ಸಾವಿನ ಕೂಪದಲ್ಲಿ ಗಣಿಗಾರಿಕೆ
2018ರಲ್ಲಿ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿದ ಬಹುಪಾಲು ಸ್ಪರ್ಧಾಳುಗಳು ಗಣಿಗಾರಿಕೆ ಮತ್ತು ಸಾರಿಗೆ ಉದ್ದಿಮೆಗಳಲ್ಲಿ ತೊಡಗಿಕೊಂಡಿದ್ದವರೇ ಆಗಿದ್ದರು. ಗಣಿಗಾರಿಕೆಯನ್ನು ನಿಯಂತ್ರಿಸುವ ಯಾವುದೇ ಕೇಂದ್ರೀಯ ಕಾನೂನುಗಳಿಂದ ಮೇಘಾಲಯಕ್ಕೆ ವಿನಾಯಿತಿ ನೀಡಿಲ್ಲವಾದರೂ ಅಲ್ಲಿನ ಸರಕಾರವು ಮಾತ್ರ ಈ ಗಣಿಗಾರಿಕೆಯ ಕಾನೂನು ಬಾಹಿರತೆಯನ್ನು ಮುಚ್ಚಿಕೊಳ್ಳುವ ಯತ್ನದಲ್ಲಿ ತೊಡಗಿಕೊಂಡಿದೆ.
ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಗಣಿಕಾರ್ಮಿಕರ ಸಾವುಗಳು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷಣೆಯ ಪ್ರತಿಪಾದಕರಿಗೆ ನಾಚಿಕೆ ಹುಟ್ಟಿಸಬೇಕು. ವಿಕೃತಗೊಂಡಿರುವ ನಮ್ಮ ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೆಲವರು ಮಾತ್ರ ಕೇವಲ ಬದುಕುಳಿಯುವ ಸಲುವಾಗಿ ತಮ್ಮ ಪ್ರಾಣವನ್ನೇ ಪಣವಾಗಿಡುತ್ತಾ ಇಲಿತೋಡಿನಂಥ ಗಣಿಯೊಳಗಿದ್ದು ಸಂಪತ್ತನ್ನು ಹೊರತೆಗೆಯುವ ಅಥವಾ ಆಳವಾದ ಚರಂಡಿಗಿಳಿದು ಕೊಚ್ಚೆಯನ್ನು ಹೊರತೆಗೆಯುವ ಅಪಾಯಕಾರಿ ಕೆಲಸಗಳನ್ನು ಮಾಡಬೇಕಾದ ದುರಂತದಲ್ಲಿ ಸಿಲುಕಿಕೊಂಡಿದ್ದಾರೆ.
ಮೇಘಾಲಯದಲ್ಲಿ ಕಲ್ಲಿದ್ದಲು ದೊರೆಯುವ ಪ್ರದೇಶಗಳಲ್ಲಿ ಕಲ್ಲಿದ್ದಲು ಬಂಡೆಗಳಿಗೆ ಇಲಿಗಳು ತೋಡುವಷ್ಟು ಸಣ್ಣ ರಂಧ್ರಗಳನ್ನು ಮಾಡುವ ಮೂಲಕ ನಡೆಸುವ ಗಣಿಗಾರಿಕೆಯನ್ನು ರ್ಯಾಟ್‍ಹೋಲ್ ಮೈನಿಂಗ್ ಅರ್ಥಾತ್ ಇಲಿಗುಂಡಿ ಗಣಿಗಾರಿಕೆ ಎನ್ನುತ್ತಾರೆ. ಮೇಘಾಲಯದಲ್ಲಿ ಅದರಲ್ಲೂ ಅದರ ಪೂರ್ವ ಜೈಂತಿಯಾ ಪರ್ವತ ಪ್ರದೇಶಗಳಲ್ಲಿ ಜನರು ಈ ಬಗೆಯ ಕಾನೂನು ಬಾಹಿರ ರ್ಯಾಟ್‍ಹೋಲ್ ಮೈನಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ. ಬಿದಿರು