ವಿಶ್ವಾಸದ ರಹದಾರಿಗಳು
ಒಂದು ಸೀಮಿತವಾದ ಚುನಾವಣಾ ಸನ್ನಿವೇಶದಲ್ಲಿ ಮೈತ್ರಿ ರಾಜಕಾರಣವು ಬೇರೆಲ್ಲಾ ವಿಷಯಗಳ ಜೊತೆಗೆ ಎರಡು ಸ್ಪಷ್ಟವಾದ ಪರಿಸ್ಥಿತಿಗಳನ್ನು ಆಧರಿಸಿರುತ್ತದೆ. ಮೊದಲನೆಯದು, ಭಾರತೀಯ ಜನತಾ ಪಕ್ಷವು ಎರಡನೇ ಬಾರಿಗೆ ಅತಿಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ಮೂಲಕ ಭಾರತದ ಚುನಾವಣಾ ರಾಜಕೀಯದ ಸನ್ನಿವೇಶದಲ್ಲಿ ಮತ್ತೆ ಮರುಕಳಿಸುತ್ತಿರುವ ಏಕ ಪಕ್ಷ ಪ್ರಾಧಾನ್ಯತೆಯ ವ್ಯವಸ್ಥೆ. ಭೌಗೋಳಿಕ ವಿಸ್ತರಣೆಯ ಪ್ರಶ್ನೆಯನ್ನು ಹೊರತುಪಡಿಸಿ ಕೇವಲ ಅಂಕಿಸಂಖ್ಯೆಗಳನ್ನು ನೋಡಿದರೂ ಸಹ ಏಕಪಕ್ಷ ವ್ಯವಸ್ಥೆಯು ಮರಳುತ್ತಿರುವ ಎಲ್ಲಾ ಸೂಚನೆಗಳೂ ಕಂಡುಬರುತ್ತಿವೆ. ಉತ್ತರ ಭಾರತದ ರಾಜ್ಯಗಳಲ್ಲಿ ಬಿಜೆಪಿಗೆ ಸಿಕ್ಕಿರುವ ಬೆಂಬಲಗಳೂ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಅದು ಕಂಡುಕೊಂಡಿರುವ ವಿಸ್ತರಣೆಗಳು ಇದಕ್ಕೆ ಒಂದು ಕಾರಣ. ಎರಡನೆಯದಾಗಿ ಸಣ್ಣಪುಟ್ಟ ಪಕ್ಷಗಳು ತಮ್ಮ ಸ್ವಂತ ಶಕ್ತಿಯನ್ನು ಆಧರಿಸಿಯೇ ಬಹುಮತವನ್ನು ಗಳಿಸಲಾಗದಿರುವ ಸಂದರ್ಭದಲ್ಲಿ ಮೈತ್ರಿ ರಾಜಕಾರಣದ ಅಗತ್ಯವು ಬೀಳುತ್ತದೆ.
