ಭವಿಷ್ಯದ ದಿನಗಳು ಇನ್ನೂ ಕರಾಳವಾದಾವೇ?

Update: 2019-06-12 18:31 GMT

ದೇಶದ ರಾಜಕೀಯ ಕಳವಳಕಾರಿಯಾಗಿದೆ. ಸೆರೆಮನೆಯಲ್ಲಿರಬೇಕಾದ ಅಪರಾಧಿಗಳು ಚುನಾವಣೆಯಲ್ಲಿ ಗೆದ್ದು ಲೋಕಸಭೆಯಲ್ಲಿ ರಾರಾಜಿಸುತ್ತಿದ್ದಾರೆ. 159 ಸಂಸದರಿಗೆ ಗಂಭೀರ ಅಪರಾಧದ ಹಿನ್ನೆಲೆ ಇದೆ. 2009ನೇ ಸಾಲಿನಲ್ಲಿ ಆಯ್ಕೆಯಾದವರಿಗೆ ಹೋಲಿಸಿದರೆ ಈ ಬಾರಿ ಅಪರಾಧ ಹಿನ್ನೆಲೆಯ ಸಂಸದರ ಸಂಖ್ಯೆ ಶೇ. 109ರಷ್ಟು ಏರಿಕೆಯಾಗಿದೆ. 17ನೇ ಲೋಕಸಭೆಯಲ್ಲಿ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರು 10 ಸಂಸದರು, ಕೊಲೆ ಪ್ರಕರಣದ ಆರೋಪಿಗಳು 11 ಮಂದಿ, ಕೊಲೆ ಯತ್ನ ಪ್ರಕರಣದ ಆರೋಪಿಗಳು 30 ಮಂದಿ. ಅಪಹರಣ ಪ್ರಕರಣದ ಆರೋಪಿಗಳು 6 ಮಂದಿ, ಅತ್ಯಾಚಾರ ಪ್ರಕರಣದ ಆರೋಪಿಗಳು 3 ಮಂದಿ. ದ್ವೇಷ ಭಾಷಣದ ಆರೋಪ ಹೊತ್ತವರು 29 ಮಂದಿ ಮತ್ತು ಮಹಿಳೆಯ ವಿರುದ್ಧದ ದೌರ್ಜನ್ಯ ಕೃತ್ಯಗಳ ಆರೋಪಿಗಳು 19 ಜನ ಅಡಗಿದ್ದಾರೆ. ಗಂಭೀರ ಅಪರಾಧ ಹಿನ್ನೆಲೆಯ ವ್ಯಕ್ತಿ ಇಂದು ಮೋದಿಯ ನಂತರ ಕೇಂದ್ರ ಮಂತ್ರಿ ಮಂಡಲದಲ್ಲಿ ಎರಡನೆಯ ಅಗ್ರ ಸ್ಥಾನದಲ್ಲಿದ್ದಾರೆ. ಇದು ಮೋದಿ ಬ್ರಾಂಡ್ ಪ್ರಜಾಪ್ರಭುತ್ವ! ಅಮಿತ್ ಶಾ ಯುವರಾಜ ಉತ್ತರಾಧಿಕಾರಿ! ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್.ಎಸ್.ಎ) ಅಜಿತ್ ದೋವಲ್‌ಗೆ ಕೇಂದ್ರ ಸಂಪುಟ ದರ್ಜೆ ಸಚಿವರ ಸ್ಥಾನಮಾನ! ಈ ತ್ರಿಮೂರ್ತಿಗಳು ದೇಶದ ಮುಂದಿನ ಐದು ವರ್ಷಗಳ ರಾಜಕೀಯ ಮತ್ತು ಆಡಳಿತವನ್ನು ನಿರ್ಧರಿಸಲಿದ್ದಾರೆ. ದೇಶ, ಅದರ ಸಮಗ್ರತೆ, ಬಹುತ್ವ ಮತ್ತು ಜನರ ಏಕತೆಗೆ ಆಪತ್ತು, ವಿಪತ್ತುಗಳು ಉಂಟಾಗುವುದು ನಿಸ್ಸಂದೇಹ. ಈಗಾಗಲೇ ಚಿಹ್ನೆಗಳು ಕಾಣಿಸಿಕೊಳ್ಳಲಾರಂಭಿಸಿವೆ.

