ಗಾಣಿಮಾರ್‌ನಲ್ಲೊಂದು ಮಾದರಿ ಅಂಗನವಾಡಿ ಕೇಂದ್ರ

Update: 2018-12-30 06:29 GMT

► ಪುಟಾಣಿಗಳಿಗೆ ಸಮವಸ್ತ್ರ

► ಕನ್ನಡದ ಜೊತೆ ಇಂಗ್ಲಿಷ್ ಕಲಿಕೆ

► ವಾಹನದ ವ್ಯವಸ್ಥೆ, ಆಟದ ಮನೆ

► ಜಿಲ್ಲಾ ಉತ್ತಮ ಅಂಗನವಾಡಿ ಕೇಂದ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆ

► ಜಿಲ್ಲಾ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಪಡೆದ ರೇಣುಕಾ

ಬಂಟ್ವಾಳ, ಡಿ.29: ಅಂಗನವಾಡಿ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ ಎಂಬ ಆರೋಪ ಎಲ್ಲೆಡೆ ಸಾಮಾನ್ಯ. ಅದಲ್ಲದೆ ಹೆಚ್ಚಿನ ಸರಕಾರಿ ಸವಲತ್ತುಗಳ ಬಗ್ಗೆ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಆದರೆ, ಕರಿಯಂಗಳ ಗ್ರಾಮ ಪಂಚಾಯತ್‌ನ ಬಡಕಬೈಲ್-ಗಾಣಿಮಾರ್‌ನಲ್ಲಿರುವ ‘ನಮ್ಮೂರ ಅಂಗನವಾಡಿ’ ಕೇಂದ್ರವು ಯಾವ ಖಾಸಗಿ ಪ್ರೀ-ಪ್ಲೇಹೋಮ್‌ಗಿಂತ ಕಡಿಮೆ ಇಲ್ಲ ಎಂಬಂತೆ ಗಮನ ಸೆಳೆಯುತ್ತಿದೆ. ಪ್ರತ್ಯೇಕ ವೆಬ್‌ಸೈಟ್ ಮೂಲಕ ಈ ಹೈಟೆಕ್ ಅಂಗನವಾಡಿ ಕೇಂದ್ರವು ರಾಜ್ಯಕ್ಕೆ ಮಾದರಿಯಾಗಿದೆ.

ಹಿಂದೆ ಈ ಅಂಗನವಾಡಿ ಕೇಂದ್ರ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸ್ಥಳೀಯರಾದ ಶಾರದಾ ಶೆಟ್ಟಿ ಎಂಬವರು ಮೂರು ಸೆಂಟ್ಸ್ ಜಾಗವನ್ನು ಅಂಗನವಾಡಿಗೆಂದು ದಾನವಾಗಿ ನೀಡಿದ್ದರು. ಸರಕಾರದ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಯಿತು. ಇಲ್ಲಿನ ಸ್ವಂತ ಕಟ್ಟಡದಲ್ಲಿರುವ ಅಂಗನವಾಡಿ ಹೊರನೋಟದಲ್ಲಿ ಎಷ್ಟು ಸುಂದರವಾಗಿದೆಯೋ ಒಳಗೂ ಅಷ್ಟೇ ಸುಂದರವಾಗಿದೆ. ಆವರಣಗೋಡೆಯಲ್ಲಿ ಸುಂದರ ಚಿತ್ರರಚನೆಯಿಂದ ಗಮನಸೆಳೆದರೆ, ಅಂಗನವಾಡಿ ಒಳಭಾಗದಲ್ಲಿ ಕಲಿಕೆಯ ಚಿತ್ರಗಳು, ಒಳಭಾಗದ ಗೋಡೆಯಲ್ಲಿ ಕಲಿಕೆಗೆ ಬೇಕಾದ ವಿವಿಧ ಚಿತ್ರಗಳು, ಮಕ್ಕಳು ಸುಲಭವಾಗಿ ಕಲಿಯಲು ಬೇಕಾದ ವ್ಯವಸ್ಥೆಯಿದ್ದು, ಪುಟಾಣಿಗಳ ಜ್ಞಾನವೃದ್ಧಿಸಲು ಇದು ಸಹಕಾರಿಯಾಗಲಿದೆ.