ಬೊಂಬುಗಳಿಂದ ನಿರ್ಮಿಸಲಾಗುವ ಅಷ್ಟು ಗಟ್ಟಿ ಇರದ ಏಣಿಗಳನ್ನು ಬಳಸಿಕೊಂಡು 100 ಅಡಿಯಷ್ಟು ಆಳದ ಗುಂಡಿಯನ್ನು ತೋಡುತ್ತಾ, ಇಲಿಗಳು ಮಾಡಿಕೊಳ್ಳುವ ಮಾರ್ಗವನ್ನು ಹೋಲುವ ಸುರಂಗದ ಮೂಲಕ ಕಲ್ಲಿದ್ದಲು ನಿಕ್ಷೇಪಕ್ಕೆ ದಾರಿ ಮಾಡಿಕೊಳ್ಳಲಾಗುತ್ತದೆ. ನೇಪಾಳ, ಬಾಂಗ್ಲಾದೇಶ ಮತ್ತು ಅತ್ಯಂತ ಅತಂತ್ರ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಸ್ಥಳೀಯರು ಮಾತ್ರ ಇಂತಹ ತೇವದ ಗುಂಡಿಗಳಲ್ಲಿ ತೆವಳುತ್ತಾ ಕಲ್ಲಿದ್ದಲು ಸಂಗ್ರಹಿಸುವ ಅಪಾಯಕಾರಿ ಕೆಲಸವನ್ನು ಮಾಡುತ್ತಾರೆ. ಒಂಬತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಕಡಿಮೆ ಎತ್ತರದ ಹುಡುಗರು / ಪುರುಷರು ಈ ಬಗೆಯ ಗುಂಡಿಯೊಳಗಿನ ಕೆಲಸಗಳಿಗೆ ಸೂಕ್ತರು. ಅವರುಗಳು ತಲೆಗೊಂದು ಟಾರ್ಚ್ ಕಟ್ಟಿಕೊಂಡು ಮೊರಗುದ್ದಲಿಯೊಂದಿಗೆ ಗುಂಡಿಗಿಳಿದು ಕೈಗೊಡಲಿಯಿಂದ ಕಲ್ಲಿದ್ದಲ ಬಂಡೆಯನ್ನು ತುಂಡರಿಸುತ್ತಾ ಕುಕ್ಕೆಯಲ್ಲೋ ಅಥವಾ ತಳ್ಳುಗಾಡಿಯಲ್ಲೋ ಅವುಗಳನ್ನು ತುಂಬುತ್ತಾ ಬಹುಹೊತ್ತಿನವರೆಗೂ ಕೆಲಸ ಮಾಡುತ್ತಿರುತ್ತಾರೆ.
ಅನಿಯಂತ್ರಿತವಾದ ಮತ್ತು ಅಪಾಯಕಾರಿಯಾದ ಈ ಉದ್ದಿಮೆಯನ್ನು ಮೇಘಾಲಯದಲ್ಲಿ ಗೃಹಕೈಗಾರಿಕೆ ಎಂದೇ ಕರೆಯಲಾಗುತ್ತದೆ. ಆದರೆ 2014ರಲ್ಲಿ ರಾಷ್ಟ್ರೀಯ ಹಸಿರು ಪೀಠ ಈ ಇಲಿಗುಂಡಿ ಗಣಿಗಾರಿಕೆಯನ್ನು ನಿಷೇಧಿಸಿತು. ಆದರೆ ಆ ನಿಷೇಧವು ಗಂಭೀರವಾಗಿ ಜಾರಿಯಾಗಲಿಲ್ಲ. ವಾಸ್ತವದಲ್ಲಿ, ಅಲ್ಲಿ ಆಳುವ ಪಕ್ಷಗಳು ನಿಷೇಧವನ್ನು ತೆರವು ಮಾಡುವ ಭರವಸೆಯನ್ನು ನೀಡುವ ಮೂಲಕವೇ ಅಧಿಕಾರವನ್ನು ಪಡೆದುಕೊಂಡಿವೆ. ಮೇಘಾಲಯದಲ್ಲಿ ಗಣಿಗಾರಿಕೆಯು ಚುನಾವಣಾ ಸಂಪನ್ಮೂಲವನ್ನು ಕ್ರೋಡೀಕರಿಸುವ ಪ್ರಧಾನ ಮೂಲವಾಗಿದ್ದು ಅಧಿಕಾರದಲ್ಲಿರುವ ಹಲವಾರು ಮಂತ್ರಿಗಳು ಮತ್ತು ಶಾಸಕರು ಒಂದೋ ತಮ್ಮದೇ ಗಣಿಗಳನ್ನು ಹೊಂದಿದ್ದಾರೆ ಅಥವಾ ಗಣಿಗಳ ನಿರ್ವಹಣೆ ಮಾಡುತ್ತಿದ್ದಾರೆ. 