ಅನಂತಮೂರ್ತಿ-ಭೈರಪ್ಪ

Update: 2019-03-10 08:10 GMT

ಭಾಗ-2

ಅನಂತಮೂರ್ತಿಯುವರ ಸೃಜನಶೀಲ ಪ್ರತಿಭೆ, ಸೃಜನಶೀಲ ಸ್ಫುರಣೆಗಳು ಕೃತಿಯನ್ನು ಕಟ್ಟುವುದರಲ್ಲಿ ಕೆಲಸ ಮಾಡುವ ಪರಿಯೂ ಕಾವ್ಯದ ಸುಕುಮಾರತೆ, ಸಂವೇದನೆಗಳಂತೆ ಅನನ್ಯವಾದುದು. ಅನಂತ ಮೂರ್ತಿಯವರೊಳಗೊಬ್ಬ ಕವಿಯಿದ್ದಾನೆ ಎಂಬುದನ್ನು ನಾವು ಮರೆಯುವಂತಿಲ್ಲ. ಆದರೆ ಭೈರಪ್ಪನವರಲ್ಲಿ ಇಂಥ ಕವಿಗಾಗಿ ನಾವು ಹುಡುಕಾಡಬೇಕಾಗಿದೆ. ಭೈರಪ್ಪನವರ ಭಾಷೆ ಚರ್ಚೆ-ತರ್ಕಗಳ ಮಟ್ಟ ಮೀರಿ ಏಕೆ ಸೃಜನಾತ್ಮಕವಾಗುವುದಿಲ್ಲ?

ದೇವನೂರ ಮಹಾದೇವ ಹೇಳುವಂತೆ, ‘‘ಧರ್ಮದ ಕೊಳಕನ್ನ ಅಕ್ಕಪಕ್ಕ ಸರಿಸಿ ಅದರಲ್ಲಿರೊ ತಿಳಿಜಲವನ್ನು ಉಳಿಸಿಕೊಳ್ಳುವ ಪ್ರಯತ್ನ ನಿಜವಾಗುತ್ತದೆಯೊ ಅಥವಾ ಅದೂ ಒಂದು ಮೃಗಜಲವಾಗುತ್ತದೆಯೋ ಎಂಬುದನ್ನು ತಿಳಿಯಲು ನಾವು ಇನ್ನಷ್ಟು ತಲಸ್ಪರ್ಶಿಯಾದ ವಿಮರ್ಶೆಯನ್ನು ಮಾಡಬೇಕಾಗುತ್ತದೆ.’’ ‘ದಿವ್ಯ’ದ ಬಗ್ಗೆ ಬರೆಯುತ್ತ ಸಿ.ಎನ್.ರಾಮಚಂದ್ರನ್ ಅವರು(ಸಿಎನ್ನಾರ್) ಕಾದಂಬರಿಯಲ್ಲಿನ ‘ಸ್ವ-ಅನ್ಯ’ ಪರಿಕಲ್ಪನೆಯನ್ನು ಪರೀಕ್ಷಿಸುತ್ತ ಹೀಗೆ ಹೇಳಿದ್ದಾರೆ: ‘‘ಸ್ವ ವನ್ನು ಭಾರತೀಯ ಸಂಸ್ಕೃತಿಯ ಹಾಗೂ ಅನುಭಾವೀ ಪರಂಪರೆಯ ಮೊತ್ತದಂತೆ ಮತ್ತು ‘ಅನ್ಯ’ವನ್ನು ಆಧುನಿಕ ಪಾಶ್ಚಾತ್ಯ ವೈಚಾರಿಕತೆಯ ಮತ್ತು ಉಪಭೋಕ್ತಾ ಸಂಸ್ಕೃತಿಯ ಮೊತ್ತದಂತೆ ಕೃತಿ ವ್ಯಾಖ್ಯಾನಿಸುತ್ತದೆ. ಇನ್ನೂ ಮುಖ್ಯವಾಗಿ, ಮೊದಲಬಾರಿಗೆ ಇಲ್ಲಿ ‘ಸ್ವ’ವನ್ನು ಇತ್ಯಾತ್ಮಕವಾಗಿಯೂ ‘ಅನ್ಯ’ವನ್ನು ನೇತ್ಯಾತ್ಮಕವಾಗಿಯೂ ಮೌಲ್ಯಮಾಪನಮಾಡುತ್ತದೆ.’’

