ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ತೀವ್ರ ಹೋರಾಟ

Update: 2018-12-28 09:31 GMT

ಅವಿಭಜಿತ ದ.ಕ.ಜಿಲ್ಲೆಯ ‘ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ’ಯು ಸ್ವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು, ಆ ಪ್ರಯುಕ್ತ ಡಿ.29ರಂದು ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಸೆಂಟ್ರಲ್ ಕಮಿಟಿಯ ಪ್ರಸಕ್ತ ಅಧ್ಯಕ್ಷರಾಗಿ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಕಾರ್ಯನಿರ್ವಹಿಸುತ್ತಿದ್ದು, ಎಲ್ಲೈಸಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಮುಹಮ್ಮದ್ ಮಸೂದ್ ಬಳಿಕ ಸಕ್ರಿಯ ರಾಜಕಾರಣಕ್ಕಿಳಿದು ಉಳ್ಳಾಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗಮನಸೆಳೆದರು. ಬಳಿಕ ವಿಧಾನ ಪರಿಷತ್ ಸದಸ್ಯ, ವಿಧಾನ ಪರಿಷತ್‌ನಲ್ಲಿ ಸರಕಾರದ ಮುಖ್ಯ ಸಚೇತಕ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ, ಕೆಪಿಸಿಸಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವುಳ್ಳ ಮುಹಮ್ಮದ್ ಮಸೂದ್ 2003ರಿಂದ ಈವರೆಗೆ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿದ್ದಾರೆ. ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯು ಡಿ.29ರಂದು ಮಂಗಳೂರಿನ ಪುರಭವನದಲ್ಲಿ ಸ್ವರ್ಣ ಮಹೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ಅಧ್ಯಕ್ಷರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

► ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ಯಾವಾಗ ಸ್ಥಾಪನೆಯಾಯಿತು ಮತ್ತು ಯಾವ ಉದ್ದೇಶಕ್ಕಾಗಿ?

1967ರಲ್ಲಿ ಮಂಗಳೂರಿನಲ್ಲೊಂದು ಕೋಮುಗಲಭೆ ನಡೆಯಿತು. ಇದರಿಂದ ಹಲವು ಮಂದಿಯ ಆಸ್ತಿಪಾಸ್ತಿಗೆ ನಷ್ಟ ಉಂಟಾಯಿತು. ಅಷ್ಟೇ ಅಲ್ಲ, ಹಿಂದೂ-ಮುಸ್ಲಿಮರ ಮಧ್ಯೆ ಪರಸ್ಪರ ಅಪನಂಬಿಕೆ ಶುರುವಾಯಿತು. ತಕ್ಷಣ ಎಚ್ಚೆತ್ತುಕೊಂಡ ಮುಸ್ಲಿಮ್ ಸಮುದಾಯದ ಆಗಿನ ಹಿರಿಯರು, ನಾಯಕರು ಶಾಂತಿ-ಸೌಹಾರ್ದ ಕಲ್ಪಿಸುವ ನಿಟ್ಟಿನಲ್ಲಿ 1968ರಲ್ಲಿ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯನ್ನು ಸ್ಥಾಪಿಸಿದರು.

► ಸೆಂಟ್ರಲ್ ಕಮಿಟಿಯನ್ನು ಯಾರ್ಯಾರು ಮುನ್ನಡೆಸಿದರು?

