ಅವ್ಯವಸ್ಥೆಯ ಆಗರವಾದ ಬಿ.ಸಿ.ರೋಡ್ ಪುಂಜಾಲಕಟ್ಟೆ ರಸ್ತೆ ಅಗಲೀಕರಣ ಕಾಮಗಾರಿ

Update: 2019-06-17 06:28 GMT

ಮಂಗಳೂರು, ಜೂ.16: ಬಿ.ಸಿ.ರೋಡ್- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ 73 ರಸ್ತೆ ಅಗಲೀಕರಣಕ್ಕೆಂದು ರಸ್ತೆ ಬದಿಗೆ ಹಾಕಿರುವ ಮಣ್ಣು ಮಳೆಗೆ ಕೊಚ್ಚಿ ಹೋಗುತ್ತಿದ್ದು, ಸ್ಥಳೀಯ ಮನೆಗಳಿಗೆ ಅಪಾಯವಾಗಿ ಪರಿಣಮಿಸಿವೆ. ರಸ್ತೆ ಎತ್ತರವಿದ್ದ ಕಡೆಗಳಲ್ಲಿ ಅಗೆದು ಹಾಕಲಾಗಿದ್ದು, ತಗ್ಗು ಪ್ರದೇಶಕ್ಕೆ ಮಣ್ಣು ತುಂಬಿಸಿ ಸಮತಟ್ಟು ಮಾಡಲಾಗಿದೆ. ಆದರೆ, ಮಣ್ಣು ತುಂಬಿಸಿದ ಕಡೆಗಳಲ್ಲಿ ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಿಸದೆ ಅಸಡ್ಡೆ ತೋರಿಸಲಾಗಿದ್ದು, ಅವೈಜ್ಞಾನಿಕ ಕಾಮಗಾರಿಗೆ ಇದು ಕೈಗನ್ನಡಿಯಾಗಿದೆ. ಕೆಲವು ದಿನಗಳಿಂದ ಮಳೆ ಪ್ರಾರಂಭವಾಗಿದ್ದು, ಮಳೆ ನೀರಿಗೆ ರಸ್ತೆಯ ಬದಿಗೆ ತುಂಬಿಸಿರುವ ಮಣ್ಣು ತಡೆಗೋಡೆ ಇಲ್ಲದೆ ಕೊಚ್ಚಿ ಹೋಗುತ್ತಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗಿದೆ.

ಅಂಗಡಿ, ಮನೆಯ ಅಂಗಳದಲ್ಲಿ ತುಂಬಿದ ಮಣ್ಣು: ಗುಂಪಕಲ್ಲು ಸಮೀಪದ ಮನೆಯೊಂದರ ಕಾಂಪೌಂಡ್‌ನ ಅರ್ಧ ಭಾಗಕ್ಕೆ ಮಣ್ಣು ತುಂಬಿದ್ದರೆ, ಮಧ್ವ ಎಂಬಲ್ಲಿ ಮನೆಯೊಂದರ ಜಗಲಿ ಮಣ್ಣಿನಿಂದ ತುಂಬಿದ್ದು, ಮನೆಯಂಗಳ ಮಣ್ಣಿನಿಂದಾವೃತವಾಗಿದೆ. ಕೈಲಾರು, ಕಾವಳಕಟ್ಟೆ, ಬರ್ಕಟ್ಟ ಕ್ರಾಸ್ ಮುಂತಾದೆಡೆ ಮಳೆಗೆ ಮಣ್ಣು ಹರಿದುಬರುತ್ತಿದ್ದು, ಮನೆಯಂಗಳ ಕೆಸರು ಗದ್ದೆಯಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರೆ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ. ಆದರೆ, ಮಳೆ ಬಿದ್ದಾಗ ಮತ್ತೆ ಮೊದಲಿನಂತಾಗುತ್ತದೆ.

ಬಿರುಕುಬಿಟ್ಟ ರಸ್ತೆ ಬದಿ: ಕೈಲಾರು ಕೆಇಬಿ ಸಮೀಪ ಸುಮಾರು 7 ಅಡಿ ಎತ್ತರಕ್ಕೆ ಮಣ್ಣು ತುಂಬಿಸಲಾಗಿದ್ದು, ಕಂಪ್ರೆಸರ್ ಮೂಲಕ ಮಣ್ಣನ್ನು ಗಟ್ಟಿಗೊಳಿಸಲಾಗಿತ್ತು. ಆದರೆ, ಮಳೆಗೆ ಮಣ್ಣು ಕುಸಿಯುತ್ತಿದ್ದು, ಪಾದಚಾರಿಗಳು ಸಾಗುವ ದಾರಿಯಲ್ಲಿ ಬಿರುಕು ಬಿಟ್ಟಿದೆ.

