ರಫೇಲ್ ವಿವಾದಕ್ಕೆ ತಿರುವು: ಭಾರತದ ಅರ್ಧ ಬೆಲೆಗೆ ಫ್ರಾನ್ಸ್ ಖರೀದಿ ಮಾಡುತ್ತಿದೆಯೇ?

Update: 2019-01-16 03:40 GMT

ಹೊಸದಿಲ್ಲಿ, ಜ.16: ದೇಶದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದ ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದ್ದು, ಭಾರತ ರಫೇಲ್ ವಿಮಾನ ಖರೀದಿಸಿದ ಅರ್ಧ ಬೆಲೆಗೆ ಫ್ರಾನ್ಸ್ ಅವುಗಳನ್ನು ಖರೀದಿಸುತ್ತಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ಭಾರತ 59 ಸಾವಿರ ಕೋಟಿ ರೂಪಾಯಿ (780 ಕೋಟಿ ಯೂರೊ) ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ. ಆದರೆ ಈ ಬೆಲೆಯ ಅರ್ಧ ಬೆಲೆಗೆ ಫ್ರಾನ್ಸ್ 28 ವಿಮಾನಗಳನ್ನು ಖರೀದಿಸುತ್ತಿದೆ ಎಂದು ವರದಿಯಾಗಿದೆ. ಆದರೆ ಫ್ರಾನ್ಸ್ ಸರ್ಕಾರ ಇದನ್ನು ನಿರಾಕರಿಸಿದ್ದು,  200 ಕೋಟಿ ಯೂರೊದಲ್ಲಿ 28 ವಿಮಾನಗಳನ್ನು ಖರೀದಿಸಲಾಗುತ್ತಿದೆ ಎಂದು ಪ್ರಕಟವಾಗಿರುವುದು ವಾಸ್ತವವಾಗಿ ರಫೇಲ್‌ನ ಎಫ್4 ಅವತರಣಿಕೆಯ ಅಭಿವೃದ್ಧಿಗೆ ಮಾಡುವ ವೆಚ್ಚ ಎಂದು ಸ್ಪಷ್ಟಪಡಿಸಿದೆ.

"ಫ್ರಾನ್ಸ್ ನಿನ್ನೆ ಯಾವುದೇ ವಿಮಾನ ಖರೀದಿ ಆದೇಶ ನೀಡಿಲ್ಲ! ವರದಿಗಳಲ್ಲಿ ಉಲ್ಲೇಖಿಸಿರುವ ಮೊತ್ತವು ಹೊಸ ಎಫ್4 ಗುಣಮಟ್ಟದ ರಫೇಲ್ ವಿಮಾನಗಳಿಗೆ ಸಂಬಂಧಿಸಿದ್ದು. ಈ ಹಿಂದಿನ ಒಪ್ಪಂದಕ್ಕೆ ಅನುಗುಣವಾಗಿ 28 ವಿಮಾನಗಳನ್ನು ಖರೀದಿಸಲಾಗುತ್ತಿದೆ ಎಂದು ಭಾರತದಲ್ಲಿ ಫ್ರಾನ್ಸ್ ರಾಯಭಾರಿಯಾಗಿರುವ ಅಲೆಕ್ಸಾಂಡ್ರೆ ಝೀಗ್ಲೆರ್ ಟ್ವೀಟ್ ಮಾಡಿದ್ದಾರೆ.

ಭಾರತೀಯ ವಾಯುಪಡೆ ಎಫ್3ಆರ್ ಅವತರಣಿಕೆಯ ರಫೇಲ್ ಯುದ್ಧ ವಿಮಾನಗಳನ್ನು 2019-2022ರ ಅವಧಿಯಲ್ಲಿ ಖರೀದಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News