ನಳಿನ್ ಕುಮಾರ್ ಕಟೀಲ್‌ರನ್ನು ಸೋಲಿಸುವುದೇ ನಮ್ಮ ಗುರಿ: ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ

Update: 2019-04-12 15:34 GMT
ಮುಹಮ್ಮದ್ ಕುಂಞಿ

ಜನತಾ ಪರಿವಾರದ ಹಿರಿಯ ನಾಯಕರಾದ ರಾಮಕೃಷ್ಣ ಹೆಗಡೆ, ಡಾ. ಜೀವರಾಜ ಆಳ್ವ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಮತ್ತಿತರ ನಾಯಕರ ಗರಡಿಯಲ್ಲಿ ಪಳಗಿರುವ ವಿಟ್ಲ ಮುಹಮ್ಮದ್ ಕುಂಞಿ ಕಳೆದ 40 ವರ್ಷದಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಯುವ ಜನತಾ ದಳದ ರಾಜ್ಯ ಕಾರ್ಯದರ್ಶಿಯಾಗಿ, ರಾಜ್ಯ ಜನತಾ ದಳದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಮುಹಮ್ಮದ್ ಕುಂಞಿ ಪ್ರಸ್ತುತ ದ.ಕ. ಜಿಲ್ಲಾ ಜಾತ್ಯತೀತ ಜನತಾ ದಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜ್ಯಮಟ್ಟದಲ್ಲಾದ ಒಪ್ಪಂದಂತೆ ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಜೆಡಿಎಸ್ ಕೂಡ ಮತಯಾಚನೆಯಲ್ಲಿ ತೊಡಗಿವೆ. ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರ ಜಂಟಿ ಸಮಿತಿಯನ್ನೂ ರಚಿಸಲಾಗಿದೆ. ಈ ಸಮಿತಿಯ ಪ್ರಮುಖರದಲ್ಲಿ ಓರ್ವರಾದ ಮುಹಮ್ಮದ್ ಕುಂಞಿ ಅವರನ್ನು ಚುನಾವಣಾ ಹಿನ್ನಲೆಯಲ್ಲಿ ‘ವಾರ್ತಾಭಾರತಿ’ ಮಾತನಾಡಿಸಿತು...

ಚುನಾವಣಾ ಪ್ರಚಾರ ಕಾರ್ಯ ಹೇಗಿವೆ ?

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಹಿರಿಯ ನಾಯಕರು ಹೇಳಿದ ತಕ್ಷಣವೇ ನಾವು ಅಭ್ಯರ್ಥಿ ಯಾರು ಎಂಬುದನ್ನು ಪರಿಗಣಿಸದೆ ಪಕ್ಷದ ನಾಯಕರ, ಕಾರ್ಯಕರ್ತರ ಸಭೆ ಕರೆದು ಚರ್ಚೆ ನಡೆಸಿದೆವು. ಅಭ್ಯರ್ಥಿ ಯಾರೇ ಆಗಲಿ, ಅವರ ಪರವಾಗಿ ನಿಸ್ವಾರ್ಥ ದಿಂದ ದುಡಿಯುವುದಾಗಿ ಪಣತೊಟ್ಟೆವು. ಅದರಂತೆ ದ.ಕ.ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್- ಜೆಡಿಎಸ್ ಅಭ್ಯರ್ಥಿಯಾಗಿ ಮಿಥುನ್ ರೈ ಅವರನ್ನು ಕಣಕ್ಕಿಳಿಸಲಾಗಿದೆ. ಈಗಾಗಲೆ ನಾವು ವಿಧಾನಸಭಾ ಕ್ಷೇತ್ರಾವಾರು ಸಭೆ ನಡೆಸಿ ಪಕ್ಷದ ನಾಯಕರು, ಕಾರ್ಯಕರ್ತರು, ಜನಪ್ರತಿನಿಧಿಗಳ ಮೂಲಕ ಮಿಥುನ್ ರೈ ಪರ ಮನೆ ಮನೆ ಪ್ರಚಾರ ಆರಂಭಿಸಿದ್ದೇವೆ. ಹೋದಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

