ಸಂಪ್ರದಾಯದ ಬೇಗೆ, ಸಂವೇದನೆಯ ಕೊರತೆ ಮತ್ತು ಮಹಿಳೆಯ ಆಶಯಗಳು

Update: 2019-03-08 18:36 GMT

ಭಾರತದ ಮಹಿಳೆಯರನ್ನು ಕಾಡುತ್ತಿರುವ ಎರಡು ಸಮಸ್ಯೆಗಳೆಂದರೆ ಮಹಿಳಾ ಅಸ್ಮಿತೆ ಮತ್ತು ಮಹಿಳಾ ಸಂವೇದನೆ. ಅಸ್ಮಿತೆಯ ಪ್ರಶ್ನೆಯನ್ನು ತಮ್ಮ ಹಕ್ಕೊತ್ತಾಯಗಳ ಮೂಲಕ ಸವಾಲಿನಂತೆ ಎದುರಿಸುತ್ತಿರುವ ಆಧುನಿಕ ಮಹಿಳೆಯರು ಪುರುಷ ಸಮಾಜಕ್ಕೆ ಸೆಡ್ಡು ಹೊಡೆಯುತ್ತಿದ್ದಾರೆ. ಆದರೆ ಮಹಿಳಾ ಸಂವೇದನೆ ಒಂದು ಸಾಂಸ್ಕೃತಿಕ ಆಯಾಮ ಪಡೆದುಕೊಳ್ಳುತ್ತದೆ. ಸಾಮಾಜಿಕ ಚೌಕಟ್ಟಿನಲ್ಲಿ ಅನಾವರಣಗೊಳ್ಳುತ್ತದೆ. ಸಂವೇದನೆಯನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ಕಾಣಬೇಕಾಗುತ್ತದೆ. ಇಲ್ಲಿ ಭಾರತದ ಪಿತೃಪ್ರಧಾನ ವ್ಯವಸ್ಥೆ ತನ್ನದೇ ಆದ ಪ್ರಭಾವಳಿಯನ್ನು ನಿರ್ಮಿಸಿರುವುದನ್ನು ಕಾಣಬಹುದು. ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಾಣುವ ಬದಲು ಭಾರತದ ನಾಗರಿಕ ಸಮಾಜ ಸಂಪ್ರದಾಯಬದ್ಧ ಸಾಂಸ್ಕೃತಿಕ ನೆಲೆಯಲ್ಲೇ ಕಾಣಲು ಹವಣಿಸುತ್ತಿದೆ.


ಸ್ವತಂತ್ರ ಭಾರತದಲ್ಲಿರಲಿ, ಪ್ರಾಚೀನ ಭಾರತದಲ್ಲಿಯೂ ಸಹ, ಪುರಾಣಗಳಲ್ಲಿಯೂ ಸಹ ಮಹಿಳೆಯ ಆಶಯಗಳನ್ನು ಕುರಿತ ಸಂಕಥನಗಳನ್ನು ಕಾಣುವುದು ಕಷ್ಟ. ಭಾರತೀಯ ಸಮಾಜವನ್ನು ಸಂಪೂರ್ಣವಾಗಿ ಆವರಿಸಿರುವ ಪುರಾಣ ಕಥನಗಳು, ಮಹಾಕಾವ್ಯಗಳು ಮತ್ತು ಕಾವ್ಯ ಪರಂಪರೆಯಲ್ಲಿ ಮಹಿಳೆಯರ ಆಶಯಗಳು ಪುರುಷ ಸಮಾಜದ ಭೂಮಿಕೆಯ ಮೇಲೆ ವ್ಯಕ್ತವಾಗುವ ಹಪಾಹಪಿಯಂತೆಯೋ ಅಥವಾ ಹತಾಶ ಮನೋಭಾವದ ಅಭಿವ್ಯಕ್ತಿಯಂತೆಯೋ ಕಂಡುಬರುತ್ತದೆ. ಹಾಗಾಗಿಯೇ 21ನೆಯ ಶತಮಾನದ ಅತ್ಯಾಧುನಿಕ ಭಾರತದಲ್ಲೂ ಮಹಿಳಾ ಸಂವೇದನೆ ಪಿತೃ ಪ್ರಧಾನ ವ್ಯವಸ್ಥೆಯ ಒಂದು ಸಮಸ್ಯೆಯಾಗಿ ಕಾಡುತ್ತಿದೆಯೇ ಹೊರತು ಸ್ವತಂತ್ರವಾದ ಅಭಿವ್ಯಕ್ತಿಯನ್ನು ಕಾಣಲಾಗುತ್ತಿಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಶ್ರೇಷ್ಠತೆಯ ಅಹಮಿಕೆ, ಊಳಿಗಮಾನ್ಯ ವ್ಯವಸ್ಥೆಯ ಆಧಿಪತ್ಯ ರಾಜಕಾರಣ, ಪಿತೃಪ್ರಧಾನ ವ್ಯವಸ್ಥೆಯ ಯಜಮಾನಿಕೆಯ ಸಂಸ್ಕೃತಿ ಮತ್ತು ಮತಧರ್ಮಗಳ ಸಾಂಪ್ರದಾಯಿಕ ಕಟಿಬದ್ಧತೆಗಳು ಮಹಿಳಾ ಸಂವೇದನೆಯನ್ನು ತಮ್ಮ ಕಬಂಧ ಬಾಹುಗಳಲ್ಲಿ ಬಂಧಿಸಿರುವುದು ಸ್ಪಷ್ಟ. ಹಾಗಾಗಿಯೇ ಸಂಪ್ರದಾಯಗಳನ್ನು ಮೀರುವ ಮಹಿಳೆಯರು ಇಂದಿಗೂ ಮತಭ್ರಷ್ಟರಾಗುತ್ತಾರೆ, ಧರ್ಮ ಭ್ರಷ್ಟರಾಗುತ್ತಾರೆ, ಆಧುನಿಕತೆಯನ್ನು ಪ್ರತಿನಿಧಿಸುವ ಸಂಕೇತಗಳಾಗಿ ಕಾಣುತ್ತಾರೆ. ಹೆಣ್ಣು ಮಕ್ಕಳ ಉಡುಪು ಮತ್ತು ದೇಹ ವಿನ್ಯಾಸ ಇಂದಿಗೂ ಸಾರ್ವಜನಿಕ ಸಂಕಥನದ ವಸ್ತುವಾಗುವುದು ಈ ಕಾರಣಕ್ಕಾಗಿಯೇ.

ಶ್ರೀಮತಿ ಇಂದಿರಾಗಾಂಧಿ ತಮ್ಮ ಅಧಿಕಾರ ರಾಜಕಾರಣದ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ‘‘ಕೇಂದ್ರ ಸರಕಾರದಲ್ಲಿ ಒಬ್ಬನೇ ಗಂಡಸಿದ್ದಾನೆ’’ ಎನ್ನುವ ಲೇವಡಿ ಮಾತುಗಳು ಹರಿದಾಡುತ್ತಿದ್ದವು. ಇಂದಿರಾ ಅವರ ಸರ್ವಾಧಿಕಾರಿ ಧೋರಣೆ ಅಥವಾ ಪಕ್ಷದ ಮೇಲೆ ಅವರು ಸಾಧಿಸಿದ್ದ ಹಿಡಿತವನ್ನು ಬದಿಗಿಟ್ಟು ನೋಡಿದಾಗ ಈ ಹಾಸ್ಯ ಮಿಶ್ರಿತ ವ್ಯಂಗ್ಯೋಕ್ತಿಯಲ್ಲಿ ಎರಡು ಅಂಶಗಳನ್ನು ಗ್ರಹಿಸಬಹುದು. ಅಧಿಕಾರ ರಾಜಕಾರಣವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಅಥವಾ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುವ ಶಕ್ತಿ ಕೇವಲ ಪುರುಷನಿಗೆ ಮಾತ್ರವೇ ಇದೆ ಎನ್ನುವ ಅಹಮಿಕೆ ಒಂದೆಡೆಯಾದರೆ, ಈ ರೀತಿಯ ದಿಟ್ಟತನ ತೋರುವ ಮಹಿಳೆಗೆ ತನ್ನದೇ ಆದ ಅಸ್ಮಿತೆ ಇದೆ ಎಂದು ಸ್ವೀಕರಿಸಲು ನಮ್ಮ ಸಮಾಜ ಸಿದ್ಧವಾಗಿರಲಿಲ್ಲ. ಇಂದಿಗೂ ಸಿದ್ಧವಾಗಿಲ್ಲ.

