ಅಣ್ವಸ್ತ್ರ ಸಮರವೆಂಬ ವಿನಾಶಕಾರಿ ವಿಶ್ವ ಸಹಕಾರಿ ಬ್ಯಾಂಕ್

Update: 2019-03-05 18:45 GMT

ಗಡಿಗಳಿಲ್ಲದ, ಗೋಡೆಗಳಿಲ್ಲದ ಆಧುನಿಕ ಅಣ್ವಸ್ತ್ರ ಸಮರವೆಂಬುದು ಪರಸ್ಪರ ಸಂಪೂರ್ಣ ನಾಶದ ಬೋನಸ್ ನೀಡುವ ಒಂದು ಸರ್ವನಾಶಕಾರಿ ಸಹಕಾರಿ ಬ್ಯಾಂಕ್. ಈ ಬ್ಯಾಂಕ್‌ನಲ್ಲಿ ಖಾತೆ ತೆರೆಯುವವರಿಗೆ ಬಡ್ಡಿ, ಬೋನಸ್ ನೀಡುವ ಬ್ಯಾಂಕ್ ದಿವಾಳಿ ಯಾಗುವುದಿಲ್ಲ. ಬ್ಯಾಂಕ್‌ನ ಕಟ್ಟಡ ಸಮೇತ ಇಡೀ ಊರೇ ಆವಿಯಾಗಿ ಹೋಗುತ್ತದೆ.


‘‘ಈಗ ಅತ್ಯಂತ ಮುಖ್ಯ ವಿಷಯವೆಂದರೆ ನಾವು ಮನುಕುಲದ ಇತಿಹಾಸ ಅಂತ್ಯಗೊಳ್ಳದಂತೆ ನೋಡಿಕೊಳ್ಳುವುದು’’.
-ಬ್ರಿಟಿಷ್ ತತ್ವಜ್ಞಾನಿ ಡೆರೆಕ್ ಪರಾಫಿಟ್

