ಶೇ.10ರ ಮೀಸಲಾತಿ ಸುತ್ತ ಪ್ರಶ್ನೆಗಳ ಹುತ್ತ

Update: 2019-03-16 08:56 GMT

ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಇಂತಹ ಮೀಸಲಾತಿಯು ಸಂವಿಧಾನ ಪ್ರತಿಪಾದಿಸಿದಂತಹ ಸಮಾನತೆಯ ಮೂಲಭೂತ ಸ್ವರೂಪಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂಬುದೇ ಅರ್ಜಿದಾರರ ಪ್ರಮುಖ ಆಕ್ಷೇಪವಾಗಿದೆ. ಸಮಾನತೆಯ ಕಾನೂನನ್ನು ರಕ್ಷಿಸಲು ಮೀಸಲಾತಿ ಪ್ರಮಾಣವು ಶೇ.50ರ ಮಿತಿಯನ್ನು ಮೀರದಿರುವುದು ಸಂವಿಧಾನದ ಮೂಲಭೂತ ಚೌಕಟ್ಟಿನಡಿ ಅತ್ಯಗತ್ಯವಾದುದು ಎಂದು ಅವರು ಪ್ರತಿಪಾದಿಸಿದ್ದರು.


ಮೇಲ್ಜಾತಿಗಳಲ್ಲಿನ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಮೇಲ್ಜಾತಿಗಳ ಆರ್ಥಿಕ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿಯ ಜಾರಿಗಾಗಿ ಜನವರಿ 12ರಂದು ಸಂಸತ್ ಸಾಂವಿಧಾನಿಕ ತಿದ್ದುಪಡಿಗೆ ಅನುಮೋದನೆ ನೀಡಲಾಗಿತ್ತು. ಮಾರನೆಯ ದಿನ ಈ ತಿದ್ದುಪಡಿಗೆ ರಾಷ್ಟ್ರಪತಿಯವರ ಅಂಕಿತ ಕೂಡಾ ಬಿದ್ದಿತ್ತು.

ಆವಾಗಿನಿಂದ ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಇಂತಹ ಮೀಸಲಾತಿಯು ಸಂವಿಧಾನ ಪ್ರತಿಪಾದಿಸಿದಂತಹ ಸಮಾನತೆಯ ಮೂಲಭೂತ ಸ್ವರೂಪಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂಬುದೇ ಅರ್ಜಿದಾರರ ಪ್ರಮುಖ ಆಕ್ಷೇಪವಾಗಿದೆ. ಸಮಾನತೆಯ ಕಾನೂನನ್ನು ರಕ್ಷಿಸಲು ಮೀಸಲಾತಿ ಪ್ರಮಾಣವು ಶೇ.50ರ ಮಿತಿಯನ್ನು ಮೀರದಿರುವುದು ಸಂವಿಧಾನದ ಮೂಲಭೂತ ಚೌಕಟ್ಟಿನಡಿ ಅತ್ಯಗತ್ಯವಾದುದು ಎಂದು ಅವರು ಪ್ರತಿಪಾದಿಸಿದ್ದರು.

ಇತ್ತೀಚೆಗೆ, ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ, ಶೇ.50ರಷ್ಟು ಮೀಸಲಾತಿಯ ಮಿತಿಯ ನಿಯಮವು ಸಂವಿಧಾನದ ಕಲಮುಗಳಾದ 15(4), 15(5) ಹಾಗೂ 16(4)ರ ಅಡಿ ಜಾರಿಗೊಳಿಸಲಾದ ಮೀಸಲಾತಿಗಳಿಗಷ್ಟೇ ಅನ್ವಯಿಸುತ್ತದೆಯೇ ಹೊರತು, ಸಂವಿಧಾನದ 15(6) ಹಾಗೂ 16(6)ರ ಕಲಮುಗಳ ಅಡಿ ಜಾರಿಗೊಳಿಸಲಾದ ಆದಾಯ ಆಧಾರಿತ ಮೀಸಲಾತಿಗಳಿಗಲ್ಲವೆಂದು ವಾದಿಸಿತ್ತು. ಹೀಗಾಗಿ ‘‘ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗಾಗಿನ ಜಾತಿ ಆಧಾರಿತ ಮೀಸಲಾತಿಗೆ ಮಾತ್ರವೇ ಶೇ.50ರ ಮಿತಿ ಅನ್ವಯಿಸುತ್ತದೆ’’ ಎಂದು ಕೇಂದ್ರ ಸರಕಾರವು ತಿಳಿಸಿದೆ.

ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಪೌರರಿಗೆ ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದಕ್ಕಾಗಿ ವಿಶೇಷ ಕಾನೂನುಗಳನ್ನು ರೂಪಿಸಲು ಸಂವಿಧಾನದ 15(4)ನೇ ವಿಧಿಯು ಸರಕಾರಕ್ಕೆ ಅವಕಾಶ ನೀಡುತ್ತದೆ. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಖಾಸಗಿ ಹಾಗೂ ಅನುದಾನಿತ ಶಿಕ್ಷಣಸಂಸ್ಥೆಗಳಲ್ಲಿ ಮೀಸಲಾತಿ ಕೋಟಾವನ್ನು ಒದಗಿಸುವುದಕ್ಕಾಗಿ 2005ರಲ್ಲಿ 93ನೇ ತಿದ್ದುಪಡಿ ಮಾಡುವ ಮೂಲಕ ಸಂವಿಧಾನದ 15(5) ವಿಧಿಯನ್ನು ಜಾರಿಗೆ ತರಲಾಯಿತು. ಸಂವಿಧಾನದ 16(4) ವಿಧಿಯು ಉದ್ಯೋಗದಲ್ಲಿ ಜಾತಿ ಆಧಾರಿತ ಮೀಸಲಾತಿಗೆ ಅವಕಾಶವನ್ನು ಒದಗಿಸಿಕೊಡುತ್ತದೆ.

ಆದಾಗ್ಯೂ, ಸುಪ್ರೀಂಕೋರ್ಟ್ ಈ ಮೊದಲು ನೀಡಿದ ತೀರ್ಪುಗಳನ್ನು ಕೇಂದ್ರ ಸರಕಾರವು ವ್ಯಾಖ್ಯಾನಿಸಿದ ರೀತಿಯು ತಪ್ಪು ದಾರಿಗೆಳೆಯುವಂತಿದೆ.
ಮೊದಲನೆಯದಾಗಿ ಮೀಸಲಾತಿಗೆ ಶೇ.50ರಷ್ಟು ಕೋಟಾದ ಮಿತಿಯನ್ನು ದೃಢಪಡಿಸಿದ 1992ರಲ್ಲಿ ಇಂದಿರಾ ಸಾಹ್ನಿ ವರ್ಸಸ್ ಭಾರತ ಒಕ್ಕೂಟ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂಕೋರ್ಟ್, ಸಮಾನತೆಯನ್ನು ರಕ್ಷಿಸಲು ಮೀಸಲಾತಿಗೆ ಶೇ. 50ರ ಮಿತಿ ವಿಧಿಸುವುದು ಅಗತ್ಯವೆಂದು ಸ್ಪಷ್ಟಪಡಿಸಿತ್ತು. ಯಾಕೆಂದರೆ, ಮೀಸಲಾತಿ ಕೋಟಾವು ಶೇ.50ರ ಮಿತಿಯನ್ನು ದಾಟಿದಾಗ ಅದು ಮೀಸಲಾತಿಗೆ ಅರ್ಹರಾದವರ ಹಾಗೂ ಮೀಸಲಾತಿ ರಹಿತರ ಶ್ರೇಣಿಗಳ ನಡುವಿನ ಸಮತೋಲನವನ್ನು ವಿಚಲಿತಗೊಳಿಸುತ್ತದೆ. ಆ ಮೂಲಕ ಸಂವಿಧಾನದಡಿ ಖಾತರಿಪಡಿಸಿದಂತಹ ಸಮಾನತೆಯ ಭರವಸೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿತ್ತು. 2006ರ ನಾಗರಾಜ್ ವರ್ಸಸ್ ಭಾರತ ಒಕ್ಕೂಟದ ತೀರ್ಪಿನಲ್ಲಿ ನ್ಯಾಯಾಲಯವು, ಮೀಸಲಾತಿಗೆ ಶೇ.50ರ ಮಿತಿಯನ್ನು ವಿಧಿಸಿರುವುದು ಸಮಾನತೆಯ ರಕ್ಷಣೆಯಾಗಿದೆ ಹಾಗೂ ಅದು ಸಂವಿಧಾನದ ಮೂಲಭೂತ ಚೌಕಟ್ಟಿನ ಭಾಗವಾಗಿದೆಯೆಂದು ಅದು ಅಭಿಪ್ರಾಯಿಸಿತ್ತು.

