ಶಬರಿಮಲೆ ದೇವಾಲಯ ಋತುಚಕ್ರ ಮಹಿಳೆಯರ ಪ್ರವೇಶ 51 ಅಲ್ಲ, ಕೇವಲ 17: ಕೇರಳ ಸರಕಾರ

Update: 2019-01-25 17:26 GMT

ತಿರುವನಂತಪುರ, ಜ. 25: ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಿದ ಋತುಚಕ್ರ ವಯಸ್ಸಿನ ಮಹಿಳೆಯರ ಪಟ್ಟಿಯನ್ನು ಕೇರಳ ಸರಕಾರ ಪರಿಷ್ಕರಿಸಿದೆ. ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಿದ ಋತುಚಕ್ರ ವಯೋಮಾನ ಮಹಿಳೆಯರ ಸಂಖ್ಯೆ 51 ಅಲ್ಲ 17 ಎಂದು ಅದು ಹೇಳಿದೆ. ಶಬರಿಮಲೆ ದೇವಾಲಯಕ್ಕೆ ವಾರ್ಷಿಕ ಯಾತ್ರಾ ಅವಧಿಯಲ್ಲಿ ಋತುಚಕ್ರ ವಯಸ್ಸಿನ 51 ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಅಫಿದಾವಿತ್ ಸಲ್ಲಿಸಿತ್ತು.

ಈ ಪಟ್ಟಿಯನ್ನು ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ನೇತೃತ್ವದ ಸಮಿತಿ ಪರಿಷ್ಕರಿಸಿದೆ. ಈಗ ಪಟ್ಟಿಯಲ್ಲಿ ಶಬರಿಮಲೆ ದೇವಾಲಯ ಪ್ರವೇಶಿಸಿದ ಋತುಚಕ್ರ ವಯೋಮಾನದ ಮಹಿಳೆಯರ ಸಂಖ್ಯೆ 17ಕ್ಕೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪಟ್ಟಿಯಲ್ಲಿರುವ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು 30 ಮಂದಿ ಇದ್ದರು ಎಂದು ಪಿಣರಾಯಿ ವಿಜಯನ್ ಸರಕಾರ ಈಗಾಗಲೇ ಒಪ್ಪಿಕೊಂಡಿದೆ. ಈ ಪಟ್ಟಿಯಲ್ಲಿ ನಾಲ್ವರು ಪುರುಷರು ಕೂಡ ಇದ್ದರು. ಈ 34 ಮಂದಿಯ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶಬರಿಮಲೆಗೆ ಆಗಮಿಸಿದ ಋತುಚಕ್ರ ವಯಸ್ಸಿನ ಮಹಿಳೆಯರ ಸಂಖ್ಯೆಯನ್ನು ಖಚಿತವಾಗಿ ಅಂದಾಜಿಸಿಲ್ಲ ಎಂದು ಕೂಡ ಉಚ್ಚ ನ್ಯಾಯಾಲಯದಿಂದ ನಿಯೋಜಿಸಲಾದ ಸಮಿತಿ ಹೇಳಿದೆ. ಶಬರಿಮಲೆಗೆ ಭೇಟಿ ನೀಡಲು ಆಗಮಿಸಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಿಂದಿರುಗಿದ ಋತುಚಕ್ರದ ವಯಸ್ಸಿನ ಮಹಿಳೆ ರೇಷ್ಮಾ ನಿಶಾಂತ್ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಸಮಿತಿ ಈ ವರದಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News