ರಣೋತ್ಸಾಹ ಸಂಭಾವ್ಯ ಯುದ್ಧದ ನಿರೀಕ್ಷೆ ಮತ್ತು ಉಗ್ರರನ್ನು ಸದೆ ಬಡಿದ ಸಂಭ್ರಮದಲ್ಲಿ ಸಮಗ್ರ ದೇಶ ಸಂತೋಷದಿಂದಿರುವಾಗಲೇ ರಶ್ಯಾದಿಂದ ಬಂದ ಒಂದು ಸುದ್ದಿ ಪತ್ರಿಕೆಗಳ ಒಳಪುಟದಲ್ಲಿ ಚಿಕ್ಕ ಸುದ್ದಿಯಾಗಿ ಪ್ರಕಟವಾಯಿತು. ರಶ್ಯಾದ ಸರಕಾರಿ ಟೆಲಿವಿಷನ್ ಪ್ರಸಾರ ಮಾಡಿದ ಆ ಸುದ್ದಿ ಹೀಗಿದೆ. ಒಂದು ವೇಳೆ ಅಮೆರಿಕ ರಶ್ಯಾದ ಮೇಲೆ ಅಣ್ವಸ್ತ್ರ ದಾಳಿ ನಡೆಸಿದಲ್ಲಿ ರಶ್ಯಾ ಅಮೆರಿಕದ ಯಾವ್ಯಾವ ನಗರಗಳ ಮೇಲೆ ಅಣ್ವಸ್ತ್ರ ಎಸೆಯುತ್ತದೆ ಎಂದು ಆ ನಗರಗಳ ಪಟ್ಟಿ ಮಾಡಿದೆ. ಅಷ್ಟೇ ಅಲ್ಲ ಈಗ ರಶ್ಯಾ ಅಭಿವೃದ್ಧಿ ಪಡಿಸುತ್ತಿರುವ ಶಬ್ದಾತೀತ ವೇಗದ (ಹೈಪರ್‌ಸೋನಿಕ್) ಕ್ಷಿಪಣಿಯೊಂದು ಕೇವಲ ಐದು ನಿಮಿಷಗಳೊಳಗಾಗಿ ಆ ನಗರಗಳನ್ನು ತಲುಪಿ ನಿಮಿಷಗಳೊಳಗಾಗಿ ಅಣ್ವಸ್ತ್ರ ಎಸೆಯಬಲ್ಲದು. ರಶ್ಯಾ ಪಟ್ಟಿ ಮಾಡಿರುವ ಟಾರ್ಗೆಟ್‌ಗಳಲ್ಲಿ ಅಮೆರಿಕದ ಮಿಲಿಟರಿ ಸಮುಚ್ಚಯವಾಗಿರುವ ಪೆಂಟಗಾನ್ ಮತ್ತು ಮೇರಿಲ್ಯಾಂಡಿನಲ್ಲಿರುವ ಅಧ್ಯಕ್ಷರು ವಿಶ್ರಾಂತಿ ಪಡೆಯುವ ಕ್ಯಾಂಪ್‌ಡೇವಿಡ್ ಸೇರಿದೆ. ಅಮೆರಿಕ ಬಯಸಿದಲ್ಲಿ ‘‘ಕ್ಯೂಬನ್ ಮಿಸೈಲ್’’ ಮಾದರಿಯ ಸಂಘರ್ಷಕ್ಕೆ ರಶ್ಯಾದ ಮಿಲಿಟರಿ ಸಿದ್ಧವಾಗಿದೆ ಎಂದು ಅಧ್ಯಕ್ಷ ಪುಟಿನ್ ಹೇಳಿದ ಕೆಲವು ದಿನಗಳ ಬಳಿಕ ಫೆಬ್ರವರಿ 24ರಂದು ರಶ್ಯಾದ ಟಿವಿ ಈ ರೀತಿ ವರದಿ ಮಾಡಿತ್ತು. ಭಾರತೀಯ ಉಪಖಂಡದಲ್ಲಿ ಯುದ್ಧದ ಸಾಧ್ಯತೆಯ ಬಗ್ಗೆ ಊಹಾಪೋಹಗಳು ವ್ಯಾಪಕವಾಗುತ್ತಿರುವಾಗ ಇಲ್ಲೇನಾದರೂ ಅಣ್ವಸ್ತ್ರ ಪ್ರಯೋಗವಾಗಿ ಬಿಟ್ಟಲ್ಲಿ ಏನೇನು ಅನಾಹುತಗಳಾಗಬಹುದು ಎಂಬ ಬಗ್ಗೆ ಯುದ್ಧೋತ್ಸಾಹಿಗಳು ತಿಳಿದುಕೊಳ್ಳುವ ಕೃಪೆ ತೋರಿದರೆ ವಿಶ್ವದಲ್ಲಿ ಸಾವುಗಳ ನರ್ತನ ಮತ್ತು ಸರ್ವನಾಶದ ಭೀತಿ ದೂರವಾಗಿ ಶಾಂತಿಗೆ ಒಂದು ಅವಕಾಶ ಸಿಗಬಹುದು.

ಮೇಲೆ ಉಲ್ಲೇಖಿಸಿರುವ ಬ್ರಿಟಿಷ್ ತತ್ವಜ್ಞಾನಿ ಡೆರೆಕ್ ಪರಾಫಿಟ್ ತನ್ನ ‘ರೀಸನ್ಸ್ ಆ್ಯಂಡ್ ಪರ್ಸನ್ಸ್’ ಎಂಬ ಪುಸ್ತಕದಲ್ಲಿ ಮನುಕುಲದ ಮುಂದೆ ಬಹಳ ಮುಖ್ಯವಾದ ಈ ಕೆಳಗಿನ ಪ್ರಶ್ನೆ ಇಡುತ್ತಾನೆ.
ಈ ಮೂರು ಪರಿಣಾಮಗಳನ್ನು ಹೋಲಿಸಿ:

1. ಶಾಂತಿ.

2. ಜಗತ್ತಿನಲ್ಲಿ ಈಗ ಇರುವ ಒಟ್ಟು ಜನಸಂಖ್ಯೆಯ 99 ಶೇಕಡಾ ಜನರನ್ನು ಕೊಲ್ಲುವ ಒಂದು ಅಣ್ವಸ್ತ್ರ ಸಮರ.

