ಕಾಂಗ್ರೆಸ್ ಸೋಲಿಸುವ ಎಸ್‌ಡಿಪಿಐ-ಬಿಜೆಪಿ ತಂತ್ರ ಫಲಿಸದು: ಯು.ಟಿ.ಖಾದರ್

Update: 2019-04-11 05:35 GMT

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಕಾವು ಏರುತ್ತಿದೆ. ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಪೈಪೋಟಿ ಇದ್ದರೂ ಈ ಬಾರಿ ಎಸ್‌ಡಿಪಿಐ ಮತ ಬೇಟೆಯಲ್ಲಿ ತೊಡ ಗಿವೆ. ‘‘ನಮ್ಮ ಅಭ್ಯರ್ಥಿಯನ್ನು ಸೋಲಿಸಲು ‘ಎಸ್‌ಡಿಪಿಐ-ಬಿಜೆಪಿ’ ಒಳ ಒಪ್ಪಂದ ಮಾಡಿಕೊಂಡಿವೆ’’ ಎಂದು ಕಾಂಗ್ರೆಸ್ ಆರೋಪಿಸಿದರೆ, ‘‘ನಮ್ಮೆಳಗಲ್ಲ... ಕಾಂಗ್ರೆಸ್-ಎಸ್‌ಡಿಪಿಐ’ ಮಧ್ಯೆ ಒಳ ಒಪ್ಪಂದ ಆಗಿದೆ’’ ಎಂದು ಬಿಜೆಪಿ ಆರೋಪಿಸುತ್ತಿದೆ. ಇವೆಲ್ಲದರ ಮಧ್ಯೆ 1991ರಿಂದ ಸುಮಾರು 28 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು ಮತ್ತೆ ತನ್ನ ಬಗಲಿಗೆ ಹಾಕಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಯುವ ನಾಯಕ ಮಿಥುನ್ ರೈಗೆ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸಿಕೊಡಲೇಬೇಕು ಎಂದು ಪಕ್ಷದ ಹಿರಿಯ ನಾಯಕರಿಗೆ ತಾಕೀತು ಮಾಡಿದೆ. ಆ ಹಿನ್ನ್ನೆಲೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯು.ಟಿ.ಖಾದರ್ ಅವರೊಂದಿಗೆ ‘ವಾರ್ತಾಭಾರತಿ’ ಮಾತನಾಡಿದಾಗ....

► ಚುನಾವಣಾ ಪ್ರಚಾರ ಹೇಗಿದೆ? ಯಾವ ರೀತಿಯ ರಣತಂತ್ರ ರೂಪಿಸಿದ್ದೀರಿ?

ಪ್ರಚಾರ ಕಾರ್ಯ ಬಿರುಸಿನಿಂದಲೇ ಸಾಗಿದೆ. ಮತದಾರರ ಮನಮುಟ್ಟಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದ್ದೇವೆ. ಮನೆಮನೆ ಭೇಟಿ ನೀಡಿ ಪ್ರತಿಯೊಬ್ಬ ಮತದಾರರನ್ನು ಕಂಡು ಕೇಂದ್ರ ಸರಕಾರದ ವೈಫಲ್ಯವನ್ನು ಬೊಟ್ಟು ಮಾಡಿ ತೋರಿಸುತ್ತಿದ್ದೇವೆ. ಪಕ್ಷದ ಅಭ್ಯರ್ಥಿ ಮಿಥುನ್ ರೈ ಅಲ್ಲದೆ ಆಯಾ ಕ್ಷೇತ್ರ ಮತ್ತು ಬ್ಲಾಕ್ ಹಾಗೂ ವಲಯ-ವಾರ್ಡ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಶಕ್ತಿ ಮೀರಿ ದುಡಿಯುತ್ತಿದ್ದಾರೆ. ಇನ್ನೊಂದು ವಿಚಾರ... ಯಾರು ಯಾವ ಕ್ಷೇತ್ರದಲ್ಲಿ ಹೆಚ್ಚು ಮತಗಳ ಲೀಡ್ ದೊರಕಿಸಿಕೊಡುತ್ತಾರೋ ಮುಂದಿನ ವಿಧಾನಸಭಾ ಚುನಾವಣಾ ಸಂದರ್ಭ ಹೈಕಮಾಂಡ್ ಅದನ್ನೂ ಪರಿಗಣಿಸಿ ಟಿಕೆಟ್ ನೀಡಲಿದೆ. ನಾನೀಗ ಉಸ್ತುವಾರಿ ಸಚಿವನಾದ ಕಾರಣ ಲೋಕಸಭಾ ಕ್ಷೇತ್ರಾದ್ಯಂತ ಹೆಚ್ಚು ಗಮನ ಹರಿಸುತ್ತಿದ್ದೇನೆ. ಮಿಥುನ್‌ರಿಗೆ ಅತೀ ಹೆಚ್ಚು ಮತಗಳನ್ನು ನನ್ನ ಕ್ಷೇತ್ರದಿಂದ ದೊರಕಿಸಿಕೊಡಲಿದ್ದೇನೆ.