ಕಾಶ್ಮೀರದ ದುಃಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಗೃಹ ಸಚಿವ ಅಮಿತ್ ಶಾ ಕಾಶ್ಮೀರದಲ್ಲಿ ಹಿಂದುತ್ವವನ್ನು ಜಾರಿ ಮಾಡಲು ನಕ್ಷೆ ಸಿದ್ಧಮಾಡಿದ್ದಾರೆ. ಇಂದಿನ ಜಮ್ಮು ಕಾಶ್ಮೀರ ರಾಜ್ಯವೆಂದರೆ ಅದರಲ್ಲಿ ಅಡಕವಾಗಿರುವ ಪ್ರದೇಶಗಳು ಜಮ್ಮು, ಕಾಶ್ಮೀರ ಮತ್ತು ಲಡಾಖ್. ಜಮ್ಮುವಿನಲ್ಲಿ ಬಹುಸಂಖ್ಯಾತರು ಹಿಂದುಗಳು. ಕಾಶ್ಮೀರದಲ್ಲಿ ಮುಸಲ್ಮಾನರು ಬಹು ಸಂಖ್ಯಾತರು. ಲಡಾಖ್‌ನಲ್ಲಿ ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಮ್ಮು ಜನರ ಭಾಷೆ ಡೋಗ್ರೀ ಮತ್ತು ಹಿಂದಿ. ಕಾಶ್ಮೀರದ ಭಾಷೆ ಕಾಶ್ಮೀರಿ ಹಾಗೂ ಉರ್ದು. ರಾಜ್ಯದಲ್ಲಿ ಒಟ್ಟು 87 ವಿಧಾನಸಭಾ ಕ್ಷೇತ್ರಗಳಿವೆ. ಕಾಶ್ಮೀರದಲ್ಲಿ 46, ಜಮ್ಮುವಿನಲ್ಲಿ 37 ಮತ್ತು ಲಡಾಖ್‌ನಲ್ಲಿ 4 ಸೀಟುಗಳು. ಜಮ್ಮು ವಲಯದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಸೃಷ್ಟಿಸಿ ಮುಸ್ಲಿಮೇತರ ವ್ಯಕ್ತಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆಯನ್ನು ಉಂಟು ಮಾಡಲು ಅಮಿತ್ ಶಾ ಸಿದ್ಧತೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕ್ಷೇತ್ರ ಮರು ವಿಂಗಡಣೆಗೆ ಕೇಂದ್ರ ಕಾರ್ಯತಂತ್ರ ನಿರೂಪಿಸುತ್ತಿದೆ. ಜೊತೆಯಲ್ಲಿಯೇ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ, ಸಂವಿಧಾನದ ವಿಧಿ 370 ಮತ್ತು 35(ಎ) ಅನ್ನು ರದ್ದುಗೊಳಿಸುವುದರ ಬಗ್ಗೆಯೂ ಯೋಚನೆ ಮಾಡುತ್ತಿದೆ. ಈಗ ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಬೇಕಾದರೆ ಪುನಃ ಅಲ್ಲಿನ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು. ರಾಜ್ಯದಲ್ಲಿ ಈಗ ರಾಷ್ಟ್ರಪತಿ ಆಡಳಿತ ಇರುವುದರಿಂದ ತಿದ್ದುಪಡಿ ಮಾಡಲು ರಾಜ್ಯಪಾಲರಿಗೆ ಅಧಿಕಾರವಿದೆ ಎಂದು ಹೇಳಲಾಗುತ್ತಿದೆ. ಕೇಸರಿ ರಾಜಕಾರಣವನ್ನು ಕಾಶ್ಮೀರದಲ್ಲಿ ಹೇರಲು, ಜಮ್ಮು ಕಾಶ್ಮೀರದ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಇನ್ನೊಂದು ಪ್ರಯತ್ನ ಅಮಿತ್ ಶಾರವರ ಸಂಚು ಅನ್ನುವುದರಲ್ಲಿ ಯಾವ ಸಂಶಯವೂ ಇರಬೇಕಾಗಿಲ್ಲ. ಒಟ್ಟಾರೆ, ಕಾಶ್ಮೀರವನ್ನು ಹಿಂದೂ ರಾಜ್ಯ ಮಾಡಿದರೆ ಅಲ್ಲಿನ ಎಲ್ಲ ಸಮಸ್ಯೆಗಳಿಗೂ ಅದು ರಾಮಬಾಣ, ಸಿದ್ಧೌಷಧ ಎಂದು ಅಮಿತ್ ಶಾ ಭಾವಿಸಿದ್ದಾರೆ. ಇದು ಅತ್ಯಂತ ಅಪಾಯಕಾರಿ ಯೋಚನೆ. ಹಿಟ್ಲರ್‌ನ ಜರ್ಮನಿಯಿಂದ ಸ್ಫೂರ್ತಿ ಪಡೆಯುವುದರ ಬದಲು ಪಾಠ ಕಲಿಯುವುದು ಒಳ್ಳೆಯದು.

