ಕೇಂದ್ರವನ್ನು ಟೀಕಿಸಿದ ನಟ ಅಮೊಲ್ ಪಾಲೇಕರ್ ಭಾಷಣಕ್ಕೆ ಅಡ್ಡಿ!

Update: 2019-02-10 07:18 GMT

  ಮುಂಬೈ, ಫೆ.10: ಕೇಂದ್ರ ಸರಕಾರವನ್ನು ಟೀಕಿಸಿದ ಕಾರಣಕ್ಕೆ ಹಿರಿಯ ನಟ ಹಾಗೂ ನಿರ್ದೇಶಕ ಅಮೋಲ್ ಪಾಲೇಕರ್ ಅವರ ಭಾಷಣಕ್ಕೆ ಪದೇ ಪದೇ ಅಡ್ಡಿಪಡಿಸಿರುವ ಘಟನೆ ಮುಂಬೈನ ನ್ಯಾಶನಲ್ ಮೋಡರ್ನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದಿದೆ.

ಕಲಾವಿದ ಪ್ರಭಾಕರ್ ಬಾರ್ವೆ ಸ್ಮರಣಾರ್ಥ ಪಾಲೇಕರ್ ಭಾಷಣ ಮಾಡುತ್ತಿದ್ದರು. ಮುಂಬೈ ಹಾಗೂ ಬೆಂಗಳೂರು ಕೇಂದ್ರದ ಮೋರ್ಡನ್ ಆರ್ಟ್ ಗ್ಯಾಲರಿಯ ಸಲಹಾ ಸಮಿತಿಯನ್ನು ನಿಷ್ಕ್ರೀಯಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ಪಾಲೇಕರ್ ತೀವ್ರವಾಗಿ ಟೀಕಿಸಿದರು.

"2018ರ ನವೆಂಬರ್ 3ರಂದು ಮುಂಬೈ ಹಾಗೂ ಬೆಂಗಳೂರಿನಲ್ಲಿರುವ ಎರಡು ಸ್ಥಳೀಯ ಕೇಂದ್ರದ ಸಲಹಾ ಸಮಿತಿಯನ್ನು ನಿಷ್ಕ್ರೀಯಗೊಳಿಸಲಾಗಿದೆ. ನಾನು ಏನು ಕಲಿತುಕೊಂಡಿರುವೆನೋ ಅಲ್ಲಿ ಈ ಘಟನೆ ನಡೆದಿದೆ. ನಾನು ಈ ಸುದ್ದಿಯನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇನೆ'' ಎಂದು ಪಾಲೇಕರ್ ಹೇಳಿದ ತಕ್ಷಣ, ಆರ್ಟ್ ಗ್ಯಾಲರಿ ಸದಸ್ಯರು ಅವರ ಭಾಷಣಕ್ಕೆ ಅಡ್ಡಿಪಡಿಸಿದರು. ನೀವು ಕಾರ್ಯಕ್ರಮದ ವಿಷಯವನ್ನು ಮಾತ್ರ ಮಾತನಾಡಬೇಕೆಂದು ತಾಕೀತು ಮಾಡಿದರು.

‘‘ನಾನು ಆ ಕುರಿತು ಮಾತನಾಡಲು ಬಯಸಿದ್ದೇನೆ. ಅದಕ್ಕೆ ನೀವು ಸೆನ್ಸಾರ್‌ಶಿಪ್ ಮಾಡಲು ಬಯಸಿದ್ದೀರಾ? ಎಂದು ಪಾಲೇಕರ್ ಪ್ರತಿಕ್ರಿಯಿಸಿದರು.

ತನಗೆ ಲಭಿಸಿದ ಮಾಹಿತಿ ಪ್ರಕಾರ ಸ್ಥಳೀಯ ಕಲಾವಿದರ ಸಮಿತಿಯನ್ನು ನಿಷ್ಕ್ರೀಯಗೊಳಿಸಿದ ಬಳಿಕ ಕಲಾವಿದರ ಕೆಲಸವನ್ನು ಪ್ರದರ್ಶಿಸಬೇಕಾದ ನಿರ್ಧಾರವನ್ನು ದಿಲ್ಲಿಯ ಸಂಸ್ಕೃತಿ ಸಚಿವಾಲಯ ತೆಗೆದುಕೊಳ್ಳಲಾಗುವುದು’’ ಎಂದು ಪಾಲೇಕರ್ ಹೇಳಿದರು.

  ಆಗ ಮಹಿಳೆಯೊಬ್ಬರು ಮತ್ತೊಮ್ಮೆ ಪಾಲೇಕರ್ ಭಾಷಣಕ್ಕೆ ಅಡ್ಡಿಪಡಿಸಿದರು. ‘‘ಈ ಸಂದರ್ಭದಲ್ಲಿ ಇದು ಅಗತ್ಯವಿಲ್ಲ. ಕ್ಷಮಿಸಿ.. ಪ್ರಭಾಕರ್ ಬಾರ್ವೆ ಕುರಿತು ಕಾರ್ಯಕ್ರಮ ಇದಾಗಿದೆ. ದಯವಿಟ್ಟು ಅವರ ಕುರಿತೇ ಮಾತನಾಡಿ’’ ಎಂದರು.

 ಆದಾಗ್ಯೂ ತನ್ನ ಭಾಷಣವನ್ನು ನಿಲ್ಲಿಸಲು ನಿರಾಕರಿಸಿದ ಪಾಲೇಕರ್, ಇತ್ತೀಚೆಗೆ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕಿ ನಯನಾತಾರಾ ಸಹಗಲ್‌ರನ್ನು ಆಹ್ವಾನಿಸಲಾಗಿತ್ತು. ಅವರು ನಮ್ಮ ಸುತ್ತಮುತ್ತಲಿನ ಕಷ್ಟದ ಪರಿಸ್ಥಿತಿಯನ್ನು ಮಾತನಾಡಲು ಬಯಸಿದ ಕಾರಣ ಕೊನೆಯಕ್ಷಣದಲ್ಲಿ ಅವರ ಆಹ್ವಾನವನ್ನು ಹಿಂದಕ್ಕೆ ಪಡೆಯಲಾಗಿತ್ತು ಎಂದು ಹೇಳಿದರು. ನೀವು ಕೂಡ ಇಲ್ಲಿ ಅಂತಹದ್ದೇ ಪರಿಸ್ಥಿತಿ ನಿರ್ಮಾಣ ಮಾಡುತ್ತೀದ್ದೀರಿ’’ ಎಂದರು.

ಪಾಲೇಕರ್ ಭಾಷಣಕ್ಕೆ ಅಡ್ಡಿಪಡಿಸಿರುವ ಘಟನೆಯನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸಿವೆ.

‘‘ಹಿರಿಯ ನಟ ಅಮೋಲ್ ಪಾಲೇಕರ್‌ಗೆ ಭಾಷಣ ಮಾಡಲು ಬಿಡದೇ ಅಡ್ಡಿಪಡಿಸಿರುವುದು ನಿಜವಾಗಲೂ ಆಘಾತಕಾರಿ ವಿಷಯ’’ ಎಂದು ಮುಂಬೈ ಕಾಂಗ್ರೆಸ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News