ಹಾಗಾಗಿಯೇ ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ ಮುಂತಾದ ರಾಜಕೀಯ ನೇತಾರರು ನಮ್ಮ ಸಾಮಾಜಿಕ ಚೌಕಟ್ಟಿನಲ್ಲಿ ಅಪಭ್ರಂಶಗಳಂತೆ ಕಾಣುತ್ತಾರೆ. ತಾವೇ ನಿರ್ಮಿಸಿಕೊಂಡ ಸಾಮ್ರಾಜ್ಯದಲ್ಲಿ ತಮ್ಮ ಆಧಿಪತ್ಯ ಸಾಧಿಸಿರುವ ಈ ನಾಯಕಿಯರು ಬಹುಶಃ ಇತರ ರಾಜಕೀಯ ಪಕ್ಷಗಳಲ್ಲಿ ಇದ್ದಿದ್ದರೆ ಈ ಹಂತವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಇದು ಭಾರತದ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆ ಹೌದಾದರೆ, ಭಾರತದ ಪುರುಷ ಸಮಾಜಕ್ಕೆ ಬಡಿದಿರುವ ರೋಗವೂ ಹೌದು. ಭಾರತದ ಮಹಿಳೆಯರನ್ನು ಕಾಡುತ್ತಿರುವ ಎರಡು ಸಮಸ್ಯೆಗಳೆಂದರೆ ಮಹಿಳಾ ಅಸ್ಮಿತೆ ಮತ್ತು ಮಹಿಳಾ ಸಂವೇದನೆ. ಅಸ್ಮಿತೆಯ ಪ್ರಶ್ನೆಯನ್ನು ತಮ್ಮ ಹಕ್ಕೊತ್ತಾಯಗಳ ಮೂಲಕ ಸವಾಲಿನಂತೆ ಎದುರಿಸುತ್ತಿರುವ ಆಧುನಿಕ ಮಹಿಳೆಯರು ಪುರುಷ ಸಮಾಜಕ್ಕೆ ಸೆಡ್ಡು ಹೊಡೆಯುತ್ತಿದ್ದಾರೆ. ಆದರೆ ಮಹಿಳಾ ಸಂವೇದನೆ ಒಂದು ಸಾಂಸ್ಕೃತಿಕ ಆಯಾಮ ಪಡೆದುಕೊಳ್ಳುತ್ತದೆ. ಸಾಮಾಜಿಕ ಚೌಕಟ್ಟಿನಲ್ಲಿ ಅನಾವರಣಗೊಳ್ಳುತ್ತದೆ. ಸಂವೇದನೆಯನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ಕಾಣಬೇಕಾಗುತ್ತದೆ. ಇಲ್ಲಿ ಭಾರತದ ಪಿತೃಪ್ರಧಾನ ವ್ಯವಸ್ಥೆ ತನ್ನದೇ ಆದ ಪ್ರಭಾವಳಿಯನ್ನು ನಿರ್ಮಿಸಿರುವುದನ್ನು ಕಾಣಬಹುದು. ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಕಾಣುವ ಬದಲು ಭಾರತದ ನಾಗರಿಕ ಸಮಾಜ ಸಂಪ್ರದಾಯಬದ್ಧ ಸಾಂಸ್ಕೃತಿಕ ನೆಲೆಯಲ್ಲೇ ಕಾಣಲು ಹವಣಿಸುತ್ತಿದೆ. ಹಾಗಾಗಿಯೇ ಅತ್ಯಾಚಾರಕ್ಕೊಳಗಾದ ಮಹಿಳೆಯರು ಸಂತ್ರಸ್ತರಾಗದೆ ಅಪರಾಧಿಗಳಾಗಿಬಿಡುತ್ತಾರೆ. ‘‘ಅವಳು ಹೀಗಿದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ’’ ಎನ್ನುವ ಹಳಹಳಿಕೆ, ‘‘ತನ್ನ ಎಚ್ಚರಿಕೆಯಲ್ಲಿ ತಾನಿದ್ದಿದ್ದರೆ ಹೀಗಾಗುತ್ತಿರಲಿಲ್ಲ’’ ಎನ್ನುವ ಔದಾರ್ಯದ, ಅನುಕಂಪದ, ಕಾಳಜಿಯುಕ್ತ ಮಾತುಗಳು ನಿರ್ಭಯಾ, ಸೌಜನ್ಯಾ, ಮನೋರಮಾ ಮುಂತಾದವರ ಸುತ್ತ ಹರಿದಾಡುತ್ತಲೇ ಇರುತ್ತವೆ.

