ಬುಲಂದ್‌ಶಹರ್: ದಂಗೆಯ ಹಿಂದಿನ ಹುನ್ನಾರ

Update: 2018-12-19 18:32 GMT

ಘಟನೆ ನಡೆದ ಗ್ರಾಮದಲ್ಲಿ ಅಭದ್ರತೆಯ ಭಾವ ಹೆಚ್ಚಾಗುತ್ತಿದೆ. ಬಾಬರಿ ಮಸೀದಿ ಹಿಂಸಾಚಾರ, ಮುಝಫ್ಫರ್‌ನಗರ ಹಿಂಸಾಚಾರ ಇತ್ಯಾದಿಗಳು ನಡೆದ ಸಂದರ್ಭದಲ್ಲೂ ಅವುಗಳ ವಿರುದ್ಧ ಗಟ್ಟಿಯಾಗಿ ನಿಂತಿದ್ದೆವು ಎಂದು ಬೀಗುವ ಇಲ್ಲಿನ ಜನರು ಈ ಬಾರಿ ತಮ್ಮ ಸುರಕ್ಷತೆಯ ಬಗ್ಗೆ ಭಯವನ್ನು ಹೊಂದಿದ್ದಾರೆ. ದಶಕಗಳಿಂದ ತಾವು ಬದುಕುತ್ತಿರುವ ಪ್ರದೇಶದಲ್ಲಿ ಅವರೀಗ ಅಭದ್ರತೆಯ ಭೀತಿಯನ್ನು ಎದುರಿಸುತ್ತಿದ್ದಾರೆ.

ಹಿಂಸಾಚಾರದ ವಿನ್ಯಾಸಗಳಲ್ಲಿ ಯೋಜಿತ ಹಿಂಸಾಚಾರದ ಘಟನೆಗಳಲ್ಲಿ ಬುಲಂದ್‌ಶಹರ್ ಮತ್ತೊಂದು ವಿನ್ಯಾಸವಾಗಿದೆ. ಇಲ್ಲಿ ಬಹುಸಂಖ್ಯಾತ ಸಮುದಾಯದ ವ್ಯಕ್ತಿಯೇ ಸಂತ್ರಸ್ತನಾಗಿದ್ದಾನೆ; ಗೋ ರಾಜಕೀಯದ ಇನ್ನೋರ್ವ ಬಲಿಪಶು!