ಮೇಲ್ನೋಟಕ್ಕೆ ನಿಮ್ಮದು ಮೈತ್ರಿಕೂಟ. ಆದರೆ ಜಿಲ್ಲೆಯ ಕೆಲವು ಕಡೆ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಹೊಂದಾಣಿಕೆ ಕಾಣಿಸುತ್ತಿಲ್ಲ. ಉದಾಹರಣೆಗೆ ನಾಮಪತ್ರ ಸಲ್ಲಿಕೆಯ ವೇಳೆ ಉಳ್ಳಾಲದ ಜೆಡಿಎಸ್ ನಾಯಕರು, ಕೌನ್ಸಿಲರ್‌ಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತಲ್ಲಾ ?

ನಮ್ಮದು ಮೇಲ್ನೋಟದ ಮೈತ್ರಿಯಲ್ಲ. ಹೃದಯಂತರಾಳದ ಮೈತ್ರಿಯಾಗಿದೆ. ಆರಂಭದಲ್ಲಿ ಕೆಲವು ಕಡೆ ಎರಡೂ ಪಕ್ಷಗಳ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಉಳ್ಳಾಲದ ಜೆಡಿಎಸ್ ನಾಯಕರು, ಕೌನ್ಸಿಲರ್‌ಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಧ್ಯೆ ಸಂವಹನದ ಕೊರತೆಯೂ ಇತ್ತು. ವಿಷಯ ತಿಳಿದೊಡನೆ ನಾವು ಎಲ್ಲರನ್ನೂ ಒಂದೆಡೆ ಮುಖಾಮುಖಿಯಾಗುವಂತೆ ಮಾಡಿದೆವು. ವೈಮನಸ್ಸು ದೂರ ಮಾಡಿಕೊಂಡು ಮೈತ್ರಿಕೂಟದ ಅಭ್ಯರ್ಥಿ ಪರ ಪ್ರಚಾರಕ್ಕೆ ಅಣಿಯಾಗಿಸುವಲ್ಲಿ ಯಶಸ್ವಿಯಾದೆವು. ಇನ್ನು ಮಂಡ್ಯ-ಹಾಸನದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮುನಿಸನ್ನು ಇಲ್ಲಿಗೆ ಹೋಲಿಸಬೇಡಿ. ಅಲ್ಲಿಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸವಿದೆ. ನಾವು ಶಕ್ತಿಮೀರಿ ಮಿಥುನ್ ರೈ ಪರ ಕೆಲಸ ಮಾಡುತ್ತಿದ್ದೇವೆ.

ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ನೀವು ರಮಾನಾಥ ರೈ ಮತ್ತು ಯು.ಟಿ.ಖಾದರ್ ವಿರುದ್ಧ ಹರಿಹಾಯ್ದಿದ್ದೀರಿ. ಆದರೆ ಇದೀಗ ಜೊತೆಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೀರಿ ? ಹೇಗಾಗುತ್ತದೆ ?

