ಮತ್ತೆ ಮತ್ತೆ ಮರುಕಳಿಸುತ್ತಿರುವ ಮಂಗನ ಕಾಯಿಲೆ
ಮಂಗನ ಕಾಯಿಲೆ ಮೊದಲ ಬಾರಿಗೆ 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಕ್ಯಾಸನೂರ್ ಎಂಬ ಹಳ್ಳಿಯ ಕಾಡಿನಲ್ಲಿ ಕಾಣಿಸಿಕೊಂಡಿತ್ತು. ಈ ಕಾರಣದಿಂದಲೇ ಈ ರೋಗವನ್ನು ‘ಕ್ಯಾಸನೂರ್ ಫಾರೆಸ್ಟ್ ಡಿಸೀಸ್’ (KFD) ಎಂದೂ ಕರೆಯುತ್ತಾರೆ. ಸಾವಿರಾರು ಮಂಗಗಳು ಈ ರೋಗದಿಂದ ಸಾವಿಗೀಡಾಗಿದ್ದ ಕಾರಣದಿಂದಲೇ, ಈ ರೋಗ ಮಂಗಜ್ವರ, ಮಂಗನ ಕಾಯಿಲೆ ಎಂದೂ ಕುಖ್ಯಾತಿ ಪಡೆದಿದೆ.
ಉಣ್ಣೆಗಳ ಮುಖಾಂತರ ಹರಡುವ ಈ ರೋಗ, ಉಣ್ಣೆ ಕಡಿತದ ಕೆಲವೇ ಗಂಟೆಗಳಲ್ಲಿ KFD ವೈರಾಣು ರಕ್ತ ಸೇರುತ್ತದೆ. ಪ್ಲಾವಿವೈರಸ್ ಎಂಬ ಗುಂಪಿಗೆ ಸೇರಿದ ವೈರಾಣು ಇದಾಗಿದ್ದು ಡೆಂಘಿ ಜ್ವರ ಮತ್ತು ಹಳದಿ ಜ್ವರವನ್ನೂ ಇದೇ ವಂಶದ ವೈರಾಣುಗಳು ಹರಡುತ್ತವೆ. ಮಂಗನ ಕಾಯಿಲೆಗೆ ಕಾರಣವಾದ ವೈರಸನ್ನು KFD ವೈರಸ್ ಎಂದು ಕರೆಯಲಾಗುತ್ತದೆ. ಮುಳ್ಳುಹಂದಿ, ಇಲಿಗಳು, ಅಳಿಲುಗಳು, ಮಂಗಗಳು ಮುಂತಾದ ಪ್ರಾಣಿಗಳಲ್ಲಿ ಈ ವೈರಾಣುಗಳು ಬದುಕುತ್ತದೆ. ಹೆಮಾಫೈಲಿಸ್ ಸ್ಪಿಂಜೆರಾ ಎಂಬ ಕಾಡಿನ ಉಣ್ಣೆ ವೈರಾಣುವನ್ನು ಕಡಿತದ ಮುಖಾಂತರ ಮನುಷ್ಯನಿಗೆ ಸಸ್ತನಿಗಳಿಂದ ಹರಡುತ್ತದೆ. ರೋಗ ಬಂದವರಲ್ಲಿ 3 ರಿಂದ 10 ಶೇಕಡಾ ಮಂದಿ ಸಾವನ್ನಪ್ಪುತ್ತಾರೆ. 1982ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಈ ಮಂಗನ ಕಾಯಿಲೆ ತನ್ನ ಮರಣ ಮೃದಂಗವನ್ನೂ ಬಾರಿಸಿ ಹಲವಾರು ಮಂದಿಯನ್ನು ಬಲಿ ತೆಗೆದುಕೊಂಡಿತ್ತು.
ರೋಗದ ಲಕ್ಷಣಗಳು ಏನು?