ಭಾವನಾತ್ಮಕ ವಿಷಯಗಳ ಮೇಲೆ ನಡೆಯುವ ಹಿಂಸಾಚಾರದ ದೃಶ್ಯಾವಳಿಗಳು ಹಿಂಸೆಯನ್ನು ಸೃಷ್ಟಿಸುವ ಮತ್ತು ಪ್ರಚೋದಿಸುವ ಹೊಸ ವಿನ್ಯಾಸಗಳನ್ನು ನಿರಂತರವಾಗಿ ಬಹಿರಂಗಪಡಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಬಾಬರಿ ಮಸೀದಿ ಧ್ವಂಸ (1992), ಗೋಧ್ರಾ ರೈಲಿಗೆ ಬೆಂಕಿ (ಗುಜರಾತ್ ಹತ್ಯಾಕಾಂಡ 2002), ಸ್ವಾಮಿಯ ಹತ್ಯೆ (ಕಂದಮಲ್ 2008), ಲವ್ ಜಿಹಾದ್ ಹಿನ್ನೆಲೆ (ಮುಝಫ್ಫರ್‌ನಗರ 2013) ಮುಂತಾದ ಭೀಕರ ಹಿಂಸಾಚಾರಗಳನ್ನು ಕಂಡಿದ್ದೇವೆ. ಒಟ್ಟಾರೆ ವಿನ್ಯಾಸವು ಸಮಾಜದ ವಿಭಾಗಗಳ ವಿರುದ್ಧ ದ್ವೇಷವನ್ನು ಹರಡಲು ನಡೆಸುವ ಹುನ್ನಾರದಂತೆ ಕಾಣುತ್ತಿದ್ದು ಇದೇ ಹಿಂಸಾಚಾರವಾಗಿ ಪರಿವರ್ತನೆಯಾಗುತ್ತಿದೆ. ಕೆಲವು ವರ್ಷಗಳಲ್ಲಿ ಗೋಹತ್ಯೆಯ ಹೆಸರಲ್ಲಿ ನಡೆಯುವ ಹಿಂಸಾಚಾರಗಳೇ ಹೆಚ್ಚಾಗಿ ಕಂಡುಬರುತ್ತಿವೆ. ಮುಹಮ್ಮದ್ ಅಖ್ಲಾಕ್ ಹತ್ಯೆಯಿಂದ ಆರಂಭವಾಗಿ ಜುನೈದ್‌ನ ಹತ್ಯೆಯವರೆಗೂ ಗೋವು-ಬೀಫ್‌ಅನ್ನು ದ್ವೇಷದ ಅಸ್ತ್ರವಾಗಿ ಬಳಸಲಾಗುತ್ತಿದೆ. ಇದೇ ಸರಣಿಯಲ್ಲಿ ಬುಲಂದ್‌ಶಹರ್‌ನಲ್ಲಿ ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಲಾಗಿದೆ. ಅವರಲ್ಲಿ ಒಬ್ಬರು ಹಿಂದೂ ಪೊಲೀಸ್ ಅಧಿಕಾರಿಯಾಗಿದ್ದಾರೆ. ಈ ಘಟನೆಯು ಕೋಮು ಹಿಂಸಾಚಾರದ ಒಳಸುಳಿಗಳನ್ನು ತೆರೆದಿಡುತ್ತದೆ.

ಇಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಜೊತೆಗೆ ಕೆಲವೊಮ್ಮೆ ಬಹುಸಂಖ್ಯಾತರೂ ಗುರಿಯಾಗುತ್ತಾರೆ. ಸಾಮಾನ್ಯವಾಗಿ ಇಂತಹ ಹಿಂಸಾಚಾರಗಳಲ್ಲಿ ಬಹುಸಂಖ್ಯಾತ ಸಮುದಾಯದ ಜನರು ಹತ್ಯೆಗೀಡಾಗುವು ದಿಲ್ಲ. ಆದರೆ ಅವರೂ ಅಲ್ಪಮಟ್ಟದಲ್ಲಿ ಇದರಿಂದ ಸಂಕಷ್ಟ ಅನುಭವಿಸುತ್ತಾರೆ. ಬುಲಂದ್‌ಶಹರ್ ಪ್ರಕರಣದಲ್ಲಿ ಸಂತ್ರಸ್ತ ಕೇವಲ ಹಿಂದೂ ಆಗಿರಲಿಲ್ಲ, ಅವರು ರಾಜ್ಯ ಪೊಲೀಸ್ ಪಡೆಯಲ್ಲಿ ಅಧಿಕಾರಿಯಾಗಿದ್ದರು. ಈ ಬಗ್ಗೆ ಹೆಚ್ಚಿನ ವಿವರ ಎಸ್‌ಐಟಿ ತನಿಖೆಯ ನಂತರವೇ ಬಯಲಾಗಬೇಕಿದೆ. ಆದರೆ ಮಾಧ್ಯಮ ವರದಿಗಳಿಂದ ನಮಗೆ ತಿಳಿದುಬರುವ ಸಂಗತಿಗಳು ಭಯವನ್ನು ಹುಟ್ಟುಹಾಕುತ್ತದೆ. 2018ರ ಡಿಸೆಂಬರ್ ಆರಂಭದಲ್ಲಿ ಮುಸ್ಲಿಮರ ಬಹುದೊಡ್ಡ ಧಾರ್ಮಿಕ ಸಭೆ ಇಜ್ತಿಮಾ ಬುಲಂದ್‌ಶಹರ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಸುಮಾರು ಐವತ್ತು ಲಕ್ಷ ಮುಸ್ಲಿಮರು ಭಾಗವಹಿಸಿದ್ದರು. ಇಂತಹ ಧಾರ್ಮಿಕ ಸಭೆಗಳು ದೇಶದ ಇತರ ಭಾಗಗಳಲ್ಲೂ ನಡೆಯುತ್ತಲೇ ಇರುತ್ತವೆ. ಈ ಸಭೆ ನಡೆದ ಪ್ರದೇಶದಿಂದ ಸುಮಾರು 70 ಕಿ.ಮೀ. ದೂರದಲ್ಲಿ ಬುಲಂದ್‌ಶಹರ್‌ನ ಸಿಯನ್ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ದನದ ಕಳೇಬರವನ್ನು ಯಾರೋ ಗದ್ದೆಗೆ ತಂದು ಎಸೆದಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದರು. ದನದ ಕಳೇಬರವನ್ನು ಟ್ರಾಕ್ಟರ್‌ನಲ್ಲಿ ದೂರ ಸಾಗಿಸುತ್ತಿದ್ದಂತೆ ಹೊರಗಿನಿಂದ ಆಗಮಿಸಿದ 40-50 ಯುವಕರ ತಂಡ ಟ್ರಾಕ್ಟರನ್ನು ತಡೆದು ಅದನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತು. ಕೆಲವು ವರದಿಗಳ ಪ್ರಕಾರ, ದನದ ಕಳೇಬರವನ್ನು ಭಾರತೀಯ ಜನತಾ ಮೋರ್ಛಾ ಮತ್ತು ಬಜರಂಗದಳಕ್ಕೆ ಸೇರಿದ ಕೆಲವರು ಗದ್ದೆಗೆ ತಂದು ಎಸೆದಿದ್ದರು. ಕೆಲವು ಪತ್ರಕರ್ತರ ವರದಿ, ವೀಡಿಯೊ ಚಿತ್ರಣಗಳು ಈ ಇಡೀ ಪ್ರಕರಣವನ್ನು ಸೃಷ್ಟಿಸಿದವರೇ ಹೊರಗಿನವರು ಎಂಬುದನ್ನು ಬಿಂಬಿಸುತ್ತಿತ್ತು. ನಂತರ ಟ್ರಾಕ್ಟರನ್ನು ಪೊಲೀಸ್ ಠಾಣೆಗೆ ಕೊಂಡೊಯ್ದ ಯುವಕರ ತಂಡ ಎಫ್‌ಐಆರ್ ದಾಖಲಿಸಿದ ನಂತರ ಗದ್ದಲ ಎಬ್ಬಿಸಲು ಆರಂಭಿಸಿತು. ಎಫ್‌ಐಆರ್ ದಾಖಲಿಸಿದ ಬಜರಂಗದಳದ ಸ್ಥಳೀಯ ಮುಖ್ಯಸ್ಥ ಯೋಗೇಶ್ ರಾಜ್ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಹಲವು ವಾದಗಳು ಸೃಷ್ಟಿಯಾದವು. ಇವೆಲ್ಲದರ ಮಧ್ಯೆ ಪೊಲೀಸ್ ನಿರೀಕ್ಷಕ ಸುಭೋದ್ ಸಿಂಗ್ ತನ್ನ ಪ್ರಾಣವನ್ನು ಕಳೆದುಕೊಂಡಿದ್ದರು. ಆರೆಸ್ಸೆಸ್‌ಗೆ ಸಾಮೀಪ್ಯ ಹೊಂದಿರುವ ಬಲಪಂಥೀಯ ಟಿವಿ ವಾಹಿನಿ ‘ಸುದರ್ಶನ್ ಟಿವಿ’ಯ ಸುರೇಶ್ ಚವಂಕೆ ಇಡೀ ಘಟನೆಗೆ ಮುಸ್ಲಿಮರ ಇಜ್ತಿಮಾ ಜೊತೆ ಸಂಬಂಧ ಕಲ್ಪಿಸಿದರು.