ಸಿಎನ್ನಾರ್ ಗಮನಿಸಿರುವ ಈ ಇತ್ಯಾತ್ಮಕ ದೃಷ್ಟಿ ದೇವನೂರರ ಅಭಿಪ್ರಾಯಕ್ಕೆ ಪೂರಕವಾಗಿ ಅನಂತಮೂರ್ತಿಯವರ ದರ್ಶನದಲ್ಲಿ ಆಗಿರುವ ಬದಲಾವಣೆಯನ್ನು ಸೂಚಿಸುತ್ತದೆ. 1961ರಲ್ಲಿ ಪ್ರಕಟವಾದ ‘ಧರ್ಮಶ್ರೀ’ ಭೈರಪ್ಪನವರ ಮೊದಲ ಕಾದಂಬರಿ ಎನ್ನಲಾಗುತ್ತದೆ. ಇದು ಸರಿಯಲ್ಲ. ‘ಭೀಮಕಾಯ’ ಅವರ ಮೊದಲ ಕಾದಂಬರಿ. ಇದೇನೇ ಇರಲಿ ‘ಧರ್ಮಶ್ರೀ’ಯಿಂದ ಹಿಡಿದು ಅವರ ಎಲ್ಲ ಕಾದಂಬರಿಗಳಲ್ಲೂ, ಗೌರೀಶ ಕಾಯ್ಕಿಣಿಯವರು ಹೇಳುವಂತೆ, ‘‘ಧರ್ಮ ಒಂದು ಪ್ರಧಾನ ವೃತ್ತಿ-ಪ್ರವೃತ್ತಿ(ಮೇಜರ್ ಆಕ್ಯುಪೇಷನ್). ಒಟ್ಟಿನಲ್ಲಿ ಭೈರಪ್ಪನವರ ಕಾದಂಬರಿಗಳಲ್ಲಿ ಧರ್ಮವು ಎಲ್ಲ ಸಾಮಾಜಿಕ ಸಮಸ್ಯೆಗಳಿಗೂ ಮೂಲಕಾರಣವಾಗಿ ವಿಜೃಂಭಿಸಿದೆ.’’ ಭೈರಪ್ಪನವರ ತಾತ್ವಿಕತೆಯನ್ನು ಚರ್ಚಿಸುತ್ತಾ ಸಿಎನ್ನಾರ್ ‘‘ಹಿಂದೂ ಸಂಸ್ಕೃತಿಯನ್ನು ಹಾಗೂ ಆಚಾರ- ವಿಚಾರಗಳನ್ನು ವೈಭವೀಕರಿಸುವ ಭೈರಪ್ಪನವರ ಕಾದಂಬರಿಗಳು ನಮಗೆ ಅತೀವ ಆತ್ಮೀಯವಾಗುತ್ತವೆ’’ ಎನ್ನುತ್ತಾರೆ. ಅಂದರೆ ಭೈರಪ್ಪನವರ ಬರವಣಿಗೆಯ ಮೂಲಬಿತ್ತಿ ಹಿಂದೂ ಧರ್ಮವೇ ಆಗಿದ್ದು ಅವರ ಕಾದಂಬರಿಗಳ ಜನಪ್ರಿಯತೆಯ ಹಿಂದಿನ ಗುಟ್ಟೂ ಅದೇ ಆಗಿದೆ. ಭೈರಪ್ಪನವರ ಅಗಾಧ ಜನಪ್ರಿಯತೆಯ ಗುಟ್ಟೇನು? ಇವರು ಸಂಪ್ರದಾಯವಾದಿಗಳು, ಇವರದು ರಂಜಿಸುವ, ವಂಚಿಸುವ ಕಲೆ ಎಂಬುದೇ? ಈ ಅಗಾಧ ಜನಪ್ರಿಯತೆಯ ಗುಟ್ಟು ತಿಳಿಯಲು ನಾವು ಸ್ವಾತಂತ್ರ್ಯೋತ್ತರ ನವೋದಯದಲ್ಲಿದ್ದ ಪ್ರಗತಿಶೀಲರ ಜನಪ್ರಿಯತೆಯೊಂದಿಗೆ ಹೋಲಿಸಿ ನೋಡಬೇಕು. ಆಗ ಭೈರಪ್ಪನವರ ಜನಪ್ರಿಯತೆಯಲ್ಲಿ ‘ಕಾಲಧರ್ಮದ’ ಪಾತ್ರವೂ ನಮಗೆ ಸ್ಪಷ್ಟವಾಗುತ್ತದೆ. ಮಾರ್ಕ್ಸ್‌ವಾದಿ ಪ್ರಣೀತ ಎಡಪಂಥದಿಂದ ಮಾತ್ರ ಧರೆಯಮೇಲೆ ಸಮಾನತೆಯ ಸ್ವರ್ಗ ಸೃಷ್ಟಿಸುವುದು ಸಾಧ್ಯ ಎನ್ನುವ ಆದರ್ಶದ ಬೆನ್ನು ಹತ್ತಿದ ಅಂದಿನ ಕಾಲದ ಚಿಂತನೆಯಿಂದಾಗಿ ಅನಕೃ, ನಿರಂಜನ, ಕಟ್ಟೀಮನಿ ಮೊದಲಾದವರ ಕಾದಂಬರಿಗಳು ಆಗ ಜನಪ್ರಿಯವಾಗಿದ್ದವು. ಇದರಿಂದ ಭ್ರಮನಿರಸನಗೊಂಡ ಮುಂದಿನಕಾಲದ ಆಶಯ ಆದರ್ಶಗಳು ಆರ್ಷೇಯ ಧರ್ಮ-ಸಂಸ್ಕೃತಿಗಳ ಪುನರುಜ್ಜೀವನದಿಂದ ಮಾತ್ರ ಮಾನವನ ಉದ್ಧಾರ ಸಾಧ್ಯ ಎಂಬ ಬಲಪಂಥೀಯ ಚಿಂತನೆಗಳಲ್ಲಿ ಬೇರೂರಿದ ಕಾರಣ ಇಂಥ ಕೃತಿಗಳು ಜನಪ್ರಿಯಗೊಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಜೊತೆಗೆ ಹಿಂದೂಗಳಲ್ಲಿ ಅಡಗಿರುವ ವೇದಧರ್ಮ ಭವ್ಯತೆಯ ಸುಪ್ತ ಬಯಕೆಯೂ(ಸಿಎನ್ನಾರ್ ಹೇಳುವ ಸ್ವಾತಂತ್ರ್ಯೋತ್ತರ ಭಾರತೀಯ ಸಮಾಜ-ಸಂಸ್ಕೃತಿಗಳ ಒಳನೋಟ ಇದೇ ಆಗಿದೆ) ಭೈರಪ್ಪನವರ ಕಾದಂಬರಿಗಳು ಕನ್ನಡದ ಗಡಿದಾಟಿ ಜನಪ್ರಿಯವಾಗಲು ಕಾರಣ. ಏಕೆಂದರೆ ಹಿಂದೂ ಧರ್ಮ ಪುನರುತ್ಥಾನದ ಕನಸುಗಳನ್ನು ಉಣಬಡಿಸುವುದರಲ್ಲ್ಲಿ ಭೈರಪ್ಪನವರ ‘ಕಾದಂಬರಿ ಧರ್ಮ’ ಹಿಂದೆ ಬೀಳುವುದಿಲ್ಲ. ಜೊತೆಗೆ ಬಲಪಂಥೀಯ ಚಿಂತನೆ ವಿಶ್ವದಾದ್ಯಂತ ಇಪ್ಪತ್ತೊಂದನೆಯ ಶತಮಾನದ ಪ್ರಮುಖ ಕಾಳಜಿಯಾಗಿ ಪ್ರಕಟಗೊಳ್ಳುತ್ತಿರುವುದನ್ನು ನಾವು ಗಮನಿಸದೇ ಇರಲಾಗದು.

ಹಾಗೆಂದ ಮಾತ್ರಕ್ಕೆ ಭೈರಪ್ಪನವರ ಕಾದಂಬರಿಗಳ ಓದನ್ನು ಹಿಂದೂ ಧಾರ್ಮಿಕ ನೆಲೆಯಿದಲೇ ಪ್ರಾರಂಭಿಸಬೇಕಿಲ್ಲ. ಬೇರೇ ಆಯಾಮಗಳಿಂದಲೂ ಅದು ಸಾಧ್ಯ ಎಂಬುದನ್ನು ಸಿಎನ್ನಾರ್ ಈ ಅಧ್ಯಯನದಲ್ಲಿ ತೋರಿಸಿಕೊಟ್ಟಿದ್ದಾರೆ. ಧರ್ಮಶ್ರೀ, ದಾಟು, ವಂಶವೃಕ್ಷ, ಮತದಾನ ಕೃತಿಗಳನಂತರ ಭೈರಪ್ಪನವರು ಸಾರ್ವಕಾಲಿಕ ಪ್ರಸ್ತುತತೆಯುಳ್ಳ ಮಾನವಾನುಭವಗಳನ್ನು ವಿಶ್ಲೇಷಿಸುವತ್ತ ಗಮನಹರಿಸಿರುವುದನ್ನು ಎತ್ತಿತೋರಿಸುವ ಸಿಎನ್ನಾರ್, ವಿಶೇಷವಾಗಿ ‘ಅಂಚು’ ಕಾದಂಬರಿಯನ್ನು ಒಂದು ಮನೋವೈಜ್ಞಾನಿಕ ಕಾದಂಬರಿಯಾಗಿಯೂ ಓದಬಹುದಾದ ಸಾಧ್ಯತೆಯನ್ನು ಚರ್ಚಿಸಿದ್ದಾರೆ. ಇದರಂತೆಯೇ ಧಾರ್ಮಿಕ ಕಟ್ಟುಕಟ್ಟಳೆಯಲ್ಲಿ ಸೊರಗುವ ಭೈರಪ್ಪನವರ ಅನೇಕ ಪಾತ್ರಗಳನ್ನು ಮನೋವೈಜ್ಞಾನಿಕ ನೆಲೆಯಲ್ಲೂ ಪರಾಮರ್ಶಿಸಬಹುದಾಗಿದೆ. ‘ವಂಶವೃಕ್ಷ’ದ ಕಾತ್ಯಾಯಿನಿಯ ಗರ್ಭಪಾತಗಳಿಗೆ ವಿಧವಾ ವಿವಾಹ ಧಾರ್ಮಿಕವಾಗಿ ನಿಷಿದ್ಧ, ಪಾಪ ಎನ್ನುದಕ್ಕಿಂತ ಅವಳ ಮನಸ್ಸಿನ ಬಿಕ್ಕಟ್ಟುಗಳೂ ಕಾರಣವಿರವಿರಬಹುದು ಎಂಬುದನ್ನು ಭೈರಪ್ಪನವರು ಲಕ್ಷಿಸುವುದಿಲ್ಲ. ಇಲ್ಲಿಯವರಗಿನ ನಮ್ಮ ವಿಮರ್ಶೆಯೂ ಇದನ್ನು ಚರ್ಚಿಸಿಯೇ ಇಲ್ಲ. ಕಾಕತಾಳೀಯವೆಂಬಂತೆ ‘ಅಂಚಿನ’ ಅಮೃತಾಳ ಸ್ವಯಂಕೃತವಾದ ಗರ್ಭಪಾತದ ಹಿನ್ನೆಲೆಯಲ್ಲೂ ತಪ್ತ ಮನಸ್ಸೊಂದಿದೆ. ಸನಾತನ ಧಾರ್ಮಿಕ ಮೌಲ್ಯಗಳಿಗೆ ಕಟ್ಟುಬಿದ್ದ ವಿಚಾರಧಾರೆ ಭೈರಪ್ಪನವರ ಕಾದಂಬರಿಗಳನ್ನು ಪೂರ್ವನಿಶ್ಚಿತ ಗುರಿಯತ್ತ ನಡೆಸುತ್ತದೆ.