ಮಂಡಾಡಿಯಲ್ಲಿ ಪಾಳುಬಿದ್ದಿದೆ ಕೃಷಿ ಇಲಾಖೆಗೆ ಸೇರಿದ ವಸತಿಗೃಹ!

Update: 2019-01-24 08:55 GMT

ಬಂಟ್ವಾಳ, ಜ.24: ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಗೊಳಪಟ್ಟ ಮಂಡಾಡಿ ಎಂಬಲ್ಲಿ ಕೃಷಿ ಇಲಾಖೆಗೆ ಸೇರಿದ ವಸತಿ ನಿಲಯವೊಂದು ಬಳಕೆಯಾಗದೇ ಹಾಗೂ ಕಾರ್ಯ ನಿರ್ವಹಣೆಯಿಲ್ಲದೆ ಪಾಲು ಬಿದ್ದಿದ್ದು, ಇದು ಭೂತದ ಬಂಗಲೆಯಂತಾಗಿ ಮಾರ್ಪಟ್ಟಿದೆ.

ಕೆಲ ವರ್ಷಗಳ ಹಿಂದೆ ಸರಕಾರದ ಅನುದಾನ ಬಳಸಿ ಇಲ್ಲಿ ಸುಸಜ್ಜಿತವಾದ ವಸತಿಗೃಹವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಇದು ಈಗ ಯಾವುದೇ ಕಾರ್ಯನಿರ್ವಹಣೆ ಇಲ್ಲದೇ ಭೂತ ಬಂಗಲೆಯಾಗಿದ್ದು, ಸಾರ್ವನಿಕರ ಲಕ್ಷಾಂತರ ರೂ. ವ್ಯರ್ಥವಾಗಿದೆ. ಈ ಕಟ್ಟಡವನ್ನು ಕನಿಷ್ಠ ಯಾರಿಗಾದರೂ ಬಾಡಿಗೆ ನೀಡಿದ್ದರೆ ಸರಕಾರಕ್ಕೆ ಆದಾಯ ಬರುತ್ತಿತ್ತು. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸಾರ್ವನಿಕರ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಸಾರ್ವಜನಿಕರು ಆರೋಪಿದ್ದಾರೆ.

ಗಿಡಗಂಟಿಗಳ ಮುಚ್ಚಿಹೋಗಿರುವ ವಸತಿಗೃಹ:

ಅಲ್ಲೇ ಹತ್ತಿರದಲ್ಲಿ ದೊಡ್ಡ ದೊಡ್ಡ ಮರಗಳ ನಡುವೆ 7ಫೀಟ್ ಎತ್ತರದ ಕಾಂಪೌಂಡ್‌ನೊಳಗೆ ಇವರು ವಸತಿಗೃಹ ಸಂಪೂರ್ಣ ಗಿಡಗಂಟಿಗಳ ಪೊದೆಯೊಳಗೆ ಮುಚ್ಚಿ ಹೋಗಿವೆ. ಕಾಂಕ್ರೀಟ್ ರಸ್ತೆಗೆ ತಾಗಿಯೇ ವಸತಿಗೃಹವಿದ್ದು, ಗೇಟಿನ ಮುಖಾಂತರ ಹೋಗಲು ಸಾಧ್ಯವೇ ಇಲ್ಲ. ಅಲ್ಲಲ್ಲಿ ತ್ಯಾಜ್ಯ ಸಹಿತ ಮದ್ಯಪಾನ ಮಾಡಿದ ಬಾಟಲಿಗಳಿದ್ದು, ಅನಾರೋಗ್ಯದ ವಾತಾವರಣ ನಿರ್ಮಾಣವಾಗಿದೆ. ಸುಮಾರು 14 ಸೆಂಟ್ಸ್ ಜಾಗದಲ್ಲಿ ಸುಮಾರು 650 ಸ್ಕ್ಯಾರ್ ಫೀಟ್ ವಿಸ್ತೀರ್ಣದ ಈ ವಸತಿಗೃಹದಲ್ಲಿ, ಹಾಲ್, ಅಡುಗೆ ಕೋಣೆ, ಬಚ್ಚಲು ಮನೆ ಹೀಗೆ ಸುಸಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮನೆಯ ಹಿಂದುಗಡೆ ತೆಂಗಿನಮರಗಳಿವೆ. ಕೆಲವು ವರ್ಷಗಳ ಹಿಂದೆ ಕೃಷಿ ಅಧಿಕಾರಿಗಳು ಇಲ್ಲಿ ವಾಸ್ತವ್ಯ ಹೂಡಿದ್ದರಿಂದ ಉತ್ತಮ ರೀತಿಯಲ್ಲಿ ಇತ್ತು. ಆದರೆ, ಕಾಲ ಕಳೆದಂತೆ ಕೃಷಿ ಇಲಾಖೆಗೆ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಇಲ್ಲಿ ವಾಸ್ತವ್ಯ ಹೂಡದ ಕಾರಣ ಈ ಅವ್ಯವಸ್ಥೆ ಬಂದೊದಗಿದೆ ಎಂದು ಇಲಾಖಾ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸರಕಾರಿ ನೌಕರರಿಗೆ ಉಳಿದುಕೊಳ್ಳಲು ವಸತಿ ನಿಲಯ ಬೇಕಿದ್ದರೇ ನಿಯಮದಡಿ ಅವಕಾಶ ಕಲ್ಪಿಸಲಾಗುವುದು. ಇಲ್ಲಿ ಯಾವುದೇ ತೊಂದರೆ ಇಲ್ಲ. ಮನೆ ಬಾಗಿಲಿನವರೆಗೆ ರಸ್ತೆ, ಕಾಂಪೌಂಡು ಬದಿಯಲ್ಲೇ ನೀರಿನ ಬೋರ್‌ವೆಲ್ ವ್ಯವಸ್ಥೆ, ಹತ್ತಿರದಲ್ಲೇ ಶಾಲೆ, ಅಂಗನವಾಡಿ, ಕಾಲೇಜು ಹೀಗೆ ಎಲ್ಲ ಇದರ ಸುತ್ತಮುತ್ತಲೇ ಇದೆ ಎಂದು ಬಂಟ್ವಾಳ ಕೃಷಿ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಪಾಲುಬಿದ್ದಿರುವ ಈ ವಸತಿಗೃಹದಲ್ಲಿ ಅನೈತಿಕ ಚಟುವಟಿಕೆಗಳು ಹಾಗೂ ಕುಡುಕರು ತಮ್ಮ ಅಡ್ಡೆಯನ್ನಾಗಿ ಬಳಕೆ ಮಾಡುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಈ ವಸತಿಗೃಹವನ್ನು ಮರುಬಳಕೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸರಿಯಾದ ವಸತಿ ವ್ಯವಸ್ಥೆಯಿಲ್ಲದೇ ಕೆಲವರು ಈಗಲೂ ಒದ್ದಾಡುತ್ತಿದ್ದಾರೆ. ಅದಲ್ಲದೆ, ತಾಲೂಕಿನ ಕೆಲ ಇಲಾಖೆಗಳಿಗೆ ಸ್ವಂತ ಸರಕಾರಿ ಕಟ್ಟಡಗಳೇ ಇಲ್ಲ. ಅಂತದರಲ್ಲಿ ಸುಸಜ್ಜಿ ತವಾದ ಸರಕಾರಿ ವಸತಿಗೃಹ ಬಳಕೆಯಾಗದೇ ಪಾಳು ಬಿದ್ದಿರುವುದು ಬೇಸರದ ಸಂಗತಿ. ಈ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಮನವರಿಕೆ ಮಾಡಿ ಮರುಬಳಕೆ ಮಾಡಲು ಪ್ರಯತ್ನ ಮಾಡಲಾಗುವುದು.

ಮುನೀಶ್ ಅಲಿ, ಬಂಟ್ವಾಳ ಪುರಸಭಾ ಸದಸ್ಯರು

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News