1968ರಿಂದ 1972ರವರೆಗೆ ಎಂ.ಸಿ.ಅಹ್ಮದ್, 1972ರಿಂದ 73ರವರೆಗೆ ಮುಹಮ್ಮದ್ ಕಮಾಲ್, 1973ರಿಂದ 1994ರವರೆಗೆ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್, 1994ರಿಂದ 1998ರವರೆಗೆ ಬಿ.ಎಂ.ಹಸನ್ ಹಾಜಿ, 1998ರಿಂದ 2003ರವರೆಗೆ ತುಂಬೆಯ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅಧ್ಯಕ್ಷರಾಗಿ ಈ ಸಂಸ್ಥೆಯನ್ನು ಮುನ್ನಡೆಸಿದ್ದರು. ಆ ಬಳಿಕ ಅಂದರೆ 2003ರಿಂದ 2018ರವರೆಗೆ ನಾನು ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸುಮಾರು 26 ವರ್ಷ ಈ ಸಂಸ್ಥೆಯ ಅಧ್ಯಕ್ಷರಾಗಿದ್ದ ತುಂಬೆಯ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್‌ರನ್ನು ಡಿ.29ರಂದು ನಡೆಯುವ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಗುವುದು.

► 50 ವರ್ಷಗಳ ಹಿಂದಿನ ಮುಸ್ಲಿಮ್ ಸಮಾಜದ ಸ್ಥಿತಿಗತಿ ಮತ್ತು ಈಗಿನ ಪರಿಸ್ಥಿತಿಯ ವ್ಯತ್ಯಾಸವನ್ನು ಗುರುತಿಸುವಿರಾ?

50 ವರ್ಷಗಳ ಹಿಂದೆ ಮುಸ್ಲಿಮ್ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ವಾಗಿ ಸಾಕಷ್ಟು ಹಿಂದುಳಿದಿತ್ತು. ಆದರೆ ಸೌಹಾರ್ದ, ಪ್ರೀತಿ, ವಿಶ್ವಾಸಕ್ಕೆ ಕೊರತೆ ಇರಲಿಲ್ಲ. ಈಗ ಎಲ್ಲವೂ ಇದ್ದು, ಎಲ್ಲದರಲ್ಲೂ ಸುಧಾರಣೆಯಾಗಿದೆ. ಆದಾಗ್ಯೂ ಪರಸ್ಪರ ಪ್ರೀತಿ-ವಿಶ್ವಾಸದ ಕೊರತೆಯಿದೆ. ಸಣ್ಣ ಪುಟ್ಟ ಅಭಿಪ್ರಾಯ ವ್ಯತ್ಯಾಸಗಳನ್ನು ಮುಂದಿಟ್ಟು ಒಬ್ಬರ ನ್ನೊಬ್ಬರು, ಒಂದು ಸಂಘಟನೆಯನ್ನು ಇನ್ನೊಂದು ಸಂಘಟನೆ ಹಣಿಯುವ ಪ್ರಯತ್ನ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸಮುದಾಯದ ಸಬಲೀಕರಣಕ್ಕಾಗಿ ಎಲ್ಲರೂ ತಮ್ಮ ಪ್ರತಿಷ್ಠೆ ಬದಿಗೊತ್ತಿ ಒಂದಾಗಬೇಕಿದೆ.

► ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯು ಕೋಮುಗಲಭೆ ಆದಾಗ ಮಾತ್ರ ಪ್ರತ್ಯಕ್ಷವಾಗುತ್ತದೆ ಎಂಬ ಆರೋಪವಿದೆ ಆ ಬಗ್ಗೆ ಏನಂತೀರಿ?