ಇದರಿಂದಾಗಿಯೇ ಅವರ ಕಾದಂಬರಿಗಳಲ್ಲಿ ಅನಾವರಣಗೊಳ್ಳುವ ಪಾತ್ರಗಳು ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಲೇಖಕನ ಕೈಗೊಂಬೆಗಳಾಗುತ್ತವೆ ಎನ್ನುವುದು ವಿಮರ್ಶೆಯ ಮುಖ್ಯ ಟೀಕೆ.ಇದರಲ್ಲಿ ಹುರುಳಿಲ್ಲದೆ ಇಲ್ಲ ಎನ್ನುವುದಕ್ಕೆ ಹಿಂದಿನ ಕಾದಂಬರಿಗಳಷ್ಟೇ ಅಲ್ಲದೆ, ಸಿಎನ್ನಾರ್ ಆರಿಸಿಕೊಂಡಿರುವ ಇತ್ತೀಚಿನ ಕಾದಂಬರಿಗಳಲ್ಲೂ ನಿದರ್ಶನಗಳು ಸಿಗುತ್ತವೆ. ಭೈರಪ್ಪನವರ ಮಹತ್ವಾಕಾಂಕ್ಷೆಯ ಕಾದಂಬರಿ ಎನ್ನಲಾದ ‘ತಂತು’ವಿನ ಮುಖ್ಯ ಆಲಾಪನೆಯೇ ಸ್ವಾತಂತ್ರ್ಯೋತ್ತರ ಭಾರತೀಯ ಸಮಾಜದಲ್ಲಿ ಇನ್ನಿಲ್ಲದಂಥ ನೈತಿಕ ಅಧಃಪತನವಾಗಿದೆ ಎನ್ನುವುದು. ಈ ಕಾದಂಬರಿ ದರ್ಶಿಸಲೆತ್ನಿಸುವ ಅಧಃಪತನಹೊಂದಿದ ಸಮಾಜದ ಸತ್ಯವನ್ನು ‘ಅರ್ಧಸತ್ಯ’ ಎಂದು ಮಾನ್ಯಮಾಡುವ ಸಿಎನ್ನಾರ್, ನಮ್ಮ ಶ್ರೇಷ್ಠ ಸಂಸ್ಕೃತಿಯ ಆದರ್ಶಪುರುಷ ಎನ್ನಬಹುದಾದ ಪತ್ರಕರ್ತ ರವೀಂದ್ರನ ಪಾತ್ರವನ್ನು ಹಾಗೂ ಸ್ತ್ರೀ ಪಾತ್ರಗಳ ವಿಡಂಬನೆಯನ್ನು ವಿಶ್ಲೇಷಿಸುವ ಮೂಲಕ ಮೇಲಿನ ಮಾತುಗಳಿಗೆ ಸೂಕ್ತ ಸಮರ್ಥನೆ ಒದಗಿಸಿದ್ದಾರೆ.ಮುಖ್ಯವಾಗಿ ಕಾದಂಬರಿಯಲ್ಲಿ ಭೈರಪ್ಪನವರು ಕೊಂಡಾಡುವ ‘‘ಭಾರತೀಯ ಸಂಸ್ಕೃತಿ ಎಂದರೇನು?’’ ಎಂದು ಪ್ರಶ್ನಿಸುವ ಸಿಎನ್ನಾರ್, ‘‘ಪ್ರಾಚೀನ ಭಾರತದ್ದು ನಿಜವಾಗಿಯೂ ಭವ್ಯ ಸಂಸ್ಕೃತಿ. ಆದರೆ ಸರ್ವಸಮಾನತೆಯನ್ನು ಒಪ್ಪಿಕೊಂಡು ಜನಿಸುವ ಸಾಮಾಜಿಕ ರಚನೆಗಳು, ಧಾರ್ಮಿಕ,-ಮತೀಯ ಆಚರಣೆಗಳು ಇವುಗಳ ಮೊತ್ತವನ್ನು ‘ಸಂಸ್ಕೃತಿ’ ಎಂದು ಕರೆಯುವುದಾದರೆ ಯಾರೂ ನಾಚಿಕೆ ಪಟ್ಟುಕೊಳ್ಳುವಂಥ ಸಂಸ್ಕೃತಿ ನಮ್ಮದು’’ ಎಂದು ಅಭಿಪ್ರಾಯಪಡುತ್ತಾರೆ. ಇಲ್ಲಿ ‘ನಾಚಿಕೆಪಟ್ಟುಕೊಳ್ಳಬೇಕು’ ಎನ್ನುವುದು ಇಂಥ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಕಾದಂಬರಿಯ ಮರ್ಮಾಘಾತ ವಿಮರ್ಶೆಯೂ ಆಗುತ್ತದೆ.

