ಆರೋಗ್ಯ ಯೋಜನೆ ಜನರನ್ನು ತಲುಪಿದೆಯೇ?

Update: 2019-04-08 18:31 GMT

8 ತಿಂಗಳುಗಳಲ್ಲಿ ಸರಕಾರವು ಈಗಾಗಲೇ ತನ್ನ ಗುರಿ ಈಡೇರಿಕೆಯ ಅವಧಿಯನ್ನು ಎರಡು ಪಟ್ಟು ಹೆಚ್ಚಿಸಿದೆ. ಒಂದು ವೇಳೆ ಇದನ್ನು ಸಾಧಿಸಿದರೂ ಸಹ, ಅದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಆರೋಗ್ಯದ ಮೇಲಿನ ಸರಕಾರದ ಗರಿಷ್ಠ ವೆಚ್ಚದ ಕೇವಲ ಅರ್ಧದಷ್ಟಾಗಿದೆ.


2014ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿಯು, ರಾಷ್ಟ್ರೀಯ ಆರೋಗ್ಯ ಪಾಲನಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಅದರಲ್ಲೂ ವಿಶೇಷವಾಗಿ. ಯುಪಿಎ ಆಡಳಿತದಲ್ಲಿ ಭಾರೀ ವೈಫಲ್ಯವನ್ನು ಕಂಡಿದೆಯೆಂದು ತಾನು ಆರೋಪಿಸುತ್ತಾ ಬಂದಿದ್ದ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್ ಸೇರಿದಂತೆ ದೇಶದ ಸಮಗ್ರ ಆರೋಗ್ಯಪಾಲನಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ಮಾಡುವುದಾಗಿ ಆಶ್ವಾಸನೆ ನೀಡಿತ್ತು. ಸಾರ್ವತ್ರಿಕವಾಗಿ ಲಭ್ಯವಾಗುವಂತಹ, ಮಿತದರದ ಹಾಗೂ ಪರಿಣಾಮಕಾರಿಯಾದ ಸಮಗ್ರ ಆರೋಗ್ಯಪಾಲನಾ ವ್ಯವಸ್ಥೆಯನ್ನು ಸೃಷ್ಟಿಸುವುದಾಗಿಯೂ ಅದು ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆರೋಗ್ಯ ವಲಯಕ್ಕೆ ತಾನು ಮೊದಲ ಆದ್ಯತೆಯನ್ನು ನೀಡುವುದಾಗಿ ಪಕ್ಷವು ಹೇಳಿಕೊಂಡಿತ್ತು. ರಾಜ್ಯ ಸರಕಾರಗಳ ನೆರವಿನೊಂದಿಗೆ ಎಲ್ಲಾ ಭಾರತೀಯರಿಗೆ ಆರೋಗ್ಯ ವಿಮೆ ಹಾಗೂ ಆರೋಗ್ಯಪಾಲನೆಗಾಗಿ ಸಾಮರ್ಥ್ಯವನ್ನು ಮೀರಿ ಹಣವನ್ನು ಖರ್ಚು ಮಾಡುವುದನ್ನು ಕಡಿಮೆಗೊಳಿಸುವುದಾಗಿ ಅದು ಭರವಸೆ ನೀಡಿತ್ತು.

