ಅಸಹನೆಯ ಮತ್ತೊಂದು ಅಪ್ಪಟ ನಿದರ್ಶನ
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುತ್ವ ಪರಿವಾರದ ಸಂಘಟನೆಗಳ ಮಾತು-ಕೃತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಬಂದವರಿಗೆ ಶಾ ಅವರ ಮಾತುಗಳು ಉತ್ಪ್ರೇಕ್ಷೆ ಎನ್ನಿಸುವುದಿಲ್ಲ. ಇದು ಅಪ್ರಿಯವಾದ ಸತ್ಯ. ಇದನ್ನು ಅರಗಿಸಿಕೊಳ್ಳಲಾರದವರು ಅಸಹನೆಯಿಂದ ಹಿಂಸಾಚಾರಕ್ಕೆ ಇಳಿಯುತ್ತಿದ್ದಾರೆ. ಶಾ ಅವರು ವಿವರಿಸಿರುವಂತೆ, ಚಿಂತಾಕುಲನಾದ ಭಾರತೀಯನೊಬ್ಬ ತಾನು ಪ್ರೀತಿಸುವ ದೇಶದ ಬಗ್ಗೆ ಆಡಿರುವ ಮಾತುಗಳು ಇವು. ಆದರೆ ಅವರ ವಿರುದ್ಧ ಉಗ್ರ ಪ್ರತಿಭಟನೆಯ ಹುಯಿಲೆಬ್ಬಿಸಿದವರಿಗೆ ಅವರ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ಸಹನೆ ಇಲ್ಲ, ಅವರ ಮಾತುಗಳ ಹಿಂದಿನ ನೈಜ ಕಳಕಳಿಯನ್ನು ಅರ್ಥಮಾಡಿಕೊಳ್ಳುವಷ್ಟು ವಿವೇಚನೆ ಇಲ್ಲ.
ದಿನನಿತ್ಯದ ಜಂಜಡದಲ್ಲಿ ಸಿಲುಕಿದ ಜನಸಾಮಾನ್ಯರ ಜಡ್ಡುಗಟ್ಟಿದ ಸಂವೇದನೆಗೆ ಹತ್ತರಿ ಹಿಡಿಯುವ ಕೆಲಸವನ್ನು ಕಲೆಸಾಹಿತ್ಯಗಳು ಬಹಳಕಾಲದಿಂದ ಮಾಡಿಕೊಂಡು ಬಂದಿರುವುದಕ್ಕೆ ಹಲವಾರು ನಿದರ್ಶನಗಳಿವೆ. ಸಾಹಿತಿಗಳು, ಕಲಾವಿದರು ಎಡ-ಬಲ ಪಂಥಗಳ ಬದ್ಧತೆಗಳ ಎಗ್ಗಿಲ್ಲದೆಯೂ ತಮ್ಮ ಕೃತಿಗಳಲ್ಲಿ ಈ ಕಾರ್ಯವನ್ನು ಮಾಡಿರುವುದುಂಟು. ಎಂದೇ ಸಮಾಜ ಮಾರ್ಗದರ್ಶನಕ್ಕಾಗಿ ಕಲೆ, ಸಾಹಿತ್ಯಗಳತ್ತ ಮುಖ ಮಾಡುತ್ತದೆ. ಚಲನಚಿತ್ರ ಉಳಿದೆಲ್ಲ ಮಾಧ್ಯಮಗಳಿಗಿಂತ ತುಂಬ ಪ್ರಭಾವಶಾಲಿಯಾದ ಮಾಧ್ಯಮ. ಸಿನೆಮಾ ಮಾಧ್ಯಮವನ್ನು ಸಮಾಜದ ವಾಸ್ತವತೆಯೊಂದಿಗೆ ಅರ್ಥಪೂರ್ಣವಾಗಿ ಬೆಸೆಯುವ, ತನ್ಮೂಲಕ ಸಮಾಜದ ಸಮಸ್ಯೆಗಳ ಬಗ್ಗೆ ಜನರ ಸಂವೇದನೆಗಳನ್ನು ಚುರುಕುಗೊಳಿಸುವಂಥ ಕಲೆಗಾರಿಕೆಯನ್ನು ನಮ್ಮ ನಿರ್ದೇಶಕರು, ನಟರು ಅಭಿವ್ಯಕ್ತಗೊಳಿಸಿರುವ ನಿದರ್ಶನಗಳು ಹಲವಾರು. ಇಂಥ ಸಂವೇದನಾಶೀಲ ನಟರಲ್ಲಿ ಒಬ್ಬರು ನಾಸಿರುದ್ದೀನ್ ಶಾ.