► ಕಾಂಗ್ರೆಸ್‌ನಲ್ಲಿ ಹಿರಿಯ ಮುಖಂಡರು ಸೇರಿದಂತೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇತ್ತು. ಆದರೆ ಅವರೆಲ್ಲರನ್ನು ಹಿಂದಿಕ್ಕಿ ಮಿಥುನ್ ರೈಗೆ ಟಿಕೆಟ್ ದೊರಕಿಸಿಕೊಡುವಲ್ಲಿ ನೀವು ಪ್ರಮುಖ ಪಾತ್ರ ವಹಿಸಿದ್ದೀರಿ ಎಂಬ ಮಾತು ಕೇಳಿ ಬರುತ್ತಿದೆ, ಇದಕ್ಕೇನಂತೀರಿ?

ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದುದು ಹೌದು. ಹಾಗಂತ ಯಾರೂ ಯಾರನ್ನೂ ಹಿಂದಿಕ್ಕಿಲ್ಲ. ಕೇಂದ್ರ ಹೈಕಮಾಂಡ್ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರ ಅಭಿಪ್ರಾಯ ಪಡೆದು ಎಲ್ಲರ ಒಪ್ಪಿಗೆಯೊಂದಿಗೆ ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಟಿಕೆಟ್ ನೀಡಿದೆ. ಇಲ್ಲಿ ನನ್ನದು ಪ್ರಮುಖ ಪಾತ್ರ ಎನ್ನುವುದಕ್ಕಿಂತಲೂ ಎಲ್ಲರ ಮನವೊಲಿಸಿ ಪೈಪೋಟಿಯ ವಾತಾವರಣವನ್ನು ತಿಳಿಗೊಳಿಸಿ ಒಮ್ಮತದ ಅಭ್ಯರ್ಥಿಯನ್ನಾಗಿಸಲು ನಾನು ಹೆಚ್ಚಿನ ಆದ್ಯತೆ ನೀಡಿದೆ ಎನ್ನಬಹುದು.

► ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲು-ಗೆಲುವಿನ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿ ನೀವು ವಹಿಸಲು ಸಿದ್ಧರಿರುವಿರಾ?

ಕಾಂಗ್ರೆಸ್‌ನ ತೆಕ್ಕೆಯಲ್ಲಿದ್ದ ದ.ಕ. ಅಥವಾ ಮಂಗಳೂರು ಲೋಕಸಭಾ ಕ್ಷೇತ್ರವು ಕಳೆದ 28 ವರ್ಷಗಳಿಂದ ಬಿಜೆಪಿಯ ವಶದಲ್ಲಿದೆ. ಅದನ್ನು ಮರಳಿ ಪಡೆಯುವ ಅಪೂರ್ವ ಅವಕಾಶವೊಂದು ನಮಗೆ ಲಭಿಸಿದೆ. ಯುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರುವ ಕಾರಣ ನಮಗೆ ಈ ಕ್ಷೇತ್ರವು ವರದಾನವಾಗಲಿದೆ. ಜೆಡಿಎಸ್, ಸಿಪಿಎಂ ಪಕ್ಷದ ಸಹಕಾರದಿಂದ ನಾವು ಈ ಕ್ಷೇತ್ರವನ್ನು ಗೆಲ್ಲುವುದರಲ್ಲಿ ಸಂಶಯವಿಲ್ಲ. ಗೆದ್ದರೆ ಅದರ ಯಶಸ್ಸು ಎಲ್ಲರಿಗೂ ಲಭಿಸಲಿದೆ. ಇನ್ನು ಸೋತರೆ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಅದರ ಹೊಣೆಯನ್ನು ನಾನೇ ಹೊರುವೆ.

