ಸಂಶೋಧನೆಗೆ ಸರಕಾರದ ಅಡ್ಡಗಾಲು

Update: 2019-04-27 18:31 GMT

ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸುಗಳಿಸಬೇಕಾದರೆ, ಲೋಕೋತ್ತರ ಸಾಧನೆಗಳನ್ನು ಮಾಡಬೇಕಾದರೆ ಬೋಧಕ ಸಿಬ್ಬಂದಿ ಮತ್ತು ಸಂಶೋಧಕರಿಗೆ ಅಕಡಮಿಕ್ ಸ್ವಾತಂತ್ರ ಅತ್ಯಗತ್ಯ. ಸಂಶೋಧನೆಯ ಮೂಲ ಗುರಿ ಸತ್ಯಾನ್ವೇಷಣೆ. ಸತ್ಯಾನ್ವೇಷಣೆಯ ಹಾದಿಯಲ್ಲಿ ನಿರ್ಬಂಧಗಳು, ತೊಡಕುಗಳು ಇರಬಾರದು. ಸರಕಾರದಿಂದ ವಿನಾಕಾರಣ ಹಸ್ತಕ್ಷೇಪಗಳು ನಡೆದಲ್ಲಿ ಹಾಗೂ ಅಕಡಮಿಕ್ ಸ್ವಾತಂತ್ರಕ್ಕೆ ಅಡಚಣೆಗಳುಂಟಾದಲ್ಲಿ ಸಂಶೋಧಕರು ಬೆಳೆಯಲಾರರು, ಶೈಕ್ಷಣಿಕ ವಲಯದಲ್ಲೂ ಪ್ರಗತಿಯಾಗದು.


ಕಲೆ, ಸಾಹಿತ್ಯ,ವಿಜ್ಞಾನ-ತಂತ್ರಜ್ಞಾನ, ಸಂಶೋಧನೆ ಇಂಥ ವಿಷಯಗಳಲ್ಲಿ ಸರಕಾರದ ಹಸ್ತಕ್ಷೇಪ ಸರ್ವಥಾ ಅನಪೇಕ್ಷಣೀಯ. ಈ ಕ್ಷೇತ್ರಗಳಲ್ಲಿ ಸರಕಾರದ ಪಾತ್ರ ಆರ್ಥಿಕ ನೆರವಿನ ಬಾಬುಗಳಿಗೆ ಮಾತ್ರ ಸೀಮಿತವಾಗಿದ್ದು ಅಕಾಡಮಿಕ್ ವಿಷಯಗಳಲ್ಲಿ ವಿದ್ವಜ್ಜನರಿಗೆ ಮತ್ತು ಸಂಸ್ಥೆಗಳಿಗೆ ಸಂಪೂರ್ಣ ಸ್ವಾತಂತ್ರ-ಸ್ವಾಯತ್ತತೆಗಳನ್ನು ನೀಡಬೇಕು. ವ್ಯವಸ್ಥೆ ಇದರಲ್ಲಿ ಮೂಗು ತೂರಿಸುವ ಕೆಲಸಮಾಡಬಾರದು. ಆದರೆ ವಿದ್ವಾಂಸರಿಗೆ ಕಿರಿಕಿರಿಯುಂಟುಮಾಡುವ ರೀತಿಯಲ್ಲಿ ವ್ಯವಸ್ಥೆ ಒಂದಲ್ಲ ಒಂದು ಬಗೆಯಲ್ಲಿ ಮೂಗುತೂರಿಸುತ್ತಲೇ ಇರುತ್ತದೆ. ಕೇಂದ್ರದಲ್ಲಿ ಬಿ.ಜೆ.ಪಿ. ಸರಕಾರ ಬಂದ ಮೇಲೆ ಇದು ತುಸು ಹೆಚ್ಚಾಗಿಯೇ ಇದೆ. ಎಲ್ಲ ಕ್ಷೇತ್ರಗಳಲ್ಲೂ ಸಂಘದ ಕಾರ್ಯಸೂಚಿಯನ್ನೇ ಅನುಷ್ಠಾನಕ್ಕೆ ತರುವ ದೃಢ ಸಂಕಲ್ಪ ಮಾಡಿರುವ ಮೋದಿ ಸರಕಾರ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಉತ್ಸಾಹದಿಂದಲೇ ಕಾರ್ಯಪ್ರವೃತ್ತವಾಗಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇತ್ತೀಚೆಗೆ ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ ನೀಡಿರುವ ಆದೇಶ.