   ಭಾರತವು ತನ್ನ ನೂತನ ಆರೋಗ್ಯ ನೀತಿಯನ್ನು 2002ರಲ್ಲಿ ಜಾರಿಗೆ ಬಂದಿತ್ತು. ಆದರೆ ದೇಶದಲ್ಲಿ ಪ್ರಸಕ್ತ ಕಾಲಘಟ್ಟದಲ್ಲಿ ಎದುರಾಗಿರುವ ಸಂಕೀರ್ಣವಾದ ಆರೋಗ್ಯಪಾಲನಾ ಸವಾಲುಗಳು, ಆರೋಗ್ಯವಲಯದ ಅಭಿವೃದ್ಧಿ ಹಾಗೂ ಜನಸಂಖ್ಯಾ ಸ್ವರೂಪದ ಬದಲಾವಣೆಗಳಿಗೆ ಸ್ಪಂದಿಸುವುದಕ್ಕಾಗಿ ಸಮಗ್ರವಾದ ಆರೋಗ್ಯಪಾಲನಾ ನೀತಿಯನ್ನು ಭಾರತವು ಜಾರಿಗೊಳಿಸುವ ಅಗತ್ಯವಿದೆ. ನೂತನ ಆರೋಗ್ಯ ಪಾಲನಾ ನೀತಿಯನ್ನು ಬಿಜೆಪಿ ಸರಕಾರ 2017ರ ಮಾರ್ಚ್‌ನಲ್ಲಿ ಜಾರಿಗೆ ತರಲು ಹಲವಾರು ಉಪಕ್ರಮಗಳನ್ನು ಕೈಗೊಂಡಿತ್ತು. ಅದೇ ರೀತಿ, ಕೇಂದ್ರ ಸರಕಾರವು 2017ರ ಮಾರ್ಚ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಪಾಲನಾ ನೀತಿಯನ್ನು ಅಂಗೀಕರಿಸಿತ್ತು. ಈ ನೀತಿಯ ಕರಡನ್ನು ರಚಿಸುವುದಕ್ಕಾಗಿಯೇ ಅದಕ್ಕೆ ಒಂದೂವರೆ ವರ್ಷ ತಗಲಿತ್ತು. ಉತ್ತಮ ಸಾರ್ವಜನಿಕ ಆರೋಗ್ಯ ಫಲಿತಾಂಶಗಳ ಬಗ್ಗೆ ನೂತನ ನೀತಿಯು ಅತ್ಯಂತ ಕನಿಷ್ಠ ಮಾನದಂಡಗಳನ್ನು ವಿಧಿಸಿದೆ. ಉದಾಹರಣೆಗೆ, 2025ರೊಳಗೆ ಸರಕಾರವು ಆರೋಗ್ಯದ ಮೇಲಿನ ವೆಚ್ಚವನ್ನು ಈಗ ಇರುವ ಶೇ. 1.15ರಿಂದ, ಈಗ ಇರುವ ಒಟ್ಟಾರೆ ಆಂತರಿಕ ಉತ್ಪನ್ನದ ಶೇ. 2.5ಕ್ಕೆ ಏರಿಸುವುದಕ್ಕೆ ಪ್ರಸ್ತಾಪ ಮಾಡಿತ್ತು. 2015ರಲ್ಲಿ ಬಿಡುಗಡೆಗೊಳಿಸಲಾಗಿದ್ದ ಕರಡು ನೀತಿಯು ಇದನ್ನು 2020ರೊಳಗೆ ಸಾಧಿಸಬಹುದೆಂದು ಹೇಳಿಕೊಂಡಿತ್ತು. ಬೇರೆ ಮಾತುಗಳಲ್ಲಿ ಹೇಳುವುದಾದರೆ, 18 ತಿಂಗಳುಗಳಲ್ಲಿ ಸರಕಾರವು ಈಗಾಗಲೇ ತನ್ನ ಗುರಿ ಈಡೇರಿಕೆಯ ಅವಧಿಯನ್ನು ಎರಡು ಪಟ್ಟು ಹೆಚ್ಚಿಸಿದೆ. ಒಂದು ವೇಳೆ ಇದನ್ನು ಸಾಧಿಸಿದರೂ ಸಹ, ಅದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ಆರೋಗ್ಯದ ಮೇಲಿನ ಸರಕಾರದ ಗರಿಷ್ಠ ವೆಚ್ಚದ ಕೇವಲ ಅರ್ಧದಷ್ಟಾಗಿದೆ.

ಮೋದಿ ಸರಕಾರದ ನೂತನ ಆರೋಗ್ಯ ಯೋಜನೆಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ, ನಿಜಕ್ಕೂ ಜನಸಾಮಾನ್ಯರನ್ನು ತಲುಪಲು ಅವುಗಳಿಗೆ ಸಾಧ್ಯವಾಗಿದೆಯೇ?. ಒಂದು ವೇಳೆ ಆಗಿದ್ದರೆ ಅವು ಎಷ್ಟರ ಮಟ್ಟಿಗೆ ಸಫಲವಾಗಿವೆಯೆಂಬ ಕುರಿತ ಒಂದು ಸ್ಥೂಲ ನೋಟ ಇಲ್ಲಿದೆ.