2018ರಲ್ಲಿ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿದ ಬಹುಪಾಲು ಸ್ಪರ್ಧಾಳುಗಳು ಗಣಿಗಾರಿಕೆ ಮತ್ತು ಸಾರಿಗೆ ಉದ್ದಿಮೆಗಳಲ್ಲಿ ತೊಡಗಿಕೊಂಡಿದ್ದವರೇ ಆಗಿದ್ದರು. ಗಣಿಗಾರಿಕೆಯನ್ನು ನಿಯಂತ್ರಿಸುವ ಯಾವುದೇ ಕೇಂದ್ರೀಯ ಕಾನೂನುಗಳಿಂದ ಮೇಘಾಲಯಕ್ಕೆ ವಿನಾಯಿತಿ ನೀಡಿಲ್ಲವಾದರೂ ಅಲ್ಲಿನ ಸರಕಾರವು ಮಾತ್ರ ಈ ಗಣಿಗಾರಿಕೆಯ ಕಾನೂನು ಬಾಹಿರತೆಯನ್ನು ಮುಚ್ಚಿಕೊಳ್ಳುವ ಯತ್ನದಲ್ಲಿ ತೊಡಗಿಕೊಂಡಿದೆ.
ಈ ಗಣಿಗಾರಿಕೆಯಿಂದ ಎಲ್ಲಾ ಸ್ಥಳೀಯರೂ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದೇನಲ್ಲ. ಈ ಪ್ರಕ್ರಿಯೆಯಿಂದಾಗಿ ಸಮುದಾಯದ ಸ್ವತ್ತಾದ ಭೂಮಿಯ ಖಾಸಗೀಕರಣವಾಗುತ್ತಿದೆ ಮತ್ತು ಕೆಲವೇ ಕೆಲವರು ಹೆಚ್ಚೆಚ್ಚು ಭೂಮಿಯನ್ನು ಕಬಳಿಸುತ್ತಿದ್ದಾರೆ. ಅಲ್ಲದೆ ಇಂತಹ ಗಣಿಗಾರಿಕೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಭೂರಹಿತರ ಸಂಖ್ಯೆಗೂ ಈ ಗಣಿಗಾರಿಕೆಗೂ ನೇರ ಸಂಬಂಧವಿದೆ. ಜೈಂತಿಯಾ ಪರ್ವತ ಪ್ರದೇಶದಲ್ಲಿ ಪ್ರತಿ ಚದರ ಕಿಲೋಮೀಟರಿಗೆ ಸರಾಸರಿ 50ಕ್ಕೂ ಹೆಚ್ಚು ಗಣಿಗಳಿವೆ. ದುರಂತವೆಂದರೆ, ಈ ಗಣಿಗಾರಿಕೆಯಿಂದಾಗಿ ಜೀವನೋಪಾಯದ ಇತರ ಮೂಲಗಳು ಬತ್ತಿಹೋಗುತ್ತಿರುವುದರಿಂದಾಗಿ ಕಲ್ಲಿದ್ದಲೇ ರಾಜ್ಯದ ಆರ್ಥಿಕತೆಯ ಪ್ರಧಾನ ಆಸರೆಯಾಗಿಬಿಟ್ಟಿದೆ. ಹೆಚ್ಚು ಬಂಡವಾಳ ಮತ್ತು ಸಂಪನ್ಮೂಲಗಳಿರುವವರಿಗೆ ಹೆಚ್ಚು ಲಾಭ ದೊರೆಯುತ್ತಿದೆ. ಗಣಿಗಾರಿಕೆಯು ನಡೆಯುತ್ತಿರುವುದು ತಮ್ಮ ಹೆಸರಿನಲ್ಲೇ ಆದರೂ ಸ್ಥಳೀಯರು ಮಾತ್ರ ಕಲ್ಲಿದ್ದಲು ಧಣಿಗಳ ಕೃಪಾಕಟಾಕ್ಷದಲ್ಲಿ ಬದುಕಬೇಕಿದೆ.