‘‘ಅಸಂಗತ ವಿಷಯಗಳಲ್ಲಿ ಸಂಶೋಧನೆ ನಡೆಸುವುದಕ್ಕೆ ಉತ್ತೇಜನ ನೀಡಕೂಡದೆಂದು’’ ತಿಳಿಸಿರುವ ಸಚಿವಾಲಯ ‘‘ರಾಷ್ಟ್ರೀಯ ಆದ್ಯತೆಯ ವಿಷಯಗಳ ಮೇಲೆ ಮಾತ್ರ ಪಿಎಚ್.ಡಿ. ನಡೆಸಲು ಅನುಮತಿ ನೀಡತಕ್ಕದ್ದೆಂದು’’ ಪರ್ಮಾನು ಹೊರಡಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ದೃಷ್ಟಿಯಲ್ಲಿ ಯಾವುದು ಅಸಂಗತ, ಯಾವುದು ರಾಷ್ಟ್ರೀಯ ಆದ್ಯತೆಯದೋ ತಿಳಿಯದಾಗಿದೆ. ಈ ವಿಷಯದಲ್ಲಿ ವಿಶ್ವವಿದ್ಯಾನಿಲಯಗಳೂ ಸ್ಪಷ್ಟೀಕರಣ ಕೇಳಿದಂತಿಲ್ಲ. ಪ್ರತಿಯಾಗಿ ಈ ಆದೇಶವನ್ನು ಜಾರಿಗೆ ತರುವ ಉತ್ಸಾಹ ಮೆರೆದಿವೆ ಎಂಬುದಕ್ಕೆ ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಸಂಶಧನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ತನ್ನ ಬೋಧಕ ಸಿಬ್ಬಂದಿಗೆ ತಾಕೀತು ಮಾಡಿದೆ. ಜೊತೆಗೆ ಸಂಶೋಧನೆ ನಡೆಸಬಹುದಾದ ರಾಷ್ಟ್ರೀಯ ಆದ್ಯತಾ ವಿಷಯಗಳ ಒಂದು ಪಟ್ಟಿಯನ್ನು ಸಿದ್ಧಪಡಿಸುವಂತೆಯೂ ಸೂಚಿಸಿದೆ. ಸಂಶೋಧನೆ/ ಸಂಪ್ರಬಂಧಗಳ ಮಂಡನೆಯಲ್ಲಿ ಸರಕಾರದ ಈ ಹಸ್ತಕ್ಷೇಪದ ವಿರುದ್ಧ ಪ್ರತಿಭಟಿಸಿ ಕೇರಳ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮೀನಾ ತಿ.ಪಿಳ್ಳೆ ಎಂಬವರು ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ಅಧ್ಯಯನ ಮಂಡಳಿಯ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆಂದು ವರದಿಯಾಗಿದೆ.