ಚವಂಕೆಯ ಟ್ವೀಟ್ ಪ್ರಕಾರ, ಇಜ್ತಿಮಾದಲ್ಲಿ ಭಾಗವಹಿಸಿದ್ದ ಮುಸ್ಲಿಮರು ಹಿಂಸಾಚಾರದಲ್ಲಿ ತೊಡಗಿದ್ದರು. ಚವಂಕೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಪೊಲೀಸರು ಘಟನೆಗೂ ಇಜ್ತಿಮಾಗೂ ಎಳ್ಳಷ್ಟು ಸಂಬಂಧವಿಲ್ಲ. ಇಜ್ತಿಮಾ ನಡೆದಿದ್ದು ಹಿಂಸಾಚಾರ ನಡೆದ ಸ್ಥಳದಿಂದ ಬಹಳಷ್ಟು ದೂರದಲ್ಲಿ ಮತ್ತು ಅದು ಶಾಂತಿಯುತವಾಗಿ ನಡೆದಿತ್ತು ಎಂದು ತಿಳಿಸಿದ್ದರು. ಇವೆಲ್ಲದರ ಜೊತೆಗೆ ಇನ್ನಷ್ಟು ವಾದಗಳೂ ಕೇಳಿಬರಲಾರಂಭಿಸಿದವು. ಒಂದು ವಾದದ ಪ್ರಕಾರ, ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‌ನ ಯೋಧನಾಗಿರುವ ಜಿತೇಂದ್ರ ಮಲಿಕ್ ಹಿಂಸಾಚಾರ ನಡೆದ ಸಮಯದಲ್ಲಿ ಸ್ಥಳದಲ್ಲಿದ್ದು ಆತನೇ ಈ ಹಿಂಸೆಗೆ ಕಾರಣ. ಈ ಆರೋಪವನ್ನು ತಳ್ಳಿಹಾಕಿದ ಮಲಿಕ್ ಸಹೋದರ ತನ್ನ ತಮ್ಮನ ಅಮಾಯಕತೆಯನ್ನು ಸಾಬೀತುಪಡಿಸುವುದಾಗಿ ಭರವಸೆ ನೀಡಿದರು. ಮಲಿಕ್‌ನನ್ನು ಕಾಶ್ಮೀರದಿಂದ ವಾಪಸ್ ಕರೆ ತರಲಾಗಿದ್ದರೂ ಘಟನೆಯಲ್ಲಿ ಅವರ ಕೈವಾಡವಿರುವ ಬಗ್ಗೆ ಹೆಚ್ಚಿಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಇಲ್ಲಿ ಉಳಿಯುವ ಪ್ರಶ್ನೆಯೆಂದರೆ ಹಿಂಸೆ ಸೃಷ್ಟಿದವರು ಯಾರು? ಅದಕ್ಕೂ ಮುನ್ನ ಘಟನೆಯಲ್ಲಿ ಹತ್ಯೆಗೀಡಾದ ಪೊಲೀಸ್ ನಿರೀಕ್ಷಕನ ಬಗ್ಗೆ ಒಂದಷ್ಟು ತಿಳಿಯುವ.