‘ಒಂದು ದೇಶ, ಒಂದೇ ಭಾಷೆ’ ಅನ್ನುವ ಸೋಗಿನಲ್ಲಿ ಕೇಂದ್ರ ಸರಕಾರ ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರಲು ಪ್ರಯತ್ನ ಕೈಗೊಂಡಿತ್ತು. ಆದರೆ ದಕ್ಷಿಣದ ರಾಜ್ಯಗಳಿಂದ ಬಂದ ವ್ಯಾಪಕ ವಿರೋಧದಿಂದ ಪ್ರಯತ್ನವನ್ನು ಸದ್ಯಕ್ಕೆ ಕೈ ಬಿಡಲಾಗಿದೆ. ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ‘‘ತಪ್ಪುನುಸುಳಿತು’’ ಎಂದು ಹೇಳಿರುವುದು ಕೇಂದ್ರ ಸರಕಾರದ ಹೊಣೆಗೇಡಿತನವನ್ನು ತೋರಿಸುತ್ತದೆ. ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಪ್ರಯತ್ನ ಇದು ಮೊದಲೇನಲ್ಲ. ಭಾರತದ ಒಕ್ಕೂಟ ವ್ಯವಸ್ಥೆಗೆ ಇದು ಮಾರಕ. ಲಕ್ಷಾಂತರ ಉತ್ತರ ಹಾಗೂ ಈಶಾನ್ಯ ಭಾರತದ ಜನ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಿಗೆ ವಲಸೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಇಂದು ಕನ್ನಡ ಮೈನಾರಿಟಿ. ಇದು ವಾಸ್ತವ. ಹೊರ ಪ್ರದೇಶಗಳಿಂದ ಬಡಜನರ ಬದುಕಿಗಾಗಿ ಇಲ್ಲಿಗೆ ಬರುವುದಕ್ಕೆ ಏನೂ ಆಕ್ಷೇಪ ಇರಬೇಕಾಗಿಲ್ಲ. ಆದರೆ ಇಲ್ಲಿಗೆ ಬರುವವರು ಕನ್ನಡ ಭಾಷೆ ಕಲಿಯುವುದೇ ಇಲ್ಲ. ಬಿಎಂಟಿಸಿ ಬಸ್ಸಿನಲ್ಲಿ, ಮೆಟ್ರೋನಲ್ಲಿ ಇದು ನೋಡ ಬಹುದು -ಕನ್ನಡದ ಭಾಷೆ ಕಡಿಮೆ, ಹಿಂದಿಯ ಆರ್ಭಟವೇ ಹೆಚ್ಚು. ಕರ್ನಾಟಕದ ಕನ್ನಡಿಗರು ಹಿಂದಿ ಕಲಿಯುವುದು ಇರಲಿ, ಇಲ್ಲಿಗೆ, ಬರುವ ಹೊರಗಿನವರು ಯಾಕೆ ಕನ್ನಡ ಕಲಿಯಬಾರದು?! ತೇಜಸ್ವಿ, ಹೆಗಡೆ ಮತ್ತು ಜೋಶಿಯವರು ಇದರ ಬಗ್ಗೆ ಏನು ಹೇಳುತ್ತಾರೆ? ಇಂದಿನ ನರೇಂದ್ರ ಮೋದಿ-ಅಮಿತ್ ಶಾ ಭಾರತ ಅಂದರೆ ಏನೆಂದು ತಿಳಿದುಕೊಳ್ಳಬೇಕಾದರೆ ಬೆಂಗಳೂರಿನಿಂದ ಬಿಹಾರದ ಪಾಟ್ನಾಗೆ ಪಯಣಿಸುವ ಸಂಗಮಿತ್ರ ಎಕ್ಸ್‌ಪ್ರೆಸ್‌ನಲ್ಲಿ ಒಮ್ಮೆ ಪ್ರಯಾಣ ಮಾಡಿದರೆ ಸಾಕು. ಮೋದಿ-ಶಾರ ರಾಜಕೀಯದ ಅರಿವಾಗುತ್ತದೆ. ಇದು ಸ್ವಚ್ಛವಲ್ಲದ ಭಾರತ.