ಅಂತಹ ಒಂದು ಇಲಿಗುಂಡಿ ಗಣಿಪ್ರದೇಶದಲ್ಲಿ 2018ರ ಡಿಸೆಂಬರ್ 13ರಂದು ಲೈಟಿನ್ ನದಿಯ ನೀರು ನುಗ್ಗಿದ್ದರಿಂದ 15ಕ್ಕೂ ಹೆಚ್ಚು ಕಾರ್ಮಿಕರು ಗಣಿಯೊಳಗೆ ಸಿಲುಕಿಕೊಂಡರು. ಅಂದಿನಿಂದ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಗಳು ನಡೆಯುತ್ತಿದ್ದರೂ ಪ್ರಾಣರಕ್ಷಣೆಯ ಮೊದಲ ಘಟ್ಟದ ಸಮಯ ದಾಟಿಹೋಗಿದೆ. ಗಣಿಯೊಳಗಿಂದ ನೀರನ್ನು ಹೊರಗೆ ಹಾಕುವ ಪಂಪುಗಳು ಆ ಜಾಗಕ್ಕೆ ತಲುಪಿದ್ದೇ ಎರಡು ವಾರಗಳ ನಂತರ. ಆ ಗಣಿ ಪ್ರದೇಶದ ಬಗ್ಗೆ ಯಾವುದೇ ಸಿದ್ಧ ಭೂಪಟಗಳಿರಲಿಲ್ಲವಾದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಬಹುದಾದ ನೀಲನಕ್ಷೆಯೂ ಇರಲಿಲ್ಲ. ನೌಕಾಪಡೆಯ ಯೋಧರನ್ನು ಕಾರ್ಯಾಚರಣೆಗಿಳಿಸಿದರೂ ಕೊಳೆಯುತ್ತಿದ್ದ ಆ ಗಣಿಕಾರ್ಮಿಕರ ದೇಹವನ್ನು ಹೊರತೆಗೆಯುವುದು ದುಸ್ತರವೇ ಆಗಿತ್ತು. ಇನ್ನು ಇಬ್ಬರು ಗಣಿಕಾರ್ಮಿಕರು ಅದೇ ಜಿಲ್ಲೆಯಲ್ಲಿ 2019ರ ಜನವರಿ 6ರಂದು ಕೊಲ್ಲಲ್ಪಟ್ಟರು. ಮೇಘಾಲಯದ ಗಾರೋ ಪರ್ವತ ಪ್ರದೇಶದಲ್ಲಿ ಇದೇ ಬಗೆಯ ಘಟನೆ ಸಂಭವಿಸಿದ್ದರಿಂದಲೇ ರಾಷ್ಟ್ರೀಯ ಹಸಿರು ಪೀಠವು ಈ ಬಗೆಯ ಇಲಿಗುಂಡಿ ಗಣಿಗಾರಿಕೆಯನ್ನು ನಿಷೇಧಿಸಿತ್ತು. 2002ರಲ್ಲಿ ಇದೇ ರೀತಿಯಲ್ಲಿ 40 ಗಣಿಕಾರ್ಮಿಕರು ಸಾವನ್ನಪ್ಪಿದ್ದರೆ 2013ರಲ್ಲಿ ಐವರು ಗಣಿಕಾರ್ಮಿಕರು ಸಾವಿಗೆ ದೂಡಲ್ಪಟ್ಟಿದ್ದರು. ಈ ಗಣಿಪ್ರದೇಶಗಳಲ್ಲಿ ಆಯತಪ್ಪಿ ಬೀಳುವುದರಿಂದ, ಗಣಿಕುಸಿತದಿಂದ ಅಥವಾ ಪ್ರವಾಹಗಳಿಂದ ಪ್ರಾಣಾಂತಿಕವಾಗಿ ಗಾಯಗೊಳ್ಳುವುದು ಅಥವಾ ಸಾವನ್ನಪ್ಪುವುದು ದಿನನಿತ್ಯ ಸಂಭವಿಸುತ್ತಿದ್ದು ಅದಕ್ಕೆ ಯಾರೂ ಹೊಣೆ ಹೊರುತ್ತಿಲ್ಲ.