ವೈರಾಣು ದೇಹವನ್ನು ಸೇರಿದ ಬಳಿಕ 3 ರಿಂದ 8 ದಿನಗಳಲ್ಲಿ ರೋಗದ ಲಕ್ಷಣ ಗಳು ಕಾಣಿಸಿಕೊಳ್ಳುತ್ತದೆ. ವೈರಾಣು ವ್ಯಕ್ತಿಯ ದೇಹವನ್ನು ಸೇರಿದ ಬಳಿಕ ರಕ್ತದ ಮುಖಾಂತರ ಮೆದುಳಿಗೆ ರವಾನೆಯಾಗುತ್ತದೆ. ಮೆದುಳಿನ ಜೀವಕೋಶಗಳಲ್ಲಿ ತನ್ನ ವಂಶಾಭಿವೃದ್ಧಿ ಮಾಡಿಕೊಂಡು, ಮೆದುಳಿನ ಜೀವಕೋಳಗಳನ್ನು ಹಾಳುಗೆಡವಿ ತನ್ನ ರುಧ್ರನರ್ತನವನ್ನು ಆರಂಭಿಸುತ್ತದೆ. ತೀವ್ರವಾದ ತಲೆನೋವು (ತಲೆಯ ಮುಂಭಾಗದಲ್ಲಿ), ವಿಪರೀತ ಜ್ವರ, ನಡುಕ, ಚಳಿ, ಮೈಕೈ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ, ಲಕ್ವ ಹೊಡೆದಂತಾಗುವುದು, ಕೈಕಾಲು ಜಗ್ಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮುಂದುವರಿದ ಹಂತದಲ್ಲಿ ಮೂಗಿನಿಂದ ರಕ್ತ ಸೋರುವಿಕೆ, ವಸಡಿನಲ್ಲಿ ರಕ್ತ, ರಕ್ತ ವಾಂತಿ, ಮೆದುಳಿನೊಳಗೆ ರಕ್ತಸ್ರಾವ ಉಂಟಾಗುತ್ತದೆ. ರಕ್ತದಲ್ಲಿ ಪ್ಲೆೆಟ್‌ಲೆಟ್ ಅಥವಾ ರಕ್ತ ತಟ್ಟೆ ಎಂಬ ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದೇ ಇದಕ್ಕೆ ಮೂಲ ಕಾರಣ. ಹೆಚ್ಚಿನ ಸಂದರ್ಭಗಳಲ್ಲಿ ರಕ್ತತಟ್ಟೆಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿ ಮೆದುಳಿನೊಳಗೆ ತೀವ್ರ ರಕ್ತಸ್ರಾವವಾಗಿ ಸಾವಿಗೆ ಕಾರಣವಾಗುತ್ತದೆ. ಅನಾಸಕ್ತಿ, ನಿಶ್ಯಕ್ತಿ, ನಿದ್ರಾಹೀನತೆ, ಮೈ ಮೇಲೆಲ್ಲಾ ಕೆಂಪು ಚಿಕ್ಕ ಚಿಕ್ಕ ಗುಳ್ಳೆಗಳು (ರಕ್ತ ತಟ್ಟೆಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಚರ್ಮದಡಿಯಲ್ಲಿ ಚಿಕ್ಕ ಚಿಕ್ಕ ರಕ್ತನಾಳಗಳು ಒಡೆದುಕೊಂಡು ರಕ್ತ ಒಸರುವುದು), ಕಫದೊಂದಿಗೆ ರಕ್ತ, ಮಲದೊಂದಿಗೆ ರಕ್ತ, ತಲೆ ಸುತ್ತುವುದು, ಮೂರ್ಚೆ ತಪ್ಪುವುದು ಮತ್ತು ಕೊನೆ ಹಂತದಲ್ಲಿ ಮರಣ ಕೂಡಾ ಸಂಭವಿಸಬಹುದು. ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ 2 ವಾರಗಳಲ್ಲಿ ಗುಣವಾಗಬಹುದು. ಆದರೆ ಸಂಪೂರ್ಣವಾಗಿ ಮೊದಲಿನಂತಾಗಲು ಕನಿಷ್ಠ 8-10 ತಿಂಗಳು ಹಿಡಿಯಬಹುದು. ಸ್ನಾಯುಗಳ ಸೆಳೆತ, ಸುಸ್ತು, ನಿಶ್ಯಕ್ತಿ, ನಿರಾಸಕ್ತಿ ಹಲವು ತಿಂಗಳುಗಳ ಕಾಲ ಕಾಡಬಹುದು. ಮಂಗನ ಕಾಯಿಲೆ ಬಂದಾಗ ರೋಗಿ ಮಂಗನಂತೆ ಕಿರಿಚುತ್ತಾನೆ, ಮಂಗನಂತೆ ವರ್ತಿಸುತ್ತಾನೆ ಎಂಬುವುದು ನಿಜವಲ್ಲ. ರೋಗಿಯಿಂದ ಇನ್ನೊಬ್ಬರಿಗೆ ಗಾಳಿಯ ಮುಖಾಂತರ ರೋಗ ಹರಡದು. ಉಣ್ಣೆ ಕಡಿತದ ಮುಖಾಂತರ ವೈರಾಣುವಿನಿಂದ ಮಾತ್ರ ಹರಡುತ್ತದೆ. ರೋಗಕ್ಕೆ ಔಷಧಿ ಇಲ್ಲದಿದ್ದರೂ, ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು.