ಹಾಗೇನಿಲ್ಲ. ಹಿಂದೂ-ಮುಸ್ಲಿಮ್ ಮಧ್ಯೆ ಸೌಹಾರ್ದ ಕಲ್ಪಿಸುವ ಸಲುವಾಗಿ 50 ವರ್ಷಗಳ ಹಿಂದೆ ನಮ್ಮ ಹಿರಿಯರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ನಾವು ಕೂಡಾ ಅದೇ ಆಶಯದೊಂದಿಗೆ ಕಾರ್ಯಾ ಚರಿಸುತ್ತಿದ್ದೇವೆ. ಹಿಂದೂ-ಮುಸ್ಲಿಮರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಸಂಘರ್ಷ ಏರ್ಪಟ್ಟಾಗಲೆಲ್ಲಾ ಶಾಂತಿ ಕಾಪಾಡಲು ಕಮಿಟಿ ಶ್ರಮಿಸಿದೆ. ಜಿಲ್ಲಾಡಳಿತವು ಆಯೋಜಿಸುವ ಶಾಂತಿ ಸಭೆಗಳಲ್ಲಿ ಭಾಗವಹಿಸಿ, ಮುಸ್ಲಿಮರ ಮೇಲಾಗುವ ಅನ್ಯಾಯ, ಆಕ್ರಮಣಗಳ ಬಗ್ಗೆ ಪ್ರಸ್ತಾಪಿಸಿದ್ದೇವೆ, ಸರಕಾರದ ನೆರವು ದೊರಕಿಸಿ ಕೊಡಲು ಪ್ರಯತ್ನಿಸಿದ್ದೇವೆ. ಕೆಲವು ವರ್ಷದ ಹಿಂದೆ ಮಂಗಳೂರಿನಲ್ಲಿ ಹಿಂದೂ ಸಮಾಜೋತ್ಸವ ಆಯೋಜಿ ಸಿದ ಸಂದರ್ಭ ಮುಸ್ಲಿಮರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಆಗ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಿಂದೂ ಸಂಘಟನೆಗಳ ನಾಯಕರ ಜೊತೆ ಸಮಾಲೋಚನೆ ನಡೆಸಿ ಸಮಾಜೋತ್ಸವದಲ್ಲಿ ಪಾಲ್ಗೊಂಡವರಿಗೆ ತಂಪು ಪಾನೀಯ ವಿತರಿಸಿದೆವು. ಅಷ್ಟೇ ಅಲ್ಲ ಸಮಾಜೋತ್ಸವ ಸಂದರ್ಭ ಮುಸ್ಲಿಮ ರಲ್ಲಿದ್ದ ಆತಂಕ, ಭಯದ ವಾತಾವರಣವನ್ನು ನಿವಾರಿ ಸುವ ಪ್ರಯತ್ನ ಮಾಡಿದೆವು. ಅದಲ್ಲದೆ ಆರ್ಥಿಕವಾಗಿ ಹಿಂದುಳಿದ ಮುಸ್ಲಿಮ್ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮತ್ತು ಅನಾರೋಗ್ಯಪೀಡಿತರಿಗೆ ನೆರವು, ಹೊಲಿಗೆ ಯಂತ್ರ ಹಾಗೂ ಬಟ್ಟೆಬರೆ ವಿತರಣೆ ಇತ್ಯಾದಿ ಸಾಮಾಜಿಕ ಚಟುವಟಿಕೆಗಳನ್ನೂ ಸೆಂಟ್ರಲ್ ಕಮಿಟಿ ಮಾಡಿದೆ.

► ದ.ಕ. ಜಿಲ್ಲೆಯಲ್ಲಿ ಮುಸ್ಲಿಮ್ ಸಮಾಜವು ಸೂಕ್ತ ನಾಯಕತ್ವ, ಅರ್ಹ ಮಾರ್ಗದರ್ಶಕರ ಕೊರತೆ ಎದುರಿಸುತ್ತಿವೆ ಎಂಬ ಅಸಮಾಧಾನದ ಮಾತುಗಳಿವೆ, ಏನು ಹೇಳುವಿರಿ?