ಆದರೆ ಈ ಕಾಳಜಿಯ ಹಿಂದೆ ಸುಪ್ತವಾಗಿರುವ ಆಧಿಪತ್ಯದ ಹವಣಿಕೆಯನ್ನು ಮಹಿಳಾ ಸಮುದಾಯ ಗ್ರಹಿಸಬೇಕಿದೆ. ಸಂಪ್ರದಾಯ ಮತ್ತು ಸಂಸ್ಕೃತಿ ಯಾವುದೇ ಒಂದು ವರ್ಗದ ಸ್ವತ್ತಲ್ಲ. ಹಾಗೆಯೇ ಮಾನವನ ನಿತ್ಯ ಜೀವನದಲ್ಲಿ ಸಾಂಸ್ಕೃತಿಕ ಮೌಲ್ಯಗಳು ಜೀವನದ ಒಂದು ಭಾಗವಾಗಿ ವ್ಯಕ್ತವಾಗಬೇಕೇ ಹೊರತು, ಲಿಖಿತ, ಗ್ರಾಂಥಿಕ ರೂಪದಲ್ಲಿ ಅಲ್ಲ. ಮಹಿಳೆಯರ ಸಮಸ್ಯೆ ಎಂದಾಕ್ಷಣ ಭಾರತೀಯ ಸಂಸ್ಕೃತಿಯ ಉಲ್ಲೇಖವಾಗುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕು. ಸಾಂಪ್ರದಾಯಿಕ ನೆಲೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಮಹಿಳೆ ಸಂಸ್ಕೃತಿಯ ಒಂದು ಭಾಗವಾಗಿ ಕಾಣುವುದಿಲ್ಲ. ಬದಲಾಗಿ ಸಂಸ್ಕೃತಿಯ ರಕ್ಷಣೆಗಾಗಿಯೇ ಇರುವ ಬೌದ್ಧಿಕ, ಭೌತಿಕ ವಸ್ತುವಾಗಿ ಕಾಣುತ್ತಾಳೆ. ಹಾಗಾಗಿಯೇ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ ಮಹಿಳೆಯ ಮೇಲಿದೆ ಎಂಬ ವಿತಂಡವಾದ ಕೇಳಿಬರುತ್ತದೆ. ಈ ವಾದದ ಅರ್ಥ ಭಾರತೀಯ ಸಮಾಜ ಮಹಿಳಾ ಪ್ರಧಾನ ಧೋರಣೆ ಹೊಂದಿದೆ ಎಂದಲ್ಲ, ಮಹಿಳೆ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ನಡೆದುಕೊಂಡಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅರ್ಥೈಸಬಹುದು.