‘ಮಂದ್ರ’ ಕಾದಂಬರಿಯ ಮುನ್ನೆಲೆಯೂ ಭಾರತೀಯ ಸಂಸ್ಕೃತಿಯ ಅಂಗಾಂಶಗಳಲ್ಲೊಂದಾದ ಸಂಗೀತವೇ ಆದರೂ ಲೇಖಕರೇ ಹೇಳಿರುವಂತೆ, ಕಲೆಯನ್ನು ನೋಡಿದಾಗ ಸ್ವರ್ಗಪ್ರವೇಶ ಮಾಡಿದ ಹಾಗಾಗುತ್ತೆ. ಕಲಾವಿದನ ಒಳಹೊಕ್ಕಾಗ ಬೇರೆಯೇ ಆಗಿ ಕಾಣುವ ಕಾಂಟ್ರಡಿಕ್ಷನ್ ಬಗ್ಗೆ ತಿಳಿಯುವ ಒಂದು ಪ್ರಯತ್ನ. ಕಲೆ ಹಾಗೂ ಕಲಾವಿದನ ನಡುವೆ ಎಲ್ಲೋ ಕಳೆದುಹೋಗಿರುವ ನೈತಿಕ ನೆಲೆಯನ್ನು ಗುರುತಿಸುವ ಲೇಖಕರ ಪ್ರಯತ್ನದಲ್ಲಿ ಸಂಗೀತದ ಶಾಸ್ತ್ರೀಯ ವಿವರಗಳು ದಟ್ಟೈಸಿ ಬಂದು ಸಂಗೀತಲೋಕಕ್ಕೆ ಒಂದು ಪ್ರವೇಶಿಕೆಯನ್ನು ಒದಗಿಸುವುದರಲ್ಲಿ ಸಫಲವಾಗುವಷ್ಟು ‘ಋಷಿಯಲ್ಲದವನು ಕಲಾವಿದನಾಗುವುದು ಸಾಧ್ಯವಿಲ್ಲ’ ಎನ್ನುವ ಒಟ್ಟು ಉದ್ದೇಶದಲ್ಲಿ ಸಫಲವಾಗುವುದಿಲ್ಲ. ಅನಂತ ಮೂರ್ತಿಯವರ ‘ಭವ’ವೆಂದರೆ ಕೇವಲ ಕಾಮದ ವರ್ತುಲವೇ ಎಂದು ವಿಸ್ಮಯಪಡುವ ಸಿಎನ್ನಾರ್, ‘ಮಂದ್ರ’ದಲ್ಲೂ ‘‘ಮೋಹನಲಾಲ್-ಮನೋಹರಿಯರ ತಣಿಯದ ಕಾಮದ ಅದಮ್ಯ ಪ್ರವೃತ್ತಿಯನ್ನು ಕಾದಂಬರಿಯಲ್ಲಿ ಮತ್ತೆಮತ್ತೆ ಚಿತ್ರಿಸುತ್ತಲೇ ಇರಬೇಕೆ?’’ಎಂದು ಪ್ರಶ್ನಿಸುತ್ತಾರೆ.