ಚುನಾವಣಾ ಸಾಮರ್ಥ್ಯದ ದೃಷ್ಟಿಯಿಂದ ನೋಡಿದರೆ ಈ ವಿರೋಧ ಪಕ್ಷಗಳು ಬಹಳಷ್ಟು ನಿತ್ರಾಣಗೊಂಡಿವೆ. ಆಯಾ ಪಕ್ಷಗಳ ಆಸಕ್ತಿ ಮತ್ತು ಸಾಮಾಜಿಕ ತಳಹದಿಗಳ ದೃಷ್ಟಿಯಿಂದ ನೋಡಿದರೆ ಅವು ತುಂಬಾ ಭಿನ್ನಭಿನ್ನವಾಗಿವೆ. ಹೀಗಾಗಿ ಸೌಹಾರ್ದ ಮತ್ತು ಪರಸ್ಪರರ ಬಗೆಗಿನ ವಿಶ್ವಾಸವನ್ನು ಆಧರಿಸಿದ ಮೈತ್ರಿಗಳು ಕೇವಲ ನಾಯಕರ ಮಟ್ಟದಲ್ಲಿ ಮಾತ್ರವಲ್ಲದೆ ಬೆಂಬಲಿಗರ ಮಟ್ಟದಲ್ಲೂ ಇರುವ ಅಗತ್ಯವಿದೆ. ಈ ಬಗೆಯ ವಿಶ್ವಾಸವು ಅಗತ್ಯವಿರುವುದು ಕೇವಲ ಆಯಾ ಪಕ್ಷಗಳ ನಿರ್ದಿಷ್ಟ ರಾಜಕೀಯ ಉದ್ದೇಶಗಳಿಗಾಗಿ ಮಾತ್ರವಲ್ಲ. ಅದಕ್ಕಿಂತ ಮುಖ್ಯವಾಗಿ ದುರ್ಬಲ ಸಮುದಾಯಗಳ ದೃಷ್ಟಿಯಿಂದಲೂ ಇದು ಅತ್ಯಂತ ಮುಖ್ಯವಾಗುತ್ತದೆ. ದುರ್ಬಲ ಸಮುದಾಯಗಳು ವಿರೋಧ ಪಕ್ಷಗಳ ಬಗ್ಗೆ ಹೆಚ್ಚಿನ ಒಲವನ್ನು ತೋರಿಸುತ್ತಾ, ಎನ್‌ಡಿಎ ಕೂಟದ ಬಗ್ಗೆ ಮೂಡಿಸಿಕೊಂಡಿರುವ ಅನುಮಾನಗಳನ್ನು ಆಳುವಪಕ್ಷದ ಉನ್ನತ ನಾಯಕರುಗಳ ಹೇಳಿಕೆಗಳು ಮತ್ತಷ್ಟು ಗಟ್ಟಿಗೊಳಿಸುವಂತಿವೆ. ಅಂಥ ದುರ್ಬಲ ಸಮುದಾಯಗಳಲ್ಲಿ ಮೈತ್ರಿಕೂಟಗಳ ಬಗ್ಗೆ ಮತ್ತು ಅದರ ಘಟಕ ಪಕ್ಷಗಳ ಬಗ್ಗೆ ಹೆಚ್ಚು ವಿಶ್ವಾಸವನ್ನು ಮೂಡಿಸಲು ಸಾಧ್ಯವಾಗುವುದು ಅವುಗಳ ನಡುವೆ ಇರಬಹುದಾದ ವಿಶ್ವಾಸದ ಮೆರುಗು ಮತ್ತು ಗೆಲ್ಲುವ ಸಾಧ್ಯತೆಗಳೇ. ಆದರೆ ಒಂದು ಸಾಮೂಹಿಕ ಉದ್ದೇಶಕ್ಕಾಗಿ ಮತಗಳು ಪಾರದರ್ಶಕವಾಗಿರುವ ಬಗ್ಗೆ ಮತ್ತು ಇತರರಿಗೆ ವರ್ಗಾಯಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಪಕ್ಷಗಳ ಬಗ್ಗೆ ವಿಶ್ವಾಸ ತೋರಿದ ಮತದಾರರೋ ಅಥವಾ ಆಯಾ ಪಕ್ಷಗಳೋ? ಅಂಥಾ ಪಕ್ಷಗಳು ಈ ದುರ್ಬಲ ಮತದಾರರು ಅವರಲ್ಲಿಟ್ಟ ವಿಶ್ವಾಸಕ್ಕೆ ಗೌರವ ತೋರುವ ಪ್ರಾಮಾಣಿಕ ಪ್ರಯತ್ನ ಪಡುತ್ತವೆಯೇ? ಆದರೆ ಚುನಾವಣೋತ್ತರ ಸಂದರ್ಭದಲ್ಲಿ ಈ ಬಗೆಯ ವಿಶ್ವಾಸ ಮೂಡಿಸುವ ದಾರಿಗಳಲ್ಲಿ ಅಪಾರವಾದ ಅನುಮಾನಗಳು, ವೈಫಲ್ಯಗಳು, ಅಪನಂಬಿಕೆಗಳು, ಅನಿಶ್ಚಿತತೆಗಳು ಮತ್ತು ಆತಂಕಗಳು ತುಂಬಿಕೊಂಡು ಅಗಾಧವಾದ ಅವಿಶ್ವಾಸಕ್ಕೆ ದಾರಿ ಮಾಡಿಕೊಡುತ್ತಿರುವುದು ಕಾಣುತ್ತಿದೆ.
