ಒಂದು ವರ್ಷದ ಅವಧಿಯಲ್ಲಿ ಮುದ್ರಾ ಸಾಲಗಳ ಎನ್‍ಪಿಎ ಪ್ರಮಾಣ ಶೇ. 92ರಷ್ಟು ಏರಿಕೆ

Update: 2018-12-27 13:23 GMT

ಹೊಸದಿಲ್ಲಿ, ಡಿ. 27: ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಮುದ್ರಾ ಯೋಜನೆಯಾನ್ವಯ ಉದಯೋನ್ಮುಖ ಉದ್ದಿಮೆದಾರರಿಗೆ ನೀಡಲಾದ ಸಾಲಗಳಲ್ಲಿ  ಎನ್‍ಪಿಎ ಪ್ರಮಾಣ 2016-17ರಿಂದೀಚೆಗೆ ಒಂದು ವರ್ಷದಲ್ಲಿ ಶೇ 92ಕ್ಕೆ ಏರಿರುವುದರಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಇನ್ನೊಂದು ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದೇ ತಿಳಿಯಲಾಗಿದೆ.

ಮುದ್ರಾ ಸಾಲಗಳ ಎನ್‍ಪಿಎ ಪ್ರಮಾಣ 2016-17ರಲ್ಲಿ 3,790.35 ಕೋಟಿ ರೂ. ಆಗಿದ್ದರೆ 2017-18ರಲ್ಲಿ ಈ ಪ್ರಮಾಣ  7,277.31 ಕೋಟಿ ರೂ.ಗೆ ಏರಿದೆ. ಮುದ್ರಾ ಯೋಜನೆ ಆರಂಭಗೊಂಡು ಕೇವಲ ಮೂರು ವರ್ಷಗಳಾಗಿರುವಾಗಲೇ  ವರ್ಷದಿಂದ ವರ್ಷಕ್ಕೆ ಏರುತ್ತಾ ಹೋಗುತ್ತಿರುವ ಎನ್‍ಪಿಎ ನಿಜಕ್ಕೂ ಆತಂಕಕಾರಿ.

ಮುದ್ರಾ ಯೋಜನೆ 2015ರಲ್ಲಿ ಆರಂಭಗೊಂಡಂದಿನಿಂದ 5.72 ಕೋಟಿ ರೂ. ಸಾಲ ವಿತರಿಸಲಾಗಿದೆಯೆಂದು ವಿತ್ತ ಸಚಿವಾಲಯದ ಅಂಕಿ ಅಂಶಗಳು ತಿಳಿಸುತ್ತವೆ. ಈ ಯೋಜನೆಯ ಶೇ. 74ರಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದರೆ, ಶೇ. 36ರಷ್ಟು ಸಾಲಗಳು ಪರಿಶಿಷ್ಟ ಜಾತಿ, ಪಂಗಡ, ಇತರ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಹೋಗಿದೆ.

ಮುದ್ರಾ ಯೋಜನೆಯಡಿ ನೀಡಲಾದ ಸಾಲದ ಮೇಲೆ ಸಾರ್ವಜನಿಕ ರಂಗದ ಬ್ಯಾಂಕುಗಳು ನಿಗಾ ಇರಿಸಿದ್ದು ಅವುಗಳ ವಸೂಲಾತಿಗೆ ಕ್ರಮ ಕೈಗೊಳ್ಳುತ್ತವೆ ಎಂದು ಸರಕಾರ ಹೇಳುತ್ತಿದೆ.

ಮಾಜಿ ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್ ಲೋಕಸಭಾ ಅಂದಾಜು ಸಮಿತಿಗೆ ನೀಡಿದ ಟಿಪ್ಪಣಿಯಲ್ಲಿ ಮುದ್ರಾ ಸಾಲಗಳನ್ನು ಕ್ರೆಡಿಟ್ ರಿಸ್ಕ್ ಅಪಾಯಕ್ಕಾಗಿ ಕೂಲಂಕಷವಾಗಿ ಪರಿಶೀಲಿಸಬೇಕೆಂದು ಸಲಹೆ ನೀಡಿದ್ದರು.

ಮುದ್ರಾ ಯೋಜನೆಯನ್ವಯ ಮೂರು ವಿವಿಧ ವಿಭಾಗಗಳಲ್ಲಿ 10 ಲಕ್ಷ ರೂ. ತನಕದ ಸಾಲ ಮೊತ್ತವನ್ನು ಸಣ್ಣ ಉದ್ಯಮಿಗಳಿಗೆ ನೀಡಲಾಗುತ್ತದೆ. ಪ್ರಧಾನಿ ಇತ್ತೀಚೆಗೆ 59 ನಿಮಿಷಗಳ ಎಂಎಸ್‍ಎಂಇ ಸಾಲ ಯೋಜನೆಯನ್ನು ಘೋಷಿಸಿದ್ದು ಮುದ್ರಾ ಸಾಲ ನೀಡಿಕೆ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸುವ ಉದ್ದೇಶ ಇದರ ಹಿಂದಿದೆ ಎಂದೇ ತಿಳಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News