ನಾನು ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡಿಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆಯ ಬಗ್ಗೆ ಅವರು ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದಿದ್ದೆ. ನಮಗೆ ಆವಾಗಲೂ, ಈವಾಗಲೂ ಬಿಜೆಪಿಯೇ ಎದುರಾಳಿಗಳು. ಯಾಕೆಂದರೆ ಬಿಜೆಪಿಯದ್ದು ಸಮಾಜವನ್ನು ಒಡೆಯುವ ಸಿದ್ಧಾಂತ. ಅದರ ವಿರುದ್ಧ ಜಾತ್ಯತೀತ ಶಕ್ತಿಗಳು ಒಗ್ಗಟ್ಟಾಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲೇ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಮೈತ್ರಿ ಧರ್ಮವನ್ನು ಪಾಲಿಸುವ ಹೊಣೆ ನಮಗೆಲ್ಲರಿಗೂ ಇದೆ. ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್‌ರನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ. ಸಂವಿಧಾನದ ಮೌಲ್ಯವನ್ನು ಉಳಿಸುವ ಸಲುವಾಗಿ ನಾವೆಲ್ಲಾ ಒಟ್ಟಾಗಿ ಬಿಜೆಪಿ ತೆಕ್ಕಿಯಿಂದ ದ.ಕ.ಲೋಕಸಭಾ ಕ್ಷೇತ್ರವನ್ನು ಬಿಡಿಸಿಕೊಳ್ಳಬೇಕಿದೆ. ಅದಕ್ಕಾಗಿ ಹಳೆಯ ಕಹಿಯನ್ನು ಮರೆತು ಭವಿಷ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಯಶಸ್ಸು ಸಾಧಿಸುವ ವಿಶ್ವಾಸವೂ ಇದೆ.

ಅಭ್ಯರ್ಥಿಗಳಾದ ನಳಿನ್-ಮಿಥುನ್ ಪೈಕಿ ಯಾರು ಸಮರ್ಥರು ಅಂತ ನಿಮಗೆ ಅನಿಸುತ್ತದೆ ?

ನಳಿನ್‌ರನ್ನು ಸ್ವತಃ ಬಿಜೆಪಿಗರೇ ತಿರಸ್ಕರಿಸಿದ್ದಾರೆ. ಕಳೆದ 10 ವರ್ಷದಲ್ಲಿ ಯಾವ ಸಾಧನೆ ಮಾಡಿದ್ದಕ್ಕೆ ಜಿಲ್ಲೆಯ ಮತದಾರರು ಅವರನ್ನು ಬೆಂಬಲಿಸಬೇಕು ?. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಅವರೆಷ್ಟು ಧ್ವನಿಯಾಗಿದ್ದಾರೆ ?. ಅವರೊಬ್ಬ ಅಸಮರ್ಥ ಸಂಸದ ಎಂದು ವಾಸ್ತವಾಂಶಗಳೇ ಸಾರಿ ಹೇಳುತ್ತವೆ. ಅವರಿಗೆ ವಿಜಯಾ ಬ್ಯಾಂಕನ್ನು ಉಳಿಸಲು ಆಗಲಿಲ್ಲ. ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡುವಾಗಲೂ ಅವರು ಮೌನ ವಹಿಸಿದ್ದರು. ಈ ಚುನಾವಣೆಯಲ್ಲಿ ಮತ್ತೆ ಅವರನ್ನು ಆಯ್ಕೆ ಮಾಡಿದರೆ ಅದು ನಮ್ಮ ಪಾಲಿಗೆ ಕಪ್ಪುಚುಕ್ಕೆಯಾಗಲಿದೆ. ಇನ್ನು ಮಿಥುನ್ ವಿದ್ಯಾವಂತ, ಸುಸಂಸ್ಕೃತ ಕುಟುಂಬದ ಹಿನ್ನಲೆ ಅವರಿಗೆ ಇದೆ. ಸಮಸ್ಯೆಗಳ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಧ್ವನಿ ಎತ್ತುವ ಶಕ್ತಿಯೂ ಅವರಿಗಿದೆ. ಹಾಗಾಗಿ ನಳಿನ್‌ಗಿಂತ ಮಿಥುನ್ ಸಮರ್ಥ ಅಭ್ಯರ್ಥಿಯಾಗಿದ್ದಾರೆ.

ಮೋದಿ... ಮೋದಿ ಅಲೆಯ ಬಗ್ಗೆ ?