ಭೈರಪ್ಪನವರು ‘ಆವರಣ’ವನ್ನು ಐತಿಹಾಸಿಕ ಕಾದಂಬರಿ ಎಂದು ಕರೆದಿದ್ದಾರೆ. ಹದಿನೇಳನೇ ಶತಮಾನದ ಭಾರತದ ಕಥೆ ಎನ್ನಲಾದ ಇದರ ವಸ್ತು, ಹಿಂದೂ-ಮುಸ್ಲಿಂ ಘರ್ಷಣೆ. ಕಥೆಯೊಳಗೊಂದು ಕಥೆ ಹೇಳುವ ಕಾದಂಬರಿಯ ನಿರೂಪಣಾ ತಂತ್ರದಲ್ಲೇ ಸಿಎನ್ನಾರ್, ‘‘ಇಸ್ಲಾಂ ಧರ್ಮ ಮತ್ತು ಅದರ ಅನುಯಾಯಿಗಳು ಎಂದೂ ಬದಲಾಗುವುದಿಲ್ಲ’’ ಹಾಗೂ, ‘‘ಮುಸ್ಲಿಂ ಆಳ್ವಿಕೆಯು ಭಾರತದ ಗಂಡಸರನ್ನೆಲ್ಲ ಶಿಖಂಡಿಗಳನ್ನಾಗಿ ಮಾಡಿತು’’ ಎಂಬುದನ್ನು ಓದುಗರಿಗೆ ಮನದಟ್ಟುಮಾಡಿಸುವ ಲೇಖಕರ ಪ್ರಯತ್ನವನ್ನು ಪತ್ತೆಹಚ್ಚಿದ್ದಾರೆ.ಕಾದಂಬರಿಯಲ್ಲಿ ಬರುವ ಭಾವಪ್ರಚೋದಕ ಸಂಗತಿಗಳ ಒಂದು ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾರೆ ಹಾಗೂ ಪಾತ್ರಗಳು ಮತ್ತು ಭಾಷಾ ಪ್ರಯೋಗದಲ್ಲೂ ಇಸ್ಲಾಂ ಧರ್ಮದ ವ್ಯಂಗ್ಯ-ವಿಡಂಬನೆಗಳು ಧಾರಾಳವಾಗಿ ನಡೆದಿರುವುದನ್ನು ಎತ್ತಿ ತೋರಿದ್ದಾರೆ. ಕಾದಂಬರಿಯ ಸ್ಫೋಟಕ ಸ್ವರೂಪವನ್ನು ಕಾಣಿಸಲು, ‘‘ಲೇಖಕನ ನಿಷ್ಠೆ ಇರಬೇಕಾದುದು ಸತ್ಯಕ್ಕೆ ಮಾತ್ರ’’ ಎಂದು ಮತ್ತೆಮತ್ತೆ ಘೋಷಿಸುವ ಭೈರಪ್ಪನವರು ‘‘ಈ ಕಾದಂಬರಿಯಲ್ಲಿ ದಾಖಲಿಸಿರುವುದು ಅರ್ಧಸತ್ಯ ಮಾತ್ರ’’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಚರಿತ್ರೆ ಮತ್ತು ಇತಿಹಾಸದ ನಡುವಣ ವ್ಯತ್ಯಾಸಗಳನ್ನು ಕುರಿತು ಸುದೀರ್ಘವಾಗಿ ಚರ್ಚಿಸಿರುವ ಸಿಎನ್ನಾರ್ ‘‘ಚರಿತ್ರೆಯಂತೆ ಸಾಹಿತ್ಯ ವಿಮರ್ಶೆಯೂ ಸಾಪೇಕ್ಷವೇ, ಚರಿತ್ರೆಯಲ್ಲಾಗಲೀ ಸಾಹಿತ್ಯ ವಿಮರ್ಶೆಯಲ್ಲಾಗಲೀ ಸಂಪೂರ್ಣ ವಸ್ತುನಿಷ್ಠತೆ ಒಂದು ಭ್ರಮೆ’’ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ನಾವೂ ‘ಆವರಣ’ವನ್ನು ಒಂದು ಭ್ರಮೆ ಎಂದು ಮರೆತುಬಿಡಬಹುದು. ಆದರೆ ಸಿಎನ್ನಾರ್ ಅವರಿಗೆ ಅದು ಸಾಧ್ಯವಾಗುವುದಿಲ್ಲ. ಶುರುವಿನಲ್ಲಿ ಪ್ರಸ್ತಾಪಿಸುವ ಮುಂಡಕೋಪನಿಷತ್ತಿನ ಶ್ಲೋಕವೊಂದರ ಉದ್ಧರಣದೊಂದಿಗೇ ‘ಆವರಣ’ದ, ವಿಮರ್ಶೆ ಮುಗಿಸಬಹುದಿತ್ತು. ಅವರು ವಸ್ತುನಿಷ್ಠ ವಿಮರ್ಶಕರಾದ್ದರಿಂದಲೋ ಏನೋ, ‘‘....