ಭಾರತದಲ್ಲಿ ಭಾಷಾ ಬಹುತ್ವ ಮುಂದುವರಿಯಬೇಕು. ಅದೇ ಸಮಯಕ್ಕೆ ಹಿಂದಿ ಹೇರಿಕೆ ಕೊನೆಗಾಣಬೇಕು. ನಮಗೂ ನಮ್ಮ ಭಾಷೆಯ ಹೆಮ್ಮೆ, ಅಭಿಮಾನವಿದೆ; ನಮ್ಮದೇ ಆದ ಸಂಸ್ಕೃತಿ ಇದೆ. ಅದನ್ನು ಕೆಣಕಬೇಡಿ, ಹಿಂದಿ ಗುಮ್ಮನನ್ನು ತೋರಿಸಬೇಡಿ.
 
ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ. ಚುನಾವಣಾ ಖರ್ಚೂ ಅಷ್ಟೇ, ಜಗತ್ತಿನಲ್ಲಿಯೇ ಅತ್ಯಂತ ದುಬಾರಿ! ಯಾರು ಹೇಳಿದರು, ಭಾರತ ಬಡ ರಾಷ್ಟ್ರವೆಂದು? ಚುನಾವಣೆಗೆ, ರಾಜಕೀಯ ಪಕ್ಷಗಳು ಮಾಡಿದ ಖರ್ಚು ಅರವತ್ತು ಸಾವಿರ ಕೋಟಿ ರೂಪಾಯಿ. ನೂತನ ವಿಶ್ವ ದಾಖಲೆ! ಭಾಜಪ ಮಾತ್ರವೇ ರೂ.27,000ಕ್ಕಿಂತ ಹೆಚ್ಚು ಹಣವನ್ನು ಪ್ರಚಾರಕ್ಕಾಗಿ ವ್ಯಯ ಮಾಡಿದೆ. ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ಚುನಾವಣೆಯಲ್ಲಿ ಮಾಡಲಾದ ಖರ್ಚುಗಳ ಬಗ್ಗೆ ವರದಿ ಪ್ರಕಟಿಸಿದೆ. ಒಂದು ಮತಕ್ಕೆ ರೂ. 700 ಖರ್ಚಾಗಿದೆ. ಒಂದು ಕ್ಷೇತ್ರದಲ್ಲಿ ಆಗಿರುವ ವೆಚ್ಚ ಸುಮಾರು ರೂ. 100 ಕೋಟಿ. 1998ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ವೆಚ್ಚವು 6-7 ಪಟ್ಟು ಹೆಚ್ಚಾಗಿದೆ. ಮತ ನೀಡಲು ಸುಮಾರು ಶೇ. 50ಕ್ಕಿಂತ ಹೆಚ್ಚು ಜನ ಹಣ ಪಡೆದಿರಬಹುದು ಎಂದು ತಿಳಿದು ಬರುತ್ತದೆ. ಬರೀ ಹಣವಲ್ಲದೆ ಇನ್ನಿತರ ಆಮಿಷಗಳನ್ನೂ ಒಡ್ಡಲಾಯ್ತು. ಸಿಂಗಾಪುರ, ಮಲೇಶಿಯಾ ಪ್ರವಾಸ, ಪುಣ್ಯಕ್ಷೇತ್ರಗಳ ತೀರ್ಥಯಾತ್ರೆ ಮುಂತಾದವುಗಳೂ ವೋಟ್ ಗಿಟ್ಟಿಸುವುದಕ್ಕೆ ಬಳಸಲಾದ ತಂತ್ರಗಳು. ಭಾಜಪಕ್ಕೆ ಇಷ್ಟೊಂದು ಹಣ ಎಲ್ಲಿಂದ ಬಂತು? ಅಂಬಾನಿ, ಅದಾನಿ, ದಾಲ್ಮಿಯಾಗಳ ಡಾರ್ಲಿಂಗ್ ನರೇಂದ್ರ ಮೋದಿ ಪಕ್ಷ.