ತೋಟಕ್ಕೆ ನುಗ್ಗಿದ ಮಣ್ಣು: ನೀರಪಳಿಕೆ ಎಂಬ ಪ್ರದೇಶದಲ್ಲಿ ಮಣ್ಣು ತೋಟದೊಳಗೆ ನುಗ್ಗಿದ್ದು, ಮಳೆ ಹೆಚ್ಚಾದರೆ ಕೆಸರು ಗದ್ದೆಯಂತಾಗಲಿದೆ.

ಕುಸಿಯುವ ಭೀತಿಯಲ್ಲಿ ಇಲೆಕ್ಟ್ರಿಕ್ ಕಂಬ: ಅಗಲೀಕರಣ ಕಾಮಗಾರಿಗೂ ಮುಂಚೆ ಇದ್ದ ಇಲೆಕ್ಟ್ರಿಕ್ ಕಂಬಗಳನ್ನು ಸ್ಥಳಾಂತರಿಸಲಾಗಿದ್ದು, ಕೆಲವೆಡೆ ಮಳೆಗೆ ಮಣ್ಣು ಸವೆದು ಕುಸಿಯುವ ಹಂತದಲ್ಲಿದೆ. ಬಿ.ಸಿ.ರೋಡ್- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ 73ರ ರಸ್ತೆ ಅಗಲೀಕರಣ ಕಾಮಗಾರಿ ಬಿ.ಸಿ.ರೋಡ್ ವರೆಗೆ ಪ್ರಗತಿಯಲ್ಲಿ ಸಾಗಿದ್ದು, ಈಗಾಗಲೇ ಪುಂಜಾಲಕಟ್ಟೆಯಿಂದ- ಕಾವಳಪಡೂರು ಗ್ರಾಮದ ಬಾಂಬಿಲದವರೆಗೆ ನಡೆಯುತ್ತಿರುವ ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ.

 ಪುಂಜಾಲಕಟ್ಟೆಯಿಂದ-ಬಿ.ಸಿ.ರೋಡ್ ವರೆಗೆ ನಡೆಯುತ್ತಿರುವ 19.85 ಕಿ.ಮೀ. ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಸುಮಾರು 157 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. 4 ಕಿರು ಸೇತುವೆ ಸೇರಿದಂತೆ 65 ಮೋರಿ ಈ ಕಾಮಗಾರಿಗಳಲ್ಲಿ ಸೇರಿದ್ದು, ಈಗಾಗಲೇ 35 ಮೋರಿಗಳ ಕಾಮಗಾರಿ ಪೂರ್ಣಗೊಂಡಿವೆ.

ಮಂಗಳೂರಿನಿಂದ ಧರ್ಮಸ್ಥಳ, ಚಿಕ್ಕಮಗಳೂರು ಕಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತೀ ದಿನ ಸಹಸ್ರಾರು ವಾಹನಗಳು ಸಂಚರಿಸುತ್ತದೆ. ರಸ್ತೆ ಕಿರಿದಾಗಿದ್ದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಆದರೆ, ಎಲ್ಲರ ಬಹುದಿನಗಳ ಬೇಡಿಕೆಯಂತೆ ರಸ್ತೆ ಅಗಲೀಕರಣ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಆದಾಗ್ಯೂ, ರಸ್ತೆ ಸಮೀಪದ ನಿವಾಸಿಗಳು ಆತಂಕದಲ್ಲಿದ್ದಾರೆ. ಮುಂದಿನ ಕಾಮಗಾರಿ ನಡೆಸುವ ಮುನ್ನ ಸಮಸ್ಯೆ ಎದುರಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕಂಪ್ರೆಸರ್‌ನಿಂದ ಭೀತಿಗೊಂಡ ಜನತೆ