ಖೇದದ ಸಂಗತಿ ಎಂದರೆ ಗೃಹಭಂಗ, ಪರ್ವ, ಸಾಕ್ಷಿ, ಅನ್ವೇಷಣೆ ಇತ್ಯಾದಿ ಕಾದಂಬರಿಗಳನ್ನು ಬರೆದ ಭೈರಪ್ಪನವರೇ ‘ಆವರಣ’ ಕಾದಂಬರಿಯ ಲೇಖಕರು ಎಂಬುದು. ಪ್ರಾಯಃ, ಅವಿದ್ಯೆಯ ಆವರಣದಿಂದ ಮುಕ್ತರಾಗುವುದು ಎಂತಹ ಪ್ರತಿಭಾಶಾಲಿಗೂ ಕಷ್ಟ ಸಾಧ್ಯ’’ ಎಂದು ಮರುಕಪಡುತ್ತಾರೆ. ಇದಕ್ಕೆ ನಮ್ಮ ದನಿಯನ್ನೂ ಸೇರಿಸುವಂತಾಗುತ್ತದೆ. ಕೊನೆಯ ಲೇಖನ ‘ಸಂಸ್ಕಾರ ಮತ್ತು ವಂಶವೃಕ್ಷ ನಡೆದು ಬಂದ ದಾರಿ’ ಈ ಎರಡು ಕೃತಿಗಳಿಗೆ ಸಂಬಂಧಿಸಿದ ಸಂಗತಿಗಳ ಕಾಲಾನುಕ್ರಮಣಿಕೆಯಂತೆ ಕಂಡರೂ ಕೊನೆಯಲ್ಲಿ ಕೆಲವು ವಿಮರ್ಶೆಯ ಮಾತುಗಳಿವೆ. ‘ಸಂಸ್ಕಾರ’ದಲ್ಲಿ ದೈಹಿಕ ನೆಲೆಯಲ್ಲಾಗುವ ಬ್ರಾಹ್ಮಣ ಸಮಾಜದ ಭರ್ತ್ಸನೆ ಇಂದು ಬೀಭತ್ಸವಾಗಿ ಕಾಣುತ್ತದೆ. ‘ವಂಶವೃಕ’್ಷದಲ್ಲಿ ತಾಯಿಯಿಂದ ಮಗನನ್ನು ಕುಲದ ಹೆಸರಿನಲ್ಲಿ ಅಗಲಿಸುವ ಶ್ರೋತ್ರಿಯವರ ಕ್ರೌರ್ಯ, ಕಾತ್ಯಾಯಿನಿಯನ್ನು ನರಳಿಸುವ ಮೂಲಕ ವಿಧವಾ ವಿವಾಹ ಅನರ್ಥಕಾರಿ ಎಂದು ಮಂಡಿಸುವುದು ಇತ್ಯಾದಿಗಳಲ್ಲಿ ವೈಚಾರಿಕತೆ ಹಿನ್ನೆಲೆಗೆ ಸರಿದು ‘ವಂಶವೃಕ್ಷ’ ಒಂದು ಸಂಪ್ರದಾಯನಿಷ್ಠ ಕೃತಿಯಾಗಿದೆ ಎನ್ನುತ್ತಾರೆ ಸಿಎನ್ನಾರ್. ಈ ಸಂದರ್ಭದಲ್ಲಿ, ‘‘...ಪುನರ್ವಿವಾಹವು ಒಂದು ಅಪರಾಧವೆಂಬ ಪಾಪಪ್ರಜ್ಞೆಗೆ ಬಡ, ನಿರ್ಮಲ ಕಾತ್ಯಾಯಿನಿಯನ್ನೇಕೆ ಬಲಿಕೊಡಬೇಕು?...ಕಾತ್ಯಾಯಿನಿಯ ಪುನರ್ವಿವಾಹವನ್ನು ಭೈರಪ್ಪನವರು ಮೂಕವಾಗಿಯೇ ಪ್ರಮಾದವೆಂದು ತೀರ್ಮಾನಿಸಿದಂತೆ ತೋರುತ್ತದೆ. ಇದು ಆ ಮಟ್ಟಿಗೆ ಅವರ ಸಾಂಪ್ರದಾಯಿಕ ಭೋಳೆತನವನ್ನು ಸೂಚಿಸುತ್ತದೆ’’ ಎನ್ನುವ ಗೌರೀಶ ಕಾಯ್ಕಿಣಿಯವರ ವಿಮರ್ಶೆ ನೆನಪಾಗುತ್ತದೆ. ಅನಂತ ಮೂರ್ತಿ, ಶಾಂತಿನಾಥ ದೇಸಾಯಿ, ಗಿರಡ್ಡಿ, ಕುರ್ತಕೋಟಿ, ಆಮೂರ ಮೊದಲಾದ ಕನ್ನಡದ ಪ್ರಮುಖ ವಿಮರ್ಶಕರು ‘ವಂಶವೃಕ್ಷ’ ಕೃತಿಗೆ ನಕಾರಾತ್ಮಕವಾಗಿ ಸ್ಪಂದಿಸಿರುವುದನ್ನೂ ಸಿಎನ್ನಾರ್ ದಾಖಲಿಸಿದ್ದಾರೆ. ಹಾಗೆಯೇ‘ಸಂಸ್ಕಾರ’ಕ್ಕೆ ದೇಶವೀದೇಶಗಳಲ್ಲಿ ಬಂದಿರುವ ವಿಮರ್ಶಾತ್ಮಕ ಪ್ರತಿಕ್ರಿಯೆಯನ್ನು ಪ್ರಸ್ತಾಪಿಸುತ್ತಾ ಕನ್ನಡ ವಿಮರ್ಶಕರು ಅತ್ಯಂತ ನಿಷ್ಠುರವಾಗಿ ಪ್ರತಿಕ್ರಿಯಿಸಿದರೆ, ಕನ್ನಡೇತರ ಹಾಗೂ ಪಾಶ್ಚಾತ್ಯ ವಿಮರ್ಶಕರು ಧನಾತ್ಮಕವಾಗಿ ಹಾಗೂ ಉತ್ಸಾಹಪೂರ್ಣವಾಗಿ ಪ್ರತಿಕ್ರಿಯಸಿರುವ ಕುತೂಹಲಕಾರಿ ಸಂಗತಿಯನ್ನೂ ಶೋಧಿಸಿ ತೆಗೆದಿದ್ದಾರೆ. ಕೊನೆಯಲ್ಲಿ ಭಾಷೆಯ ಬಗ್ಗೆ ಬರೆಯುತ್ತ, ‘‘ಸಂಸ್ಕಾರದಲ್ಲಿನ ಕಾವ್ಯಾತ್ಮಕ-ರೂಪಾತ್ಮಕ ಭಾಷೆಯಂತೂ ಹುಚ್ಚು ಹಿಡಿಸುತ್ತದೆ.’’ ಎಂದು ಉದ್ಗಾರವೆತ್ತಿದ್ದಾರೆ. ಇದು ಸಹಜವಾದುದೇ. ಅನಂತಮೂರ್ತಿಯುವರ ಸೃಜನಶೀಲ ಪ್ರತಿಭೆ, ಸೃಜನಶೀಲ ಸ್ಫುರಣೆಗಳು ಕೃತಿಯನ್ನು ಕಟ್ಟುವುದರಲ್ಲಿ ಕೆಲಸ ಮಾಡುವ ಪರಿಯೂ ಕಾವ್ಯದ ಸುಕುಮಾರತೆ, ಸಂವೇದನೆಗಳಂತೆ ಅನನ್ಯವಾದುದು. ಅನಂತ ಮೂರ್ತಿಯವರೊಳಗೊಬ್ಬ ಕವಿಯಿದ್ದಾನೆ ಎಂಬುದನ್ನು ನಾವು ಮರೆಯುವಂತಿಲ್ಲ. ಆದರೆ ಭೈರಪ್ಪನವರಲ್ಲಿ ಇಂಥ ಕವಿಗಾಗಿ ನಾವು ಹುಡುಕಾಡಬೇಕಾಗಿದೆ. ಭೈರಪ್ಪನವರ ಭಾಷೆ ಚರ್ಚೆ-ತರ್ಕಗಳ ಮಟ್ಟ ಮೀರಿ ಏಕೆ ಸೃಜನಾತ್ಮಕವಾಗುವುದಿಲ್ಲ? ಮತ್ತೆ ದೇವನೂರ ಮಹಾದೇವ ಅವರ ಮಾತಿಗೆ ಬರುವುದಾದರೆ, ಯಾರು ಬಗ್ಗಡ ಬದಿಗೆ ಸರಿಸಿ ತಿಳಿಜಲವನ್ನು ಅರಸುತ್ತಿದ್ದಾರೆ, ಯಾರು ಧರ್ಮದ ಕೊಳಕನ್ನು ತಲೆಯಮೇಲೆ ಹೊತ್ತು ಮೆರೆಸುತ್ತಿದ್ದಾರೆ, ಯಾರು ಆಮೂಲಾಗ್ರ ಕ್ರಾಂತಿ ಬಯಸುತ್ತಿದ್ದಾರೆ ಎಂದು ತಿಳಿಯಲು ಅನಂತಮೂರ್ತಿ-ಲಂಕೇಶ-ಭೈರಪ್ಪ ಈ ಮೂವರ ಒಂದು ತೌಲನಿಕ ವಿಮರ್ಶೆ ಅಗತ್ಯವಾಗಿದೆ. ಸಿಎನ್ನಾರ್ ತೌಲನಿಕ ವಿಮರ್ಶೆಯಲ್ಲದಿದ್ದರೂ ಅನಂತ ಮೂರ್ತಿ, ಭೈರಪ್ಪನವರ ಕೃತಿಗಳ ಹಿಂದಿನ ತಾತ್ವಿಕತೆಯನ್ನು ಮುಂದಿಟ್ಟು ಅನಂತಮೂರ್ತಿ, ಭೈರಪ್ಪನವರ ಮರುಓದಿಗೆ, ವಿಮರ್ಶೆಗೆ ಆಗ್ರಹಪಡಿಸುವಂಥ ಕೃತಿಯೊಂದನ್ನು ಕೊಟ್ಟಿದ್ದಾರೆ ಎಂದು ಹೇಳಲು ಸಂತೋಷವಾಗುತ್ತದೆ.

(ಮುಗಿಯಿತು)

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News