► ವಿಧಾನ ಸಭೆ ಚುನಾವಣೆ ಸಂದರ್ಭ ನಿಮ್ಮ ಪ್ರಚಾರ ಕಾರ್ಯ ಸಮರೋಪಾದಿಯಲ್ಲಿರುತ್ತದೆ. ಆದರೆ, ಇದೀಗ ಅಂತಹ ಚುರುಕಿನ ಪ್ರಚಾರ ಕಾಣುತ್ತಿಲ್ಲ ಯಾಕೆ?

ಹಾಗೇನಿಲ್ಲ... ಅಧಿಕಾರ ಇರಲಿ, ಇಲ್ಲದಿರಲಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯುವುದು ನನಗೆ ರಕ್ತಗತವಾಗಿದೆ. ವಿಧಾನಸಭಾ ಚುನಾವಣೆಗೂ ಈ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಈ ಚುನಾವಣೆಯಲ್ಲಿ ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ವಿಚಾರಗಳು ಮುನ್ನಲೆಗೆ ಬರುತ್ತದೆ. ಅದರ ಆಧಾರದ ಮೇಲೆಯೇ ಪ್ರಚಾರ ನಡೆಸಲಾಗುತ್ತದೆ. ವಿಧಾನಸಭೆ ಚುನಾವಣೆ ಸಂದರ್ಭ ನನ್ನ ಓಡಾಟ ಕ್ಷೇತ್ರಕ್ಕೆ ಸೀಮಿತವಾ ಗಿತ್ತು. ಈ ಚುನಾವಣೆಗೆ ನಾನು ಜಿಲ್ಲಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದೇನೆ.

► ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದೆಯೇ? ಮೋದಿ ಅಲೆ ಪರಿಣಾಮ ಬೀರೀತೇ?

ನಮಗಿದು ಕೇವಲ ಚುನಾವಣೆ ಮಾತ್ರವಲ್ಲ, ಬಹುದೊಡ್ಡ ಸವಾಲು ಕೂಡ ಆಗಿದೆ. ಹೇಗಾದರು ಸರಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನ ಮುಂದುವರಿಸಿದ್ದೇವೆ ಮತ್ತು ಅದರಲ್ಲಿ ಯಶಸ್ಸು ಸಾಧಿಸಲಿದ್ದೇವೆ. ಇನ್ನು ನರೇಂದ್ರ ಮೋದಿ ಏನು ಎಂಬುದು ಜನತೆಗೆ ಗೊತ್ತಾಗಿದೆ. ಜನರು ಸುಳ್ಳು ಆಶ್ವಾಸನೆಗಳಿಗೆ ಮರಳಾಗುವ ಕಾಲ ಈಗಿಲ್ಲ. ಮತದಾರರು ವಿದ್ಯಾವಂತರು, ವಿಚಾರವಂತರು. ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಯೋಚಿಸುವ ಶಕ್ತಿ ಎಲ್ಲರಿಗೂ ಇದೆ. ಭಾವನಾತ್ಮಕ ವಿಚಾರಗಳಿಗೆ ಮಾರುಹೋಗುವ ಬದಲು ಆತ್ಮಾವಲೋಕನ ಮಾಡತೊಡಗಿದ್ದಾರೆ. ಅದು ನಮಗೆ ಶ್ರೀರಕ್ಷೆಯಾಗಲಿದೆ.

►ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಬಗ್ಗೆ ಏನು ಹೇಳುವಿರಿ?