ಕೇಂದ್ರ ಸರಕಾರದ ಈ ಹಸ್ತಕ್ಷೇಪ ಹಲವಾರು ಪ್ರಶ್ನೆೆಗಳಿಗೆ ಆಸ್ಪದ ಮಾಡಿಕೊಡುತ್ತದೆ. ಮೊದಲನೆಯದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಏಕೆ ಇಂಥದೊಂದು ಆದೇಶ ಹೊರಡಿಸಿತು ಎಂಬುದು. ಉದ್ದೇಶವಾದರೂ ಏನು? ಇದರ ಹಿಂದೆ ಸಚಿವಾಲಯದ ಗುಪ್ತ ಕಾರ್ಯಸೂಚಿ ಏನಾದರೂ ಇರಬಹುದೇ? ರಾಷ್ಟ್ರೀಯ ಆದ್ಯತೆ ಎಂಬುದರ ಅರ್ಥವ್ಯಾಪ್ತಿ ಏನಿರಬಹುದು? ಡಾಕ್ಟರ್ ಪದವಿಗೆ ಸಂಪ್ರಬಂಧ ಮಂಡಿಸುವವರು ರಾಷ್ಟ್ರೀಯ ಆದ್ಯತೆ ವಿಷಯಗಳನ್ನು ಮಾತ್ರ ಆರಿಸಿಕೊಳ್ಳಬೇಕೇ? ಯಾವುದು ರಾಷ್ಟ್ರೀಯ ಆದ್ಯತೆಯ ವಿಷಯ ಎಂದು ತೀರ್ಮಾನಿಸುವವರು ಯಾರು? ರಾಷ್ಟ್ರೀಯ ಆದ್ಯತೆಗಳನ್ನು ಅಳೆಯಲು ಮಾನದಂಡಗಳೇನು? ಇದು ಅಕಡಮಿಕ್ ಅಥವಾ ಶೈಕ್ಷಣಿಕ ಸ್ವಾತಂತ್ರವನ್ನು ಮೊಟಕುಗೊಳಿಸುವ ತಿರೋಗಾಮಿ ಕ್ರಮವಲ್ಲವೇ? ಇದರಿಂದ ತಮ್ಮ ಇಚ್ಛಾನುಸಾರ ವಿಷಯ ಆಯ್ಕೆಮಾಡಿಕೊಳ್ಳುವ ಸಂಶೋಧನಾ ವಿದ್ಯಾರ್ಥಿಗಳ ಹಕ್ಕನ್ನು ಕಸಿದುಕೊಂಡಂತಾಗುವುದಿಲ್ಲವೇ? ‘‘ರಾಷ್ಟ್ರೀಯ ಆದ್ಯತೆಯ ವಿಷಯಗಳು’’, ‘‘ಅಸಂಗತ ಕ್ಷೇತ್ರಗಳಲ್ಲಿ ಸಂಶೋಧನೆ’’ ಈ ಎರಡು ಪದಪುಂಜಗಳನ್ನು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತನ್ನ ಆದೇಶದಲ್ಲಿ ಪ್ರಧಾನವಾಗಿ ಹೇಳಿದೆ. ಅದರ ದೃಷ್ಟಿಯಲ್ಲಿ ಇದರ ಅರ್ಥವ್ಯಾಖ್ಯಾನಗಳೇನೋ ತಿಳಿಯದು.

ಈ ಪದಪುಂಜಗಳ ಅರ್ಥ ಮತ್ತು ಅರ್ಥವ್ಯಾಪ್ತಿ ಚರ್ಚಾರ್ಹವಾದುದು. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಕೆಲವು ಮಂದಿ ವಿದ್ವಾಂಸರುಗಳ ದೃಷ್ಟಿಯಲ್ಲಿ ರಾಷ್ಟ್ರೀಯ ಆದ್ಯತೆಯ ವಿಷಯಗಳು ಎನ್ನಿಸಿದವು ಇತರರ ದೃಷ್ಟಿಯಲ್ಲಿ ಹಾಗೆ ತೋರದೇ ಹೋಗಬಹುದು. ಕೆಲವರಿಗೆ ತೀರಾ ಅಸಂಗತ ಎನಿಸಿದರೂ ಇನ್ನು ಕೆಲವರಿಗೆ ತುಂಬ ಸುಸಂಗತವಾಗಿ ತೋರಬಹುದು. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ನಂತರ ಶಿಕ್ಷಣ ಮತ್ತು ಪಾಂಡಿತ್ಯ ವಲಯಗಳ ಮೇಲೆ ಅದರ ವಕ್ರ ದೃಷ್ಟಿ ಬಿದ್ದಿರುವುದು ಖಚಿತ. 2016ರಲ್ಲಿ ಅದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮೇಲೆ ಕೈಗೊಂಡ ತೀವ್ರಕ್ರಮಗಳು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟವು. ಮಾನವ ಹಕ್ಕುಗಳು, ಅಂಬೇಡ್ಕರ್ ಸಿದ್ಧಾಂತ, ದಲಿತರ ಹಕ್ಕುಗಳು, ಪೆರಿಯಾರ್ ಆಲೋಚನೆಗಳು, ಹಿದುಳಿದ ವರ್ಗಗಳು ಇಂಥ ವಿಷಯಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ವಾಂಸರುಗಳ ಬಗ್ಗೆ ಸರಕಾರ ಅಸಹನೆ ಹೊಂದಿದೆ ಎಂಬುದು ಇಂಥ ಸಂಶಯಗಳಲ್ಲೊಂದು.