ಪೊಲೀಸ್ ನಿರೀಕ್ಷಕ ಸುಭೋದ್ ಸಿಂಗ್, ಮುಹಮ್ಮದ್ ಅಖ್ಲಾಕ್ ಪ್ರಕರಣದ ತನಿಖೆ ನಡೆಸಿದ್ದರು ಮತ್ತು ಹಲವು ತಪ್ಪಿತಸ್ಥರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದ್ದರು. ಸಿಂಗ್ ಯಾವಾಗಲೂ, ವಿಶೇಷವಾಗಿ, ಹಿಂದೂ-ಮುಸ್ಲಿಂ ವಿಷಯಗಳಲ್ಲಿ ಸರಿಯಾದ ನಿಲುವನ್ನೇ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ. ಕೇಸರಿ ಗುಂಪುಗಳ ವಿಭಜಕ ನೀತಿಗಳನ್ನು ಅವರು ಅನುಸರಿಸಲು ಅವಕಾಶ ನೀಡುತ್ತಿರಲಿಲ್ಲ. ಬಿಜೆಪಿಗೆ ಸಂಬಂಧಿತ ಸಂಘಟನೆಗಳ ಸ್ಥಳೀಯ ವಿಭಾಗ ಸಿಂಗ್‌ರನ್ನು ವರ್ಗಾವಣೆ ಮಾಡುವಂತೆ ಅಧಿಕಾರಿಗಳಿಗೆ ಪತ್ರ ಬರೆಯುತ್ತಲೇ ಇತ್ತು. ಗಲಭೆಕೋರರಿಂದ ನರಳಾಡುತ್ತಿದ್ದ ಪ್ರದೇಶದಲ್ಲೇ ನಡೆದ ಕೆಲವೊಂದು ಘಟನೆಗಳು ಮಾನವೀಯತೆಯ ಮೇಲೆ ನಂಬಿಕೆ ಉಳಿಸುವಂತಿದ್ದವು, ಮನಸ್ಸಿಗೆ ಸಾಂತ್ವನ ನೀಡುವಂತಿದ್ದವು. ಮುಖ್ಯವಾಗಿ, ಇಜ್ತಿಮಾಗೆ ಆಗಮಿಸಿದ್ದ ಮುಸ್ಲಿಮರು ಸಮೀಪದ ಶಿವ ಮಂದಿರದಲ್ಲಿ ತಂಗಿದ್ದರು. ಹತ್ಯೆಗೈಯಲ್ಪಟ್ಟ ಪೊಲೀಸ್ ಅಧಿಕಾರಿಯ ಪುತ್ರ ಶಾಂತಿ ಮತ್ತು ಸೌಹಾರ್ದ ಕಾಪಾಡುವಂತೆ ಮನವಿ ಮಾಡಿದ್ದ.

ಹಿಂದೂ-ಮುಸ್ಲಿಂ ಹಿಂಸಾಚಾರವನ್ನು ನಿಲ್ಲಿಸುವಂತೆ ನಾನು ಎಲ್ಲರಲ್ಲೂ ಪ್ರಾರ್ಥಿಸುತ್ತೇನೆ. ಸ್ವಲ್ಪ ಪ್ರಚೋದನೆ ದೊರೆತರೂ ಜನರು ಆಕ್ರೋಶಿತರಾಗುತ್ತಾರೆ. ತಾವು ಕಾನೂನಿಗೆ ಬದ್ಧರಾಗಿದ್ದೇವೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಆತ ತಿಳಿಸಿದ್ದ. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಡಿಎಸ್‌ಪಿ, ‘‘ಅಭಿಷೇಕ್ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ತನ್ನ ತಂದೆಯನ್ನು ಕಳೆದುಕೊಂಡ ನಂತರವೂ ಆತ ದ್ವೇಷ ಮತ್ತು ಹಿಂಸೆಯ ಭಾಷೆಯನ್ನು ಮಾತನಾಡುತ್ತಿಲ್ಲ’’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಇನ್ನೊಂದೆಡೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ‘‘ಗೋಹತ್ಯೆಗೆ ಸಂಬಂಧಿಸಿದ ಘಟನೆಗಳು ಹೆಚ್ಚಾಗುತ್ತಿದೆ ಮತ್ತು ಅವುಗಳನ್ನು ತಡೆಯುವ ಅಗತ್ಯವಿದೆ’’ ಎಂದು ಹೇಳಿಕೆ ನೀಡಿದರು. ಪೊಲೀಸ್ ಅಧಿಕಾರಿ ಗೋಹತ್ಯೆ ಮತ್ತು ಗೋ ಕಳ್ಳಸಾಗಣೆಯನ್ನು ತಡೆಯುವಲ್ಲಿ ವಿಫಲವಾದ ಕಾರಣ ಅವರ ಮೇಲೆ ದಾಳಿ ನಡೆಸಲಾಯಿತೇ ಎಂಬುದನ್ನು ಪರಿಶೀಲಿಸುವಂತೆ ಬಿಜೆಪಿ ಸಂಸದ ನೀಡಿದ ಸಲಹೆಯಲ್ಲಿ ಮತ್ತೊಮ್ಮೆ ಗೋ ಪ್ರಾಧಾನ್ಯತೆಯು ಪ್ರತಿಫಲಿಸಿತ್ತು.