ಒಂದು ಮೈತ್ರಿಕೂಟವನ್ನು ರಚಿಸಿಕೊಳ್ಳಲಾಗದ ಈ ವೈಫಲ್ಯದಲ್ಲಿ ಜನರು ಈ ಪಕ್ಷಗಳ ಮೇಲಿಟ್ಟ ವಿಶ್ವಾಸವು ಚುನಾವಣಾ ವೈಫಲ್ಯಗಳಿಗೆ ಕಾರಣವಾಗಿಬಿಡುವ ಅಪಾಯವನ್ನು ಒಳಗೊಂಡಿದ್ದನ್ನೂ ಇದು ತೋರಿಸುತ್ತದೆ ಮತ್ತು ಆಯಾ ಪಕ್ಷಗಳ ನಡುವೆ ಕೂದಲೆಳೆಯಷ್ಟು ವಿಶ್ವಾಸವು ಮಾತ್ರ ಇದ್ದಿದ್ದನ್ನು ಅಥವಾ ವಿಶ್ವಾಸವೇ ಇಲ್ಲದಿದ್ದುದನ್ನೂ ಸಹ ಅದು ತೋರಿಸುತ್ತದೆ. ಯಾವಾಗ ಪರಸ್ಪರ ವಿಶ್ವಾಸವನ್ನು ಆಧರಿಸಿದ ಪ್ರಯತ್ನಗಳು ಸಮತೋಲನವನ್ನು ಕಳೆದುಕೊಳ್ಳುತ್ತದೆಯೋ ಆಗ ಸರಕಾರವನ್ನು ರಚಿಸುವ ಘೋಷಣೆಗಳು ಕೇವಲ ಒಣಮಾತುಗಳಾಗಿ ಬಿಡುತ್ತವೆ. ಸಾಧ್ಯತೆ ಮತ್ತು ಅಗತ್ಯಗಳ ನಡುವಿನ ಸಂಬಂಧಗಳು ಅಸಮತೋಲನಗೊಂಡಾಗ ಮೈತ್ರಿಯನ್ನಾಗಲೀ ಸರಕಾರವನ್ನಾಗಲೀ ರಚಿಸಲಾಗುವುದಿಲ್ಲ. ಅದರಿಂದ ಮತದಾರರ ವಿಶ್ವಾಸಕ್ಕೆ ಭಂಗ ಉಂಟಾಗುತ್ತದೆ. ಪಕ್ಷಗಳು ನಡೆಸುವ ಈ ಬಗೆಯ ನಿರಂತರ ವಿಶ್ವಾಸಭಂಗಗಳು ಮತ್ತು ಮತದಾರರ ಕೆಲವು ವರ್ಗಗಳು ಪಕ್ಷದ ನಿಲುವುಗಳಿಗೆ ತದ್ವಿರುದ್ಧವಾಗಿ ಮತಚಲಾವಣೆ ಮಾಡುವ ವಿದ್ಯಮಾನಗಳು ದೌರ್ಬಲ್ಯ ಮತ್ತು ಅತಂತ್ರಗಳಿಗೆ ಗುರಿಯಾಗಿರುವ ಮತದಾರರ ಮೇಲೆ ನೈತಿಕ ಹೊರೆಯಾಗಿ ಕೂತುಕೊಳ್ಳುತ್ತದೆ. ಆ ಸಂದರ್ಭದಲ್ಲಿ ವಿಶ್ವಾಸವೆಂಬುದು ತನ್ನ ನೈತಿಕ ಸಾರವನ್ನೇ ಕಳೆದುಕೊಳ್ಳುತ್ತದೆ ಮತ್ತು ಜನರು ಯಾವ ಅಪಾಯಕ್ಕೂ ಪಕ್ಕಾಗದಿರಲು ನಿರ್ಧರಿಸಿ ಅಂಥ ಪಕ್ಷಗಳಿಗೆ ಮತವನ್ನೇ ಚಲಾಯಿಸದಿರಬಹುದು. ಅದೇರೀತಿ, ವಿಶ್ವಾಸಮೂಡಿಸುವ ರೀತಿ ಸರಕಾರವನ್ನು