ಸಂಭ್ರಮ
ಒಂದು ಊರು. ಅಲ್ಲೊಬ್ಬ ದಯಾಮಯಿ ಧನಿಕನಿದ್ದ.
ಪ್ರತಿ ದಿನ ಊರಿನ ಬಡವರನ್ನು ಕರೆದು ನೂರಾರು ರೂಪಾಯಿ ಹಂಚುತ್ತಿದ್ದ. ಊರೆಲ್ಲ ಅವನನ್ನು ಕೊಂಡಾಡುತ್ತಿದ್ದರು.
ಆದರೆ ಒಂದೇ ಒಂದು ದಿನ ಸಂತ ಅವನಲ್ಲಿಗೆ ಕೈ ಚಾಚಲು ಹೋದವನಲ್ಲ.
ಇದೇ ಸಂದರ್ಭದಲ್ಲಿ ಅವನಿಗೆ ಪ್ರತಿಸ್ಪರ್ಧಿ ಇನ್ನೊಬ್ಬ ಜಿಪುಣ ಶ್ರೀಮಂತ. ಜನರು ಶಾಪ ಹಾಕುತ್ತಿದ್ದರು.
ಅವನಿಗೆ ಊರಲ್ಲಿ ಗೌರವವೂ ಇರಲಿಲ್ಲ. ಜಿಪುಣ ಶ್ರೀಮಂತ ಒಂದು ದಿನ ತನ್ನ ಎದುರಾಳಿಗೆ ಸ್ಪರ್ಧೆ ನೀಡುವುದಕ್ಕಾಗಿ ದಾನ ನೀಡುವ ಘೋಷಣೆ ಮಾಡಿದ.
ತನ್ನ ಮನೆಯ ಅಂಗಳದಲ್ಲಿ ಹತ್ತು ಪೈಸೆಯ ನಾಣ್ಯಗಳನ್ನು ರಾಶಿ ಹಾಕಿ ಬಡವರನ್ನು ಕರೆದ. ಆದರೆ ಯಾರೂ ಕಣ್ಣೆತ್ತಿಯೂ ನೋಡಲಿಲ್ಲ.
ಆದರೆ ಇದು ಗೊತ್ತಾದ ಸಂತ ದಾನ ಪಡೆಯಲು ಅವನೆಡೆಗೆ ಧಾವಿಸಿದ. ಜಿಪುಣ ‘‘ಹತ್ತು ಪೈಸೆ’’ ಕೊಟ್ಟ. ಸಂತ ಕೊಂಡಾಡಿದ.
ಶಿಷ್ಯರಿಗೆ ಸಂತನ ಸಂಭ್ರಮ ಇಷ್ಟವಾಗಲಿಲ್ಲ.
ಸಂತ ನಕ್ಕು ನುಡಿದ ‘‘ಬಂಡೆಯೊಡೆದು ಮೊದಲ ಬಾರಿಗೆ ಒಂದು ಹುಲ್ಲು ಕಡ್ಡಿ ಜಿಗುರೊಡೆದಿದೆ. ಅದಕ್ಕೇ ಸಂಭ್ರಮಿಸುತ್ತಿದ್ದೇನೆ’’