ರಾಷ್ಟ್ರೀಯ ಆರೋಗ್ಯ ಖಾತರಿ ಮಿಶನ್ ಯೋಜನೆಯು ಜನ ಸಾಮಾನ್ಯರಿಗೆ ತಲುಪಬಲ್ಲ ಹಾಗೂ ಮಿತದರದ ಹಾಗೂ ಅಷ್ಟೇ ಪರಿಣಾಮಕಾರಿಯಾದ ಆರೋಗ್ಯಪಾಲನಾ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಶ್ರೀಸಾಮಾನ್ಯರು ತಮ್ಮ ಅರ್ಥಿಕ ಸಾಮರ್ಥ್ಯ ಮೀರಿ ಆರೋಗ್ಯಪಾಲನೆಗಾಗಿ ವೆಚ್ಚ ಮಾಡುವುದನ್ನು ಅದು ತಡೆಯುತ್ತದೆ. ಸ್ಥಿತಿಗತಿ: ಕೇಂದ್ರ ಸರಕಾರವು ಜಾರಿಗೆ ತಂದಿರುವ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯು, ದೇಶಾದ್ಯಂತ 10 ಕೋಟಿಗೂ ಅಧಿಕ ಕುಟುಂಬಗಳಿಗೆ ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳ ಆರೋಗ್ಯ ವಿಮೆಯ ಖಾತರಿ ನೀಡುತ್ತದೆ. 2018ರ ಸೆಪ್ಟ್ಟಂಬರ್‌ನಲ್ಲಿ ಈ ಯೋಜನೆಯು ಜಾರಿಗೆ ಬಂದಾಗಿನಿಂದ 2.70 ಕೋಟಿಗೂ ಅಧಿಕ ಮಂದಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯ ಮೂಲಕ ಈಗಾಗಲೇ 17 ಲಕ್ಷಕ್ಕೂ ಅಧಿಕ ಮಂದಿ ಆರೋಗ್ಯಪಾಲನಾ ಸೌಲಭ್ಯಗಳನ್ನು ಪಡೆದಿದ್ದಾರೆಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ತಿಳಿಸಿದೆ.

ಆರೋಗ್ಯಪಾಲನಾ ವಲಯದಲ್ಲಿ ಅಸ್ತಿತ್ವದಲ್ಲಿರುವ ವಿವಿಧ ವೃತ್ತಿಪರ ನಿಯಂತ್ರಣಾತ್ಮಕ ಸಂಸ್ಥೆಗಳ ಪಾತ್ರವನ್ನು ಮರುಪರಿಶೀಲಿಸುವುದಾಗಿ ಕೇಂದ್ರ ಸರಕಾರ ತಿಳಿಸಿತ್ತು. ಆರೋಗ್ಯಪಾಲನಾ ವಲಯದಲ್ಲಿ ವೃತ್ತಿಪರರ ಕೊರತೆಯನ್ನು ನೀಗಿಸಲು ಉನ್ನತ ಮಟ್ಟದಲ್ಲಿ ಆದ್ಯತೆ ನೀಡಲಾಗುವುದೆಂದು ಅದು ತಿಳಿಸಿತ್ತು. ಸ್ಥಿತಿಗತಿ:   2017ರ ಡಿಸೆಂಬರ್‌ನಲ್ಲಿ ಕೇಂದ್ರ ಆರೋಗ್ಯ ಸಚಿವರು, ರಾಷ್ಟ್ರೀಯ ವೈದ್ಯಕೀಯ ಆಯೋಗದ ವಿಧೇಯಕವನ್ನು ಜಾರಿಗೊಳಿಸಿದರು. ವೈದ್ಯಕೀಯ ಶಿಕ್ಷಣ ಹಾಗೂ ನಿಯಮಾವಳಿಗಳ ಮೇಲ್ವಿಚಾರಣೆಗಾಗಿ ಅಸ್ತಿತ್ವದಲ್ಲಿದ್ದ 1956ರ ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಯನ್ನು ರದ್ದುಪಡಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕವನ್ನು 2017ರಲ್ಲಿ ಜಾರಿಗೆ ತರಲಾಯಿತು.