ನಾಸಿರುದ್ದೀನ್ ಶಾ ಅಭಿನಯ ಪ್ರತಿಭೆಯ ಜೊತೆಗೆ ತೀಕ್ಷ್ಣ ಸಂವೇದನೆಯ ವಿವೇಕಿ. ತಮ್ಮ ಸಂವೇದನಾಶೀಲ ಅಭಿನಯ ಪ್ರತಿಭೆ ಮತ್ತು ಸಾಮರ್ಥ್ಯಗಳಿಂದ ಜನಮನ ಗೆದ್ದವರು. ಕೇತನ್ ಮೆಹ್ತಾ ಅವರ ‘ಭವಾನಿ ಭವಾಯಿ’(1980), ಕುಂದನ್ ಶಾ ಅವರ ‘ಜಾನೆ ಭಿ ದೊ ಯಾರೊ’(1983), ಶ್ಯಾಂ ಬೆನಗಲ್ ಅವರ ‘ಮಂಡಿ’ ಮೊದಲಾದ ಚಿತ್ರಗಳ ಅಭಿನಯದ ಮೂಲಕ ಈ ದೇಶದ ಕ್ರೂರ ವಾಸ್ತವಗಳ ಬಗ್ಗೆ ಜನರ ಸಂವೇದನೆಯನ್ನು ಚುರುಕುಗೊಳಿಸಿದವರು, ಜಾಗೃತಿಯುಂಟುಮಾಡಿದವರು. ಸಿನೆಮಾ ಮತ್ತು ರಂಗಭೂಮಿಗಳಲ್ಲಿನ ತಮ್ಮದೇ ಆದ ವಿಶಿಷ್ಟ ಛಾಪಿನ ಅಭಿನಯ ಮತ್ತು ಮಾತುಗಾರಿಕೆಗಳಿಂದ ಕಲೆಯನ್ನು ಶ್ರೀಮಂತಗೊಳಿಸಿದ್ದೇ ಅಲ್ಲದೆ ದೇಶದ ಉದ್ದಗಲ ವಿವಿಧ ಕಲಾಪ್ರಕಾರಗಳ ಸೃಜನಶೀಲ ಮನಸ್ಸುಗಳನ್ನು ಒಂದುಗೂಡಿಸಿದವರು. ಇಂಥ ಕಲಾವಿದನ ಕಾರ್ಯಕ್ರಮವೊಂದಕ್ಕೆ ಧರ್ಮಾಂಧರ ಪಟಾಲಮ್ಮು ತಡಯೊಡ್ಡಿದ್ದು, ಅವರ ಮೇಲೆ ನಿಂದನೆಗಳ ಸುರಿಮಳೆಗರೆದದ್ದು, ದ್ವೇಷಪೂರಿತ ಪ್ರಚಾರ ಆರಂಭಿಸಿದ್ದು ನಿಜಕ್ಕೂ ಖೇದ ಉಂಟುಮಾಡುವ ಸಂಗತಿ. ನಾಸಿರುದ್ದೀನ್ ಶಾ ಅವರು ಈ ವರ್ಷದ ಅಜ್ಮೀರ್ ಸಾಹಿತ್ಯೋತ್ಸವದಲ್ಲಿ ಆಶಯ ಭಾಷಣ ಮಾಡಬೇಕಿತ್ತು. ಬಿಜೆಪಿಯ ಯುವ ಮೋರ್ಚಾ ಸದಸ್ಯರು ಇದನ್ನು ವಿರೋಧಿಸಿ ಶಾ ಅವರು ಅಜ್ಮೀರ್ ಸಾಹಿತ್ಯೋತ್ಸವ ಉದ್ಘಾಟಿಸಲಾಗದಂತಹ ಪರಿಸ್ಥಿತಿ ಉಂಟುಮಾಡಿದರು.