ಮೀಸಲಾತಿಗೆ ಶೇ.50ರ ಮಿತಿಯನ್ನು ವಿಧಿಸುವ ಕಾನೂನು, ಆರ್ಥಿಕವಾಗಿ ದುರ್ಬಲರಿಗೆ ಜಾರಿಗೊಳಿಸಲಾದ ಶೇ.10ರ ಮೀಸಲಾತಿಗೆ ಅನ್ವಯವಾಗುವುದಿಲ್ಲವೆಂದು ಕೇಂದ್ರ ಸರಕಾರ ಹೇಳಿದೆ. ಶೇ.50ರ ಮೀಸಲಾತಿ ಮಿತಿಯು ಜಾತಿ ಆಧಾರಿತ ಮೀಸಲಾತಿಗೆ ಮಾತ್ರ ಅನ್ವಯವಾಗುವುದೆಂದು ಸರಕಾರ ತಿಳಿಸಿತ್ತು.

ಶೇ.10ರಷ್ಟು ಮೀಸಲಾತಿ ಕೋಟಾವು ಆರ್ಥಿಕ ಮಾನದಂಡಗಳನ್ನು ಆಧರಿಸಿದೆ. ಆದಾಗ್ಯೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳನ್ನು ಈಗಾಗಲೇ ಶೇ.50ರ ಮೀಸಲಾತಿ ಕೋಟಾದ ವ್ಯಾಪ್ತಿಗೊಳಪಡಿಸಲಾಗಿದೆ. ಆದರೆ ಶೇ.10 ಮೀಸಲಾತಿಯು ಮೇಲ್ಜಾತಿಗಳಲ್ಲಿನ ಆರ್ಥಿಕವಾಗಿ ಅಶಕ್ತರಿಗಾಗಿಯೇ ರೂಪಿಸಲಾಗಿದೆ ಹಾಗೂ ಇತರರನ್ನು ಈ ಮುಕ್ತ ಮೀಸಲಾತಿ ಕೋಟಾದ ಪ್ರಯೋಜನ ಪಡೆಯುವುದನ್ನು ಪ್ರತಿಬಂಧಿಸುತ್ತದೆ.

ಸುಪ್ರೀಂಕೋರ್ಟ್ ಇಂದ್ರ ಸಾಹ್ನಿ ಪ್ರಕರಣದಲ್ಲಿ ನೀಡಿದ ತೀರ್ಪು ಶೇ.10ರ ಮೀಸಲಾತಿ ಕೋಟಾಗೆ ಅನ್ವಯವಾಗುವುದಿಲ್ಲವೆಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಇತ್ತೀಚೆಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ಹೇಳಿದೆ. ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದವರಿಗೆ ಶೇ.50ರಷ್ಟು ಮೀಸಲಾತಿ ನೀಡುವ ಮಂಡಲ್ ಆಯೋಗದ ಶಿಫಾರಸುಗಳನ್ನು 1990ರಲ್ಲಿ ಅಧಿಕೃತ ತಿಳುವಳಿಕಾಪತ್ರವೊಂದರ ಮೂಲಕ ಅಂಗೀಕರಿಸಲಾಗಿತ್ತು. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಮೀಸಲಾತಿಗೆ ಶೇ.50 ಮಿತಿಯನ್ನು ವಿಧಿಸುವ ತೀರ್ಪನ್ನು 1992ರಲ್ಲಿ ನೀಡಲಾಗಿತ್ತು.

ಆದಾಗ್ಯೂ, ಮೀಸಲಾತಿಯ ಕೋಟಾವನ್ನು ಸಂವಿಧಾನ ತಿದ್ದುಪಡಿಯ ಮೂಲಕ ಇಲ್ಲವೇ ಅಧಿಕೃತ ತಿಳುವಳಿಕಾ ಪತ್ರದ ಮೂಲಕ ಜಾರಿಗೊಳಿಸಿದರೂ, ಇಲ್ಲಿ ಎದ್ದು ಕಾಣುವ ಮುಖ್ಯ ಪ್ರಶ್ನೆಯೆಂದರೆ ಶೇ.10 ಮೀಸಲಾತಿ ಕೋಟಾವು ಸಾಂವಿಧಾನಿಕವಾದುದೇ ಅಥವಾ ಅಲ್ಲವೇ ? ಎಂಬುದಾಗಿದೆ.