ಚಿಕಿತ್ಸೆ ಹೇಗೆ?:
ಮೇಲೆ ಕಾಣಿಸಿದ ಲಕ್ಷಣಗಳು ಕಾಣಿಸಿಕೊಂಡಲ್ಲಿ PCR ಪರೀಕ್ಷೆಯ ಮುಖಾಂತರ ಮತ್ತು ELISA ಪರೀಕ್ಷೆಯ ಮುಖಾಂತರ ‘ಇಮ್ಯನೋ ಗ್ಲೋಬುಲಿನ್ ’ ಎಂಬ ಆ್ಯಂಟಿಬಾಡಿಗಳನ್ನು (KFD ವೈರಾಣುವಿನ ವಿರುದ್ಧವಾದ) ರಕ್ತದಲ್ಲಿ ಪತ್ತೆ ಹಚ್ಚಿ ರೋಗವನ್ನು ದೃಢೀಕರಿಸುತ್ತಾರೆ. ರೋಗದ ತೀವ್ರತೆಯನ್ನು ಮತ್ತು ಚಿಹ್ನೆಗಳನ್ನು ಅನುಸರಿಸಿ ರೋಗಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ರೋಗಿಯನ್ನು ಒಳರೋಗಿಯಾಗಿ ಆಸ್ಪತ್ರೆಯಲ್ಲಿ ದಾಖಲಿಸಿ, ತೀವ್ರ ತರವಾದ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತದೆ. ಎಲ್ಲಾ ವೈರಸ್ ಜ್ವರದಂತೆ ಪಾರಾಸಿಟಮೋಲ್ ಮಾತ್ರೆ, ಸಾಕಷ್ಟು ದ್ರವಾಹಾರ, ಸಂಪೂರ್ಣ ವಿಶ್ರಾಂತಿ ನೀಡಿ, ರಕ್ತನಾಳಗಳ ಮುಖಾಂತರ ಪ್ರೊಟೀನ್ ಪೋಷಕಾಂಶಯುಕ್ತ ದ್ರಾವಣ ನೀಡಿ ಉಪಚರಿಸಲಾಗುತ್ತದೆ. ರಕ್ತಸ್ರಾವವಾದಲ್ಲಿ ರಕ್ತ ಮರುಪೂರಣ ಮಾಡಿ ರಕ್ತ ಹೀನತೆ ಮತ್ತು ರಕ್ತದ ಒತ್ತಡ ಕಡಿಮೆಯಾಗದಂತೆ ನಿಗಾ ವಹಿಸಲಾ ಗುತ್ತದೆ. ರಕ್ತತಟ್ಟೆಗಳ ಸಂಖ್ಯೆ ಕಡಿಮೆಯಾದಲ್ಲಿ ರಕ್ತ ತಟ್ಟೆಗಳ ಮರುಪೂರಣದ ಅಗತ್ಯ ಇರುತ್ತದೆ. ಸಂಪೂರ್ಣವಾಗಿ ಗುಣಮುಖವಾದ ಬಳಿಕವೇ ಮನೆಗೆ ಕಳುಹಿಸಲಾಗುತ್ತದೆ.
ತಡೆಗಟ್ಟುವುದು ಹೇಗೆ?:
ಮಂಗನ ಕಾಯಿಲೆ ವಿರುದ್ಧ ಲಸಿಕೆ ಹಾಕಿ ರೋಗವನ್ನು ಬರದಂತೆ ತಡೆಯಲಾಗುತ್ತದೆ. ಫಾರ್ಮಾಲಿನ್‌ನಿಂದ ವಿಷಕಾರಕತ್ವವನ್ನು ತೆಗೆದ KFDV ಎಂಬ ವೈರಾಣು ನಿರ್ಜೀವಿ ಲಸಿಕೆಯನ್ನು ನೀಡಲಾಗಿ ರೋಗ ಬರದಂತೆ ಮಾಡುತ್ತಾರೆ. ಎರಡು ಲಸಿಕೆ ತೆಗೆದುಕೊಂಡವರಿಗೆ ಶೇ. 62 ಮತ್ತು ಮೂರು ಲಸಿಕೆ ತೆಗೆದುಕೊಂಡಲ್ಲಿ ಶೇ. 82 ಜನರಿಗೆ ರೋಗ ನಿರೋಧಕತ್ವ ಬರುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. 2016ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 31,500 ಜನರಿಗೆ ಮೂರು ಬಾರಿ ಲಸಿಕೆ ಹಾಕಿ (ಡಿಸೆಂಬರ್ 2015, ಜನವರಿ, 2016 ಮತ್ತು ಜೂನ್ 2016) ಮಂಗನ ಕಾಯಿಲೆ ಬರದಂತೆ ಮುಂಜಾಗರೂಕತೆ ವಹಿಸಲಾಗಿದೆ. ಇದಲ್ಲದೆ ಕಾಡಿನ ಸುತ್ತ ವಾಸಿಸುವವರು ಸಂಪೂರ್ಣ ಮೈ ಮುಚ್ಚುವ ವಸ್ತ್ರ ಧರಿಸಿ ಕಾಡಿಗೆ ಹೋಗತಕ್ಕದ್ದು. ಕಾಡಿಗೆ ಹೋದಾಗ ಉಣ್ಣೆ ಕಡಿತವಾಗದಂತೆ ಎಚ್ಚರ ವಹಿಸಬೇಕು. ಮಂಗ ಸತ್ತ ಪ್ರದೇಶದಲ್ಲಿ ಲಿಂಡೆವ್ ಮಿಶ್ರಣ ಸಿಂಪಡಿಸಲಾಗುತ್ತದೆ. ತಲೆನೋವು ಜ್ವರ ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಮನೆಯಲ್ಲಿ ಯಾರಿಗಾದರೂ ಜ್ವರ ಬಂದಿದ್ದಲ್ಲಿ ಎಲ್ಲರೂ ರಕ್ತ ಪರೀಕ್ಷೆ ಮಾಡಿಸಿ ಸಾಕಷ್ಟು ಮುಂಜಾಗರೂಕತೆ ವಹಿಸತಕ್ಕದ್ದು. ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಶೀಘ್ರ ಗುಣ ಮುಖವಾಗಬಹುದು.