ಈ ಗುಂಪಿನ ಭಯೋತ್ಪಾದಕ ಶಕ್ತಿಯ ಮುಂದೆ ವ್ಯವಸ್ಥಾಪಕರು ಮಣಿಯಬೇಕಾಯಿತು. ಸಾಹಿತ್ಯೋತ್ಸವ ಉದ್ಘಾಟಿಸದಂತೆ ಯಶಸ್ವಿಯಾಗಿ ತಡೆದುದಷ್ಟೆ ಅಲ್ಲದೆ ನಾಸಿರುದ್ದೀನ್ ಶಾ ಅವರ ಮೇಲೆ ಸಾಮಾಜಿಕ ಮಾಧ್ಯಮವೂ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಬಯ್ಗಳ ಸುರಿಮಳೆ ಕರೆಯಲಾಯಿತು. ವಿಷಕಾರಲಾಯಿತು. ಅಬ್ಬರದ ದೇಶ ಭಕ್ತರ ಕೋಪತಾಪ ಪ್ರತಿಭಟನೆಗಳು ಶಾ ಅವರಿಗೆ ಪಾಕಿಸ್ತಾನಕ್ಕೆ ಹೋಗುವಂತೆ ವಿಮಾನದ ಟಿಕೆಟ್ ತೆಗೆಸಿಕೊಡುವ ಪರಾಕಾಷ್ಠೆಯನ್ನು ತಲುಪಿತ್ತು. ನಾಸಿರುದ್ದೀನ್ ಶಾ ಅವರ ಮೇಲೆ ‘ದೇಭ’ಗಳ ಈ ಪರಿಯ ಕೋಪತಾಪಗಳಿಗೆ ಕಾರಣವಾದರೂ ಏನಿರಬಹುದು? ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ ಮತ್ತು ಮೌಲ್ಯಗಳ ವಿಕೃತಿ ವಿರುದ್ಧ ದನಿ ಎತ್ತಿದವರ ಮೇಲೆ ನಡೆಯುತ್ತಿರುವ ದೇಶದ್ರೋಹಿ ಇತ್ಯಾದಿ ನಿಂದನಾ ಆಕ್ರಮಣದ ಇತ್ತೀಚಿನ ಬಲಿಪಶು ನಾಸಿರುದ್ದೀನ್.
ಗೋರಕ್ಷಣೆಯ ಹೆಸರಿನಲ್ಲಿ ಕೆಲವು ಸ್ವಯಂಪ್ರೇರಿತ ಗುಂಪುಗಳು, ಪುಂಡುಪಟಾಲಮ್ಮುಗಳು ಅಲ್ಪಸಂಖ್ಯಾತರ ಮೇಲೆ ನಡೆಸಿರುವ ಹಲ್ಲೆ ಮತ್ತು ಇಂಥವರಿಗೆ ದೊರೆತಿರುವ ಸರಕಾರದ ರಕ್ಷಣೆ ದೇಶದೆಲ್ಲೆಡೆ ವಿಚಾರವಾದಿಗಳನ್ನು ಕಂಗೆಡಿಸಿರುವಂತೆ ನಾಸಿರುದ್ದೀನ್ ಶಾ ಅವರನ್ನೂ ವಿವಂಚನೆಗೀಡುಮಾಡಿತ್ತು. ಉತ್ತರ ಪ್ರದೇಶದ ಬುಲೆಂದ್‌ಶಹರ್ ಜಿಲ್ಲೆಯಲ್ಲಿ ಇತ್ತೀಚೆಗೆ ಕಂಡುಬಂದವೆಂದು ಹೇಳಲಾದ ಗೋವುಗಳ ಮೃತ ದೇಹಗಳು ಹಿಂಸಾಚಾರಕ್ಕೆಡೆಮಾಡಿಕೊಟ್ಟದ್ದು, ಈ ಹಿಂಸಾಚಾರ ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಪೌರನೊಬ್ಬನ ಹತ್ಯೆಯಲ್ಲಿ ಪರ್ಯವಸಾನಗೊಂಡ ಘಟನೆ ಶಾಂತಿಪ್ರಿಯರಲ್ಲಿ ಕಳವಳ ಉಂಟುಮಾಡಿರುವುದು ಸರಿಯಷ್ಟೆ. ಗೋರಕ್ಷಕರ ಇಂಥ ವಿಪರೀತದ ಕೃತ್ಯಗಳಿಂದಾಗಿ ದೇಶದಲ್ಲಿ ಅಭದ್ರತೆಯ ಭಾವನೆ ಉಂಟಾಗಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ನಾಸಿರುದ್ದೀನ್ ಶಾ ಅವರು ಆಡಿರುವ ಮಾತುಗಳು ಹಿಂದುತ್ವದ ಪಟಾಲಮ್ಮುಗಳನ್ನು ಕೆರಳಿಸಿರುವುದೇ ಅವರ ವಿರುದ್ಧ ನಿಂದನೆ, ದ್ವೇಷ, ಪ್ರತಿಭಟನೆಗಳಿಗೆ ಕಾರಣ. ಇಷ್ಟಕ್ಕೂ ಶಾ ಅವರು ಆಡಿರುವ ಮಾತುಗಳಾದರೂ ಏನು?
