ದೇಶಾದ್ಯಂತ ಏಕ ತುರ್ತು ಸಹಾಯವಾಣಿ ಸಂಖ್ಯೆ: ‘112’ರ ಜೊತೆ ಕೈಜೋಡಿಸಿದ ೨೦ ರಾಜ್ಯಗಳು
ಹೊಸದಿಲ್ಲಿ,ಎ.19: ನಾಗರಿಕರು ಸಂಕಷ್ಟದ ಸಂದರ್ಭದಲ್ಲಿ ತಕ್ಷಣದ ನೆರವಿಗಾಗಿ ಸಂಪರ್ಕಿಸಬಹುದಾದ ಏಕ ತುರ್ತು ಸಹಾಯವಾಣಿ ಸಂಖ್ಯೆ ‘112’ರ ಅಖಿಲ ಭಾರತ ಜಾಲಕ್ಕೆ ಈವರೆಗೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರ್ಪಡೆಗೊಂಡಿವೆ.
‘112’ ಸಹಾಯವಾಣಿಯು ಪೊಲೀಸ್(100),ಅಗ್ನಿಶಾಮಕ ಸೇವೆ(101) ಮತ್ತು ಮಹಿಳಾ(1090) ಸಹಾಯವಾಣಿಗಳ ಏಕೀಕೃತ ಸೇವೆಯಾಗಿದ್ದು,ಕೇಂದ್ರ ಸರಕಾರದ ನಿರ್ಭಯಾ ನಿಧಿಯಡಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ತುರ್ತು ಸೇವೆಗಳಿಗಾಗಿರುವ ಈ ಏಕೈಕ ಸಂಖ್ಯೆಯು ಅಮೆರಿಕದ ಸಹಾಯವಾಣಿ ‘911’ರ ರೀತಿಯಲ್ಲಿದೆ.
ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್, ಪುದುಚೇರಿ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಜಮ್ಮು-ಕಾಶ್ಮೀರ ಮತ್ತು ನಾಗಾಲ್ಯಾಂಡ್ ಯೋಜನೆಗೆ ಸೇರಿರುವ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿವೆ.
ಎಮರ್ಜನ್ಸಿ ರಿಸ್ಪಾನ್ಸ್ ಸಪೋರ್ಟ್ ಸಿಸ್ಟಮ್(ಇಆರ್‌ಎಸ್‌ಎಸ್)ನ ನಿರ್ವಹಣೆಯಲ್ಲಿರುವ ‘112’ ಅಂತರರಾಷ್ಟ್ರೀಯ ಮಾನ್ಯತೆಯನ್ನು ಹೊಂದಿರುವ ಸಂಖ್ಯೆಯಾಗಿದೆ.
ಈಗಾಗಲೇ ಎಲ್ಲ ಮೊಬೈಲ್ ಫೋನ್‌ಗಳಲ್ಲಿ ಪ್ಯಾನಿಕ್ ಬಟನ್‌ನ್ನು ಅಳವಡಿಸಲಾಗಿದ್ದು,ಇದನ್ನು ಅದುಮಿದರೆ ‘೧೧೨’ಕ್ಕೆ ತುರ್ತು ಕರೆ ರವಾನೆಯಾಗುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾಗುತ್ತಿರುವ ತುರ್ತು ಪ್ರತಿಕ್ರಿಯಾ ಕೇಂದ್ರ(ಇಆರ್‌ಸಿ)ಗಳು ‘112’ಕ್ಕೆ ಧ್ವನಿ ಕರೆ,ರಾಜ್ಯ ಇಆರ್‌ಎಸ್‌ಎಸ್ ಜಾಲತಾಣದಲ್ಲಿ ಇ-ಮೇಲ್ ಮನವಿಗಳು ಅಥವಾ ‘112’ ಮೊಬೈಲ್ ಆ್ಯಪ್ ಮೂಲಕ ತುರ್ತು ಸಂಕೇತಗಳನನ್ನು ಸ್ವೀಕರಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದರು.
ತುರ್ತು ಸೇವೆಗಳನ್ನು ಪಡೆದುಕೊಳ್ಳಲು ವ್ಯಕ್ತಿ ‘112’ಕ್ಕೆ ಡಯಲ್ ಮಾಡಬಹುದು ಅಥವಾ ಇಆರ್‌ಎಸ್‌ಗೆ ಅಪಾಯದ ಸಂಕೇತವನ್ನು ರವಾನಿಸಲು ಸ್ಮಾರ್ಟ್‌ಫೋನ್‌ನ ಪವರ್ ಬಟನ್ ಅನ್ನು ಮೂರು ಬಾರಿ ತ್ವರಿತವಾಗಿ ಅದುಮಬಹುದು. ಸಾದಾ ಫೋನ್‌ಗಳಲ್ಲಿ 5 ಅಥವಾ 9 ಅಂಕಿಯನ್ನು ದೀರ್ಘಕಾಲ ಒತ್ತಿದರೆ ತುರ್ತು ಕರೆಯು ಕ್ರಿಯಾಶೀಲಗೊಳ್ಳುತ್ತದೆ ಎಂದು ಅವರು ಹೇಳಿದರು.
ಈ ಯೋಜನೆಗಾಗಿ 321.69 ಕೋ.ರೂ.ಗಳನ್ನು ನಿಗದಿಗೊಳಿಸಲಾಗಿದ್ದು,ಈಗಾಗಲೇ 278.66 ಕೋ.ರೂ.ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆಗೊಳಿಸಲಾಗಿದೆ.
ಜನರು ಗೂಗಲ್ ಪ್ಲೇ ಮತ್ತು ಆ್ಯಪಲ್ ಸ್ಟೋರ್‌ಗಳಲ್ಲಿ ಲಭ್ಯವಿರುವ ‘112’ಇಂಡಿಯಾ ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.