ಕೇಂದ್ರ ಸರಕಾರಿ ಇಲಾಖೆಗಳಲ್ಲಿ 3.79 ಲಕ್ಷ ಹೊಸ ಹುದ್ದೆಗಳು: ಸರಕಾರ

Update: 2019-02-10 16:40 GMT

ಹೊಸದಿಲ್ಲಿ,ಫೆ.10: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಮಧ್ಯೆಯೇ, 2017 ಮತ್ತು 2019ರ ಮಧ್ಯೆ ಕೇಂದ್ರ ಸರಕಾರಿ ಇಲಾಖೆಗಳಲ್ಲಿ 3.79 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿರುವುದಾಗಿ ಮೋದಿ ಸರಕಾರ 2019-20ರ ಮಧ್ಯಂತರ ಬಜೆಟ್‌ನಲ್ಲಿ ಹೇಳಿಕೊಂಡಿದೆ. 2017 ಮತ್ತು 18ರ ಮಧ್ಯೆ ಕೇಂದ್ರ ಸರಕಾರಿ ಇಲಾಖೆಗಳಲ್ಲಿ 2,51,279 ಉದ್ಯೋಗಗಳನ್ನು ಸೃಷ್ಟಿಸಲಾಗಿತ್ತು. ಮಾರ್ಚ್ 1,2019ರ ವೇಳೆಗೆ ಈ ಪ್ರಮಾಣ 3,79,544ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಫೆಬ್ರವರಿ 1ರಂದು ವಿತ್ತ ಸಚಿವ ಪಿಯೂಶ್ ಗೋಯಲ್ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ತಿಳಿದುಬಂದಿದೆ.

ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ನಿರುದ್ಯೋಗ ಸಮಸ್ಯೆಗಾಗಿ ಮೋದಿ ಸರಕಾರವನ್ನು ಟೀಕಿಸುತ್ತಿರುವ ಸಂದರ್ಭದಲ್ಲಿ ಹೊರಬಿದ್ದಿರುವ ಈ ಅಂಕಿಅಂಶಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಗುರುವಾರ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಮರ್ಪಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಅಸಂಘಟಿತ ಕ್ಷೇತ್ರಗಳಾದ ಸಾರಿಗೆ, ಹೋಟೆಲ್ ಮತ್ತು ಮೂಲಸೌಕರ್ಯ ಇತ್ಯಾದಿಗಳಲ್ಲಿ ಕೋಟ್ಯಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನುವುದನ್ನು ಸಾಬೀತುಪಡಿಸಲು ಭವಿಷ್ಯ ನಿಧಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್), ಆದಾಯ ತೆರಿಗೆ ಸಲ್ಲಿಕೆ ಮತ್ತು ವಾಹನಗಳ ಮಾರಾಟದ ಅಂಕಿಅಂಶಗಳನ್ನು ಆಧಾರವಾಗಿ ಬಳಸಿದರು. ಬಹುತೇಕ ನೇಮಕಾತಿಗಳನ್ನು ರೈಲ್ವೇ ಸಚಿವಾಲಯ, ಪೊಲೀಸ್ ಪಡೆಗಳು ಮತ್ತು ನೇರ ಹಾಗೂ ಪರೋಕ್ಷ ತೆರಿಗೆ ಇಲಾಖೆಗಳು ಮಾಡಿವೆ.

ಭಾರತೀಯ ರೈಲ್ವೆಯಲ್ಲಿ ಮಾರ್ಚ್ 1,2019ರ ವೇಳೆಗೆ 98,999 ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಇದೇ ವೇಳೆ ಪೊಲೀಸ್ ಇಲಾಖೆಗಳಲ್ಲಿ 79,353 ಮತ್ತು ನೇರ ತೆರಿಗೆ ಇಲಾಖೆಗಳಲ್ಲಿ 80,143 ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News