 ಎಂ. ನಾಗರಾಜ್ ಪ್ರಕರಣದಲ್ಲಿ ಸೂಚಿಸಲಾದಂತೆ, ಒಂದು ವೇಳೆ ಶೇ.50ರಷ್ಟು ಮೀಸಲಾತಿ ಕೋಟಾ ಮಿತಿಯು ಸಂವಿಧಾನದ ಮೂಲಭೂತ ಚೌಕಟ್ಟಿನ ಭಾಗವಾಗಿದ್ದಲ್ಲಿ, ಈ ಮೂಲಭೂತ ಸ್ವರೂಪವನ್ನು ಉಲ್ಲಂಘಿಸುವಂತಹ ಸಂವಿಧಾನ ತಿದ್ದುಪಡಿಯನ್ನು ಮಾಡಲು ಕೇಂದ್ರ ಸರಕಾರಕ್ಕೆ ಸಾಧ್ಯವಿಲ್ಲ. ಶೇ.50ರಷ್ಟು ಮೀಸಲಾತಿಯು ನಿಜಕ್ಕೂ ಸಂವಿಧಾನದ ಮೂಲಭೂತ ಸ್ವರೂಪದ ಭಾಗವೇ ಎಂಬ ಬಗ್ಗೆ ಈಗಾಗಲೇ ವ್ಯತಿರಿಕ್ತ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಪ್ರಾಯಶಃ ಸದ್ಯದಲ್ಲೇ ಆರ್ಥಿಕ ಹಿಂದುಳಿದವರಿಗೆ ‘ಶೇ.10 ಮೀಸಲಾತಿ ಕೋಟಾ ಒದಗಿಸಿ ರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಆರಂಭಗೊಂಡಾಗ ಈ ಅಂಶವು ನಿರ್ಣಾಯಕವಾದ ವಿವಾದದ ವಿಷಯವಾಗಿ ಪರಿಣಮಿಸುವ ಸಾಧ್ಯತೆಯಿದೆ.

 ಇಂದಿರಾ ಸಾಹ್ನಿ ಪ್ರಕರಣದ ತೀರ್ಪಿನಲ್ಲಿ, ನ್ಯಾಯಮೂರ್ತಿ ಜೀವನ್‌ರೆಡ್ಡಿ ಅವರು ನಿರ್ಣಾಯಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ‘‘ಅಸಮಾನ ವ್ಯಕ್ತಿಗಳನ್ನು ಸರಿಸಮಾನರೆಂದು ಪರಿಗಣಿಸುವುದು ಅತಿ ದೊಡ್ಡ ಅನ್ಯಾಯವಾಗಿದೆ’’ ಎಂದು ರೆಡ್ಡಿ ಹೇಳಿದ್ದರು.

  ಶೇ.10 ಮೀಸಲಾತಿ ಕೋಟಾದ ಮೂಲಕ ತಾನು ಅಸಮಾನ ವ್ಯಕ್ತಿಗಳನ್ನು ಸರಿಸಮಾನ ವ್ಯಕ್ತಿಗಳೆಂಬ ಹಾಗೆ ನೋಡಿಕೊಳ್ಳುತ್ತಿಲ್ಲವೆಂದು ಕೇಂದ್ರ ಸರಕಾರ ಸಮರ್ಥಿಸಿಕೊಳ್ಳಬೇಕಾಗಿದೆ. ಇತರ ಹಿಂದುಳಿದ ವರ್ಗಗಳಿಗಾಗಿನ ಮೀಸಲಾತಿಗೆ, ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ಹಿಂದುಳಿಯುವಿಕೆ ಮಾನದಂಡವಾಗಿದೆ. ಇತರ ಹಿಂದುಳಿದ ವರ್ಗಗಳಲ್ಲಿ ಕೆನೆಪದರವನ್ನು ಮೀಸಲಾತಿಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಆದಾಗ್ಯೂ, ಇತ್ತೀಚಿನ ಶೇ.10ರಷ್ಟು ಮೀಸಲಾತಿಗೆ ಅರ್ಹತೆಯು ಆರ್ಥಿಕ ಆಧಾರಿತವಾಗಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಹೆಚ್ಚಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಅಂದರೆ ಇತರ ಹಿಂದುಳಿದ ವರ್ಗಗಳು, ತಮ್ಮ ಹಿಂದುಳಿಯುವಿಕೆಯನ್ನು ಹಾಗೂ ಆರ್ಥಿಕ ಅಶಕ್ತತೆಯನ್ನು ತಾವಾಗಿಯೇ ಸಾಬೀತುಪಡಿಸಬೇಕಾಗುತ್ತದೆ. ಆದರೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರಿದ ಮೇಲ್ಜಾತಿಗಳವರು ಕೇವಲ ತಮ್ಮ ಆರ್ಥಿಕ ಅಶಕ್ತತೆಯನ್ನು ಸಾಬೀತುಪಡಿಸಿದರಷ್ಟೇ ಸಾಕು, ಅವರು ಶೇ.10ರ ಮೀಸಲಾತಿ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಶೇ.10 ಮೀಸಲಾತಿ ಕೋಟಾ ಜಾರಿಗೆ ಸಂದಿಗ್ಧತೆ

