ಸತತ ಮೂರನೇ ತಿಂಗಳು ಎಲ್‌ಪಿಜಿ ದರ ಇಳಿಕೆ

Update: 2019-01-31 16:14 GMT

ಹೊಸದಿಲ್ಲಿ, ಜ.31: ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯ ಪರಿಣಾಮ ಸತತ ಮೂರನೇ ತಿಂಗಳಲ್ಲಿ ಎಲ್‌ಪಿಜಿ ದರ ಇಳಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಪ್ರಕಟಣೆ ತಿಳಿಸಿದೆ.

ಗುರುವಾರ ಮಧ್ಯರಾತ್ರಿಯಿಂದ ಸಬ್ಸಿಡಿಯುಕ್ತ (14.2 ಕಿ.ಗ್ರಾಂ ತೂಕದ ಸಿಲಿಂಡರ್) ಅಡುಗೆ ಅನಿಲ ದರದಲ್ಲಿ 1.46 ರೂ. ಇಳಿಕೆಯಾಗಿದ್ದು ರಾಷ್ಟ್ರೀಯ ರಾಜಧಾನಿ ದಿಲ್ಲಿಯಲ್ಲಿ ಎಲ್‌ಪಿಜಿ ದರ ಈಗ 493. 53 ರೂ.ಗೆ ಇಳಿದಿದೆ. ಇದೇ ವೇಳೆ ಸಬ್ಸಿಡಿ ರಹಿತ ಅನಿಲ ದರದಲ್ಲಿ ಸಿಲಿಂಡರ್‌ಗೆ 30 ರೂ. ಇಳಿಕೆಯಾಗಿದೆ. 14.2 ಕಿ.ಗ್ರಾಂ ತೂಕದ ಸಿಲಿಂಡರ್ ದರ ಈಗ ದಿಲ್ಲಿಯಲ್ಲಿ 659 ರೂ. ಆಗಿದೆ. ಡಿಸೆಂಬರ್ 1ರಂದು ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 6.52 ರೂ ಇಳಿಕೆಯಾಗಿದ್ದರೆ ಜನವರಿ 1ರಂದು 5.91 ರೂ. ಇಳಿಕೆಯಾಗಿತ್ತು. ಇದೀಗ ಮತ್ತೆ 1.46 ರೂ. ಇಳಿಕೆಯಾಗಿದ್ದು, ಸತತ ಮೂರು ತಿಂಗಳಲ್ಲಿ ಒಟ್ಟು 13.89 ರೂ. ಇಳಿಕೆಯಾಗಿದೆ. ಇದೇ ವೇಳೆ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಡಿಸೆಂಬರ್ 1ರಂದು 133 ರೂ. ಇಳಿಕೆ, ಜನವರಿ 1ರಂದು 120.50 ರೂ. ಇಳಿಕೆಯಾಗಿತ್ತು. ಇದೀಗ ಮತ್ತೆ 30 ರೂ. ಇಳಿಕೆಯಾಗಿದ್ದು ಮೂರು ತಿಂಗಳಲ್ಲಿ ಒಟ್ಟು 283. 50 ರೂ. ಇಳಿಕೆಯಾಗಿದೆ.

ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ದರ ಹಾಗೂ ವಿದೇಶಿ ವಿನಿಮಯ ದರದ ಆಧಾರದಲ್ಲಿ ಎಲ್‌ಪಿಜಿ ಸಬ್ಸಿಡಿಯೂ ಬದಲಾಗುತ್ತದೆ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾದರೆ ಸರಕಾರ ಅಧಿಕ ಸಬ್ಸಿಡಿ ನೀಡುತ್ತದೆ. ದರ ಕಡಿಮೆಯಾದರೆ ಸಬ್ಸಿಡಿಯೂ ಕಡಿಮೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News