ಇಲಿಗುಂಡಿ ಗಣಿಗಾರಿಕೆಯು ಪರಿಸರಕ್ಕೂ ಹಾನಿಕರವಾಗಿದೆ. ಗಣಿಗಾರಿಕೆಯಿಂದಾಗಿ ಅತಿ ಹೆಚ್ಚು ಗಂಧಕ ಮತ್ತು ಲೋಹ ತ್ಯಾಜ್ಯಗಳು ಅ ಪ್ರದೇಶದ ನದಿಯಲ್ಲಿ ಸೇರತೊಡಗಿದ್ದು ನದಿನೀರನ್ನು ಆಮ್ಲೀಯವಾಗಿಯೂ ಮತ್ತು ವಿಷಕಾರಿಯಾಗಿಯೂ ಮಾಡಿದೆ. ಇದರಿಂದ ನದಿಯಲ್ಲಿನ ಮೀನುಗಳು ಸಾಯುತ್ತಿರುವುದಲ್ಲದೆ ನದಿಮುಖಜ ಪ್ರದೇಶದ ಮಣ್ಣಿನ ಗುಣಮಟ್ಟವೂ ಕುಸಿಯುತ್ತಿದೆ. ಗಣಿಗಾರಿಕೆಗಾಗಿ ಅಥವಾ ಕಲ್ಲಿದ್ದಲನ್ನು ಸಂಗ್ರಹಿಸಿಡುವ ಸಲುವಾಗಿ ಸಾವಿರಾರು ಎಕರೆ ಅರಣ್ಯಪ್ರದೇಶವನ್ನು ಮತ್ತು ಕೃಷಿ ಪ್ರದೇಶವನ್ನು ನಾಶಮಾಡಲಾಗಿದೆ. ಈ ಭಾಗದುದ್ದಕ್ಕೂ ತೆರೆದ ಮತ್ತು ತೊರೆದ ಗಣಿಗುಂಡಿಗಳು ಸಾವಿನ ಕೂಪಗಳಾಗಿ ಪರಿವರ್ತನೆಯಾಗಿವೆ. ಇಡೀ ಭೂಪ್ರದೇಶವೇ ವಿರೂಪಗೊಂಡು ವಿನಾಶಗೊಂಡಿದೆ. ಇಂಥಾ ದೊಡ್ಡಮಟ್ಟದ ಪರಿಸರ ವಿನಾಶ, ಮಾಫಿಯಾ ಚಟುವಟಿಕೆಗಳು, ಬಾಲಕಾರ್ಮಿಕರ ಕಳ್ಳ ಸಾಗಣೆ (2010ರಲ್ಲೆ 70,000ಕ್ಕೂ ಹೆಚ್ಚು ಬಾಲ ಕಾರ್ಮಿಕರ ಸಾಗಾಟವಾಗುತ್ತಿತ್ತೆಂದು ಅಂದಾಜು ಮಾಡಲಾಗಿತ್ತು) ಮತ್ತು ಕಾರ್ಮಿಕರ ಜೀವನ ಮತ್ತು ಸುರಕ್ಷತೆಗಳ ಬಗ್ಗೆ ಯಾವುದೇ ಕಾಳಜಿ ವಹಿಸದ ವಿದ್ಯಮಾನಗಳು ಎಗ್ಗಿಲ್ಲದೆ ನಡೆಯುತ್ತಿರುವ ಹೊತ್ತಿನಲ್ಲಿ ಈ ಎಲ್ಲವನ್ನು ನಿಯಂತ್ರಿಸುವ ಬಗ್ಗೆ ಸರಕಾರವು ಮಾಡುತ್ತಿರುವ ಘೋಷಣೆಗಳು ಯಾವುದೇ ವಿಶ್ವಾಸವನ್ನು ಹುಟ್ಟಿಸುತ್ತಿಲ್ಲ. ಈ ಪ್ರದೇಶಗಳಲ್ಲಿನ ಕಲ್ಲಿದ್ದಲ ಬಂಡೆಗಳು ತೆಳುವಾಗಿರುವುದಲ್ಲದೆ ಅತಿ ಆಳದಲ್ಲಿರುವುದರಿಂದ ಹಾಗೂ ವಿಸ್ತೃತವಾಗಿ ಹರಡಿಕೊಂಡಿರುವುದರಿಂದ ವಿಶಾಲವಾದ ಭೂ ಪ್ರದೇಶದಲ್ಲಿ ಗಣಿಗಾರಿಕೆಯನ್ನು ಮಾಡಬೇಕಾದ ಅಗತ್ಯವನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಈ ಸಮಸ್ಯೆಗೆ ವೈಜ್ಞಾನಿಕ ಗಣಿಗಾರಿಕೆಯೂ ಪರಿಹಾರವಲ್ಲ. ಅಲ್ಲದೆ ಅಲ್ಲಿ ಸಿಗುತ್ತಿರುವ ಕಲ್ಲಿದ್ದಲು ಒಳ್ಳೆಯ ಗುಣಮಟ್ಟದ್ದಲ್ಲವಾದ್ದರಿಂದ ಅರ್ಥಿಕವಾಗಿಯೂ ಲಾಭದಾಯಕವಲ್ಲ.
ಹೀಗೆ ಇಲಿಗುಂಡಿ ಗಣಿಗಳಲ್ಲೂ ಮತ್ತು ಆಳಚರಂಡಿಗಳಲ್ಲೂ ಪದೇಪದೇ ಸಂಭವಿಸುತ್ತಿರುವ ಸಾವುಗಳ ಹೊಣೆಗಾರಿಕೆ ಯಾರದ್ದು? ಇಂದಿನ ನವ ಉದಾರವಾದಿ ಸನ್ನಿವೇಶದಲ್ಲಿ ಅಂಥಾ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಇನ್ನಷ್ಟು ಕಷ್ಟವಾಗಿದೆ. ಮೇಘಾಲಯದಲ್ಲಿ ನಡೆದ ಈ ನಿರ್ದಿಷ್ಟ ಪ್ರಕರಣವನ್ನು ನೋಡುವುದಾದರೆ, ಗಣಿಗಾರಿಕೆಗೆ ನಿಷೇಧವಿದ್ದರೂ, ನಿಷೇಧಗಳ ಉಲ್ಲಂಘನೆಯಾಗುತ್ತಿದೆಯೆಂದು ತಿಳಿದಿದ್ದರೂ, ಉದ್ಯಮ ಮಾತ್ರ ನಿರಾತಂಕವಾಗಿ ಮುಂದುವರಿದಿತ್ತು. ಇಂಥಾ ಇಲಿಗುಂಡಿ ಗಣಿಗಳಲ್ಲಿ ಮನುಷ್ಯರು ಕೈಗಳನ್ನೂ ಕಾಲುಗಳನ್ನಾಗಿಸಿಕೊಂಡು ಇಲಿಗಳಂತೆ ತೆವಳುತ್ತಾ ಗಣಿಯೊಳಗೆ ಇಳಿಯಲು ಸಾಧ್ಯವಾದರೂ ಯಾವುದಾದರೂ ಅವಘಡ ಸಂಭವಿಸಿದಲ್ಲಿ ಇಲಿಗಳಂತೆ ಗಣಿಯಿಂದ ಹೊರಬರಲು ಸಾಧ್ಯವಾಗುವುದಿಲ್ಲವೆಂಬ ಸತ್ಯ ಎಲ್ಲರಿಗೂ ಗೊತ್ತಿತ್ತು.
ಕೃಪೆ: Economic and Political Weekly