ಸರಕಾರದ ಈ ಆದೇಶ ಭಿನ್ನಮತೀಯರ ಮೇಲೆ ನಡೆಸಿರುವ ಗದಾಪ್ರಹಾರ ಎಂದು ಕೆಲವು ಮಂದಿ ಸಂಶೋಧಕರಿಗೆ ಅನ್ನಿಸಿದ್ದಲ್ಲಿ ಅದು ಅಸಹಜವೇನಲ್ಲ. ಸಮಾನತೆ, ಸ್ವಾತಂತ್ರ, ಹಕ್ಕುಗಳು, ದಲಿತರು ಹಾಗೂ ಸ್ತ್ರೀಯರ ಶೋಷಣೆ ಇಂಥ ವಿಷಯಗಳು ಇಂದಿನ ಆಧುನಿಕ ಪ್ರಪಂಚದಲ್ಲಿ ಆದರ್ಶಪ್ರಾಯವಾದುವು. ಬೇಗ ಜನತೆಯ ಗಮನ ಸೆಳೆಯುವಷ್ಟು ಮಹತ್ವಪೂರ್ಣವಾದ ವಿಷಯಗಳು ಇವು. ಸಂಶೋಧನಾ ವಿದ್ಯಾರ್ಥಿಗಳು ಇಂಥ ಪ್ರಚಲಿತ ವಿಷಯಗಳಿಂದ ಆಕರ್ಷಿತರಾಗುವುದು ನ್ಯಾಯೋಚಿತವಾದುದೇ. ಜನತೆಯ ಕ್ಷೇಮಾಭಿವೃದ್ಧಿಯಲ್ಲಿ ಆಸಕ್ತವಾಗಿರುವ ಯಾವುದೇ ಸರಕಾರ ಈ ವಿಷಯಗಳಲ್ಲಿ ಸಂಶೋಧನೆ ನಡೆಸುವುದರಲ್ಲಿ ಆಸಕ್ತಿ ತಾಳಬೇಕು ಹಾಗೂ ಅದನ್ನು ಪ್ರೋತ್ಸಾಹಿಸಬೇಕು. ಆದರೆ ನಮ್ಮ ಸರಕಾರದ ಕ್ರಮ ಇಂಥ ಆಶೋತ್ತರಗಳಿಗೆ ವ್ಯತಿರಿಕ್ತವಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಈ ಆದೇಶದ ವಿರುದ್ಧ ಪ್ರತಿಭಟಿಸಿ ಕೇರಳ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ರಾಜೀನಾಮೆ ನೀಡಿರುವುದಕ್ಕೆ ರಾಜಕೀಯ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಪ್ರೊಫೆಸರ್ ಅವರ ರಾಜೀನಾಮೆಯ ಹಿಂದೆ ರಾಜಕೀಯ ಹುನ್ನಾರವಿದೆ ಎಂದು ಆರೋಪಿಸುವುದಾದಲ್ಲಿ ಮಾನವ ಸಂಪನ್ಮೂಲ ಸಚಿವಾಲಯದ ಆದೇಶವೂ ರಾಜಕೀಯ ಉದ್ದೇಶದಿಂದ ಪ್ರೇರಿತವಾದುದೆಂದು ಹೇಳಬಹುದು. ಏಕೆಂದರೆ ಕೇಂದ್ರದಲ್ಲಿನ ಬಿಜೆಪಿ ಸರಕಾರ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಗುಪ್ತ ಕಾರ್ಯಸೂಚಿ ಹೊಂದಿದೆ ಎಂಬ ಗಾಢವಾದ ಗುಮಾನಿ ಶೈಕ್ಷಣಿಕ ವಲಯದಲ್ಲಿದೆ. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಈ ಆದೇಶದ ಮೂಲ ಉದ್ದೇಶ ಶೈಕ್ಷಣಿಕ ಸ್ವಾತಂತ್ರವನ್ನು ಹತ್ತಿಕ್ಕುವುದೇ ಆಗಿದೆ ಎನ್ನುವ ಅನುಮಾನವೂ ಶೈಕ್ಷಣಿಕ ವಲಯದಲ್ಲಿದೆ. ಮಾನವ ಸಂಪನ್ಮೂಲ ಸಚಿವಾಲಯ ಆದೇಶದಲ್ಲಿ ತನ್ನ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿದ್ದರೆ ಇಂಥ ಅನುಮಾನಗಳಿಗೆ ಆಸ್ಪದವಿರುತ್ತಿರಲಿಲ್ಲ.

ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸುಗಳಿಸಬೇಕಾದರೆ, ಲೋಕೋತ್ತರ ಸಾಧನೆಗಳನ್ನು ಮಾಡಬೇಕಾದರೆ ಬೋಧಕ ಸಿಬ್ಬಂದಿ ಮತ್ತು ಸಂಶೋಧಕರಿಗೆ ಅಕಡಮಿಕ್ ಸ್ವಾತಂತ್ರ ಅತ್ಯಗತ್ಯ. ಸಂಶೋಧನೆಯ ಮೂಲ ಗುರಿ ಸತ್ಯಾನ್ವೇಷಣೆ. ಸತ್ಯಾನ್ವೇಷಣೆಯ ಹಾದಿಯಲ್ಲಿ ನಿರ್ಬಂಧಗಳು, ತೊಡಕುಗಳು ಇರಬಾರದು. ಸರಕಾರದಿಂದ ವಿನಾಕಾರಣ ಹಸ್ತಕ್ಷೇಪಗಳು ನಡೆದಲ್ಲಿ ಹಾಗೂ ಅಕಡಮಿಕ್ ಸ್ವಾತಂತ್ರಕ್ಕೆ ಅಡಚಣೆಗಳುಂಟಾದಲ್ಲಿ ಸಂಶೋಧಕರು ಬೆಳೆಯಲಾರರು, ಶೈಕ್ಷಣಿಕ ವಲಯದಲ್ಲೂ ಪ್ರಗತಿಯಾಗದು.

ಸಂಶೋಧನಾರ್ಥಿಗಳಿಗೆ ಅವರ ಇಚ್ಛೆಯನುಸಾರ ವಿಷಯಗಳನ್ನು ಆಯ್ಕ್ಕೆ ಮಾಡಿಕೊಳ್ಳುವ ಸ್ವಾತಂತ್ರವಿರಬೇಕು. ಅದು ಅವರ ಪ್ರಮುಖ ಹಕ್ಕು. ತಮಗೆ ಆಸಕ್ತಿ ಇಲ್ಲದ ವಿಷಯದಲ್ಲಿ ಸಂಶೋಧನೆ ಮಾಡಿ ಎಂದು ಒತ್ತಾಯಪಡಿಸುವುದು ಅನುಚಿತ ಕ್ರಮವಾಗುತ್ತದೆ. ಸಂಶೋಧಕರಿಗೆ ತಮಗೆ ಬೇಕಾದ ವಿಷಯವನ್ನು ಆರಿಸಿಕೊಳ್ಳುವುದರ ಹಕ್ಕಿನ ಜೊತೆಗೆ ಕೆಲವು ಹೊಣೆಗಾರಿಕೆಗಳೂ ಇರುತ್ತವೆ ಎನ್ನುವುದನ್ನು ಮರೆಯಲಾಗದು. ಅವರು ನಡೆಸುವ ಸಂಶೋಧನೆಗೆ ಘನವಾದ ಉದ್ದೇಶವಿರಬೇಕು ಹಾಗೂ ಅದು ಸಮಾಜಕ್ಕೆ ಉಪಯುಕ್ತವಾಗಿರಬೇಕು.