ಈ ವಿಧೇಯಕವನ್ನು ಸ್ಥಾಯಿ ಸಮಿತಿಗೆ ಕಳುಹಿಸಿಕೊಡಲಾಯಿತು. ಆಯುರ್ವೇದ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆ, ಯೂನಾನಿ, ಸಿದ್ಧ ವೈದ್ಯ ಪದ್ಧತಿ ಹಾಗೂ ಹೊಮಿಯೋಪಥಿ ಮತ್ತು ಆಯುಷ್ ವೈದ್ಯರಿಗಾಗಿ ಆಧುನಿಕ ಔಷಧಿ ಪದ್ಧತಿಯನ್ನು ನಡೆಸಲು ಪ್ರತ್ಯೇಕವಾದ ಬ್ರಿಝ್ (ಸಂಕ್ಷಿಪ್ತ ಅವಧಿ) ಕೋರ್ಸ್‌ಗೆ ಇರುವ ನಿಯಮಾವಳಿಗಳನ್ನು ತೆಗೆದುಹಾಕುವುದು ಹಾಗೂ ಎಂಬಿಬಿಎಸ್ ವೈದ್ಯರಿಗೆ ಪ್ರಾವೀಣ್ಯತಾ ಪತ್ರವನ್ನು ಪಡೆಯಲು ಪ್ರತ್ಯೇಕವಾದ ಪರೀಕ್ಷೆ ನಡೆಸುವುದನ್ನು ಈ ವಿಧೇಯಕವು ಶಿಫಾರಸು ಮಾಡುತ್ತದೆ. 2017ರ ರಾಷ್ಟ್ರೀಯ ವೈದ್ಯಕೀಯ ಆಯೋಗವು ವಿಧೇಯಕವನ್ನು ಸಂಸತ್‌ನಲ್ಲಿ ಮಂಡಿಸಿದ್ದು, ಅದು ಲೋಕಸಭೆಯಲ್ಲಿ ಇನ್ನಷ್ಟೇ ಅಂಗೀಕಾರಗೊಳ್ಳಬೇಕಾಗಿದೆ. ಈ ಮಧ್ಯೆ ಭಾರತದ ವೈದ್ಯಕೀಯ ಮಂಡಳಿಯನ್ನು ವಿಸರ್ಜಿಸಿ, ಅದನ್ನು ನಡೆಸಲು ಗಣ್ಯ ವೃತ್ತಿಪರರನ್ನು ಒಳಗೊಂಡ ಗವರ್ನರ್‌ಗಳ ಮಂಡಳಿಯನ್ನು ರಚಿಸಿತು.

ಸರಕಾರಿ ಆಸ್ಪತ್ರೆಗಳ ಆಧುನೀಕರಣ, ಮೂಲಭೂತ ಸೌಕರ್ಯಗಳ ಉನ್ನತೀಕರಣ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ
‘ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ’ಯಡಿ ಆಸ್ಪತ್ರೆಗಳನ್ನು ಕೈಗಾರಿಕೆಯಾಗಿ ನಡೆಸಲು ಕೇಂದ್ರ ಸರಕಾರವು ಯೋಜನೆಗಳನ್ನು ಘೋಷಿಸಿತು. ಸ್ತರ 2 ಹಾಗೂ ಸ್ತರ 3 ನಗರಗಳಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಹಲವಾರು ಸವಲತ್ತು, ರಿಯಾಯಿತಿಗಳನ್ನು ಘೋಷಿಸಿತು. ಖಾಸಗಿ ಆಸ್ಪತ್ರೆಗಳಿಗೆ ಪಹಣಿಯೇತರ ಭೂಮಿಯ ವಿತರಣೆ, ಕಾರ್ಯಸಾಧ್ಯತೆಯ ಅಂತರ ನಿಧಿ ಪೂರೈಕೆ ಹಾಗೂ ತ್ವರಿತವಾದ ಮಂಜೂರಾತಿಗಳು ಈ ಸೌಲಭ್ಯಗಳಲ್ಲಿ ಸೇರಿದ್ದವು. ಆದರೆ ಈ ನಡೆಯು, ಆರೋಗ್ಯಯೋಜನೆಯು ಸಾರ್ವಜನಿಕ ಹಣವನ್ನು ಖಾಸಗಿ ಆರೋಗ್ಯ ವಲಯಕ್ಕೆ ವರ್ಗಾಯಿಸುವುದೆಂಬ ಆತಂಕಕ್ಕೆ ದಾರಿ ಮಾಡಿಕೊಟ್ಟಿತು.