‘‘ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವವರಿಗೆ ಸಂಪೂರ್ಣ ರಕ್ಷಣೆ ಇದೆ, ವಿನಾಯಿತಿ ಇದೆ. ನನಗೆ ನನ್ನ ಮಕ್ಕಳ ಬಗ್ಗೆ ಆತಂಕವಾಗುತ್ತಿದೆ. ದುರದೃಷ್ಟವಶಾತ್ ಇವತ್ತಿನ ಅತಿರೇಕದ ರಾಷ್ಟ್ರೀಯತೆಯ ವಾತಾವರಣದಲ್ಲಿ ಆತಂಕ ವ್ಯಕ್ತಪಡಿಸುವುದನ್ನೂ ಸಂದರ್ಭದಿಂದ ಹೊರತುಪಡಿಸಿ ತಿರುಚಲಾಗುತ್ತದೆ ಮತ್ತು ದೇಶದ್ರೋಹಿ ಎಂದು ಹಣೆಪಟ್ಟಿಹಚ್ಚಲಾಗುತ್ತದೆ.’’ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದುತ್ವ ಪರಿವಾರದ ಸಂಘಟನೆಗಳ ಮಾತು-ಕೃತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಬಂದವರಿಗೆ ಶಾ ಅವರ ಮಾತುಗಳು ಉತ್ಪ್ರೇಕ್ಷೆ ಎನ್ನಿಸುವುದಿಲ್ಲ. ಇದು ಅಪ್ರಿಯವಾದ ಸತ್ಯ. ಇದನ್ನು ಅರಗಿಸಿಕೊಳ್ಳಲಾರದವರು ಅಸಹನೆಯಿಂದ ಹಿಂಸಾಚಾರಕ್ಕೆ ಇಳಿಯುತ್ತಿದ್ದಾರೆ.
ಶಾ ಅವರು ವಿವರಿಸಿರುವಂತೆ, ಚಿಂತಾಕುಲನಾದ ಭಾರತೀಯನೊಬ್ಬ ತಾನು ಪ್ರೀತಿಸುವ ದೇಶದ ಬಗ್ಗೆ ಆಡಿರುವ ಮಾತುಗಳು ಇವು. ಆದರೆ ಅವರ ವಿರುದ್ಧ ಉಗ್ರ ಪ್ರತಿಭಟನೆಯ ಹುಯಿಲೆಬ್ಬಿಸಿದವರಿಗೆ ಅವರ ಮಾತುಗಳನ್ನು ಕೇಳಿಸಿಕೊಳ್ಳುವಷ್ಟು ಸಹನೆ ಇಲ್ಲ, ಅವರ ಮಾತುಗಳ ಹಿಂದಿನ ನೈಜ ಕಳಕಳಿಯನ್ನು ಅರ್ಥಮಾಡಿಕೊಳ್ಳುವಷ್ಟು ವಿವೇಚನೆ ಇಲ್ಲ. ಉತ್ತರ ಪ್ರದೇಶದ ಸಂಘಟನೆಯೊಂದು ಅವರಿಗೆ ಕರಾಚಿಗೆ ಹೋಗಲು ಟಿಕೆಟ್ ನೀಡಲು ಮುಂದಾಯಿತು. ಉತ್ತರ ಪ್ರದೇಶ ಬಿಜೆಪಿಯ ರಾಜ್ಯ ಶಾಖೆಯ ಅಧ್ಯಕ್ಷ ಮಹೇಂದ್ರ ನಾಥ ಪಾಂಡೆಯವರು ಶಾ ಅವರು ಚಿತ್ರವೊಂದರಲ್ಲಿ ನಟಿಸಿದ ಪಾಕಿಸ್ತಾನಿ ಏಜೆಂಟ್ ಪಾತ್ರದಲ್ಲಿ ಬೆಳೆಯುತ್ತಿದ್ದಾರೆಂದು ಅಬ್ಬರಿಸಿದರು.
