ದ.ಕ.ಜಿಲ್ಲೆ: ಬಿಸಿಲ ಧಗೆಯ ಮಧ್ಯೆ ನೀರಿಗಾಗಿ ಪರದಾಟ
►ನಿಯಂತ್ರಣಕ್ಕೆ ಸಿಗದ ನೀರು ಮಾರಾಟ ದಂಧೆ
ಮಂಗಳೂರು, ಎ.2: ದ.ಕ.ಜಿಲ್ಲಾದ್ಯಂತ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲ ಧಗೆಗೆ ತತ್ತರಿಸಿರುವ ಮಧ್ಯೆಯೇ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಂತೂ ಕುಡಿಯುವ ಮತ್ತು ದಿನ ಬಳಕೆಯ ನೀರಿಗಾಗಿ ಜನರು ಎದುರಿಸುತ್ತಿರುವ ಸಮಸ್ಯೆಯು ಗಾಢವಾಗಿದೆ.
ಬಿಸಿಲ ಧಗೆ: ಇದೀಗ ಜಿಲ್ಲೆಯ ಬಿಸಿಲಿನ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇದೆ. ಭೂಮಿಯು ನಿಗಿ ನಿಗಿ ಸುಡುವಂತಿವೆ. ಗಾಳಿಯ ಚಲನೆಯೂ ಕುಂದುತ್ತಿವೆ. ಸೆಖೆಯಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಿ, ದ್ರವಾಂಶ ಕಡಿಮೆಯಾಗಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿವೆ. ದಿನವಿಡೀ ಕಾಣಿಸಿಕೊಳ್ಳುವ ಬಿಸಿಲು ರಾತ್ರಿಯನ್ನೂ ಸುಡುವಂತಿವೆ. ವಿದ್ಯುತ್ ಸಮಸ್ಯೆ ಇಲ್ಲವಾದರೂ ಕೂಡ ಆರ್‌ಸಿಸಿ ಮನೆಯಲ್ಲಿ ವಾಸಿಸುವವರ ನಿದ್ದೆಗೆ ಬಿಸಿಲ ಧಗೆ ಭಂಗ ತರುವಂತಿವೆ. ಹಾಗಾಗಿ ಹೆಚ್ಚಿನವರಿಗೆ ರಾತ್ರಿಯ ನಿದ್ದೆಯೂ ಇಲ್ಲವಾಗಿ ಹಗಲು ಹೊತ್ತು ಕೆಲಸ ಮಾಡಲೂ ಆಗದೆ ಪರಿತಪಿಸುವಂತಹ ವಾತಾವರಣ ಕಂಡು ಬರುತ್ತಿವೆ.
ನೀರಿಗಾಗಿ ಪರದಾಟ: ಸಾಮಾನ್ಯವಾಗಿ ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯು ಬೇಸಿಗೆ ಕಾಲದಲ್ಲೇ ಆರಂಭವಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಜನವರಿಯಲ್ಲೇ ನೀರಿನ ಸಮಸ್ಯೆ ಶುರುವಾಗುತ್ತಿದೆ. ಬೇಸಿಗೆಯ ಆರಂಭ ಅಂದರೆ ಎಪ್ರಿಲ್‌ನಲ್ಲಂತೂ ಈ ಸಮಸ್ಯೆಯು ಬಿಗಡಾಯಿಸುತ್ತಿವೆ. ಜನಸಾಮಾನ್ಯರು ಕುಡಿಯುವ ಮತ್ತು ದಿನಬಳಕೆಯ ನೀರಿಗಾಗಿ ಪರದಾಡತೊಡಗಿದ್ದಾರೆ. ಗ್ರಾಪಂ, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಹೀಗೆ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ಪೂರೈಕೆಯ ವ್ಯವಸ್ಥೆಯನ್ನು ಮಾಡಿದ್ದರೂ ಸಕಾಲಕ್ಕೆ ಸಿಗುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿವೆ. ಕೆಲವು ಕಡೆ ಪ್ರತೀ ದಿನ ಅರ್ಧ ಅಥವಾ 1 ಗಂಟೆ ನೀರು ಪೂರೈಕೆ ಮಾಡಿದರೆ ಇನ್ನು ಕೆಲವು ಕಡೆ ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತದೆ. ವಿದ್ಯುತ್ ಕಡಿತಗೊಂಡ ಸಂದರ್ಭ ನೀರಿನ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿ ಅದರ ನೇರ ಪರಿಣಾಮ ಜನಸಾಮಾನ್ಯರ ಮೇಲಾಗುತ್ತಿವೆ. ಈ ಮಧ್ಯೆ ಕೆಲವು ಕಡೆ ಗ್ರಾಪಂ ಕಚೇರಿಗಳಿಗೆ ಮುತ್ತಿಗೆ, ಚುನಾವಣಾ ಬಹಿಷ್ಕಾರದ ಕೂಗುಗಳನ್ನೂ ಎಬ್ಬಿಸತೊಡಗಿದ್ದಾರೆ.