ಆರೋಗ್ಯಪಾಲನೆ, ಆಹಾರ ಹಾಗೂ ಪೌಷ್ಟಿಕತೆ ಮತ್ತು ಫಾರ್ಮಾ ಸ್ಯೂಟಿಕಲ್ಸ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವಿವಿಧ ಇಲಾಖೆಗಳನ್ನು ಪರಸ್ಪರ ಒಗ್ಗೂಡಿಸುವ ಉದ್ದೇಶದಿಂದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವನ್ನು ಮರು ಸಂಘಟಿಸುವ ಯೋಜನೆಯನ್ನು ಕೂಡಾ ಮೋದಿ ಸರಕಾರ ಪ್ರಕಟಿಸಿತ್ತು.
ಸ್ಥಿತಿಗತಿ: ಆದರೆ ಈ ನಿಟ್ಟಿನಲ್ಲಿ ಯಾವುದೇ ರೀತಿಯ ಮರುಸಂಘಟನೆ ನಡೆದಿಲ್ಲ.

ಯೋಗ ಹಾಗೂ ಆರೋಗ್ಯ ಮಾನವಕುಲಕ್ಕೆ ಪುರಾತನ ಭಾರತೀಯ ನಾಗರಿಕತೆಯ ಕೊಡುಗೆಯಾಗಿದೆ. ಯೋಗ ಹಾಗೂ ಆಯುಶ್ ವೈದ್ಯ ಪದ್ಧತಿ (ಆಯುರ್ವೇದ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಹಾಗೂ ಹೋಮಿಯೊಪಥಿ)ಯ ಉತ್ತೇಜನಕ್ಕಾಗಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಲಾಗುವುದು. ಭಾರತೀಯ ಔಷಧಿ ಪದ್ಧತಿ ಹಾಗೂ ಆಧುನಿಕ ವಿಜ್ಞಾನ ಮತ್ತು ಆಯುರ್ವೇದದ ಕುರಿತಾಗಿ ಸಮಗ್ರ ಕೋರ್ಸ್ ಗಳನ್ನು ಆರಂಭಿಸಲಾಗುವುದೆಂದು ಕೇಂದ್ರ ಸರಕಾರ ಪ್ರಕಟಿಸಿತ್ತು. ಸ್ಥಿತಿಗತಿ: ಆಯುಷ್ಮಾನ್ ಭಾರತ್ ಯೋಜನೆಯಡಿ ಕೇಂದ್ರ ಸರಕಾರವು ಆರೋಗ್ಯ ಉಪಕೇಂದ್ರಗಳನ್ನು ಉನ್ನತೀಕರಿಸುವ ಮೂಲಕ 1.50 ಲಕ್ಷ ನೂತನ ಆರೋಗ್ಯ ಹಾಗೂ ಕ್ಷೇಮಪಾಲನಾ ಕೇಂದ್ರಗಳನ್ನು ದೇಶಾದ್ಯಂತ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯನ್ನು ಪುನರುಜ್ಜೀವನ ಗೊಳಿಸಲು ಪ್ರಯತ್ನಗಳು ನಡೆಯುತ್ತಿದ್ದರೂ, ಅದು ತನ್ನ ನಿಗದಿತ ಗುರಿಗಳನ್ನು ಸಾಧಿಸುವಲ್ಲಿ ಹಿಂದೆ ಬಿದ್ದಿದೆ.

