ಪಿತವಾಗಿರುವ ಸತ್ಯಸಂಗತಿಯಾಗಿದೆ. ಮಾತೃಭಾಷೆ, ಪರಿಸರ ಭಾಷೆ ಶಿಕ್ಷಣ ಮಾಧ್ಯಮವಾಗಿರಬೇಕೆಂದು ಜಗತ್ತಿನ ಎಲ್ಲ ಶಿಕ್ಷಣ ತಜ್ಞರೂ ಹೇಳುತ್ತಾರೆ. ಬೋಧನೆ ಮಾತೃಭಾಷೆಯಲ್ಲಿದ್ದರೆ ಗ್ರಹಿಕೆ ಸುಲಭವಾಗುವ ಅನುಕೂಲವಿದೆ. ಶಿಕ್ಷಣದಲ್ಲಿ ಭಾಷೆಯ ಪಾತ್ರ ಏನಿದ್ದರೂ ಕಲಿಸುವುದು. ಕಲಿಯಲು ಸಹಾಯಕವಾಗುವುದು.

ಕಲಿಕೆ ಮತ್ತು ಮಕ್ಕಳ ಸುತ್ತಣ ಪರಿಸರದ ನಡುವೆ ಅವಿನಾಭಾವ ಸಂಬಂಧವಿದೆ. ಪರಿಸರದ ಅನುಭವ, ಮಕ್ಕಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಬಹಳ ಮುಖ್ಯವಾಗುತ್ತದೆ ಎನ್ನುವುದು ಶಿಕ್ಷಣ ತಜ್ಞರ ಅಭಿಮತ. ಹೀಗಾಗಿ ಪರಿಸರದ ಭಾಷೆ ಶಿಕ್ಷಣ ಮಾಧ್ಯಮವಾದಲ್ಲಿ ಕಲಿಕೆ ಸುಲಭವಾಗುತ್ತದೆ. ಪರಿಸರದ ಭಾಷೆ ಎಂದರೆ ಸಹಜವಾಗಿಯೇ ಹುಟ್ಟಿನ ಪರಿಸರದಿಂದ ಬರುವ ತಾಯ್ನುಡಿ. ಮಾತೃಭಾಷೆಯಲ್ಲಿ ಕಲಿಯುವುದರಿಂದ ಭಾಷೆಯು ಮಕ್ಕಳ ಆಲೋಚನೆಗಳು, ಅವರ ಚಟುವಟಿಕೆಗಳು ಹಾಗೂ ಅವರ ಅನುಭವಗಳ ಅವಿಭಾಜ್ಯ ಅಂಗವಾಗುತ್ತದೆ. ಮಾತೃ ಭಾಷೆಯಾದ ಕನ್ನಡ ಶಿಕ್ಷಣ ಮಾಧ್ಯಮವಾದಲ್ಲಿ, ಪರಿಚಿತವಾದ ಈ ಪರಿಸರ ಭಾಷೆ ಅವರ ಬೌದ್ಧಕ ಪ್ರಕ್ರಿಯೆ, ಕಲಿಕೆಯ ಸಾಮರ್ಥ್ಯಗಳನ್ನು ರೂಪಿಸುವುದರಲ್ಲಿ ಹೆಚ್ಚು ಸಹಕಾರಿಯಾಗುತ್ತದೆ. ಆದರೆ ಶಿಕ್ಷಣ ಮಾಧ್ಯಮ ಪೋಷಕರ ಆಯ್ಕೆಯಾಗಿರಬೇಕು. ಇದರಲ್ಲಿ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಇಂಗ್ಲಿಷ್ ವ್ಯಾಮೋಹಿಗಳ ರೆಕ್ಕೆಗೆ ನೀರು ತಟ್ಟಿದಂತಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯೂ ಪೋಷಕರನ್ನು ಇಂಗ್ಲಿಷ್ ಮಾಧ್ಯಮದ ಇಂದ್ರಧನುಷ್ಯಕ್ಕೆ ದೂಡುವ ಹೊಸ ಆಕರ್ಷಣೆಯಾಗಿದೆ. ಖಾಸಗಿ ಶಿಕ್ಷಣ ಶಾಲೆಗಳ ಪ್ರಮುಖ ಆಕರ್ಷಣೆಯೆಂದರೆ ಇಂಗ್ಲಿಷ್ ಶಿಕ್ಷಣ ಮಾಧ್ಯಮ.