ಆರ್ಥಿಕವಾಗಿ ಹಿಂದುಳಿದವರಿಗಾಗಿನ ಶೇ.10ರಷ್ಟು ಮೀಸಲಾತಿ ಕೋಟಾ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ನಿರ್ಧರಿಸುವವರೆಗೆ, ಅದರ ಕಾರ್ಯಾನುಷ್ಠಾನವನ್ನು ತಡೆಹಿಡಿಯಬೇಕಾದ ಪ್ರಶ್ನೆಯೂ ಕೂಡಾ ಈಗ ಉದ್ಭವಿಸಿದೆ.

ಮಂಡಲ್ ಆಯೋಗದ ಶಿಫಾರಸುಗಳ ಜಾರಿಗೆ ಸಂಬಂಧಿಸಿದ ವಿಚಾರಣೆ 1990ರಲ್ಲಿ ನಡೆದ ಸಂದರ್ಭದಲ್ಲಿ ಮೊದಲಿಗೆ ಸುಪ್ರೀಂಕೋರ್ಟ್, ಪರಿಶಿಷ್ಟಜಾತಿ, ಪಂಗಡ ಹಾಗೂ ಒಬಿಸಿಗಳಿಗೆ ಶೇ.50ರಷ್ಟು ಮೀಸಲಾತಿ ನೀಡುವ ಕುರಿತಾಗಿ ಕೇಂದ್ರ ಸರಕಾರ ಹೊರಡಿಸಿದ ತಿಳುವಳಿಕಾ ಪತ್ರದ ಜಾರಿಗೆ ಅನುಮತಿ ನೀಡಿತ್ತು ಹಾಗೂ ಆನಂತರ ಅದರ ಸಿಂಧುತ್ವವನ್ನು ನಿರ್ಧರಿಸುವುದಕ್ಕಾಗಿ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವಹಿಸಿತ್ತು.

ಮೀಸಲಾತಿಯು ಒಂದು ರಾಜಕೀಯವಾಗಿ ಸೂಕ್ಷ್ಮವಿಷಯವಾಗಿರುವುದ ರಿಂದ, ಅದರ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸುವವರೆಗೆ,ಅದನ್ನು ಅನುಷ್ಠಾನಗೊಳಿಸುವುದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡುವುದು ಅತಿ ಮುಖ್ಯವಾಗಿದೆ. ಒಮ್ಮೆ ಮೀಸಲಾತಿ ಕೋಟಾವನ್ನು ಜಾರಿಗೊಳಿಸಿದಲ್ಲಿ, ಅದರನ್ನು ಹಿಂಪಡೆಯುವುದು ತುಂಬಾ ಕಷ್ಟಕರವಾದುದಾಗಿದೆ. ಯಾಕೆಂದರೆ ಅಂತಹ ನಡೆಯು, ಆ ಸೌಲಭ್ಯವನ್ನು ಕಳೆದುಕೊಳ್ಳುವ ಜನರಿಂದ ವ್ಯಾಪಕ ಪ್ರತಿಭಟನೆಗೆ ಕಾರಣವಾಗುತ್ತದೆ. ಒಂದು ಮೀಸಲಾತಿಯ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡದೆ ಇದ್ದಲ್ಲಿ, ಆಧಾರ್ ಗುರುತುಚೀಟಿಯ ಪ್ರಕರಣದಲ್ಲಿ ಆದಂತಹ ಸಂದಿಗ್ಧನ ಇಲ್ಲೂ ಎದುರಾಗಬಹುದು. ಆಧಾರ್‌ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂಕೋರ್ಟ್ ಸೆಪ್ಟ್ಟಂಬರ್‌ನಲ್ಲಿ ತೀರ್ಮಾನ ಕೈಗೊಂಡಾಗ, ಬಹುತೇಕ ಭಾರತೀಯರು ಆ ಯೋಜನೆಯ ವ್ಯಾಪ್ತಿಗೊಳಪಟ್ಟಿದ್ದರು.


ಕೃಪೆ: scroll.in

Writer - ಶ್ರುತಿಸಾಗರ್ ಯಮುನನ್

contributor

Editor - ಶ್ರುತಿಸಾಗರ್ ಯಮುನನ್

contributor

Similar News