ಕಳೆದ ವರ್ಷ ದಾಖಲೆಯ 7 ಕೋಟಿ ಜನ ನಿರ್ವಸಿತ
ಜಿನೇವ (ಸ್ವಿಟ್ಸರ್‌ಲ್ಯಾಂಡ್), ಜೂ. 19: ಕಳೆದ ವರ್ಷ ದಾಖಲೆಯ 7 ಕೋಟಿಗೂ ಅಧಿಕ ಮಂದಿ ತಮ್ಮ ಮನೆಗಳಿಂದ ನಿರ್ವಸಿತರಾಗಿರುವುದನ್ನು ಲೆಕ್ಕ ಹಾಕಲಾಗಿದೆ ಎಂದು ಬುಧವಾರ ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.
2018ರ ಕೊನೆಯ ವೇಳೆಗೆ, 7.08 ಕೋಟಿ ಮಂದಿ ನಿರ್ವಸಿತರಾಗಿದ್ದಾರೆ ಎಂಬುದಾಗಿ ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆ (ಯುಎನ್‌ಎಚ್‌ಸಿಆರ್)ಯ ವಾರ್ಷಿಕ ಜಾಗತಿಕ ಪ್ರವೃತ್ತಿ ವರದಿ ತಿಳಿಸಿದೆ. ಆದರೆ, ವೆನೆಝುವೆಲದಲ್ಲಿ ನೆಲೆಸಿರುವ ರಾಜಕೀಯ ಅಸ್ಥಿರತೆಯಿಂದಾಗಿ ಅಲ್ಲಿಂದ ಪರಾರಿಯಾಗುತ್ತಿರುವ ಜನರ ಲೆಕ್ಕವನ್ನು ಇದರಲ್ಲಿ ಕಡಿಮೆ ತೋರಿಸಲಾಗಿದೆ.
2017ರ ಕೊನೆಯ ವೇಳೆಗೆ ಹಿಂಸೆ ಅಥವಾ ಕಿರುಕುಳಕ್ಕೆ ಒಳಗಾಗಿ ಬಲವಂತವಾಗಿ ನಿರ್ವಸಿತರಾದವರು 6.85 ಕೋಟಿ ಎಂಬುದಾಗಿ ಲೆಕ್ಕ ಹಾಕಲಾಗಿದೆ.
2018ರಲ್ಲಿನ ಹೆಚ್ಚಳಕ್ಕೆ ಇಥಿಯೋಪಿಯದಲ್ಲಿ ವಿವಿಧ ಜನಾಂಗಗಳ ನಡುವೆ ನಡೆಯುತ್ತಿರುವ ಹಿಂಸಾಚಾರ ಮತ್ತು ವೆನೆಝುವೆಲದಲ್ಲಿ ಅರಾಜಕತೆಯಿಂದಾಗಿ ನಿರ್ವಸಿತರಾದವರ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳವೇ ಕಾರಣ ಎಂದು ಯುಎನ್‌ಎಚ್‌ಸಿಆರ್ ಹೇಳಿದೆ.