ಯೋಗಿ-ಬಿಜೆಪಿಯ ಕಾರ್ಯಸೂಚಿಯಲ್ಲಿ ಸೇವೆಯಲ್ಲಿ ಹತ್ಯೆಗೀಡಾದ ಪೊಲೀಸ್ ಅಧಿಕಾರಿಯ ಕೊಲೆ ಎರಡನೇ ಸ್ಥಾನ ಪಡೆದುಕೊಂಡಿತು. ಇದು ಮೋದಿ-ಯೋಗಿ ರಾಜಕೀಯದಲ್ಲಿ ಸರ್ವಾಧಿಕಾರಿ ಆದೇಶಗಳನ್ನು ನೀಡುತ್ತಿರುವ ಸಮಯವಾಗಿದ್ದು ಇಲ್ಲಿ ಭಾವನಾತ್ಮಕ ವಿಷಯಗಳು ಮಾನವೀಯ ವೌಲ್ಯಗಳನ್ನು ಮೀರಿವೆ. ಧ್ರುವೀಕರಣದ ತಮ್ಮ ರಾಜಕೀಯ ಅಜೆಂಡಾವನ್ನು ಪೋಷಿಸುವವರೆಗೆ ಇವುಗಳು ಇವರಿಬ್ಬರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದೇ ವೇಳೆ ಘಟನೆ ನಡೆದ ಗ್ರಾಮದಲ್ಲಿ ಅಭದ್ರತೆಯ ಭಾವ ಹೆಚ್ಚಾಗುತ್ತಿದೆ. ಬಾಬರಿ ಮಸೀದಿ ಹಿಂಸಾಚಾರ, ಮುಝಫ್ಫರ್‌ನಗರ ಹಿಂಸಾಚಾರ ಇತ್ಯಾದಿಗಳು ನಡೆದ ಸಂದರ್ಭದಲ್ಲೂ ಅವುಗಳ ವಿರುದ್ಧ ಗಟ್ಟಿಯಾಗಿ ನಿಂತಿದ್ದೆವು ಎಂದು ಬೀಗುವ ಇಲ್ಲಿನ ಜನರು ಈ ಬಾರಿ ತಮ್ಮ ಸುರಕ್ಷತೆಯ ಬಗ್ಗೆ ಭಯವನ್ನು ಹೊಂದಿದ್ದಾರೆ. ದಶಕಗಳಿಂದ ತಾವು ಬದುಕುತ್ತಿರುವ ಪ್ರದೇಶದಲ್ಲಿ ಅವರೀಗ ಅಭದ್ರತೆಯ ಭೀತಿಯನ್ನು ಎದುರಿಸುತ್ತಿದ್ದಾರೆ. ಹಿಂಸಾಚಾರದ ವಿನ್ಯಾಸಗಳಲ್ಲಿ ಯೋಜಿತ ಹಿಂಸಾಚಾರದ ಘಟನೆಗಳಲ್ಲಿ ಬುಲಂದ್‌ಶಹರ್ ಮತ್ತೊಂದು ವಿನ್ಯಾಸವಾಗಿದೆ. ಇಲ್ಲಿ ಬಹುಸಂಖ್ಯಾತ ಸಮುದಾಯದ ವ್ಯಕ್ತಿಯೇ ಸಂತ್ರಸ್ತನಾಗಿದ್ದಾನೆ; ಗೋ ರಾಜಕೀಯದ ಇನ್ನೋರ್ವ ಬಲಿಪಶು!

Writer - ರಾಂ ಪುನಿಯಾನಿ

contributor

Editor - ರಾಂ ಪುನಿಯಾನಿ

contributor

Similar News