ಎಂದೇ ತಮ್ಮ ಮಕ್ಕಳ ಏಳ್ಗೆ ಇಂಗ್ಲಿಷ್ ಕಲಿಕೆಯಲ್ಲೇ ಇದೆ ಎಂದು ಗಾಢವಾಗಿ ನಂಬಿರುವ ಪೋಷಕರು ಖಾಸಗಿ ಶಾಲೆಗಳ ಮುಂದೆ ಸಾಲುಗಟ್ಟಿನಿಲ್ಲುವುದರಲ್ಲಿ ಆಶ್ಚರ್ಯವೇನಿಲ್ಲ. ಸರಕಾರದಿಂದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವ ಖಾಸಗಿ ಶಾಲೆಗಳು ಪ್ರತಿಯಾಗಿ ಶೇ.25ರಷ್ಟು ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎನ್ನುತ್ತದೆ ಕಾನೂನು. ಎಂದೇ ಬಡವರ ಮಕ್ಕಳು ಈ ಸೌಲಭ್ಯದಡಿಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಬಯಸುವುದರಲ್ಲಿ ಅಚ್ಚರಿಯೇನೂ ಇಲ್ಲ.ಗುಣಮಟ್ಟದ ಕನ್ನಡ ಶಾಲೆಗಳ ಕೊರತೆಯೂ ಇಂಗ್ಲಿಷ್ ಮಾಧ್ಯಮದ ಅನಿವಾರ್ಯತೆಯನ್ನು ಸೃಷ್ಟಿಸುವುದರಲ್ಲಿ ಸಹಕಾರಿಯಾಗಿದೆ. ಬೋಧನೆಯ ಮಾಧ್ಯಮ ಯಾವುದೇ ಭಾಷೆಯಾಗಿರಲಿ ಅದಕ್ಕೆ ತಕ್ಕ ಸೌಕರ್ಯಗಳಿವೆಯೇ ಎಂಬುದನ್ನೂ ಯೋಚಿಸಬೇಕಾಗುತ್ತದೆ.ಮುಖ್ಯವಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರ, ಸಮರ್ಥವಾಗಿ ಕಲಿಸುವ ಅರ್ಹತೆಯುಳ್ಳ ಶಿಕ್ಷಕರು, ಪಠ್ಯಪುಸ್ತಕಗಳು ಇಂತಹ ಮೂಲಭೂತ ಸೌಕರ್ಯಗಳು ಇರಬೇಕು. ಇಂಗ್ಲಿಷ್ ಮಾಧ್ಯಮ ಪ್ರತಿಪಾದಿಸುವವರು ಈ ಬಗ್ಗೆ ಯೋಚಿಸಬೇಕು. ನಮ್ಮಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವ ಸಮರ್ಥ ಶಿಕ್ಷಕರ ಕೊರತೆ ಇದ್ದೇ ಇದೆ.