ಕುಬೇರನ ಭಂಡಾರವೇ ಅವರ ಬಳಿ ಇದ್ದಾಗ ಯಾವ ಕೊರತೆ? ಕಾರ್ಪೊರೇಟ್ ಧಣಿಗಳ ಚುನಾವಣಾ ಡೊನೇಶನ್‌ನಲ್ಲಿ ಶೇ. 95ಕ್ಕಿಂತ ಹೆಚ್ಚಿನ ಪಾಲು ಭಾಜಪಕ್ಕೆ ಸಂದಾಯವಾಯಿತು ಎಂಬುದನ್ನು ಯಾರೂ ಮರೆಯುವಂತಿಲ್ಲ. ಸಿಎಂಎಸ್ ವರದಿಯಲ್ಲಿ ಮೇಲ್ನೋಟಕ್ಕೆ ಗೋಚರಿಸುವ ವೆಚ್ಚಗಳನ್ನು ಮಾತ್ರ ಅಂದಾಜು ಮಾಡಲಾಯ್ತು. ಅಂದರೆ ಇದು ನೀರ್ಗಲ್ಲಿನ ತುದಿ ಮಾತ್ರ. ಭಾರತದಲ್ಲಿ ಚುನಾವಣೆಗಳಲ್ಲಿ ಹಣದ ಪ್ರಭಾವ ಎಷ್ಟು ವಿಸ್ತಾರವಾಗಿದೆ ಮತ್ತು ಆಳಕ್ಕಿದೆ ಎಂಬುದು ಊಹೆಗಷ್ಟೇ ಬಿಟ್ಟ ವಿಚಾರ. ಇದು ಪ್ರಜಾಪ್ರಭುತ್ವವನ್ನು ಎಷ್ಟರ ಮಟ್ಟಿಗೆ ಹಾನಿ ಮಾಡಿದೆ ಅನ್ನುವುದು ಕಲ್ಪನೆಗೆ ಬಿಟ್ಟದ್ದು ಎಂದು ಸಿಎಂಎಸ್ ಹೇಳಿದೆ. ಅಂದರೆ, 2019ರ ಚುನಾವಣೆ ಎಷ್ಟರ ಮಟ್ಟಿಗೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿದ್ದವು? ಉತ್ತರ ನೀಡಬಲ್ಲದೇ, ಭಾರತ ಚುನಾವಣಾ ಆಯೋಗ?! ದೇಶದಲ್ಲಿ ಬ್ಯಾಂಕಿಂಗ್ ವಂಚನೆಗಳು 2018-19ರಲ್ಲಿ ಶೇ.73ರಷ್ಟು ಏರಿಕೆಯಾಗಿದ್ದು, ರೂ.71,500 ಕೋಟಿಗೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ವರದಿ ತಿಳಿಯಪಡಿಸಿದೆ. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಪದವಿಗೆ ಬಂದಾಗಿನಿಂದ ನಿರಂತರವಾಗಿ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಬಂದಿವೆ. ಬ್ಯಾಂಕ್‌ಗಳಿಂದ ಸಾಲ ಪಡೆದು ಅದನ್ನು ಮರುಪಾವತಿ ಮಾಡದ ಸುಸ್ತಿದಾರರ ಹೆಸರುಗಳ ಪಟ್ಟಿಯನ್ನು ಸಹ ಪ್ರಕಟಿಸಲು ಕೇಂದ್ರ ಸರಕಾರ ಸಿದ್ಧವಿಲ್ಲ. ಸುಪ್ರೀಂ ಕೋರ್ಟಿನ ಆದೇಶವನ್ನೂ ನಿರ್ಲಕ್ಷ್ಯ ಮಾಡಿದೆ ಮೋದಿ ಸರಕಾರ.

ಇಂದು ದೇಶದ ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗಿದೆ. ಜನ ತಮ್ಮ ಭವಿಷ್ಯದ ಬಗ್ಗೆ, ಮುಂದಿನ ಪೀಳಿಗೆಯ ಬದುಕಿನ ಬಗ್ಗೆ, ದೇಶದ ಏಕತೆ, ಸಮಗ್ರತೆಯ ಬಗ್ಗೆ ನಿರ್ಲಕ್ಷ್ಯ ಮಾಡುವ ಹಾಗಿಲ್ಲ. ಚಿಂತನೆ ಮಾಡಬೇಕು. ಇದು ಚುನಾವಣಾ ಸೋಲು ಗೆಲುವಿನ ಪ್ರಶ್ನೆಯಲ್ಲ. ಉಳಿವಿನ ಅಳಿವಿನ ಪ್ರಶ್ನೆ. ನಡೆಯಲಿ ಆತ್ಮಶೋಧನೆ.

Writer - ನ. ಸುಂದರಮೂರ್ತಿ

contributor

Editor - ನ. ಸುಂದರಮೂರ್ತಿ

contributor

Similar News