5 ವರ್ಷಗಳ ಹಿಂದೆ ಇಲ್ಲಿ ಕೇವಲ 5 ಮಕ್ಕಳು ಮಾತ್ರ ಇದ್ದರೆ ಈಗ ಮಕ್ಕಳ ಸಂಖ್ಯೆ 23ಕ್ಕೇರಿದೆ. ಇದಕ್ಕೆ ಕಾರಣ ಅಂಗನವಾಡಿಯಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್‌ನ್ನು ಕಲಿಸ ಲಾಗುತ್ತದೆ. ಪ್ರಾಣಿ ಪಕ್ಷಿಗಳ ಹೆಸರುಗಳನ್ನು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಕಲಿಸುವ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರು, ಮುಖ್ಯಮಂತ್ರಿಗಳ ಚಿತ್ರಗಳನ್ನು ತೋರಿಸಿ ಅವರ ಪರಿಚಯವನ್ನು ಮಾಡಲಾಗುತ್ತದೆ ಎಂದು ಹೇಳುತ್ತಾರೆ ಅಂಗನವಾಡಿ ಕಾರ್ಯಕರ್ತೆ ರೇಣುಕಾ.

ಅಂಗನವಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಆಟವಾಡಲು ಬೇಕಾದ ವ್ಯವಸ್ಥೆ ಇದೆ. ಕುಳಿತುಕೊಳ್ಳಲು ಚೇರ್, ಡೆಸ್ಕ್ ಜೊತೆಗೆ ಮಕ್ಕಳ ಆಟೋಟಕ್ಕೆ ಬೇಕಾದ ವ್ಯವಸ್ಥೆ ಇರುವುದು ಇಲ್ಲಿನ ವಿಶೇಷ. ಇಲ್ಲಿಗೆ ಕೇವಲ ಗ್ರಾಮದ ಮಕ್ಕಳು ಮಾತ್ರವಲ್ಲ, ಪಕ್ಕದ ಗ್ರಾಮದಿಂದಲೂ ಮಕ್ಕಳು ಬರುತ್ತಿದ್ದಾರೆ. ಅಂಗನವಾಡಿ ಹೊರಭಾಗದಲ್ಲಿ ವಿಶೇಷ ರೀತಿಯಲ್ಲಿ ರಂಗಮಂಟಪ ನಿರ್ಮಿಸಲಾಗಿದ್ದು, ಚಿಣ್ಣರ ಪ್ರತಿಭೋತ್ಸವ, ಮಕ್ಕಳ ದಿನಾಚರಣೆ ಇಲ್ಲಿ ಮಾಡಲಾಗುತ್ತಿದೆ ಎಂದು ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷ ಇಬ್ರಾಹೀಂ ಹೇಳುತ್ತಾರೆ.

ಈ ಕಟ್ಟಡಕ್ಕೆ ಈ ರೀತಿ ವಿಶೇಷ ರೂಪ ಕೊಟ್ಟವರು ದಾನಿಗಳು. ದಾನಿಗಳ ಸಹಕಾರದಿಂದ ಸಮವಸ್ತ್ರ, ಡೆಸ್ಕ್, ಚೇರ್, ಟಿವಿ, ಅಕ್ವೇರಿಯಂ ಒದಗಿಸಲಾಗಿದೆ. ಇಲ್ಲಿ ಮಕ್ಕಳಿಗೆ ಸ್ಲೇಟ್‌ನ ಬದಲು ಪುಸ್ತಕಗಳನ್ನು ನೀಡಿ ಪೂರ್ವ ಶಿಕ್ಷಣ ನೀಡಲಾಗುತ್ತದೆ. ಗೋಡೆಗಳಲ್ಲಿ ಕಾರ್ಟೂನ್ ಚಿತ್ರಣ ಹಾಗೂ ಆವರಣಗೋಡೆಯಲ್ಲಿ ಮಾದರಿ ಗ್ರಾಮದ ಚಿತ್ರ ಬಿಡಿಸಲಾಗಿದೆ. ಕಾನ್ವೆಂಟ್ ಶಾಲಾ ಕೇಂದ್ರಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಇಲ್ಲಿನ ಅಂಗನವಾಡಿ ಅಭಿವೃದ್ಧಿಪಡಿಸಿ, ಮಕ್ಕಳನ್ನು ಆಕರ್ಷಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.

