ಮುಲ್ಲರಪಟ್ಣ ಸೇತುವೆ ಕುಸಿದು 8 ತಿಂಗಳಾದರೂ ಆರಂಭವಾಗದ ಕಾಮಗಾರಿ !
#ಶ್ರಮದಾನ ಮೂಲಕ ಸ್ಥಳೀಯರಿಂದ ಮಣ್ಣಿನ ಕಚ್ಚಾ ರಸ್ತೆ ನಿರ್ಮಾಣ
ಬಂಟ್ವಾಳ, ಫೆ.24: ಬಂಟ್ವಾಳ-ಮಂಗಳೂರು ತಾಲೂಕುಗಳನ್ನು ಒಳರಸ್ತೆಯಾಗಿ ಸಂಪರ್ಕಿಸುವ ಮುಲ್ಲರಪಟ್ಣ ಸೇತುವೆ ಕುಸಿದು 8 ತಿಂಗಳಾದರೂ ಶಾಶ್ವತ ಸೇತುವೆ ನಿರ್ಮಾಣ ಈಡೇರದ ಕಾರಣ ಸೇತುವೆಗಾಗಿ ಕಾದು ಬೇಸತ್ತ ಸ್ಥಳೀಯರು ಸ್ವತಃ ಮಣ್ಣಿನ ಕಚ್ಚಾ ರಸ್ತೆ ನಿರ್ಮಿಸಿ ಜನಪ್ರತಿನಿಧಿಗಳನ್ನು ಅಣಕಿಸುವಂತೆ ಮಾಡಿದ್ದಾರೆ. ಮುಲ್ಲರಪಟ್ಣದ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯು ಕಳೆದ ವರ್ಷ ಕುಸಿದಿತ್ತು. ನಿರಂತರ ಮಳೆ ನೀರಿನ ಹರಿವು ಹಾಗೂ ಇಕ್ಕೆಲಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯಿಂದ ಸೇತುವೆಯ ಪಿಲ್ಲರ್‌ಗಳು ಶಿಥಿಲಗೊಂಡು ಕುಸಿತಕ್ಕೆ ಕಾರಣವಾಗಿದೆ ಎಂದು ದೂರಲಾಗಿತ್ತು.
ಸೇತುವೆ ಕುಸಿತದಿಂದ ಎಡಪದವು, ಕುಪ್ಪೆಪದವು, ಮೂಲರಪಟ್ಣ, ಆರ್ಲ, ಸೋರ್ನಾಡು ಕಡೆಗಿನ ಸಂಪರ್ಕ ಕಡಿತಕೊಂಡು ಸಹಸ್ರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವ್ಯಾಪಾರಿಗಳು ಸಂಚಾರ ಅಡಚಣೆಯನ್ನು ಎದುರಿಸಿದ್ದರು. ಆದರೆ, ಸೇತುವೆ ಕುಸಿದು ಫೆ.25ಕ್ಕೆ 8 ತಿಂಗಳಾಗುತ್ತಾ ಬಂದರೂ, ಪರ್ಯಾಯ ರಸ್ತೆ ಅಥವಾ ಹೊಸ ಸೇತುವೆ ನಿರ್ಮಾಣ ಕಾರ್ಯಕ್ಕೆ ಮುಂದಾಗದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.
ಮಣ್ಣಿನ ಕಚ್ಚಾ ರಸ್ತೆ: ಫಲ್ಗುಣಿ ನದಿಯಲ್ಲಿ ನೀರ ಹರಿವು ಕಡಿಮೆ ಆಗುತ್ತಿದ್ದಂತೆ ಮುಲ್ಲರಪಟ್ಣದ ಕುಸಿತಗೊಂಡ ಸೇತುವೆಗೆ ಪರ್ಯಾಯವಾಗಿ ಸ್ಥಳೀಯರ ಸಹಕಾರದೊಂದಿಗೆ ನದಿಯಲ್ಲಿ ಮಣ್ಣಿನ ರಸ್ತೆ ನಿರ್ಮಿಸಿದ್ದು, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ವಾಹನದಲ್ಲಿ ಪ್ರಥಮವಾಗಿ ಸಂಚರಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿಸಿದ್ದಾರೆ. ಸುತ್ತು ಬಳಸಿ ಹೋಗುವ ಸಮಸ್ಯೆಗೆ ಒಂದು ಹಂತದ ವಿರಾಮ ನೀಡಿದಂತಾಗಿದೆ.
ಬಹುಜನರ ಒತ್ತಾಯದಂತೆ ಮುಲ್ಲರಪಟ್ಣದಲ್ಲಿ ಫಲ್ಗುಣಿ ನದಿಗೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳೀಯರು ರಸ್ತೆ ನಿರ್ಮಾಣ ಮಾಡಿದ್ದಾರೆ. ಶಾಶ್ವತ ಸೇತುವೆ ನಿರ್ಮಾಣಕ್ಕಾಗಿ ಸರಕಾರದಿಂದ 14. 65 ಕೋಟಿ ರೂ. ಮಂಜೂರು ಮಾಡಿಸಿ, ಟೆಂಡರ್ ಕರೆಯಲಾಗಿದೆ. ಟೆಂಡರ್ ಹಾಗೂ ತಾಂತ್ರಿಕ ಪ್ರಕ್ರಿಯೆ ಮುಗಿದ ಬಳಿಕ ನಿರ್ಮಾಣ ಕಾಮಗಾರಿ ಶೀಘ್ರ ಆರಂಭವಾಗಲಿದೆ.
-ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಶಾಸಕರು
ಮರಳುಗಾರಿಕೆಗಾಗಿ ರಸ್ತೆ ನಿರ್ಮಾಣ: ಆರೋಪ
ಇದೀಗ ಕುಸಿತಗೊಂಡ ಸೇತುವೆ ಸಮೀಪ ಮಣ್ಣು ಹಾಕಿ, ರ್ಯಾಂಪ್ ಮೂಲಕ ಸಿದ್ಧಪಡಿಸಿರುವ ಮಣ್ಣಿನ ಕಚ್ಛಾ ರಸ್ತೆಯು ಅಕ್ರಮ ಮರಳುಗಾರಿಕೆಗಾಗಿಯೇ ಮಾಡಲಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಮಾಡುವುದಾಗಿ ಸ್ಥಳೀಯ ವ್ಯಕ್ತಿಯೊಬ್ಬರ ಅನುಮತಿ ಪಡೆದು ಖಾಸಗಿ ಜಾಗದ ಮೂಲಕ ರಸ್ತೆ ಮಾರ್ಗವನ್ನು ಮಾಡಲಾಗಿತ್ತು. ಆದರೆ, ಈ ರಸ್ತೆಯಲ್ಲಿ ಅವ್ಯಾಹತವಾಗಿ ಮರಳು ಲಾರಿಗಳು ಸಂಚರಿಸುತ್ತಿರುವುದನ್ನು ಕಂಡ ಜಾಗದ ಮಾಲಕರು ರಸ್ತೆ ತಡೆ ಮಾಡಿದ್ದರು. ಅದಲ್ಲದೆ, ಅಕ್ರಮ ಮರಳುಗಾರಿಕೆಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಮಾತುಕತೆಯ ಮೂಲಕ ಇದೀಗ ಸ್ಥಳೀಯರ ಸಂಚಾರಕ್ಕೆ ಮತ್ತೆ ಅನುವು ಮಾಡಲಾಗಿದೆ.
ಪರ್ಯಾಯವಾಗಿ ಇಲ್ಲಿನ ತೂಗು ಸೇತುವೆಯಲ್ಲಿ ಕಾಲ್ನ ಡಿಗೆ ಮೂಲಕ ಸಂಚರಿಸುವ ಸಮಸ್ಯೆಯನ್ನು ಜನರು ಎದುರಿಸುವಂತಾಗಿತ್ತು. ಸಾವು-ನೋವು, ಮದುವೆ ಇನ್ನಿತರ ಸಮಾರಂಭಗಳಿಗೆ ಸಂಚರಿಸಲು ಬಹಳಷ್ಟು ತೊಂದರೆಯಾಗುತ್ತಿದೆ. ಅಂದಿನಿಂದ ನೂತನ ಸೇತುವೆ ನಿರ್ಮಾಣದ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಇದೀಗ ಮಣ್ಣಿನ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಜನಪ್ರತಿನಿಧಿಗಳು ವಿಶೇಷ ಮುತುವರ್ಜಿವಹಿಸಿ ಮಳೆಗಾಲದ ಮೊದಲು ಸೇತುವೆ ನಿರ್ಮಾಣದ ಕಾಮಗಾರಿಗೆ ಮುಂದಾಗಬೇಕಿದೆ.
-ಸುಲೈಮಾನ್, ಸಾಮಾಜಿಕ ಹೋರಾಟಗಾರ
ಜನವರಿ ತಿಂಗಳ ಬಳಿಕ ನದಿಯಲ್ಲಿ ನೀರ ಹರಿವು ಕಡಿಮೆಯಾಗಿದ್ದು, ರಸ್ತೆ ನಿರ್ಮಾಣದ ಪ್ರಯತ್ನಗಳು ಯಶಸ್ವಿಯಾಗಿದೆ. ಸ್ಥಳೀಯರ ಸಂಪೂರ್ಣ ಸಹಕಾರದಲ್ಲಿ ಮಣ್ಣಿನ ರಸ್ತೆ ನಿರ್ಮಾಣ ಆಗುವ ಮೂಲಕ ಮಂಗಳೂರು ಮೂಡುಬಿದಿರೆಗೆ ಸಂಚರಿಸಲು ಹಿಂದಿನಂತೆ ಮತ್ತೆ ತೀರಾ ಹತ್ತಿರದಿಂದ ಅವಕಾಶ ಕಲ್ಪಿಸಲಾಗಿದೆ.
-ಎಂ.ಬಿ. ಅಶ್ರಫ್, ಅರಳ ಗ್ರಾಪಂ ಸದಸ್ಯ