3. 100 ಶೇಕಡಾ ಜನರನ್ನು ಕೊಲ್ಲುವ ಒಂದು ಅಣ್ವಸ್ತ್ರ ಸಮರ.

(2)ನೆಯ ಆಯ್ಕೆ (1)ನೆಯ ಆಯ್ಕೆಗಿಂತ ಕೆಟ್ಟದ್ದು; ಮತ್ತು (3)ನೆಯ ಆಯ್ಕೆ (2)ಕ್ಕಿಂತ ಕೆಟ್ಟದ್ದು, ಈ ಎರಡು ವ್ಯತ್ಯಾಸಗಳಲ್ಲಿ ಯಾವುದು ಹೆಚ್ಚು ದೊಡ್ಡದು? ಮುಂದುವರಿಸಿ ಡೆರೆಕ್ ಹೇಳುತ್ತಾನೆ. ‘‘ಹೆಚ್ಚಿನ ಜನ ತುಂಬ ದೊಡ್ಡ ವ್ಯತ್ಯಾಸ ಇರುವುದು ಆಯ್ಕೆ (1) ಮತ್ತು ಆಯ್ಕೆ (3)ರ ನಡುವೆ ಎಂದು ತಿಳಿಯುತ್ತಾರೆ. ನನ್ನ ಪ್ರಕಾರ ಆಯ್ಕೆ (2) ಮತ್ತು ಆಯ್ಕೆ (3)ರ ನಡುವೆ ಇರುವ ವ್ಯತ್ಯಾಸ ಬಹಳ ದೊಡ್ಡದು’’

ಆತ ಹೀಗೆ ವಾದಿಸಲು ಕಾರಣವಿದೆ: ಭಾರೀ ಸಂಖ್ಯೆಯಲ್ಲಿ ಮನುಷ್ಯರು ಸಾಯುವುದು ತುಂಬಾ ಕೆಟ್ಟದ್ದು ಹೌದಾದರೂ, ಮಾನವ ಸಂತತಿಯೇ ಅಳಿದು ಹೋಗುವುದು ಇನ್ನಷ್ಟು ಕೆಟ್ಟದ್ದು, ಯಾಕೆಂದರೆ ಹೀಗಾದಾಗ ಭೂಮಿಯ ಮೇಲೆ ಮನುಷ್ಯನ ಭಾವೀ ತಲೆಮಾರುಗಳ ಅಸ್ತಿತ್ವವೇ ಇಲ್ಲದಂತೆ ಅದು, ಅಂದರೆ (3)ನೆಯ ಆಯ್ಕೆ ತಡೆಯುತ್ತದೆ.

ಅಣ್ವಸ್ತ್ರ ಸಮರ ನಡೆದಲ್ಲ್ಲಿ ಮಾನವ ಸಂತತಿಯ ಸಂಪೂರ್ಣನಾಶದ ಸಂಭಾವ್ಯತೆಯ ಕುರಿತು 140ಕ್ಕೂ ಹೆಚ್ಚು ಅಧ್ಯಯನಗಳು ನಡೆದಿವೆ. ಬಹುಪಾಲು ಅಧ್ಯಯನಗಳು ಮಾನವಕುಲ ಈ ಭೂಮಿಯಿಂದಲೇ ಅಳಿಸಿ ಹೋಗುವ ಸಾಧ್ಯತೆಯನ್ನೇ ಒತ್ತಿ ಹೇಳುತ್ತವೆ.

 1950ರ ದಶಕದಲ್ಲಿ ಶೀತಲ ಸಮರ ಪರಾಕಾಷ್ಠೆ ತಲುಪಿದಾಗ ಪ್ರಪಂಚದಲ್ಲಿ ಇದ್ದ ಅಣ್ವಸ್ತ್ರಗಳ ದಾಸ್ತಾನಿಗಿಂತ ಪ್ರಮಾಣದಲ್ಲಿ ಹಲವು ಪಾಲು ಹೆಚ್ಚು ಮತ್ತು ಅಂದಿನ ಅಣ್ವಸ್ತ್ರಗಳಿಗಿಂತ ಪರಿಣಾಮದಲ್ಲಿ ವಿಪರೀತ ಹೆಚ್ಚು ಅಪಾಯಕಾರಿಯಾದ ಅಣ್ವಸ್ತ್ರಗಳು ಈಗ ಇವೆ. ಅಣುಬಾಂಬ್ ಸ್ಫೋಟದ ಬಳಿಕ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳು, (ಸಾಮಾಜಿಕ ವ್ಯವಸ್ಥೆಯ ಪತನ ಮತ್ತು ಅರ್ಥ ವ್ಯವಸ್ಥೆಯ ಸಂಪೂರ್ಣ ಕುಸಿತವೂ ಸೇರಿದಂತೆ) ಅಂದರೆ ದ್ವಿತೀಯ ಹಂತದ (ಸೆಕೆಂಡರಿ) ಪರಿಣಾಮಗಳು ಮನುಷ್ಯ ಸಂತತಿಯ ಸಂಪೂರ್ಣ ನಾಶಕ್ಕೆ ಪರೋಕ್ಷವಾಗಿ ಕಾರಣವಾಗುತ್ತವೆ ಎಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇದು ಎಷ್ಟರ ವರೆಗೆ ಎಂದರೆ ಇರಾ ಹೆಲ್ಫಂಡ್ ತನ್ನ ‘‘ನ್ಯೂಕ್ಲಿಯರ್ ಫ್ಯಾಮಿನ್: ಟು ಬಿಲಿಯನ್ ಪೀಪಲ್ ಎಟ್‌ರಿಸ್ಕ್?’’ (ಅಣ್ವಸ್ತ್ರಕ್ಷಾಮ: ಎರಡು ಬಿಲಿಯನ್ ಜನರು ಅಪಾಯದಲ್ಲಿ?) ಎಂಬ ಲೇಖನದಲ್ಲಿ ‘‘ಭಾರತ ಮತ್ತು ಪಾಕಿಸ್ತಾನಗಳ ನಡುವೆ, ಹಿರೋಶಿಮಾದ ಮೇಲೆ ಹಾಕಲಾಗಿದ್ದ ಅಣುಬಾಂಬ್‌ನಂತಹ ನೂರು ಬಾಂಬ್‌ಗಳ ಸಾಮರ್ಥ್ಯವಿರುವ (15 ಕಿಲೋ ಟನ್‌ಗಳ) ಅಣ್ವಸ್ತ್ರಗಳ ಒಂದು ಸಣ್ಣಮಟ್ಟದ ಸೀಮಿತ ಅಣ್ವಸ್ತ್ರ ವಿನಿಮಯ ನಡೆದರೂ ಸಾಕು; ಅದು ಪರಮಾಣು ಚಳಿಗಾಲಕ್ಕೆ ಕಾರಣವಾಗಿ ಒಂದು ಬಿಲಿಯ (ಒಂದು ನೂರು ಕೋಟಿ) ಜನರ ಸಾವಿಗೆ ಕಾರಣವಾಗುತ್ತದೆ’’ ಎನ್ನುತ್ತಾನೆ.