ಕೊಳವೆ ಬಾವಿಗಳ ಕೊರೆತ: ಖಾಸಗಿ ವ್ಯಕ್ತಿಗಳು ತಮಗೆ ಇಷ್ಟ ಬಂದ ಕಡೆ, ಇಷ್ಟ ಬಂದಾಗ ಕೊಳವೆ ಬಾವಿಗಳನ್ನು ಕೊರೆಸುವ ಪರಿಪಾಠ ಹೆಚ್ಚುತ್ತಿವೆ. ಈ ಹಿಂದೆ ಕೊಳವೆ ಬಾವಿಗಳ ಕೊರೆತಕ್ಕೆ ಜಿಲ್ಲಾಡಳಿತ ಮಾರ್ಗಸೂಚಿಯನ್ನು ಸಿದ್ಧಪಡಿಸಿತ್ತು. ಅದರಂತೆ ಕೊಳವೆ ಬಾವಿ ಕೊರೆಸುವ ಮುನ್ನ ಸ್ಥಳೀಯ ಚುನಾಯಿತ ಸಂಸ್ಥೆಗಳ ಅನುಮತಿ ಪಡೆಯಬೇಕಿತ್ತು. ಆದರೆ, ಇದೀಗ ಎಗ್ಗಿಲ್ಲದೆ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತದೆ. ಅದಕ್ಕೆ ಯಾರ ಅನುಮತಿಯನ್ನೂ ಪಡೆಯುತ್ತಿಲ್ಲ. ಈ ಮಧ್ಯೆ ಅಲ್ಲಲ್ಲಿ ಕೊಳವೆ ಬಾವಿಗಳನ್ನು ಕೊರೆಸುವುದರಿಂದ ಅಂತರ್ಜಲ ಕುಸಿತವೂ ಹೆಚ್ಚುತ್ತಿವೆ.
ಉಚಿತ ನೀರು ಪೂರೈಕೆ: ಈ ಮಧ್ಯೆ ಕೆಲವು ಕಡೆ ಸಾಮಾಜಿಕ, ಧಾರ್ಮಿಕ ಸಂಘಟನೆಗಳು ಸೀಮಿತ ವ್ಯಾಪ್ತಿಯೊಳಗೆ ಉಚಿತ ನೀರುಗಳನ್ನು ಪೂರೈಸಿಕೊಂಡು ಜನಸಾಮಾನ್ಯರ ಹೃದಯ ಗೆಲ್ಲುವ ಪ್ರಯತ್ನ ನಡೆಯುತ್ತಿವೆ. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿಗೆಲ್ಲ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು ಕಂಡು ಬರುತ್ತಿವೆ
ಮಾರಾಟ ದಂಧೆ: ಒಂದೆಡೆ ಉಚಿತ ನೀರು ಪೂರೈಕೆ ಮಾಡುತ್ತಿದ್ದರೂ ಕೂಡ ಕೆಲವು ಕಡೆ ನೀರನ್ನೇ ಮಾರಾಟ ಮಾಡುವ ದಂಧೆ ನಡೆಸಲಾಗುತ್ತಿದೆ. ರಾತ್ರಿ ಹೊತ್ತಂತೂ ಈ ದಂಧೆ ಮಿತಿ ಮೀರುತ್ತಿವೆ. ಕೊಳವೆ ಬಾವಿಗಳಿಂದ ನೀರನ್ನು ಟ್ಯಾಂಕರ್‌ಗಳಿಗೆ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಮುಂಜಾವಿನ ವರೆಗೂ ಈ ದಂಧೆ ನಡೆಸಲಾಗುವ ಕಾರಣ ಟ್ಯಾಂಕರ್‌ಗಳ ಮತ್ತು ಸಿಬ್ಬಂದಿ ವರ್ಗದ ಆರ್ಭಟಕ್ಕೆ ಸ್ಥಳೀಯರ ಸವಿ ನಿದ್ದೆಗೂ ಭಂಗವಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಬೇಸಿಗೆಯ ಪೂರ್ವದಲ್ಲೇ ನೀರಿನ ಪೂರೈಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಜಿಲ್ಲಾಡಳಿತವು ಶಾಂತಿ ಮತ್ತು ಸುವ್ಯವಸ್ಥೆಯ ಚುನಾವಣೆಯ ತಯಾರಿಯಲ್ಲಿದೆ. ಜನಪ್ರತಿನಿಧಿಗಳು ಕೂಡ ಮತಬೇಟೆಯಲ್ಲಿ ತೊಡಗಿವೆ. ಹಾಗಾಗಿ ಸದ್ಯ ಆಡಳಿತ ವರ್ಗದಿಂದ ನೀರಿನ ಬವಣೆ ನೀಗೀತು ಎಂಬ ವಿಶ್ವಾಸವಿಲ್ಲ. ಆದಾಗ್ಯೂ ಹನಿ ನೀರಿಗಾಗಿ ಹೋರಾಟ ಮಾಡುವ ಅನಿವಾರ್ಯ ಎದುರಾಗಬಹುದು.
-ಹರ್ಷಿತ್ ಮಂಗಳೂರು, ಕಾಲೇಜು ವಿದ್ಯಾರ್ಥಿ
ದ.ಕ.ಜಿಲ್ಲೆಯು ಅರಬ್ಬೀ ಸಮುದ್ರದ ತಟದಲ್ಲಿದ್ದರೂ ಕೂಡ ನೀರಿನ ಸಮಸ್ಯೆಗೆ ಕೊನೆ ಇಲ್ಲ ಎಂಬಂತಾಗಿದೆ. ಬೇಸಿಗೆ ಕಾಲದಲ್ಲಿ ಮಾತ್ರ ಕಾಡುತ್ತಿದ್ದ ನೀರಿನ ಸಮಸ್ಯೆಯು ಇದೀಗ ಚಳಿಗಾಲದಲ್ಲೂ ಆರಂಭವಾಗಿದೆ. ಕೃಷಿಕರು ಮಾತ್ರವಲ್ಲದೆ ಜಾನುವಾರುಗಳು ಕೂಡ ನೀರಿಗಾಗಿ ಪರದಾಡುತ್ತಿವೆ. ಮೇವು ಇಲ್ಲದೆ ಮಾರುಕಟ್ಟೆಗಳಿಗೆ ಜಾನುವಾರುಗಳ ಪೂರೈಕೆಯಲ್ಲೂ ಇಳಿಮುಖವಾಗಿದೆ. ಇದು ಮಾಂಸಾಹಾರದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಸರಕಾರ, ಜಿಲ್ಲಾಡಳಿತ ಮತ್ತು ಸ್ಥಳೀಯ ಚುನಾಯಿತ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಲ್ಲದೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಜನರು ಗುಳೇ ಹೋಗುವ ಪರಿಸ್ಥಿತಿ ಬರಬಹುದು.
-ಅಲಿ ಹಸನ್, ಅಧ್ಯಕ್ಷರು, ಮಾಂಸ ವ್ಯಾಪಾರಸ್ಥರ ಸಂಘ, ಮಂಗಳೂರು