ನಡೆಸದಿದ್ದರೂ ಆಡಳಿತ ಪಕ್ಷಕ್ಕೆ ವೋಟು ಹಾಕುತ್ತಲೇ ಬಂದಿರುವ ಮತದಾರರು ತಾವು ಮತಹಾಕುವ ಪಕ್ಷದ ಬಗ್ಗೆ ಯಾವುದೇ ವಿಶ್ವಾಸವನ್ನಿರಿಸಿಕೊಳ್ಳುವ ಅಗತ್ಯವೇ ಇರುವುದಿಲ್ಲ. ಅಂಥ ಪ್ರಕರಣಗಳಲ್ಲಿ ವಿಶ್ವಾಸದ ಜಾಗವನ್ನು ಶ್ರದ್ಧೆಯು ಆಕ್ರಮಿಸಿಕೊಳ್ಳುತ್ತದೆ. ಮತ್ತು ವಿಶ್ವಾಸದ ರೀತಿ ಶ್ರದ್ಧೆಯನ್ನು ರೂಢಿಸಿಕೊಳ್ಳಬೇಕಿಲ್ಲ. ಅದು ಪಾರಂಪರಿಕವಾಗಿ ಪಾಲಿಸಬೇಕಿರುವ ವಿಷಯವಾಗಿರುತ್ತದೆ.
ಆಳುವ ಪಕ್ಷಗಳಿಗೆ ಅವರು ನೀಡುವ ಬೆಂಬಲಗಳಿಗೆ ಯಾವುದೇ ತಾರ್ಕಿಕ ಕಾರಣವೂ ಇರುವುದಿಲ್ಲ ಅಥವಾ ಸ್ವಂತ ವಿವೇಕದಿಂದ ತೆಗೆದುಕೊಂಡ ತೀರ್ಮಾನವೂ ಆಗಿರುವುದಿಲ್ಲ. ಹೀಗಾಗಿ ವಿವೇಚನಾ ಶಕ್ತಿಯಿದ್ದರೂ ಸಹ ಮತಚಲಾಯಿಸುವಾಗ ಅದನ್ನು ಬಳಸದೆ ಭರವಸೆಗಳನ್ನು ಈಡೇರಿಸದ ಪಕ್ಷಕ್ಕೆ ವೋಟು ಚಲಾಯಿಸುತ್ತಾರೆ. ಇತ್ತೀಚಿನ ಚುನಾವಣೆಗಳಲ್ಲಿ ರೈತಾಪಿ ಜನ ಮತ್ತು ನಿರುದ್ಯೋಗಿಗಳು ಆಳುವ ಪಕ್ಷಕ್ಕೆ ವೋಟು ಹಾಕಿರುವುದು ನಿಜ. ಆದರೆ ಆ ಮತದಾರರು ವಿವೇಚನಾಯುತವಾಗಿ ವೋಟು ಹಾಕಿದ್ದರೆ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸದ ಮತ್ತು ಅವರ ಬದುಕಿನ ಮೇಲೆ ಅಪಾರ ಕಷ್ಟಗಳನ್ನು ಹೇರಿದ ಆರ್ಥಿಕ ನೀತಿಗಳನ್ನು ಜಾರಿ ಮಾಡಿದ ಪಕ್ಷಕ್ಕೆ ವೋಟು ಹಾಕಬಾರದಿತ್ತು. ಆಗ ಅವರು ತಮ್ಮ ಸ್ವಂತ ಅನುಭವಗಳಿಗೆ ನಿಷ್ಠರಾಗಿ ವೋಟು ಹಾಕಿದಂತಾಗುತ್ತಿತ್ತು. ಅಂಥಾ ಮತದಾರರು ಶ್ರದ್ಧೆಯನ್ನು ಆಧರಿಸಿ ವೋಟು ಹಾಕುವುದರಿಂದ ಅವರ ಮೇಲೆ ವಿಶ್ವಾಸದ ಹೊರೆ ಇರುವುದಿಲ್ಲ. ಏಕೆಂದರೆ ಅವರು ಪಕ್ಷವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಾವುದೇ ರಿಸ್ಕನ್ನೇ ತೆಗೆದುಕೊಂಡಿರುವುದಿಲ್ಲ. ತಾವು ಆಯ್ಕೆ ಮಾಡುವ ನಾಯಕ, ಪಕ್ಷ ಅಥವಾ ಮೈತ್ರಿಕೂಟಗಳು ಪರಿಣಾಮಕಾರಿ ಮೈತ್ರಿಗಳನ್ನು ಮಾಡಿಕೊಂಡು ಒಂದು ನೈಜ ಮತ್ತು ಜವಾಬುದಾರಿ ಸರಕಾರವನ್ನು ರಚಿಸುತ್ತದೆಂಬ ನಿರೀಕ್ಷೆಯನ್ನಿಟ್ಟುಕೊಂಡು ವೋಟು ಮಾಡುವ ಮತದಾರರಲ್ಲಿ ವಿಶ್ವಾಸವು ಸ್ವಾಯತ್ತತೆಯನ್ನು ಒದಗಿಸುತ್ತದೆ.
ಈ ರೀತಿ ರಿಸ್ಕುಗಳನ್ನು ತೆಗೆದುಕೊಳ್ಳುವುದು ಆ ಮತದಾರನಿಗೆ ಸ್ವನಿರ್ಣಯತೆ ಮತ್ತು ಸ್ವಾಯತ್ತತೆಯನ್ನು ಕೊಡುವ ಮಾತ್ರಕ್ಕೆ ಸಮಾನ ಅವಕಾಶ ಮತ್ತು ಸಮಾನ ಗಮನಗಳನ್ನು ನೀಡಬೇಕಾದ ರಾಜಕೀಯವು ಯಾವಾಗಲೂ ರಿಸ್ಕಿನ ಆಧಾರದ ಮೇಲೆ ನಡೆಯುವ ಸಟ್ಟಾ ಬಜಾರಿನಂತೆ ಆಗಬೇಕಿಲ್ಲ. ದುರ್ಬಲ ಸಮುದಾಯಗಳ ಮತದಾರರು ಯಾವಾಗಲೂ ರಿಸ್ಕು ತೆಗೆದುಕೊಳ್ಳುತ್ತಲೇ ಇರಬೇಕಾದ ಸನ್ನಿವೇಶಕ್ಕೆ ದೂಡದಿರುವ ಜವಾಬ್ದಾರಿ ವಿರೋಧಪಕ್ಷಗಳಿಗಿದೆ. ಆದರೆ ಕೀಲಕವಾದ ಪ್ರಶ್ನೆಯೇನೆಂದರೆ: ದುರ್ಬಲ ಸಮುದಾಯಗಳ ವೋಟಿನಲ್ಲಿರುವ ಬದಲಾವಣೆಯ ಆಶಯಗಳನ್ನು ವಿರೋಧ ಪಕ್ಷಗಳು ಗಂಭೀರವಾಗಿ ತೆಗೆದುಕೊಳ್ಳುವುದೇ? ಆಳುವ ಪಕ್ಷವು ದುರ್ಬಲ ಸಮುದಾಯಗಳ ಅತಂತ್ರತೆಗಳನ್ನು ನಿವಾರಿಸುವಂತಹ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವುದೇ ?
ಕೃಪೆ: Economic and Political Weekly