​ಕರ್ಕರೆ ವಿರುದ್ಧದ ಹೇಳಿಕೆ ಅಸಮರ್ಥನೀಯ: ರೋಹಿಣಿ ಸಾಲ್ಯಾನ್

Update: 2019-04-20 05:32 GMT

ಮುಂಬೈ, ಎ.20: ಹುತಾತ್ಮ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ನೀಡಿರುವ ಹೇಳಿಕೆ ಅಸಮರ್ಥನೀಯ; ಹೇಮಂತ್ ಕರ್ಕರೆ ತಮ್ಮ ಕರ್ತವ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಅಪೂರ್ವ ಅಧಿಕಾರಿ ಎಂದು ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಶೇಷ ಅಭಿಯೋಜಕಿಯಾಗಿ ಹಿಂದೆ ಕಾರ್ಯನಿರ್ವಹಿಸಿದ್ದ ರೋಹಿಣಿ ಸಾಲ್ಯಾನ್ ಹೇಳಿದ್ದಾರೆ.

ಅಂತೆಯೇ ಜೈಲಿನಲ್ಲಿ ಪ್ರಜ್ಞಾಗೆ ಕಿರುಕುಳ ನೀಡಲಾಗಿದೆ ಎಂಬ ಅಂಶ ಸುಪ್ರೀಂಕೋರ್ಟ್ ಗಮನಕ್ಕೆ ಕೂಡಾ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಪಾಕಿಸ್ತಾನಿ ಉಗ್ರರಾದ ಅಜ್ಮಲ್ ಕಸಬ್ ಹಾಗೂ ಇಸ್ಮಾಯಿಲ್ ದೇರಾ ಖಾನ್ ಗುಂಡಿಗೆ 2008ರ ನವೆಂಬರ್ 26ರಂದು ಬಲಿಯಾಗುವ ಕೆಲವೇ ಗಂಟೆಗಳ ಮುನ್ನ ಕರ್ಕರೆಯವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದೆ. ಮಾಲೆಗಾಂವ್ ಪ್ರಕರಣದ ಬಗ್ಗೆಯೂ ಸ್ವಲ್ಪ ಹೊತ್ತು ಚರ್ಚೆ ನಡೆಸಿದ್ದೆವು. ಮರುದಿನ ಮತ್ತೆ ಭೇಟಿಯಾಗೋಣ ಎಂದು ಕರ್ಕರೆ ಹೇಳಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.

1983ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಕರ್ಕರೆ, ಮಾಲೆಗಾಂವ್ ಸ್ಫೋಟ ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿದ್ದರು ಹಾಗೂ ಪ್ರಜ್ಞಾ ಸಿಂಗ್, ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್‌ಪ್ರಸಾದ್ ಪುರೋಹಿತ್, ಶಂಕರಾಚಾರ್ಯ ಸ್ವಾಮಿ ದಯಾನಂದ ಪಾಂಡೆ ಮತ್ತು ಅಭಿನವ ಭಾರತ ಸದಸ್ಯರನ್ನು ಬಂಧಿಸಿದ್ದರು.

ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಜ್ಯೂಲಿಯೊ ರೆಬೆರೊ ಕೂಡಾ ಹೇಮಂತ್ ಜತೆಗಿನ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ. "ಅವರಿಗೆ ಕಾಣದ ಕೈಗಳಿಂದ ಭಾರಿ ಒತ್ತಡ ಇತ್ತು. ನೀವು ಒಳ್ಳೆಯ ಹಿಂದೂ ಮತ್ತು ನಿಮ್ಮ ಪಾತ್ರವನ್ನು ನೀವು ನಿರ್ವಹಿಸಿ; ಸಾಧ್ವಿ ಪಾತ್ರವನ್ನು ಆಕೆ ನಿರ್ವಹಿಸುತ್ತಾಳೆ; ಕರ್ತವ್ಯವನ್ನು ನಿಭಾಯಿಸುವ ಪಾತ್ರವನ್ನು ನೀವು ನಿರ್ವಹಿಸುತ್ತಿದ್ದೀರಿ ಎಂದು ಹೇಳಿದ್ದೆ" ಎಂದು ವಿವರಿಸಿದ್ದಾರೆ.

ಠಾಕೂರ್ ಬಂಧನದ ಬಳಿಕ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿಯವರು ಪ್ರಧಾನಿ ಮನಮೋಹನ್ ಸಿಂಗ್ ಜೊತೆ ಮಾತನಾಡಿ, ಠಾಕೂರ್‌ಗೆ ಚಿತ್ರಹಿಂಸೆ ನೀಡದಂತೆ ಸೂಚಿಸಿದ್ದರು. ಆದರೆ ಸಿಂಗ್ ಎಟಿಎಸ್ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಈ ಅಂಶಗಳು ಕರ್ಕರೆ ಕಳವಳಕ್ಕೆ ಕಾರಣವಾಗಿದ್ದವು. ಅಡ್ವಾಣಿಯವರನ್ನು ನಾನು ಚೆನ್ನಾಗಿ ಬಲ್ಲೆ; ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದೆ. ಈ ಬಗ್ಗೆ ಯಾವುದೇ ಭೀತಿ ಅನಗತ್ಯ ಎಂದು ಸ್ಪಷ್ಟಪಡಿಸಿದ್ದೆ" ಎಂದು ರೆಬೊರೊ ಬಣ್ಣಿಸಿದ್ದಾರೆ.

ಕರ್ಕರೆ ಕರ್ತವ್ಯದ ಬಗ್ಗೆ ಇದುವರೆಗೆ ಯಾರೂ ಬೆರಳು ತೋರಿಸಿಲ್ಲ. ಅಂಥ ಗೌರವಾನ್ವಿತ ಅಧಿಕಾರಿ ಅವರು ಎಂದು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News