ಪರಮಾಣು ಬಾಂಬ್‌ದಾಳಿಗೊಳಗಾಗುವ ನಗರಗಳಲ್ಲಿ ಬಾಂಬ್ ಸ್ಫೋಟದ ಬಳಿಕ ಸುಡುವ ಮರಮಟ್ಟು, ಪ್ಲಾಸ್ಟಿಕ್ ಸಾಮಗ್ರಿಗಳು, ಮತ್ತು ಪೆಟ್ರೋಲ್ ಇಂಧನಗಳಿಂದ ಉಂಟಾಗುವ ಹೊಗೆ ಹಾಗೂ ಕರಿ(ಸೂಟ್) ಆಕಾಶದಲ್ಲಿ ಬಹಳ ಎತ್ತರಕ್ಕೆ ಹೋಗಿ ಅಲ್ಲಿ ವಾರಗಳ ಕಾಲ ಹಾಗೆಯೇ ಹರಡಿಕೊಂಡಿದ್ದು ಸೂರ್ಯನ ಬೆಳಕು ಭೂಮಿಗೆ ಬರದಂತೆ ತಡೆಯುತ್ತವೆ. ಇದನ್ನು ‘‘ಪರಮಾಣು ಚಳಿಗಾಲ’’(ನ್ಯೂಕ್ಲಿಯರ್ ವಿಂಟರ್)ಎಂದು ಕರೆಯಲಾಗಿದೆ. ಸೂರ್ಯನ ಬೆಳಕು ಭೂಮಿಗೆ ಬೀಳದಂತೆ ತಡೆಯಲ್ಪಟ್ಟಾಗ ಭೂಮಿಯ ಮೇಲಿನ ವಾತಾವರಣ ತಣ್ಣಗಾಗಿ ಉಷ್ಣಾಂಶ ಕಡಿಮೆಯಾಗುತ್ತದೆ. ಅಮೆರಿಕ, ಯುರೋಪ್, ರಶ್ಯಾ ಮತ್ತು ಚೀನಾದ ಪ್ರಮುಖ ಬೇಸಾಯ ಪ್ರದೇಶಗಳ ಉಷ್ಣಾಂಶ ಮೊದಲ 2 ಬೇಸಾಯ ಋತುಗಳಲ್ಲಿ 12-20 ಡಿಗ್ರಿ ಸೆಂಟಿಗ್ರೇಡ್ ಕಡಿಮೆಯಾಗುತ್ತದೆ. ಆಗ ಆಹಾರ ಬೆಳೆ ಬೆಳೆಯಲಾಗದೆ ‘‘ಭೂಮಿಯ ಮೇಲಿರುವ ಬಹುಪಾಲ ಜನರಿಗೆ ಆಹಾರ ಸಿಗದೆ ಹಸಿವಿನಿಂದ ನರಳಿ ಸಾಯುತ್ತಾರೆ.’’

ಈ ಚಳಿಗಾಲ ಜಾಗತಿಕ ಹವಾಮಾನವನ್ನು ಒಂದು ದಶಕ ಅಥವಾ ಅದಕ್ಕಿಂತಲೂ ಹೆಚ್ಚುಕಾಲ ಅಸ್ತವ್ಯಸ್ತಗೊಳಿಸಿದಾಗ ಮಿಲಿಯ ಗಟ್ಟಲೆ ಜನ ತಿನ್ನಲು ಆಹಾರ ಸಿಗದೆ ಸಾಯುತ್ತಾರೆ. ಆಹಾರ ಪೂರೈಕೆ ಕಡಿಮೆಯಾದಾಗ, ಮೊದಲ ಕೆಲವು ವರ್ಷಗಳಲ್ಲಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿ ವಿಶ್ವದ ಅತ್ಯಂತ ಬಡರಾಷ್ಟ್ರಗಳಲ್ಲಿ ಆಹಾರಕೊಂಡುಕೊಳ್ಳಲು ಹಣವಿಲ್ಲದ ಬಡವರು ಮೊದಲು ಸಾಯುತ್ತಾರೆ; ನಂತರ ಸಾಯುವ ಸರದಿ ಶ್ರೀಮಂತರದ್ದಾಗಿರುತ್ತದೆ.
‘ಅಣ್ವಸ್ತ್ರ ಸಮರ ತಡೆಗಾಗಿ ಅಂತರ್‌ರಾಷ್ಟ್ರೀಯ ಭೌತ ವಿಜ್ಞಾನಿಗಳು’ ಎಂಬ ವಿಜ್ಞಾನಿಗಳ ಒಂದು ತಂಡ 2013ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ನಡುವೆ ಒಂದು ಪ್ರಾದೇಶಿಕ ಅಣ್ವಸ್ತ್ರ ವಿನಿಮಯ/ಯುದ್ಧ ನಡೆದಲ್ಲಿ, ಜಗತ್ತಿನ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗ, ಅಂದರೆ ಎರಡು ಬಿಲಿಯ (ಇನ್ನೂರು ಕೋಟಿ) ಗಿಂತಲೂ ಹೆಚ್ಚು ಜನರು ಆಹಾರ ಸಿಗದೆ ಹಸಿವಿನಿಂದ ಸಾಯುವ ಅಪಾಯವಿದೆ.