ಕಳೆದ 10 ವರ್ಷಗಳಲ್ಲಿ ಈ ಜಿಲ್ಲೆಯ ಜನತೆ ನೆನಪಿನಲ್ಲಿಡುವಂತಹ ಯಾವ ಸಾಧನೆಯನ್ನು ನಳಿನ್ ಕುಮಾರ್ ಮಾಡಿದ್ದಾರೆ? ಪಂಪ್‌ವೆಲ್‌ನ ಅಪೂರ್ಣ ಮೇಲ್ಸೇತುವೆಯೇ ಅವರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಅವರಲ್ಲಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾವ ಅಜೆಂಡವೂ ಇಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ಕೆದಕುವುದರಲ್ಲಷ್ಟೇ ಅವರು ನಿಸ್ಸೀಮರು.

► ದ.ಕ. ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬ ಬಲವಾದ ಬೇಡಿಕೆ ಕೇಳಿಬಂದಿದ್ದರೂ ಟಿಕೆಟ್ ಸಿಗದಿರುವ ಬಗ್ಗೆ ಏನಂತೀರಿ ?

ದ.ಕ. ಮಾತ್ರವಲ್ಲ ಬೀದರ್, ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ಇದ್ದವು. ಆ ಪೈಕಿ ಕನಿಷ್ಠ 2 ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲು ಹೈಕಮಾಂಡ್ ಬಯಸಿತ್ತು. ಈ ಮಧ್ಯೆ ಹಣಾಹಣಿ ಇರುವ ಕ್ಷೇತ್ರದಲ್ಲಿ ಮುಸ್ಲಿಮ್‌ರಿಗೆ ಟಿಕೆಟ್ ಬೇಡ ಎಂಬ ಸಂದೇಶವೂ ಮುಸ್ಲಿಮ್ ನಾಯಕರಿಂದಲೇ ಹೈಕಮಾಂ ಡ್‌ಗೆ ತಲುಪಿತ್ತು. ಅಂತೂ ಹೈಕಮಾಂಡ್ ಪಕ್ಷದ ಬಹುತೇಕ ಎಲ್ಲಾ ಮುಸ್ಲಿಮ್ ನಾಯಕರ ಜೊತೆ ಸಮಾಲೋಚನೆ ಮಾಡಿದ ಬಳಿಕ ಬೆಂಗಳೂರು ಸೆಂಟ್ರಲ್‌ನಲ್ಲಿ ರಿಝ್ವಿನ್ ಅರ್ಷದ್‌ಗೆ ಟಿಕೆಟ್ ನೀಡಿತು.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಗತಿಪರ ಚಿಂತಕ, ನಟ ಪ್ರಕಾಶ್ ರೈ ವಿರುದ್ಧವೇ ಕಾಂಗ್ರೆಸ್ ರಿಝ್ವೆನ್ ಅರ್ಷದ್‌ಗೆ ಟಿಕೆಟ್ ನೀಡಲು ಕಾರಣ ಏನು? ಇದು ಬಿಜೆಪಿಗೆ ಪೂರಕವಾಗದೇ?

ಹಾಗೇನೂ ಆಗದು. ಬೆಂಗಳೂರು ಸೆಂಟ್ರಲ್‌ನಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಸಾಕಷ್ಟಿದೆ. ಈ ಲೋಕಸಭಾ ಕ್ಷೇತ್ರವು ಬಿಜೆಪಿಯ ತೆಕ್ಕೆಯಲ್ಲಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐವರು ಶಾಸಕರು ಆಯ್ಕೆಯಾಗಿದ್ದಾರೆ. ಹಾಗಾಗಿ ಗೆಲ್ಲಬಹುದಾದ ಅವಕಾಶವೊಂದನ್ನು ಕೈ ಚೆಲ್ಲಿದರೆ ತಪ್ಪು ಸಂದೇಶ ಹೋಗಬಹುದು ಎಂಬ ನಿಟ್ಟಿನಲ್ಲಿ ಹೈಕಮಾಂಡ್ ರಿಝ್ವಿನ್ ಅರ್ಷದ್‌ರಿಗೆ ಟಿಕೆಟ್ ನೀಡಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದ ಪ್ರಕಾಶ್ ರೈ ಈ ಬಾರಿ ಪಕ್ಷೇತರರಾಗಿ ಚುನಾವಣೆಗೆ ನಿಲ್ಲುವುದಾಗಿ ಘೋಷಿಸಿದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ನಾವೆಲ್ಲಾ ಅವರ ಜೊತೆ ಮಾತನಾಡಿದೆವು. ಕಣದಿಂದ ಹಿಂಜೆ ಸರಿಯಲು ಮನವಿ ಮಾಡಿದ್ದೆವು. ಅವರು ಒಪ್ಪದಿದ್ದಾಗ ಅನಿವಾರ್ಯವಾಗಿ ನಾವು ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆವು. ನಾವೇ ಗೆಲ್ಲುತ್ತೇವೆ.