ಎಲ್ಲಿದೆ, ಮೋದಿ ಅಲೆ ?. ನೀವು ಗ್ರಾಮಾಂತರ ಪ್ರದೇಶವನ್ನೊಮ್ಮೆ ಗಮನಿಸಿ. ಅಲ್ಲೂ ಮೋದಿ ಅಲೆ ಇಲ್ಲ. ಬಿಜೆಪಿಯು ಪಕ್ಷ ಅಥವಾ ಚಿಹ್ನೆ ಮುಂದಿಟ್ಟು ಮತ ಯಾಚಿಸುವ ಬದಲು ವ್ಯಕ್ತಿಪೂಜೆಗೆ ನಿಂತಿವೆ. ಈ ಚುನಾವಣೆ ನಡೆಯುವುದು ಸಂಸದರ ಆಯ್ಕೆಗೆ ವಿನಃ ಪ್ರಧಾನಿ ಆಯ್ಕೆಗಲ್ಲ. ನಮ್ಮಲ್ಲಿ ನೇರವಾಗಿ ಪ್ರಧಾನಿಯ ಆಯ್ಕೆಯ ವ್ಯವಸ್ಥೆ ಇಲ್ಲ. ಅದು ಗೊತ್ತಿದ್ದೂ ಬಿಜೆಪಿಗರು ‘ಮೋದಿ’ಯನ್ನು ಮುಂದಿಟ್ಟು ಮತ ಯಾಚಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ರಾಜ್ಯದಲ್ಲಿ ಅಧಿಕಾರ ಹಿಡಿದುದರ ಹೊರತಾಗಿಯೂ ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಬಲ ಹೆಚ್ಚಲಿಲ್ಲವಲ್ಲಾ...?

ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ನಾವು ಸಾಕಷ್ಟು ಪ್ರಯತ್ನ ನಡೆಸುತ್ತಾ ಇದ್ದೇವೆ. ಕೆಲವೊಂದು ಕಾರಣದಿಂದ ಪಕ್ಷದಿಂದ ದೂರ ಸರಿದವರನ್ನು ಮತ್ತೆ ಸೇರ್ಪಡೆಗೊಳಿಸಿ ಸಂಘಟಿಸಲು ಮುಂದಾಗಿದ್ದೇವೆ. ಹಾಗಂತ ಮುಖ್ಯಮಂತ್ರಿ ಕುಮಾರಸ್ವಾಮಿ ದ.ಕ. ಜಿಲ್ಲೆಗೇನೂ ಅನ್ಯಾಯ ಮಾಡಿಲ್ಲ. ಈ ಹಿಂದೆ ನೀಡಿದ ಭರವಸೆಯಂತೆ ಅವರು ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಕಟಿಬದ್ಧರಾಗಿದ್ದಾರೆ.

ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿ ‘ಕೈ’ತೊಳೆದುಕೊಂಡಿವೆ. ಈ ನಿಟ್ಟಿನಲ್ಲಿ ಜೆಡಿಎಸ್ ಕೊಡುಗೆ ‘ಶೂನ್ಯ’. ಯಾಕೆ ಹೀಗಾಯಿತು ?

ಕಾಂಗ್ರೆಸ್ ಓರ್ವ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಆ ಬಗ್ಗೆ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ. ಮತ್ತೆ ಜೆಡಿಎಸ್‌ನ ‘ಶೂನ್ಯ’ ಕೊಡುಗೆಯ ಪ್ರಶ್ನೆಯೂ ಬರುವುದಿಲ್ಲ. ಆಯಾ ಕ್ಷೇತ್ರದ ಪರಿಸ್ಥಿತಿಯನ್ನು ಅವಲೋಕಿಸಿ ಪಕ್ಷದ ಹಿರಿಯ ನಾಯಕರು ಟಿಕೆಟ್ ನೀಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಮುಸ್ಲಿಮರಿಗೆ ಟಿಕೆಟ್ ನೀಡದಿದ್ದರೂ ಕೂಡ ಪಕ್ಷ ಸಂಘಟನೆ ಮತ್ತು ಮೈತ್ರಿ ಸರಕಾರದಲ್ಲಿ ಮುಸ್ಲಿಮರಿಗೆ ಸಾಕಷ್ಟು ಅವಕಾಶ ನೀಡಿದ ಹೆಮ್ಮೆ ನಮಗಿದೆ.