ಇದಲ್ಲದೆ, ಪರಮಾಣು ಬಾಂಬ್ ಸ್ಫೋಟ ಉಂಟುಮಾಡುವ ಇಲೆಕೊ್ಟ್ರೀೀಮ್ಯಾಗ್ನಟಿಕ್ ವಿಕರಣ ಅಥವಾ ಪರಮಾಣು ಇಲೆಕ್ಟ್ರೋಮ್ಯಾಗ್ನಟಿಕ್ ಪಲ್ಸ್(ಎನ್‌ಇಎಮ್‌ಪಿ ಅಥವಾ ‘ನೆಂಪ್’) ಜಗತ್ತಿನಲ್ಲಿರುವ ಎಲ್ಲ ಇಲೆಕ್ಟ್ರಾನಿಕ್ ಸಲಕರಣೆಗಳನ್ನು, ಗ್ಯಾಜೆಟ್‌ಗಳನ್ನು ಹಾಳುಗೆಡವುತ್ತದೆ. ಪರಿಣಾಮವಾಗಿ ದಿನನಿತ್ಯದ ಬಳಕೆಯ ಮೊಬೈಲ್, ಲ್ಯಾಪ್‌ಟಾಪ್, ಇಂಟರ್‌ನೆಟ್, ವಿದ್ಯುತ್ ಚಾಲಿತ ವಾಶಿಂಗ್ ಮೆಶಿನ್, ಮಿಕ್ಸಿ, ಗ್ರೈಂಡರ್, ದೇಶದ ಸಮಗ್ರ ರಕ್ಷಣಾ ಸಂವಹನ- ಎಲ್ಲವೂ ಸ್ತಬ್ಧವಾಗಿ ಸಂಪೂರ್ಣದೇಶ ತಟಸ್ಥವಾಗುತ್ತದೆ. ಉದಾಹರಣೆಗೆ, ಅಮೆರಿಕದ ಮಧ್ಯಭಾಗದಲ್ಲಿ 250ರಿಂದ 300 ಮೈಲುಗಳ ಎತ್ತರದಲ್ಲಿ ನೆಂಪ್ ಉಂಟುಮಾಡುವ ಒಂದು ಅಣ್ವಸ್ತ್ರವನ್ನು ಸ್ಫೋಟಿಸಿದಲ್ಲಿ, ಅದು ಸಮಗ್ರ ಅಮೆರಿಕದ ವಿದ್ಯುನ್ಮಾನ (ಇಲೆಕ್ಟ್ರಾನಿಕ್ಸ್) ವ್ಯವಸ್ಥೆಯನ್ನೇ ನಿಷ್ಕ್ರಿಯಗೊಳಿಸಿಬಿಡುತ್ತದೆ. ಹಾಗಾದರೆ, ಈ ವ್ಯವಸ್ಥೆಯನ್ನು ಸರಿಪಡಿಸಲು ಬೇಕಾದ ಬಿಡಿಭಾಗಗಳನ್ನು ಆಮದುಮಾಡಿಕೊಳ್ಳಬಹುದಲ್ಲ? ಅಕ್ಕಪಕ್ಕದ, ನೆರೆಯ, ಶತ್ರು ರಾಷ್ಟ್ರಗಳ ಮೇಲೂ ನೆಂಪ್ ಪರಿಣಾಮ ಬೀರುವುದರಿಂದ ಆಮದು ಕೂಡ ಅಸಾಧ್ಯವಾಗಿ ಜಗತ್ತು ಅಕ್ಷರಶಃ ಶಿಲಾಯುಗಕ್ಕೆ ಜಾರಿದಂತಾಗಬಹುದು.

ಇವೆಲ್ಲದರ ಜೊತೆಗೆ, ಪರಮಾಣು ಬಾಂಬ್ ಸ್ಫೋಟದಿಂದಾಗಿ ಏಳುವ ರೇಡಿಯೋ ಆ್ಯಕ್ಟಿವ್ ಧೂಳು ಮತ್ತು ಬೂದಿ ನೂರಾರು ಮೈಲುಗಳವರೆಗೆ ಹರಡಿ ಕ್ರಮೇಣ ಮಿಲಿಯಗಟ್ಟಲೆ ಜನರಿಗೆ ಅಸ್ತಿಮಜ್ಜೆ (ಬೋನ್ ಮ್ಯಾರೋ) ಸಾವು, ಕೇಂದ್ರ ನರಮಂಡಲ ಸಾವು ಮತ್ತು ಕರುಳು ರೋಗ ಸಾವು ತರುತ್ತದೆ. ಅಲ್ಲದೆ ಸ್ಫೋಟದ ನಂತರ ಉಂಟಾಗುವ ಫಾಲ್ ಔಟ್ ಮತ್ತು ಕಪ್ಪು ಮಳೆ ಜಲಾಶಯಗಳನ್ನು ಮಲಿನಗೊಳಿಸಿ ಕೃಷಿ ಮತ್ತು ಮಣ್ಣನ್ನೂ ಹಾಳುಗೆಡವುತ್ತದೆ.
ಅಣ್ವಸ್ತ್ರ ನಿಷೇಧ ಕಾರ್ಯಕರ್ತ ಜೊನಾಥನ್ ಶೆಲ್ ತನ್ನ ‘ದಿ ಫೇಟ್ ಆಫ್ ದಿ ಅರ್ಥ್’ ಎಂಬ ಕೃತಿಯಲ್ಲಿ ಅಣ್ವಸ್ತ್ರ ಸಮರದಿಂದ ವಿಶ್ವ ನಾಶವು ಮಹತ್ವಪೂರ್ಣವಾದ ಹಾಗೂ ತಳ್ಳಿಹಾಕಲು ಸಾಧ್ಯವೇ ಇಲ್ಲದ ಒಂದು ಸಾಧ್ಯತೆ ಹೇಳುತ್ತಾನೆ.