 ನಾಯಕತ್ವವನ್ನು ಯಾರು ನೀಡಬೇಕು ಹೇಳಿ?. ಸಮಾಜಕ್ಕೆ ಸಮಾಜವೇ ನಾಯಕತ್ವವನ್ನು ನೀಡಬೇಕು ತಾನೆ. ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ. ನಾನು ತಳಮಟ್ಟದಿಂದ ಬೆಳೆದು ಬಂದವ. ನನ್ನನ್ನು ಈ ಸಮಾಜವೇ ಬೆಳೆಸಿದೆ. ಸಮಾಜದ ಮಧ್ಯೆ ಇದ್ದುಕೊಂಡು ಅವರ ಸಂಕಷ್ಟ ಅರಿತುಕೊಂಡು ನಾಯಕನಾಗಿ ರೂಪುಗೊಂಡೆ. ಇನ್ನು ಮಾರ್ಗದರ್ಶಕರಿಲ್ಲ ಎನ್ನುವುದಕ್ಕಿಂತ ಮಾರ್ಗ ದರ್ಶಕರ ಮಾತುಗಳನ್ನು ಆಲಿಸುವವರು ಮತ್ತು ಅದರಂತೆ ಪಾಲಿಸುವವರು ಇಲ್ಲ ಎನ್ನಬಹುದು.

► ಮುಸ್ಲಿಮ್ ಸೆಂಟ್ರಲ್ ಕಮಿಟಿಯು ಸಮುದಾಯದ ಸಂಘಟನೆಯಾಗುವ ಬದಲು ಒಂದು ಪಕ್ಷದ ಅಥವಾ ಕೆಲವೇ ಕೆಲವು ಮಂದಿಯ ಸಂಘಟನೆಯಾಗಿದೆಎಂಬ ಆರೋಪವಿದೆಯಲ್ಲಾ?

ಕಳೆದ 15 ವರ್ಷಗಳಿಂದ ಈ ಕಮಿಟಿಯ ಅಧ್ಯಕ್ಷನಾಗಿರುವ ನಾನು ಯಾವತ್ತೂ ಯಾರನ್ನೂ ನಿರ್ಲಕ್ಷಿಸಿಲ್ಲ. ಎಲ್ಲರನ್ನೂ ಸೇರಿಸಿಕೊಂಡು ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇನೆ. ಇನ್ನು ಇದು ಒಂದು ಪಕ್ಷಕ್ಕೆ ಸೀಮಿತವಾದ ಸಂಘಟನೆ ಎಂಬ ಆರೋಪದಲ್ಲಿ ಹುರುಳಿಲ್ಲ. ಈ ಸಂಘಟನೆಯಲ್ಲಿರುವವರು ಯಾವ ಪಕ್ಷದಲ್ಲೂ ಸಕ್ರಿಯರಾಗಿರಬಹುದು. ಹಾಗಂತ ಅವರೆಲ್ಲಾ ಇದರಲ್ಲಿ ರಾಜಕೀಯ ಬೆರೆಸುತ್ತಾರೆ ಎನ್ನಲಾಗದು.

► ರಾಜಕೀಯ ಪ್ರಾತಿನಿಧ್ಯವಲ್ಲದೆ ಸಮುದಾಯದ ಅಭಿವೃದ್ಧಿಗಾಗಿ ಏನು ಮಾಡುವಿರಿ?

ಅವಿಭಜಿತ ದ.ಕ. ಜಿಲ್ಲೆಯ ಮುಸ್ಲಿಮರು ಕಬರಸ್ತಾನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದೇ ರೀತಿ ಕೆಲವು ಕಡೆ ವಕ್ಫ್ ಆಸ್ತಿಗಳ ಅತಿಕ್ರಮಣವಾಗಿದೆ. ಈ ನಿಟ್ಟಿನಲ್ಲೂ ನಾವು ಕಾರ್ಯಪ್ರವೃತ್ತರಾಗಿದ್ದೇವೆ.

► ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಏನಾದರೂ ಯೋಜನೆ ರೂಪಿಸಿದ್ದೀರಾ?

ಸದ್ಯ ಅಂತಹ ನಿರ್ದಿಷ್ಟ ಯೋಜನೆಯನ್ನೇನೂ ಹಾಕಿಕೊಂಡಿಲ್ಲ. ಆದರೆ, ಸಂಘಟನೆಯ ಕಾರ್ಯ ಕ್ರಮಗಳು ನಿರಂತರವಾಗಿರುತ್ತದೆ. ಡಿ.29ರಂದು ನಡೆಯುವ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ 50 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಿದ್ದೇವೆ.