ಹಿರಿಯ ನಾಗರಿಕರ ಆರೋಗ್ಯಪಾಲನೆಯು ಗಮನಸೆಳೆಯುವ ಕ್ಷೇತ್ರ ವಾಗಿದೆ. ಬಿಜೆಪಿ ಸರಕಾರವು 2010-11ರಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿ ಸರಕಾರವು ಆರಂಭಿಸಿದ ಹಿರಿಯ ನಾಗರಿಕರಿಗಾಗಿನ ರಾಷ್ಟ್ರೀಯ ಆರೋಗ್ಯ ಪಾಲನಾ ಕಾರ್ಯಕ್ರಮವನ್ನು ಜಾರಿಗೊಳಿಸುವುದನ್ನು ಮುಂದುವರಿಸಿದೆ.

ತುರ್ತು ವೈದ್ಯಕೀಯ ಸೇವೆಗಳ ಸಾರ್ವತ್ರೀಕರಣ:

ನವೆಂಬರ್‌ನಲ್ಲಿ ಕೇಂದ್ರ ಸರಕಾರವು ನಿರ್ಭಯಾ ನಿಧಿಯ ಹಣಕಾಸು ನೆರವಿನೊಂದಿಗೆ ಅಖಿಲ ಭಾರತ ಮಟ್ಟದಲ್ಲಿ 112 ಸಂಖ್ಯೆಯ ಸಹಾಯವಾಣಿಯ ಮೂಲಕ ಅಖಿಲ ಭಾರತ ಮಟ್ಟದಲ್ಲಿ ತುರ್ತು ಪ್ರತಿಕ್ರಿಯಾ ಬೆಂಬಲ ವ್ಯವಸ್ಥೆಯನ್ನು ಆರಂಭಿಸಿತು. 112 ಸಂಖ್ಯೆಯ ಸಹಾಯವಾಣಿಯನ್ನು ಪೊಲೀಸರ ಸಂಖ್ಯೆ 100, ಅಗ್ನಿ (101) ಹಾಗೂ ಮಹಿಳಾ ಸುರಕ್ಷತೆ (1090) ಸಹಾಯವಾಣಿ ಸಂಖ್ಯೆಯೊಂದಿಗೆ ಸಂಯೋಜಿಸಲಾಗಿದೆ. ಆರೋಗ್ಯ ಸಹಾಯವಾಣಿ (108)ಯನ್ನು ಕೂಡಾ ನಿರ್ಭಯಾ ಸಹಾಯವಾಣಿ ಜೊತೆ ಶೀಘ್ರವೇ ಸಂಯೋಜಿಸಲಾಗುವುದು. 16 ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 112 ಸಹಾಯವಾಣಿಯನ್ನು ಆರಂಭಿಸುವುದಾಗಿ ಸರಕಾರವು ಹೇಳುತ್ತದೆ. ಅನೇಕ ರಾಜ್ಯಗಳು ಕಂಪೆನಿಗಳ ಪಾಲುದಾರಿಕೆಯೊಂದಿಗೆ 108 ಸಹಾಯವಾಣಿಯಡಿ ತುರ್ತು ಸೇವೆಗಳನ್ನು ನಿರ್ವಹಿಸುವುದನ್ನು ಮುಂದುವರಿಸಲಿವೆ.

ವೈದ್ಯಕೀಯ ಕ್ಷೇತ್ರದಲ್ಲಿ ಮಾನವಸಂಪನ್ಮೂಲದಲ್ಲಿ ಭಾರತವು ಸ್ವಾವಲಂಬಿಯಾಗುವಂತೆ ಮಾಡಲು ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಪ್ರತಿಯೊಂದು ರಾಜ್ಯದಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್)ಯಂತಹ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಯನ್ನು ಮೋದಿ ಸರಕಾರ ಹಮ್ಮಿಕೊಂಡಿತ್ತು.