ಪ್ರೊ. ಮೀನಾ ಟಿ.ಪಿಳ್ಳೆಯವರು ಸರಕಾರದ ಈ ಆದೇಶದ ವಿರುದ್ಧ ಪ್ರತಿಭಟಿಸಿ ರಾಜೀನಾಮೆನೀಡುವ ಮೂಲಕ ವಿಷಯದ ಗಹನತೆಯನ್ನು ಶೈಕ್ಷಣಿಕ ವಲಯದ ಗಮನಕ್ಕೆ ತಂದಿದ್ದಾರೆ. ಶೈಕ್ಷಣಿಕ ವಲಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.ಶಿಕ್ಷಣ ತಜ್ಞರು ಮತ್ತು ಸಂಶೋಧಕರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಕಡಮಿಕ್ ಸ್ವಾತಂತ್ಯವನ್ನು ಮೊಟಕುಗೊಳಿಸುವುದು, ಸಂಶೋಧನಾರ್ಥಿಗಳು ತಮಗೆ ಆಸಕ್ತಿಯುಳ್ಳ ವಿಷಯವನ್ನು ಆಯ್ಕೆಮಾಡಿಕೊಳ್ಳಲು ಆಗದಂತೆ ಪ್ರತಿಬಂಧಕಗಳನ್ನು ಹೇರುವುದು ಇಂಥ ಕ್ರಮಗಳ ಬದಲು ಸರಕಾರ ಮತ್ತು ವಿಶ್ವವಿದ್ಯಾನಿಲಯಗಳು ದೇಶದಲ್ಲಿ ಶೈಕ್ಷಣಿಕ ಸುಧಾರಣೆಗೆ ಮತ್ತು ಸಂಶೋಧನೆಯ ಗುಣಮಟ್ಟ ಹೆಚ್ಚಿಸುವುದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವ ಕ್ರಮಗಳತ್ತ ಗಮನಹರಿಸಬೇಕು. ಡಾಕ್ಟರ್ ಪದವಿ ಸಂಶೋಧನೆ ವಿಷಯಗಳ ಆಯ್ಕೆಯಲ್ಲಿ ಈಗಾಗಲೇ ಹಲವಾರು ತೊಡಕುಗಳಿವೆ. ಸಂಶೋಧನಾರ್ಥಿ ಆಸಕ್ತಿಯಿಂದ ಆಯ್ಕೆಮಾಡಿಕೊಂಡ ವಿಷಯದಲ್ಲಿ ಮಾರ್ಗದರ್ಶನ ಮಾಡಲು ಯೋಗ್ಯರಾದವರ ಲಭ್ಯತೆ, ಆಕರ ಗ್ರಂಥಾಲಯಗಳ ಕೊರತೆ,ಕ್ಷೇತ್ರಕಾರ್ಯಗಳಿಗೆ ಹಣಕಾಸಿನ ಮುಗ್ಗಟ್ಟು ಇಂಥ ಹಲವಾರು ಸಮಸ್ಯೆಗಳಿವೆ. ಇತ್ತೀಚೆಗಷ್ಟೆ ಸಂಶೋಧನಾ ವಿದಾರ್ಥಿಗಳು ವಿಶ್ವವಿದ್ಯಾನಿಲಯಗಳು ತಮಗೆ ಕೊಡುತ್ತಿರುವ ವಿದ್ಯಾರ್ಥಿ ವೇತನ ಸಾಲದೆಂದು ಮುಷ್ಕರ ಹೂಡಿದ್ದನ್ನು ನೆನಪಿಸಿಕೊಳ್ಳಬಹುದು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇಂಥ ಸಮಸ್ಯೆಗಳ ನಿವಾರಣೆಗೆ ಆದ್ಯಗಮನ ಕೊಡಬೇಕು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News