► ಭಟ್ಕಳದಲ್ಲಿ ‘ತಂಝೀಮ್’ ಬಲಿಷ್ಠ ಸಂಘಟನೆಯಾಗಿ ರೂಪುಗೊಂಡಿವೆ. ಆದರೆ 50 ವರ್ಷವಾದರೂ ಮುಸ್ಲಿಮ್ ಸೆಂಟ್ರಲ್ ಕಮಿಟಿ ಆ ಮಟ್ಟಕ್ಕೆ ತಲುಪಿಲ್ಲ ಯಾಕೆ?

ನಾನು ಮೊದಲೇ ತಿಳಿಸಿದಂತೆ ಮುಸ್ಲಿಮ್ ಸೆಂಟ್ರಲ್ ಕಮಿಟಿ ಯಾವತ್ತೂ ಸಂಘಟನೆಯಲ್ಲಿ ರಾಜಕೀಯವನ್ನು ಎಳೆದು ತಂದಿಲ್ಲ. ನಾವೀಗ ಅವಿಭಜಿತ ದ.ಕ. ಜಿಲ್ಲೆಯ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಹೋರಾಟ ಮಾಡಲಿದ್ದೇವೆ. 1947ರಿಂದ ಈವರೆಗೆ ನಮಗೆ ದ.ಕ. ಜಿಲ್ಲೆಯಲ್ಲಿ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಲು ಪ್ರಬಲ ರಾಜಕೀಯ ಪಕ್ಷವು ಅವಕಾಶ ನೀಡಿಲ್ಲ. ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಯ ಸಂದರ್ಭವೂ ಮುಸ್ಲಿಮರನ್ನು ಕಡೆಗಣಿಸಲಾ ಗಿದೆ. ದ.ಕ.ಜಿಲ್ಲೆಯ 17 ಲಕ್ಷ ಮತದಾರರ ಪೈಕಿ 4 ಲಕ್ಷ ಮತದಾರರು ಮುಸ್ಲಿಮರಾಗಿದ್ದಾರೆ. ಅಲ್ಲದೆ 1.50 ಲಕ್ಷ ಕ್ರೈಸ್ತ ಮತದಾರರಿದ್ದಾರೆ. ಹೀಗಿರುವಾಗ ಮತೀಯ ಅಲ್ಪಸಂಖ್ಯಾತರ ನೆಲೆಯಲ್ಲಿ ಮುಸ್ಲಿಮರಿಗೆ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ಸಿಗಲೇಬೇಕು. ಈಗಾಗಲೆ ನಾವು ಈ ನಿಟ್ಟಿನಲ್ಲಿ ಕ್ರಿಯಾ ಸಮಿತಿಯೊಂದನ್ನು ರಚಿಸಿ ಜಾಗೃತಿ ಸಭೆಯನ್ನೂ ನಡೆಸಿದ್ದೇವೆ. ಪ್ರಬಲ ರಾಜಕೀಯ ಪಕ್ಷವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಸ್ಲಿಮರಿಗೆ ಟಿಕೆಟ್ ನೀಡದಿದ್ದರೆ ಖಂಡಿತವಾಗಿಯೂ ಸಮರ್ಥ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಆ ಬಳಿಕ ಮುಸ್ಲಿಮರ ರಾಜಕೀಯ ಶಕ್ತಿ ಏನು ಎಂಬುದನ್ನು ತೋರಿಸಿಕೊಡಲಿದ್ದೇವೆ.

Full View

Writer - ಸಂದರ್ಶನ: ಹಂಝ ಮಲಾರ್

contributor

Editor - ಸಂದರ್ಶನ: ಹಂಝ ಮಲಾರ್

contributor

Similar News