ದ.ಕ. ಕ್ಷೇತ್ರದಲ್ಲಿ ಎಸ್‌ಡಿಪಿಐ ಸ್ಪರ್ಧೆಯ ಬಗ್ಗೆ ಏನು ಹೇಳುವಿರಿ ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೆ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಆ ಬಗ್ಗೆ ನಾನು ಹೆಚ್ಚೇನೂ ಪ್ರತಿಕ್ರಿಯಿಸುವುದಿಲ್ಲ. ಆದರೆ, ದೇಶಾದ್ಯಂತ ಬಿಜೆಪಿಯನ್ನು ಸೋಲಿಸಲು ಎಲ್ಲಾ ಜಾತ್ಯತೀತ ಶಕ್ತಿಗಳು ಒಂದಾಗಿ ಕೆಲಸ ಮಾಡುತ್ತಿರುವಾಗ ಎಸ್‌ಡಿಪಿಐ ಪಕ್ಷವು ದ.ಕ.ದಲ್ಲಿ ಯಾಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿತು ಎಂಬುದು ಗಮನಾರ್ಹವಾಗಿದೆ. ಎಸ್‌ಡಿಪಿಐ ನಾಯಕರಿಗೆ ಬಿಜೆಪಿಯನ್ನು ಸೋಲಿಸುವ ಆಸಕ್ತಿ ಇದ್ದಿದ್ದರೆ ಅವರು ಇಲ್ಲಿ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಬೇಕಿತ್ತು. ನನಗೆ ತಿಳಿದಂತೆ ಎಸ್‌ಡಿಪಿಐಯಲ್ಲಿ ಶಿಸ್ತುಬದ್ಧ ಕಾರ್ಯಕರ್ತರಿದ್ದಾರೆ. ಆದರೆ, ನಾಯಕರಲ್ಲಿ ಆ ಶಿಸ್ತು ಕಾಣುತ್ತಿಲ್ಲ. ಬಂಟ್ವಾಳದಲ್ಲಿ ರಮಾನಾಥ ರೈ, ಸುಳ್ಯದಲ್ಲಿ ಡಾ. ರಘು ಸೋಲಲು ಈ ಎಸ್‌ಡಿಪಿಐಯವರೇ ಕಾರಣರು.

ಕಳೆದ 3 ಅವಧಿಯ ಲೋಕಸಭಾ ಚುನಾವಣೆಯಲ್ಲೂ ಸಿಪಿಎಂ, ಎಸ್‌ಡಿಪಿಐ, ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಪಕ್ಷ (ಜೆಡಿಎಸ್) ಬೆಂಬಲಿಸಿದಿರಿ. ಯಾಕೆ ಈ ಗೊಂದಲ ?.ಇದರಿಂದ ಪಕ್ಷಕ್ಕೆ ಹಾನಿ ಆಗಿಲ್ಲವೇ ?

ಇದರಲ್ಲಿ ಗೊಂದಲವೇನೂ ಇಲ್ಲ. ಪಕ್ಷದ ಹೈಕಮಾಂಡ್‌ನ ತೀರ್ಮಾನದಂತೆ ಬೆಂಬಲಿಸಲಾಗಿದೆ. ಇದರಿಂದ ನಮ್ಮ ಕಾರ್ಯಕರ್ತರಲ್ಲಿ ಸ್ವಲ್ಪ ನಿರಾಶೆಯಾಗಿರುವುದು ಸಹಜ. ಮುಂದೆ ಅದು ಸರಿಯಾಗಲಿದೆ.

Writer - ಸಂದರ್ಶನ : ಹಂಝ ಮಲಾರ್

contributor

Editor - ಸಂದರ್ಶನ : ಹಂಝ ಮಲಾರ್

contributor

Similar News