ಸರಕಾರಿ ಕೃಪಾಪೋಷಿತ ಸಂಘಟನೆಗಳ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಪಟ್ಟಭದ್ರಹಿತಾಸಕ್ತಿಯ ತಂಡಗಳು ಗೋರಕ್ಷಣೆಯಂಥ ಸೂಕ್ಷ್ಮ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಉದ್ಭವಿಸಿರುವ ಬಿಕ್ಕಟ್ಟಿನ ಪರಿಸ್ಥಿತಿ ಮೊದಲಾದವುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದವರ ವಿರುದ್ಧವೂ ಇಂಥ ಉಗ್ರ ಪ್ರತಿಕ್ರಿಯೆ ಪ್ರಜಾಪ್ರಭುತ್ವದಲ್ಲಿ ಖಂಡನಾರ್ಹವಾದುದು. ಇತ್ತೀಚಿನ ಇಂಥ ಬೆಳವಣಿಗೆಗಳು ಕಳವಳಕಾರಿಯಾದುವು. ಮೂರು ವರ್ಷಗಳ ಹಿಂದೆ ಮತ್ತೊಬ್ಬ ನಟ ಆಮಿರ್ ಖಾನ್ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಬಗ್ಗೆ ಆತಂತಕ ವ್ಯಕ್ತಪಡಿಸಿದಾಗಲೂ ಕೆಲವು ಸಂಘಟನೆಗಳು ಹರಿಹಾಯ್ದಿದ್ದವು. ಅವರನ್ನು ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದ ಕಿತ್ತುಹಾಕುವಂತೆ ಖಾಸಗಿ ಸಂಸ್ಥೆಯೊಂದರ ಮೇಲೆ ಒತ್ತಡ ಹೇರುವ ಮಟ್ಟಕ್ಕೆ ಹೋಗಿತ್ತು ಈ ‘ದೇಭ’ರ ವಿರೋಧ.
ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಬಗೆಯ ವಿರೋಧ, ಪ್ರತಿಭಟನೆಗಳು, ಪ್ರಜೆಗಳು, ಅವರು ಖ್ಯಾತರಿರಲಿ ಇಲ್ಲದಿರಲಿ, ಅವರ ಬಾಯಿಮುಚ್ಚಿಸುವ ದಬಾವಣೆ ಕ್ರಮವಾಗಿದೆ. ದುರದೃಷ್ಟಕರ ವಿಷಯವೆಂದರೆ ಸರಕಾರ ರಾಜಕೀಯ ಕಾರಣಗಳಿಂದಾಗಿ ಇಂಥ ಪ್ರಕರಣಗಳ ಬಗ್ಗೆ ಕ್ರಮಕೈಗೊಳ್ಳದೇ ಇರುವುದು. ನಾಸಿರುದ್ದೀನ್ ಶಾ ಅವರು ಅಜ್ಮೀರ್ ಸಾಹಿತ್ಯೋತ್ಸವ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಾಗದ್ದಕ್ಕೆ ರಾಜಸ್ಥಾನದ ಮುಖ್ಯ ಮಂತ್ರಿಗಳು ವಿಷಾದವ್ಯಕ್ತಪಡಿಸಿರುವುದು ನಿಜ. ಕೆಲವರ ಬಂಧನವಾಗಿರುವುದೂ ನಿಜ.
ಆದರೆ ಇಂಥ ವಿಷಾದ, ಖಂಡನೆಗಳಿಗೆ ಸೊಪ್ಪುಹಾಕದಷ್ಟು ಪ್ರಬಲವಾಗಿ ಕೆಲವು ಸಂಘಟನೆಗಳು ಬೆಳೆದಿವೆ. ತಮ್ಮ ರಾಜಕೀಯ ನೇತಾರರ ರಕ್ಷಣೆ ತಮಗಿದೆ ಎಂಬ ಧೈರ್ಯದಿಂದಲೇ ಈ ಸಂಘಟನೆಗಳು ಇಂಥ ಕೃತ್ಯಗಳನ್ನು ಎಸಗುತ್ತಾ ಬಂದಿವೆ. ರಾಜಕೀಯ ನಾಯಕರು ಕಾಯ್ದೆ ಸುವ್ಯವಸ್ಥೆ ಪಾಲನೆಗೆ ಸಂಬಂಧಿಸಿದಂತೆ, ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವ ಪುಂಡು ಪಟಾಲಮ್ಮುಗಳ ಧಾರ್ಷ್ಟ್ಯಕ್ಕೆ ಸಂಬಧಿಸಿದಂತೆ ಶಿಷ್ಯವರ್ಗದ ಬಗ್ಗೆ ಕಟ್ಟುನಿಟ್ಟಿನಿಂದಿರಬೇಕು. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಈ ರೀತಿಯ ಬೆದರಿಕೆಗಳಿಗೆ ಒಳಗಾದವರನ್ನು ರಕ್ಷಿಸುವುದು ಆಖೈರಾಗಿ ಸರಕಾರದ ಹೊಣೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಸ್ವತಂತ್ರ ದನಿಗಳನ್ನು ಹತ್ತಿಕ್ಕುವ ಇಂತ ಪ್ರಯತ್ನಗಳನ್ನು ಬಗ್ಗುಬಡಿಯದ ಸರಕಾರ ಪ್ರಜಾಸರಕಾರವೆನ್ನಿಸಿಕೊಳ್ಳದು.