► ಟಿಕೆಟ್ ನೀಡಿಲ್ಲ ಎಂಬ ಮುಸ್ಲಿಮರ ಅಸಮಾಧಾನವು ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರೀತೇ?

ಹಾಗೇನಿಲ್ಲ... 28 ಕ್ಷೇತ್ರಗಳ ಪೈಕಿ ಒಂದು ಕಡೆ ಮಾತ್ರ ಟಿಕೆಟ್ ಸಿಕ್ಕಿದ್ದರೂ ಮುಂದಿನ ರಾಜ್ಯಸಭೆ ಅಥವಾ ವಿಧಾನ ಪರಿಷತ್ ಚುನಾವಣೆಯ ಸಂದರ್ಭ ಮುಸ್ಲಿಮರಿಗೆ ಖಂಡಿತ ಅವಕಾಶ ಸಿಗಲಿದೆ. ಅವಕಾಶ ನೀಡುವಾಗ ಕೆಲವೊಮ್ಮೆ ಏರುಪೇರಾಗಬಹುದು. ಹಾಗಂತ ಈ ಹಿಂದೆ ನೀಡಿರುವ ಅವಕಾಶವನ್ನು ಮರೆಯುವುದೇ?

► ಮಾಜಿ ಸಂಸದ ಎಚ್.ಟಿ. ಸಾಂಗ್ಲಿ ಯಾನ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಏನು ಹೇಳುವಿರಿ?

ಕಾಂಗ್ರೆಸ್‌ನಲ್ಲಿ ಅವರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿತ್ತು. ಇದೀಗ ಅವರಿಗೆ ಸ್ಥಾನಮಾನ ಸಿಕ್ಕಿಲ್ಲ ಎಂಬ ಏಕೈಕ ಕಾರಣಕ್ಕೆ ಕ್ರೈಸ್ತ ಸಮುದಾಯಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿ ದೂರ ಸರಿದಿ ದ್ದಾರಷ್ಟೆ.

► ನೀವು ಎಸ್‌ಡಿಪಿಐ ವಿರುದ್ಧ ಅಪಪ್ರಚಾರ ಮಾಡುತ್ತಿದ್ದೀರಿ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲ, ಈ ಬಗ್ಗೆ ಏನಂತೀರಿ?