ಆದ್ದರಿಂದ ಇಂಗ್ಲಿಷ್ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತರುವ ಮುನ್ನ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ, ವಿಜ್ಞಾನ, ಮಾನವಿಕ ಮೊದಲಾದ ವಿಷಯಗಳನ್ನು ಇಂಗ್ಲಿಷ್‌ನಲ್ಲಿ ಸಮರ್ಥವಾಗಿ ಬೋಧಿಸುವ ಸಾಮರ್ಥ್ಯವುಳ್ಳ ಶಿಕ್ಷಕರನ್ನು ಮೊದಲು ತರಬೇತುಗೊಳಿಸಬೇಕಾಗಿದೆ. ಇವೆಲ್ಲವನ್ನೂ ಕೂಲಂಕಶವಾಗಿ ಪರ್ಯಾಲೋಚಿಸದೇ ತರಾತುರಿಯಿಂದ ಇಂಗ್ಲಿಷನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತಂದಲ್ಲಿ ಇದರಿಂದ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾದೀತು. ಈಗ ಇಂಗ್ಲಿಷ್ ಮಾಧ್ಯಮ ಜಾರಿಗೆ ತರುವುದು ಕುಮಾರಸ್ವಾಮಿಯವರ ಸರಕಾರದ ನೀತಿಯಾದಲ್ಲಿ ಕನ್ನಡ ಶಾಲೆಗಳನ್ನು ಕಾಯಮ್ಮಾಗಿ ಮುಚ್ಚಬೇಕಾದ ದಿನಗಳು ದೂರವಿರಲಾರವು ಎಂಬ ಆತಂಕದ ಜೊತೆಗೇ ಮೇಲಿನ ಅಂಶಗಳನ್ನು ಕುರಿತೂ ನಾವು ಚಿಂತನಮಂಥನ ನಡೆಸಬೇಕಾಗಿದೆ. ಜಗತ್ತಿನ ಜ್ಞಾನ ಭಂಡಾರಕ್ಕೆ ಬೆಳಕಿಂಡಿಯಾಗಿರುವ ಇಂಗ್ಲಿಷ್ ಭಾಷೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳೂ ಸೇರಿ ಎಲ್ಲರಿಗೂ ಲಭ್ಯವಾಗಬೇಕು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಹೇರುವ ಬದಲು ಇಂಗ್ಲಿಷನ್ನು ಒಂದು ಭಾಷೆಯಾಗಿ ಪರಿಣಾಮಕಾರಿಯಾಗಿ ಕಲಿಸುವುದರತ್ತ ಸರಕಾರ ಗಮನಹರಿಸುವುದು ಯೋಗ್ಯವಾದೀತು.

ಸರಕಾರ ಮನನ ಮಾಡಬೇಕಾದ ಇನ್ನೂ ಒಂದು ಸಂಗತಿ ಇದೆ. ಇಂಗ್ಲಿಷ್ ಭಾಷೆಯ ವ್ಯಾಮೋಹವೊಂದೇ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗೆ ಕಾರಣವಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಮೂಲಭೂತ ಸೌಕರ್ಯಗಳ ಅಭಾವ. ಉತ್ತಮ ಕಟ್ಟಡಗಳು, ಸುಸಜ್ಜಿತ ಗ್ರಂಥಾಲಯಗಳು, ಆಟದ ಬಯಲು, ಶೌಚಾಲಯಗಳು ಮೊದಲಾದ ಅಗತ್ಯಸೌಲಭ್ಯಗಳ ಕೊರತೆ. ಕಲಿಯಲು ಅಗತ್ಯವಾದ ಇಂಥ ಪರಿಸರ ಇಲ್ಲದಿರುವುದರ ಜೊತೆಗೆ ಕನ್ನಡ ಮಾಧ್ಯಮದೊಂದಿಗೇ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಯಲು ಅವಕಾಶಗಳಿಲ್ಲದಿರುವುದು-ಹೀಗೆ ಹಲವಾರು ಕಾರಣಗಳಿವೆ. ಸರಕಾರ ಈ ಕೊರತೆಗಳನ್ನು ನೀಗಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಗ್ರಾಮೀಣ ಪ್ರದೇಶಗಳಲ್ಲಾದರೂ ಪೋಷಕರು ಇಂಗ್ಲಿಷ್ ಮಾಧ್ಯಮದತ್ತ ವಾಲುವುದನ್ನು ತಪ್ಪಿಸಬಹುದಾಗಿದೆ. ಕನ್ನಡವನ್ನು ಉಳಿಸಬಹುದಾಗಿದೆ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಇಂಗ್ಲಿಷ್ ಕಲಿಕೆ /ಬೋಧನೆಗಳ ಜೊತೆಗೆ ಶೈಕ್ಷಣಿಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕೂ ಆದ್ಯ ಗಮನ ಕೊಡಬೇಕು. ಆಗ ಮಾತ್ರ ನಮ್ಮ ಮಕ್ಕಳು ರಾಷ್ಟ್ರಮಟ್ಟದ ಸಾಮರ್ಥ್ಯ ಪರೀಕ್ಷೆಗಳಲ್ಲಿ ಹಿಂದುಳಿಯುವುದು ತಪ್ಪುತ್ತದೆ.

Writer - ಡಾ.ಜಿ.ಎನ್.ರಂಗನಾಥ ರಾವ್

contributor

Editor - ಡಾ.ಜಿ.ಎನ್.ರಂಗನಾಥ ರಾವ್

contributor

Similar News