ಸ್ಥಿತಿಗತಿ:  
 ಆವರೆಗೆ ಕಾರ್ಯನಿರ್ವಹಿಸುತ್ತಿದ್ದ ಆಯುಷ್ ಇಲಾಖೆ ಯನ್ನು ರದ್ದುಪಡಿಸಿ, ಕೇಂದ್ರ ಸರಕಾರವು 2014ರಲ್ಲಿ ಆಯಷ್ ಸಚಿವಾಲಯವನ್ನು ಸ್ಥಾಪಿಸಿತು. ಆಯುರ್ವೇದ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆ, ಯೂನಾನಿ, ಸಿದ್ಧ ಹಾಗೂ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಗಳ ಅಭಿವೃದ್ದಿಗೆ ಗಮನಹರಿಸುವುದೇ ಇದರ ಉದ್ದೇಶವಾಗಿತ್ತು. ಶಾಲಾ ಆರೋಗ್ಯ ಕಾರ್ಯಕ್ರಮ: ಆರೋಗ್ಯ ಹಾಗೂ ನೈರ್ಮಲ್ಯ ವಿಷಯಗಳು ಪಠ್ಯ ಕ್ರಮದ ಭಾಗಗಳಾದವು.
ಸ್ಥಿತಿಗತಿ: ಶಾಲೆಗಳಲ್ಲಿ ಚಾಲ್ತಿಯಲ್ಲಿರುವ ಆರೋಗ್ಯಪಾಲನಾ ವ್ಯವಸ್ಥೆಯಲ್ಲಿ ಯಾವುದೇ ಗಣನೀಯ ಬದಲಾವಣೆ ಕಂಡುಬಂದಿಲ್ಲ.

ಔಷಧೀಯ ಗಿಡಮೂಲಿಕೆಗಳ ಕೃಷಿಗೆ ಉತ್ತೇಜನ ನೀಡುವುದಕ್ಕಾಗಿ ಔಷಧೀಯ ಗಿಡಮೂಲಿಕೆಗಳ ಮಂಡಳಿಗೆ ಕಾಯಕಲ್ಪ. 
ಹಿಂದಿನ ಸರಕಾರ ಆರಂಭಿಸಿದ್ದ ಔಷಧೀಯ ಗಿಡಗಳ ಸಂರಕ್ಷಣೆ, ಅಭಿವೃದ್ದಿ ಯೋಜನೆಗಳು ಹಾಗೂ ಔಷಧೀಯ ಗಿಡಗಳು ಮತ್ತು ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಔಷಧೀಯ ಗಿಡಗಳ ಮಿಶನ್‌ನ ಸುಸ್ಥಿರ ನಿರ್ವಹಣೆ ಯೋಜನೆಗಳ ಮುಂದುವರಿಕೆಗಾಗಿ 2015ರಲ್ಲಿ ಕೇಂದ್ರ ಸರಕಾರವು ಆಯುಷ್ ಸಚಿವಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಔಷಧೀಯ ಗಿಡಗಳ ಮಂಡಳಿಯನ್ನು ಸ್ಥಾಪಿಸಿತು.

2022ರೊಳಗೆ ದೇಶವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ 2018ರಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲಾ 640 ಜಿಲ್ಲೆಗಳಲ್ಲಿ ರಾಷ್ಟ್ರೀಯ ಪೌಷ್ಟಿಕತಾ ಮಿಶನ್ ಅಥವಾ ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ಥಿತಿಗತಿ:  ಈ ಕಾರ್ಯಕ್ರಮವು ಈಗಾಗಲೇ ಅಸ್ತಿತ್ವದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಅವಲಂಬಿಸಿದೆ. ಆದರೆ ಅವುಗಳಲ್ಲಿ ಹೆಚ್ಚಿನವು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈಗಾಗಲೇ ಅಧಿಕ ಕೆಲಸದ ಹೊರೆಯಿಂದ ಬಳಲುತ್ತಿರುವುದು ಯೋಜನೆಯ ಯಶಸ್ಸಿಗೆ ಇನ್ನೊಂದು ತಡೆಗೋಡೆಯಾಗಿದೆ.
  ಆದರೆ ಈ ಯೋಜನೆಯ ಸುಸ್ಥಿರತೆಯನ್ನು ಹಾಗೂ ಯಶಸ್ಸನ್ನು ಈಗಲೇ ಅಳೆಯುವುದು ತುಂಬಾ ಬೇಗವಾದೀತು.


ಕೃಪೆ: scroll.in

Writer - ನಯನತಾರಾ ನಾರಾಯಣನ್

contributor

Editor - ನಯನತಾರಾ ನಾರಾಯಣನ್

contributor

Similar News