ಎಸ್‌ಡಿಪಿಐ ನಾಯಕರ ಈ ಆರೋಪದಲ್ಲಿ ಹುರುಳಿಲ್ಲ. ನಾನು ಯಾವತ್ತೂ ಆಧಾರವಿಲ್ಲದೆ ಮಾತನಾ ಡುವುದಿಲ್ಲ. ಎಸ್‌ಡಿಪಿಐ ಮತ್ತು ಪಿಎಫ್‌ಐ ನಾಯಕರು, ಕಾರ್ಯಕರ್ತರು ಸಮುದಾಯದ ಹೆಸರು ಹೇಳಿಕೊಂಡು ಏನೆಲ್ಲಾ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಖುರೇಷಿ ಪ್ರಕರಣದಲ್ಲಿ ಇವರು ಏನು ಮಾಡಿದರು? ಅದಿರಲಿ, ಖುರೇಷಿಗೆ ಇವರು ಯಾವ ರೀತಿಯ ನೆರವು ನೀಡಿದರು?. ನೊಂದವರ ಹೆಸರಿನಲ್ಲಿ ಇವರು ಮಸೀದಿಗಳಲ್ಲಿ ದೇಣಿಗೆ ಸಂಗ್ರಹಿಸಿದರೇ ವಿನಃ ಅದನ್ನು ಸಂಬಂಧಪಟ್ಟವರಿಗೆ ಕೊಟ್ಟಿಲ್ಲ. ಅದನ್ನು ಪ್ರಶ್ನಿಸಿದರೆ, ಲೆಕ್ಕ ಕೇಳಿದರೆ ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕುತ್ತಾರೆಯೇ ವಿನಃ ಲೆಕ್ಕ ಕೊಟ್ಟು ಮುಖ ಉಳಿಸಿಕೊಳ್ಳುವುದಿಲ್ಲ. ತಮ್ಮ ಸ್ವ ಹಿತಕ್ಕಾಗಿ, ರಾಜಕೀಯ ಕಾರಣಕ್ಕಾಗಿ ಸಮುದಾಯದ ಹೆಸರು ಹೇಳಿ ವಂಚಿಸುವಾಗ ವಾಸ್ತವಾಂಶ ಗೊತ್ತಿದ್ದೂ ನಾನು ಸುಮ್ಮನಿರಬೇಕೇ? ಇವರ ಬೂಟಾಟಿಕೆಯ ಸಮುದಾಯ ಪ್ರೇಮವನ್ನು ಪ್ರಶ್ನಿಸುವ ಧೈರ್ಯವನ್ನು ನಾನು ತೋರಿದ್ದೇನೆ. ಅದಕ್ಕಾಗಿ ನನ್ನ ವಿರುದ್ಧ ಇವರೇ ಅಪಪ್ರಚಾರದಲ್ಲಿ ತೊಡಗಿದ್ದಾರೆಯೇ ವಿನಃ ನಾನಲ್ಲ.

► ಅಶ್ರಫ್ ಕಲಾಯಿ ವಿಚಾರದಲ್ಲಿ ನೀವು ಆಧಾರರಹಿತ ಹೇಳಿಕೆ ನೀಡಿದ್ದೀರಿ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ?

ಈ ವಿಚಾರದಲ್ಲೂ ನಾನೇನೂ ಗೊಂದಲ ಸೃಷ್ಟಿಸುವ ಹೇಳಿಕೆ ನೀಡಿಲ್ಲ. ಒಂದು ವೇಳೆ ನನ್ನ ಮಾತಿನಿಂದ ಅಶ್ರಫ್ ಕಲಾಯಿ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆ ಕೋರುವೆ. ಪಿಎಫ್‌ಐಗಾಗಿ ಪ್ರಾಣತ್ಯಾಗ ಮಾಡಿದ ಅಶ್ರಫ್ ಕಲಾಯಿಯ ಕುಟುಂಬಕ್ಕೆ ನೆರವು ನೀಡುವ ಉದ್ದೇಶದಿಂದ ಇವರು ದೇಣಿಗೆ ಸಂಗ್ರಹಿಸಿದರಲ್ಲಾ... ಆ ಹಣ ಎಲ್ಲಿಗೆ ಹೋಯಿತು? ಇರಲಿ ಬಿಡಿ, ಅಶ್ರಫ್‌ರ ತಾಯಿ ಮತ್ತು ಪತ್ನಿಯ ಮಧ್ಯೆ ವೈಮನಸ್ಸು ಆದಾಗ ಅದನ್ನು ಸರಿ ಮಾಡಲು ಯಾಕೆ ಇವರಿಗೆ ಸಾಧ್ಯವಾಗಲಿಲ್ಲ? ಯಾಕೆ ಆ ಕುಟುಂಬ ರಮಾನಾಥ ರೈ ಬಳಿ ಹೋಗು ವಂತಾಯಿತು?. ಎರಡು ವರ್ಷಗಳ ಹಿಂದೆ ಅಶ್ರಫ್ ಕಲಾಯಿಯ ಮನೆಗೆ ರಮಾನಾಥ ರೈ ಹೋಗುವಾಗ ಮುಖ ತಿರುಗಿಸಿ ನಿಂತುದು ಇವರಿಗೆ ಮರೆತು ಹೋಯಿತೇ? ಪರಿಹಾರ ಧನದ ಚೆಕ್ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಅಶ್ರಫ್ ಕಲಾಯಿಯ ಕುಟುಂಬ ತೆರಳುವಾಗ ಈ ಪಿಎಫ್‌ಐ/ಎಸ್‌ಡಿಪಿಐಯವರ ಅನುಪಸ್ಥಿತಿ ಯಾಕೆ ಎದ್ದು ಕಂಡಿತು? ಅಶ್ರಫ್ ಕಲಾಯಿ ಪ್ರಾಣ ತ್ಯಾಗ ಮಾಡಿ ವರ್ಷವಾದರೂ ಯಾಕೆ ಇವರಿಗೆ ಆ ಕುಟುಂಬಕ್ಕೊಂದು ಮನೆ ನಿರ್ಮಿಸಿಕೊಡಲು ಸಾಧ್ಯವಾಗಲಿಲ್ಲ?. ಮಾಸಿಕ ಆಹಾರ ಕಿಟ್ ಪಡೆಯಲು ಸಂಘಟನೆಯೊಂದಕ್ಕೆ ಅರ್ಜಿ ಸಲ್ಲಿಸುವ ಪ್ರಮೇಯ ಯಾಕೆ ಬಂತು? ರ್ಯಾಲಿ ಮಾಡಲು ಬಳಸುವ ಫ್ಲಾಗ್‌ಗೆ ಖರ್ಚು ಮಾಡುವ ಹಣದಿಂದಲಾದರೂ ಇವರಿಗೆ ಅಶ್ರಫ್ ಕಲಾಯಿಯ ಕುಟುಂಬಕ್ಕೆ ನೆರವುನೀಡಬಹುದಿತ್ತಲ್ವ.

► ಟಿಕೆಟ್ ವಿಚಾರದಲ್ಲಿ ಮುಸ್ಲಿಮರಿಗೆ ಅನ್ಯಾಯ ಆಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಕಾಂಗ್ರೆಸ್ ಮುಖಂಡರಾದ ರೋಶನ್ ಬೇಗ್, ಇಕ್ಬಾಲ್ ಅನ್ಸಾರಿ ಅವರಂತಹ ನಾಯಕರೇ ಬಹಿರಂಗ ಹೇಳಿಕೆ ನೀಡಿರುವ ಬಗ್ಗೆ ಏನು ಹೇಳುವಿರಿ?

ಈ ದೇಶದಲ್ಲಿ ಮುಸ್ಲಿಮರಿಗೆ ಅತೀ ಹೆಚ್ಚು ಪ್ರಾತಿನಿಧ್ಯ ನೀಡಿರುವ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್. ಕೆಲವರು ಸ್ವತಃ ತಮಗೆ ಅವಕಾಶ ಸಿಗದಿದ್ದಾಗ ಹೀಗೆ ಅಸಮಾಧಾನ ವ್ಯಕ್ತಪಡಿಸುವುದು ಸಹಜ. ಆದರೆ ‘ಮುಸ್ಲಿಂ ಮುಕ್ತ ಕಾಂಗ್ರೆಸ್’ ಆಗಲು ಎಂದಿಗೂ ನಾವು ಅವಕಾಶ ಮಾಡಿಕೊಡುವುದಿಲ್ಲ. ಯಾಕೆಂದರೆ ಕಾಂಗ್ರೆಸ್ ಒಂದು ಧರ್ಮ, ಜಾತಿ, ಭಾಷೆಗೆ ಸೀಮಿತವಾದ ಪಕ್ಷವಲ್ಲ. ಇದು ಪ್ರಬಲ ಜಾತ್ಯತೀತ ತತ್ವದಡಿ ನಂಬಿಕೆಯಿಟ್ಟಿರುವ ಪಕ್ಷವಾಗಿದೆ. ಎಲ್ಲರಿಗೂ ಸಮಾನ ನ್ಯಾಯವನ್ನು ಕಾಂಗ್ರೆಸ್ ನೀಡುತ್ತದೆ. ಈ ಬಾರಿ ಅನ್ಯಾಯವಾದರೂ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ.