ಕೊನೆ ಮಾತು: ಏಶ್ಯಾಖಂಡದಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ಮಂಗನ ಕಾಯಿಲೆ, ಇತ್ತೀಚೆಗೆ ಗೋವಾ ರಾಜ್ಯದ ಪಾಲಿ ಎಂಬ ಹಳ್ಳಿಯಲ್ಲಿ ಸುದ್ದಿ ಮಾಡಿದೆ. ಕೇರಳದ ವಯನಾಡಿನ ಕಾಡಿನ ಸುತ್ತಮುತ್ತ ಮತ್ತು ಮಲ್ಲಪ್ಪುರಮ್‌ನಲ್ಲೂ, ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ, ಕರ್ನಾಟಕದ ಚಾಮರಾಜ ನಗರದ ಬಂಡಿಪುರ ಸಂರಕ್ಷಿತ ಅರಣ್ಯದ ಸುತ್ತ ಮುತ್ತಲೂ ಕಾಣಿಸಿಕೊಂಡಿತ್ತು. ಕಳೆದ 60 ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕ್ಯಾಸನೂರು ಎಂಬ ಹಳ್ಳಿಯಲ್ಲಿ ಸುಮಾರು 531 ಮಂದಿಯನ್ನು ಈ ಮಂಗನ ಕಾಯಿಲೆ ಬಲಿ ತೆಗೆದುಕೊಂಡಿದೆ.
ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ ಸುದ್ದಿ ಮಾಡುತ್ತಿದೆ. ಕೇವಲ ಉಣ್ಣೆಗಳ ಮುಖಾಂತರ ಮತ್ತು ವೈರಾಣು ಸೋಂಕು ತಗುಲಿದ ಮಂಗಗಳ ಸ್ಪರ್ಶದಿಂದ ಮಾತ್ರ ಈ ರೋಗ ಹರಡುತ್ತದೆ. ರೋಗ ಪೀಡಿತ ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಹರಡುವ ಸಾಧ್ಯತೆ ಬಹಳ ಕಡಿಮೆ. ನವೆಂಬರ್ ಮತ್ತು ಮಾರ್ಚ್ ತಿಂಗಳ ನಡುವೆ ಹೆಚ್ಚಾಗಿ ಕಾಣಿಸುವ ಈ ರೋಗ, ಕಾಡಿಗೆ ಹೆಚ್ಚಾಗಿ ಹೋಗುವ ಫಾರೆಸ್ಟ್ ಗಾರ್ಡ್‌ಗಳಿಗೆ ಮತ್ತು ಆರೋಗ್ಯ ಕಾಯಕರ್ತರಿಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಾಡಿಗೆ ಹೋಗುವ ದನಗಳಿಗೆ ಈ ವೈರಾಣು ಸೋಂಕು ತಗಲುವ ಸಾಧ್ಯತೆ ಇದ್ದರೂ, ಮನುಷ್ಯನಿಗೆ ಹರಡುವ ಸಾಧ್ಯತೆ ಕಡಿಮೆ. ಆರಂಭಿಕ ಹಂತದಲ್ಲಿಯೇ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣ ಮುಖವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಲಸಿಕೆಯಿಂದ ತಡೆಗಟ್ಟಬಹುದಾದ ರೋಗ ಇದಾಗಿರುವುದರಿಂದ ಲಸಿಕೆ ಹಾಕಿಸುವುದರಲ್ಲಿಯೇ ಜಾಣತನ ಅಡಗಿದೆ.