ಭೂಹಗರಣ ಆರೋಪ: ಹೂಡಾ, ವಾದ್ರಾ ವಿರುದ್ಧ ತನಿಖೆಗೆ ಹರ್ಯಾಣ ಸರಕಾರ ಅನುಮತಿ

Update: 2018-12-29 17:42 GMT

ಗುರ್ಗಾಂವ್, ಡಿ. 29: ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ವಿರುದ್ಧ ಭೂಹಗರಣಕ್ಕೆ ಸಂಬಂಧಿಸಿದ ತನಿಖೆ ನಡೆಸಲು ಹರ್ಯಾಣ ಸರಕಾರ ಪೊಲೀಸರಿಗೆ ಅನುಮತಿ ನೀಡಿದೆ.

ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸರಕಾರ ಅನುಮತಿ ನೀಡಿರುವುದನ್ನು ದೃಢಪಡಿಸಿರುವ ಗುರ್ಗಾಂವ್ ಪೊಲೀಸ್ ಆಯುಕ್ತ ಕೆ.ಕೆ. ರಾವ್, ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ನಮಗೆ ತನಿಖೆ ನಡೆಸಲು ಅನುಮತಿ ಸಿಕ್ಕಿದೆ. ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

2008ರ ಭೂ ಹಗರಣಕ್ಕೆ ಸಂಬಂಧಿಸಿ ವಾದ್ರಾ ಹಾಗೂ ಹೂಡಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಸೆಪ್ಟಂಬರ್ 1ರಂದು ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿತ್ತು. ವಾದ್ರಾ, ಹೂಡಾ ಅಲ್ಲದೆ ಡಿಎಲ್‌ಎಫ್ ಗುರ್ಗಾಂವ್ ಹಾಗೂ ಓಂಕಾರೇಶ್ವರ ಪ್ರಾಪರ್ಟಿಸ್ ಅನ್ನು ಕೂಡ ಪ್ರಥಮ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾದ್ರಾ ಅವರ ಕಂಪೆನಿ ಸ್ಕೈಲೈಟ್ ಹಾಸ್ಪಿಟಾಲಿಟಿ ಗುರ್ಗಾಂವ್‌ನ ವಿವಿಧ ಸ್ಥಳಗಳಲ್ಲಿ ಸರಕಾರದಿಂದ ಕಡಿಮೆ ಬೆಲೆಗೆ ಭೂಮಿ ಖರೀದಿಸಿ, ಅದನ್ನು ಹೆಚ್ಚಿನ ಬೆಲೆ ಮಾರಿದೆ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ.

ವಾಸ್ತವ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ವಾದ್ರಾ ಪ್ರತಿಪಾದಿಸಿದರೆ, ಇದು ರಾಜಕೀಯ ಸೇಡಿನ ಕ್ರಮ ಎಂದು ಹೂಡಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News