ಈ ಭಾರತೀಯ ಸಂಸ್ಕೃತಿಯ ರೂಪುರೇಷೆಗಳನ್ನು ಪಿತೃಪ್ರಧಾನ ವ್ಯವಸ್ಥೆ, ಪುರುಷ ಪ್ರಧಾನ ಸಮಾಜ ರೂಪಿಸುತ್ತದೆ. ಇದಮಿತ್ತಂ ಎನ್ನುವಂತೆ ಸಾಂಪ್ರದಾಯಿಕ ಬದ್ಧತೆಗಳನ್ನು ಸೃಷ್ಟಿಸುತ್ತದೆ. ಈ ಬದ್ಧತೆಗಳ ಚೌಕಟ್ಟಿನಲ್ಲಿ ಮಹಿಳೆಯರನ್ನು ಬಂಧಿಸಲಾಗುತ್ತದೆ. ಮಹಿಳಾ ಅಸ್ಮಿತೆಯೂ ಇಲ್ಲಿ ಬಂದಿಯಾಗುತ್ತದೆ. ಹೆಣ್ಣು ಹೀಗೆಯೇ ಇರಬೇಕು ಎಂಬ ನಿಯಮವನ್ನು ಮಾಡಿದವರಾದರೂ ಯಾರು? ಅಥವಾ ಹೆಣ್ಣು ಹೆಣ್ಣಾಗಿಯೇ ಇರಬೇಕು ಎಂಬ ನಿರ್ಬಂಧವನ್ನು ಹೇರಿದವರಾರು? ಇಲ್ಲಿ ಲಿಂಗ ಪ್ರಾತಿನಿಧ್ಯ ಮತ್ತು ಅಸ್ಮಿತೆಗಿಂತಲೂ ಹೆಚ್ಚಾಗಿ ಪುರುಷ ಸಮಾಜದೊಡನೆ ತುಲನಾತ್ಮಕ ಸಂಬಂಧಗಳು ಪ್ರಧಾನವಾಗುತ್ತವೆ. ಮಹಿಳೆಯರ ಆದ್ಯತೆಗಳನ್ನು ನಿರ್ಧರಿಸುವ ಪರಮಾಧಿಕಾರವನ್ನು ಪುರುಷ ಸಮಾಜ ತನಗೆ ತಾನೇ ಪಡೆದುಕೊಂಡಿದೆಯೇ ಹೊರತು, ಮಹಿಳೆಯರು ಇತಿಹಾಸದ ಯಾವುದೇ ಕಾಲಘಟ್ಟದಲ್ಲೂ ಈ ರೀತಿ ನಿವೇದಿಸಿಕೊಂಡಿಲ್ಲ. ಆದರೆ ಪುರುಷ ಸಮಾಜಕ್ಕೆ ಈ ಆದ್ಯತೆಗಳನ್ನು ನಿರ್ಧರಿಸುವ ಅನಿವಾರ್ಯತೆ ಇದೆ. ಆಧಿಪತ್ಯ ಸಾಧಿಸುವ ಮನಸ್ಸುಗಳು ಸದಾ ಪ್ರತಿರೋಧದ ಭೀತಿಯಲ್ಲೇ ಬದುಕುತ್ತವೆ. ಹಾಗಾಗಿ ಪ್ರತಿರೋಧದ ದನಿಗಳನ್ನು ಅಡಗಿಸುವ ಮೂಲಕ ತಮ್ಮ ಭೀತಿಯನ್ನು ಹೋಗಲಾಡಿಸಲು ಯತ್ನಿಸುತ್ತವೆ. ಪಿತೃ ಪ್ರಧಾನ ಸಮಾಜ ಮಹಿಳೆಯರ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸವನ್ನೂ ಸಹ ಪ್ರತಿರೋಧದ ನೆಲೆಯಲ್ಲೇ ಕಾಣುತ್ತದೆ. ಪರಿಣಾಮ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಹೊಣೆಗಾರಿಕೆಯನ್ನು ಮಹಿಳೆಯ ಮೇಲೆ ಹೊರಿಸುತ್ತದೆ. ಹೆಣ್ಣು ಹೆಣ್ಣಾಗಿಯೇ ಇದ್ದರೆ ಗಂಡು ತನ್ನ ಸಂಯಮವನ್ನು ಕಾಪಾಡಿಕೊಳ್ಳಲು ಸಾಧ್ಯ ಎನ್ನುವ ವಿತಂಡವಾದಕ್ಕೆ ಇದೇ ಭೂಮಿಕೆ ಎನ್ನಬಹುದು.

ಇದು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಚೌಕಟ್ಟಿನಲ್ಲಿ ಶತಮಾನಗಳಿಂದಲೂ ಗುರುತಿಸಬಹುದಾದ ಸಮಸ್ಯೆ. ಪುರಾಣಗಳೂ ಇದಕ್ಕೆ ಹೊರತಲ್ಲ. ಸೀತೆ ಇಬ್ಬರು ಪುರುಷರ ಆಧಿಪತ್ಯ ರಾಜಕಾರಣಕ್ಕೆ ದಾಳವಾಗುತ್ತಾಳೆ. ದ್ರೌಪದಿ ಎರಡು ಸಾಮ್ರಾಜ್ಯಗಳ ಸಂಘರ್ಷಕ್ಕೆ ದಾಳವಾಗುತ್ತಾಳೆ. ಪ್ರಹ್ಲಾದನ ತಾಯಿ ಕಯಾದು ತನ್ನ ಮಗನ ಸಾವಿನ ನಿರೀಕ್ಷೆಯಲ್ಲೇ ಜೀವ ಸವೆಸಿ ಕೊನೆಯಲ್ಲಿ ಗಂಡನನ್ನು ಕಳೆದುಕೊಳ್ಳುತ್ತಾಳೆ. ಅಹಲ್ಯೆ ತನ್ನ ತಪ್ಪಿಲ್ಲದೆಯೇ ಶಾಪಗ್ರಸ್ತಳಾಗುತ್ತಾಳೆ. ಅನುಸೂಯೆ ತನ್ನ ಪಾತಿವ್ರತ್ಯವನ್ನು ನಿರೂಪಿಸಲು ತನ್ನ ಅಂತರಂಗದ ಅಭಿವ್ಯಕ್ತಿಯನ್ನು ಮೀರಿ ವರ್ತಿಸುತ್ತಾಳೆ. ಸಮಕಾಲೀನ ಸಂದರ್ಭದಲ್ಲಿ ನೋಡಿದಾಗ ಇಂತಹ ಸೀತೆ, ದ್ರೌಪದಿ, ಅಹಲ್ಯೆಯರನ್ನು ಸೌಜನ್ಯಾ, ನಿರ್ಭಯಾ, ಮನೋರಮಾ, ಇರೋಮ್ ಶರ್ಮಿಳಾ ಮುಂತಾದವರಲ್ಲಿ ಕಾಣಬಹುದು. ಎಲ್ಲರೂ ಪುರುಷ ಸಮಾಜದ ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದವರೇ ಆಗಿದ್ದಾರೆ. ಈ ದೌರ್ಜನ್ಯಗಳ ವಿರುದ್ಧ ದನಿ ಎತ್ತುವ ಮಹಿಳೆ ತನ್ನ ಅಸ್ಮಿತೆಯನ್ನೇ ಕಳೆದುಕೊಳ್ಳುತ್ತಾಳೆ. ಸಂಪ್ರದಾಯದ ಕಟ್ಟುಪಾಡುಗಳು, ಸಾಂಸ್ಕೃತಿಕ ಮೌಲ್ಯಗಳ ಶರಪಂಜರ, ಸಾಮಾಜಿಕ ಪರಿಸರದ ನಿರ್ಬಂಧಗಳ ನಡುವೆಯೇ ಭಾರತದ ಮಹಿಳೆ ತನ್ನ ಆಶಯಗಳನ್ನು ಹೊರಗೆಡಹಲು ಹೆಣಗಾಡಬೇಕಿದೆ. ತನ್ನ ಆದ್ಯತೆಗಳನ್ನು ಸಾಧಿಸಲು ಶ್ರಮಿಸಬೇಕಿದೆ. ಇಂದಿನ ಸಂದರ್ಭದಲ್ಲಿ ಮಹಿಳೆಯರ ಮುಂದಿನ ಪ್ರಶ್ನೆಯೂ ಇದೇ ಆಗಿದೆ.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News