► ಎಸ್‌ಡಿಪಿಐ ಸ್ಪರ್ಧೆ ಬಗ್ಗೆ ಏನಂತೀರಿ?

ಪ್ರಜ್ಞಾವಂತ ಮತದಾರ ಖಂಡಿತಾ ಎಸ್‌ಡಿಪಿಐಗೆ ಮತ ಹಾಕಲಾರ. ಯಾಕೆಂದರೆ ದೇಶಕ್ಕೆ ಮಾರಕ ಯಾರು ಮತ್ತು ಯಾವ ಪಕ್ಷ ಎಂಬುದು ಮುಸ್ಲಿಮರಿಗೆ ಚೆನ್ನಾಗಿ ಗೊತ್ತಿದೆ. ಹೀಗಿರುವಾಗ ಎಸ್‌ಡಿಪಿಐ ಯಾಕೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿತು ಮತ್ತು ಇದರ ಲಾಭ ಯಾರಿಗೆ ಆಗಲಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡುವ ಅಗತ್ಯ ಇದೆ. ಎಸ್‌ಡಿಪಿಐ ಅಂತೂ ಈ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ. ಇನ್ನು ಅವರು ಯಾರನ್ನು ಗೆಲ್ಲಿಸಲು ಅಥವಾ ಸೋಲಿಸಲು ಸ್ಪರ್ಧಿಸುತ್ತಿದ್ದಾರೆ ಎಂಬುದನ್ನು ಜನತೆಗೆ ಮೊದಲು ತಿಳಿಯಪಡಿಸಲಿ. ಕಾಂಗ್ರೆಸ್ ಸೋಲಿಸಲು ಎಸ್‌ಡಿಪಿಐ-ಬಿಜೆಪಿಯ ತಂತ್ರ ಎಂದಿಗೂ ಫಲಿಸದು. ಎಸ್‌ಡಿಪಿಐ ಅಥವಾ ಪಿಎಫ್‌ಐ ತನ್ನ ಇತಿಹಾಸದಲ್ಲಿ ಎಂದೂ ಬಿಜೆಪಿಯ ವಿರುದ್ಧ ಹೋರಾಟ ಮಾಡಿದ ಉದಾಹರಣೆ ಇದೆಯೇ? ಸಾಮಾಜಿಕ ಜಾಲತಾಣಗಳಲ್ಲಾದರು ಸರಿ, ಅವರು ಕಾಂಗ್ರೆಸನ್ನೇ ಟಾರ್ಗೆಟ್ ಮಾಡುತ್ತಾರೆ. ಬಿಜೆಪಿಯ ವಿರುದ್ಧ ಸೊಲ್ಲೆತ್ತದೆ ಈವರೆಗೆ ಕಾಂಗ್ರೆಸ್ ವಿರುದ್ಧ ಸೆಣಸುತ್ತಾ ಬಂದಿರುವುದು ಗುಟ್ಟಾಗಿ ಉಳಿದಿಲ್ಲ. ಸ್ವಹಿತಾಸಕ್ತಿಗಾಗಿ ಸಮುದಾಯವನ್ನು ಬಲಿಕೊಡುವುದರಲ್ಲಿ ಅವರು ನಿಸ್ಸೀಮರು.

► ಸಂದರ್ಶನದ ಪೂರ್ಣ ವೀಡಿಯೊಗಾಗಿ ಈ ಲಿಂಕ್‌ಗೆ ಭೇಟಿ ನೀಡಿ

youtube.com/varthabharatinews

Full View

Writer - ಸಂದರ್ಶನ: ಹಂಝ ಮಲಾರ್

contributor

Editor - ಸಂದರ್ಶನ: ಹಂಝ ಮಲಾರ್

contributor

Similar News