 ರಸ್ತೆ ನಿರ್ಮಿಸುವಾಗ ರಸ್ತೆ ಕುಸಿಯದಂತೆ ಕಂಪ್ರೆಸರ್‌ನಿಂದ ಮಣ್ಣನ್ನು ಗಟ್ಟಿಗೊಳಿಸಲಾಗುತ್ತದೆ. ಈ ಕಂಪ್ರೆಸರ್ ಕೆಲಸ ಮಾಡುವಾಗ ನಿವಾಸಿಗಳ ಮನೆಯೂ ಕಂಪಿಸಿದಂತೆ ಭಾಸವಾಗುತ್ತದೆ. ಈ ಬಗ್ಗೆ ಕಂಪ್ರೆಸರ್ ಆಪರೇಟರ್ ಜೊತೆಗೆ ಮಾಹಿತಿ ಕೇಳಿದರೆ ಮನೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ. ಈವರೆಗೆ ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ. ಆದರೂ ರಸ್ತೆ ಪಕ್ಕದಲ್ಲಿರುವ ಕೆಲವು ಮನೆಗಳ ಕಪಾಟಿನಲ್ಲಿದ್ದ ಕೆಲವು ವಸ್ತಗಳು ಬಿದ್ದು ಹಾನಿಯಾದ ನಿದರ್ಶನಗಳಿವೆ. ಶರೀಫ್ ಎಂಬವರ ಮನೆಯ ಕಾಂಪೌಂಡ್ ಗೋಡೆಗಳು ಬಿರುಕು ಬಿಟ್ಟಿದ್ದು, ಸಿಮೆಂಟ್‌ಶೀಟ್, ಹಂಚಿನ ಮನೆಯ ನಿವಾಸಿಗಳು ಜೀವ ಭಯದಲ್ಲಿರುವಂತೆ ಮಾಡಿದೆ.

ಅಸಮರ್ಪಕ ಮೋರಿ ವ್ಯವಸ್ಥೆ

ಅಗಲೀಕರಣ ಕಾಮಗಾರಿಗೂ ಮುಂಚೆ ಮಳೆ ನೀರು ಹೋಗಲು ಬೃಹತ್ತಾದ ಹೊಂಡ ಇತ್ತು. ಈ ಹೊಂಡದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ, ಇದೀಗ ನಿರ್ಮಿಸಿದ ಚರಂಡಿಯ ಎತ್ತರ ಮತ್ತು ಅಗಲ ಕಿರಿದಾಗಿದ್ದು, ಮಳೆಗೆ ಹರಿದುಬಂದ ಮಣ್ಣು ಸಣ್ಣ ಮೋರಿಗಳೊಳಗೆ ತುಂಬಿ ನೀರು ಮತ್ತೆ ರಸ್ತೆಗೆ ಬರುವ ಸಾಧ್ಯತೆ ಹೆಚ್ಚಿದೆ. ಬಹುತೇಕ ಮೋರಿಗಳು ಅರ್ಧಭಾಗ ಮಣ್ಣಿನಿಂದ ತುಂಬಿದೆ. ಮೋರಿ ಬದಿಯ ಮಣ್ಣು ಕೂಡ ಸವಕಳಿಯಾಗುತ್ತಿರುವುದು ಕಂಡುಬರುತ್ತಿದೆ.

ರಸ್ತೆ ಅಗಲೀಕರಣಗೊಳಿಸಲು ಬಸ್ ತಂಗುದಾಣಗಳನ್ನು ಕೆಡವಿ ಹಾಕಲಾಗಿದ್ದು, ಮಳೆಗಾಲದಲ್ಲಿ ಸಾರ್ವಜನಿಕರು ಕೆಸರಿನಲ್ಲಿ ನಿಂತು ಬಸ್ ಕಾಯುವಂತಾಗಿದೆ. ಇದೇ ಮಾರ್ಗವಾಗಿ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುವಂತಾಗಿದ್ದು, ಮಾತ್ರವಲ್ಲದೆ ಸಮವಸ್ತ್ರದಲ್ಲಿ ಕೆಸರು ಮೆತ್ತಿಕೊಂಡು ಶಾಲಾ ಕಾಲೇಜಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

- ಇಬ್ರಾಹೀಂ, ಕೈಲಾರ್,

ಸಮಾಜ ಸೇವಕ

ರಸ್ತೆ ಅಗಲೀಕರಣಗೊಳಿಸುವ ನೆಪದಲ್ಲಿ ನೂರಾರು ವರ್ಷಗಳ ಹಿಂದೆ ನೆಟ್ಟ ಬೃಹತ್ತಾದ ಸಾವಿರಾರು ಮರಗಳನ್ನು ಕಡಿಯಲಾಗಿದೆ. ಸಂಬಂಧಪಟ್ಟ ಇಲಾಖೆ ಮರಗಳನ್ನು ನೆಟ್ಟು ಪೋಷಿಸಿದರೆ ಮಾತ್ರ ಅಭಿವೃದ್ಧಿ ಕಾಮಗಾರಿಗೆ ಅರ್ಥ ಸಿಗಲಿದೆ.

- ಹಸನ್ ಸಾಬ್ ದೈಕಿನಕಟ್ಟೆ,

ಪರಿಸರ ಪ್ರೇಮಿ

Writer - ಅಕ್ಬರ್ ಅಲಿ, ಕಾವಳಕಟ್ಟೆ

contributor

Editor - ಅಕ್ಬರ್ ಅಲಿ, ಕಾವಳಕಟ್ಟೆ

contributor

Similar News