ಯುದ್ಧ ಘೋಷದ ಕಾಲದಲ್ಲಿ ಯುದ್ಧದ ನಿರರ್ಥಕತೆಯನ್ನು ಶಾಂತಿಯನ್ನು ಪ್ರತಿ ಪಾದಿಸುವವರನ್ನು ರಣಹೆೇಡಿಗಳೆಂದೋ, ದೇಶಭಕ್ತಿಯ ಕೊರತೆ ಇರುವವರೆಂದೋ ಬ್ರಾಂಡ್ ಮಾಡಲಾಗುತ್ತದೆ. ಆದರೆ ಈಗ ಜಗತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಮುಖಾಮುಖಿ ಯುದ್ಧ ಕಾಲದಿಂದ ಬಹಳ ಮುಂದೆ ಸಾಗಿ ಬಂದು ಮನುಷ್ಯನೇ ಬೇಡವಾಗಿರುವ, ಸ್ವಯಂಚಾಲಿತ ಕ್ಷಿಪಣಿಗಳ ಮೂಲಕ ಊಹಾತೀತ ವಿನಾಶ ತಂದೊಡ್ಡಬಲ್ಲ ಅತ್ಯಾಧುನಿಕ ಯುದ್ಧ ಕಾಲದಲ್ಲಿ ಬದುಕುತ್ತಿದೆ. ಬಟನ್ ಅದುಮುವುದಷ್ಟೇ ನಿಯಂತ್ರಣ ಕೋಣೆಯಲ್ಲಿರುವವರು ಮಾಡಬೇಕಾದ ಕೆಲಸ. ಮಿಕ್ಕ ಸರ್ವನಾಶದ ಕೆಲಸವನ್ನು ಸ್ವಯಂಚಾಲಿತ ಯುದ್ಧ ವಿಮಾನಗಳು, ಕ್ಷಿಪಣಿಗಳು ಮಾಡಿ ಮುಗಿಸಿ ವಿನಾಶದ ಫೋಟೋ ತೆಗೆಯುವವರನ್ನೂ ಉಳಿಸದೆ ಎಲ್ಲವನ್ನೂ ನಿವಾಳಿಸಿ ತೆಗೆಯುತ್ತವೆ. ಗಡಿಗಳಿಲ್ಲದ, ಗೋಡೆಗಳಿಲ್ಲದ ಆಧುನಿಕ ಅಣ್ವಸ್ತ್ರ ಸಮರವೆಂಬುದು ಪರಸ್ಪರ ಸಂಪೂರ್ಣ ನಾಶದ ಬೋನಸ್ ನೀಡುವ ಒಂದು ಸರ್ವನಾಶಕಾರಿ ಸಹಕಾರಿ ಬ್ಯಾಂಕ್. ಈ ಬ್ಯಾಂಕ್‌ನಲ್ಲಿ ಖಾತೆ ತೆರೆಯುವವರಿಗೆ ಬಡ್ಡಿ, ಬೋನಸ್ ನೀಡುವ ಬ್ಯಾಂಕ್ ದಿವಾಳಿ ಯಾಗುವುದಿಲ್ಲ ಬ್ಯಾಂಕ್‌ನ ಕಟ್ಟಡ ಸಮೇತ ಇಡೀ ಊರೇ ಆವಿಯಾಗಿ ಹೋಗುತ್ತದೆ. ಹೌದು, ಒಂದು ಅಧ್ಯಯನದ ಪ್ರಕಾರ ಪರಮಾಣು ಬಾಂಬ್ ಸ್ಫೋಟವಾದ ನಗರದಲ್ಲಿ ಸ್ಫೋಟದ ಸುತ್ತಮುತ್ತ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಸಕಲವೂ-ಮನೆ, ಮಹಲು, ಗಗನಚುಂಬಿ ಕಟ್ಟಡಗಳು ಅಲ್ಲಿ ವಾಸಿಸುವ ಸಾವಿರಾರು ಜನರು, ಅವರ ಪ್ರೀತಿಯ ನಾಯಿ, ಬೆಕ್ಕು, ಗಿಳಿ, ಮೊಲ ಇತ್ಯಾದಿ ಮುದ್ದು ಸಾಕು ಪ್ರಾಣಿಗಳು ಜಸ್ಟ್ ಆವಿಯಾಗಿ ಹೋಗುತ್ತವೆ. ನಂತರ ಮೂರರಿಂದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕನಿಷ್ಠ ಇಪ್ಪತ್ತು ಲಕ್ಷ ಮಂದಿ ಗಾಯಾಳುಗಳಾಗುತ್ತಾರೆ. ಇಷ್ಟೊಂದು ಸಂಖ್ಯೆಯ ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಅವರನ್ನು ಬದುಕಿಸಬಲ್ಲ ಆಸ್ಪತ್ರೆಗಳ ವ್ಯವಸ್ಥೆ ಜಗತ್ತಿನ ಯಾವ ದೇಶದಲ್ಲೂ ಇಲ್ಲ.

ಕಲ್ಪಿಸಿಕೊಳ್ಳುವ ಸಾಮರ್ಥ್ಯವಿರುವವರು ಕೆಲ ಕ್ಷಣಗಳ ಕಾಲ ಕಣ್ಣುಮುಚ್ಚಿ ಆ ಜಗತ್ತು ಎಷ್ಟು ಭಯಾನಕವಾಗಿರುತ್ತದೆಂದು, ಅಲ್ಲಿ ನಾವು ನೀವು, ನಮ್ಮ ನಿಮ್ಮ ಕುಟುಂಬಗಳ ವೀರ ಯೋಧರು, ಯುದ್ಧ ಪ್ರೇಮಿ ರಾಜಕಾರಣಿಗಳು, ಸಮರದಾಹಿ ನಾಯಕರು ಇದ್ದರೆ ಹೇಗಿರುತ್ತದೆ ಎಂದು ಧ್ಯಾನಿಸಿದರೆ.....
ಸರ್ವ ವಿನಾಶಕಾರಿ ವಿಶ್ವ ಸಹಕಾರಿ ಬ್ಯಾಂಕ್‌ನಲ್ಲಿ ಭಾರತ ಪಾಕಿಸ್ತಾನ ಖಾತೆ ತೆರೆಯಬೇಕೇ?

(bhaskarrao599@gmail.com)

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News