19 ವರ್ಷದಿಂದ ಇಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ಶಾಲೆಯಲ್ಲಿ ಖುಷಿ ಖುಷಿಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮಕ್ಕಳಿಗೆ ದೈಹಿಕ ಕಸರತ್ತು ಪಾಠದ ಜೊತೆಗೆ ಅಕ್ಷರಾಭ್ಯಾಸ ನಡೆಯುತ್ತಿದೆ. 5 ವರ್ಷಗಳ ಹಿಂದೆ ಮಕ್ಕಳ ಕೊರತೆ ಕಾಣಿಸುತ್ತಿತ್ತು, ಆದರೆ ಊರವರ ಕೊಡುಗೆ, ಸಹಕಾರದಿಂದ ಅಂಗನವಾಡಿಗೆ ಜಿಲ್ಲಾ ಪ್ರಶಸ್ತಿ ಲಭಿಸುವಂತಾಗಿದೆ.

ರೇಣುಕಾ, ಅಂಗನವಾಡಿ ಕಾರ್ಯಕರ್ತೆ

ಕಾನ್ವೆಂಟ್, ನರ್ಸರಿಗಳಿಗೆ ಮಕ್ಕಳನ್ನು ಕಳುಹಿಸುವ ಉತ್ಸಾಹ ಹೊಂದಿರುವ ಹೆತ್ತವರಿಂದ ಸರಕಾರಿ ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಭಾರೀ ಕಡಿಮೆಯಾಗುತ್ತಿರುವುದನ್ನು ಮನಗಂಡು ಅಂಗನವಾಡಿ ಸಮಿತಿಯು ಈ ರೀತಿಯ ನೂತನ ಪ್ರಯೋಗವನ್ನು ಮಾಡುವ ಮೂಲಕ ಮಕ್ಕಳನ್ನು ಶಾಲೆಗೆ ಆಕರ್ಷಿಸುತ್ತಿದೆ.

ಇಬ್ರಾಹೀಂ, ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷ

ಪ್ರತ್ಯೇಕ ವೆಬ್‌ಸೈಟ್

ಅಂಗನವಾಡಿ ಚಟುವಟಿಕೆ ಹಾಗೂ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ತಮ್ಮದೆ ಹೆಸರಿನ ವೆಬ್‌ಸೈಟ್ ತಾಣ ಸೃಷ್ಟಿಸಿದೆ. ಅಂಗನವಾಡಿ ಕೇಂದ್ರದ ಚಟುವಟಿಕೆಗಳನ್ನು ಗಮನಿಸಿದ ಬೆಂಗಳೂರಿನ ಸಾಫ್ಟ್ ವೇರ್ ಉದ್ಯಮಿ ಸಾಬಿತ್ ಎಂಬವರು ಕೊಲಾಜ್ ಮೂಲಕ ಉಚಿತವಾಗಿ ಆಕರ್ಷಕವಾದ nammuraanganavadikendra.com  ಎಂಬ ಹೆಸರಿನ ವೆಬ್‌ಸೈಟ್‌ನ್ನು ರಚಿಸಿದ್ದಾರೆ.

ಕಳೆದ ವರ್ಷ ಮಕ್ಕಳ ದಿನಾಚರಣೆ ಮತ್ತು ಚಿಣ್ಣರ ಪ್ರತಿಭೋತ್ಸವದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರ ಸಮನ್ವಯ ಸಮಿತಿಯಿಂದ ಚಿಣ್ಣರ ಲೋಕ ಪುಸ್ತಕ ತರಲಾಗಿತ್ತು. 300 ರೂ. ಮುಖಬೆಲೆಯ ಈ ಪುಸ್ತಕಕ್ಕೆ ಸಾಕಷ್ಟು ಬೇಡಿಕೆ ಬಂದ ಕಾರಣ ಈ ವೆಬ್‌ಸೈಟ್ ನಿರ್ಮಿಸಿ ಅದ್ನು ಅಲ್ಲಿ ಪ್ರಕಟಿಸಲು ನಿರ್ಧರಿಸಿದ್ದಾರೆ.

Full View

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News