ಬೊರಿಮಾರ್ ಸಂತ ಜೋಸೆಫ್‌ರ ಚರ್ಚ್‌ನಲ್ಲಿ ಪಪ್ಪಾಯಿ ಫಾದರ್ !

Update: 2019-07-14 10:30 GMT

ಬಂಟ್ವಾಳ : ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸೂರಿಕುಮೇರು ಸಮೀಪದ ಬೊರಿಮಾರ್ ಸಂತ ಜೋಸೆಫ್‌ರ ದೇವಾಲಯದ ಧರ್ಮಗುರು ಫಾದರ್ ಗ್ರೆಗರಿ ಪಿರೇರ, ಕಳೆದೊಂದು ವರ್ಷದಲ್ಲಿ ಚರ್ಚ್ ಆವರಣದ ಚಿತ್ರಣವನ್ನೇ ಬದಲಾಯಿಸಿದ್ದು, ಕೃಷಿ ಕ್ರಾಂತಿಯ ಮೂಲಕ ಕೃಷಿಯ ನೈಜ ಖುಷಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕಳೆದ ವರ್ಷದವರೆಗೂ ಕೇವಲ ತರಗೆಲೆಗಳು ಮಾತ್ರ ಆದಾಯದಂತಿದ್ದ ರಬ್ಬರ್ ಗಿಡಗಳೇ ಚರ್ಚ್‌ನ ಜಮೀನಿನಲ್ಲಿತ್ತು. 2018ರ ಜೂ.3ರಂದು ಫಾದರ್ ಗ್ರೆಗರಿ ಪಿರೇರ ಬೊರಿಮಾರ್ ಚರ್ಚ್‌ನ ಧರ್ಮಗುರುವಾಗಿ ನಿಯುಕ್ತಿಗೊಂಡ ಬಳಿಕ ಅವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡ ತೋಟ ದಲ್ಲಿ ಪಪ್ಪಾಯಿ, ನುಗ್ಗೆ, ಅರಿವೆ ಸೊಪ್ಪು, ಗೆಣಸು, ಕುಂಬಳಕಾಯಿ ಮಾತ್ರವಲ್ಲದೆ ಇದೀಗ ಗೇರು ಡಗಳೂ ತಲೆ ಎತ್ತಿದ್ದು, ಚರ್ಚ್‌ನ ಆದಾಯದ ಮೂಲವಾಗಿ ಬೆಳೆಯುತ್ತಿದೆ. ಇದೀಗ ಚರ್ಚ್ ಜಮೀನಿನ ಲ್ಲಿರುವ ನೂರಕ್ಕೂ ಅಧಿಕ ಪಪ್ಪಾಯಿ ಗಿಡಗಳು, 120 ನುಗ್ಗೆಮರ, ಸುಮಾರು 1 ಸಾವಿರ ಸುವರ್ಣ ಗೆಡ್ಡೆಯ ಗಿಡಗಳು ಚರ್ಚ್‌ನ ಆವರಣದ ಸೊಬಗನ್ನು ಹೆಚ್ಚಿಸಿದೆ. ಈ ವರ್ಷ ಮತ್ತೆ ಹೊಸದಾಗಿ 160 ಗೇರುಗಿಡಗಳನ್ನು ನೆಡಲಾಗಿದ್ದು, ಎಲ್ಲಾ ಬಗೆಯ ಕೃಷಿಯನ್ನು ಮತ್ತಷ್ಟು ವಿಸ್ತಾರಗೊಳಿಸುವ ಇರಾದೆ ಫಾದರ್ ಗ್ರೆಗರಿ ಪಿರೇರ ಅವರಿಗಿದೆ.

1981ರಲ್ಲಿ ಗುರುದೀಕ್ಷೆ ಪಡೆದುಕೊಂಡ ಅವರು, ಆ ಬಳಿಕ 2 ವರ್ಷ ಮೊಡಂಕಾಪು, ನಾರಂಪಾಡಿ, ವೇಣೂರು, ಉಡುಪಿಯ ಬೆಳ್ವೆ ಎಸ್ಟೇಟ್ ಚರ್ಚ್ ಹಾಗೂ ಅಲ್ಲಿಪಾದೆ ಚರ್ಚ್ ಸೇರಿದಂತೆ ಒಟ್ಟು 37 ವರ್ಷ ಧರ್ಮಗುರುವಾಗಿ ಸೇವೆಸಲ್ಲಿಸಿ, ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮ ದಲ್ಲಿರುವ ಬೊರಿಮಾರು ಚರ್ಚ್‌ಗೆ 25ನೇ ಧರ್ಮಗುರು ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿಪಾದೆ ಯಲ್ಲಿ ಶಾೆ ಆರಂಭಿಸಿದ ಕೀರ್ತಿ ಕೂಡ ಇವರದು.

ಬಿಡುವಿನಲ್ಲಿ ತೋಟಕ್ಕಿಳಿದು ಕೆಲಸ: ಚರ್ಚ್ ನಲ್ಲಿ ಪೂಜಾ ಕೈಂಕರ್ಯ ನಡೆಸುವುದರ ಜೊತೆಗೆ ಎಲ್ಲರಿಗೂ ಮಾರ್ಗದರ್ಶನ ನೀಡುವ ಅವರು, ಬಿಡುವಿನ ಹೊತ್ತಿನಲ್ಲಿ ತೋಟಕ್ಕಿಳಿದು ಕೆಲಸ ಮಾಡುತ್ತಾರೆ. ಪೂಜಾ ಅವಧಿಯ ಪೋಷಾಕು ಬೇರೆಯಾದರೆ, ತೋಟದ ಕೆಲಸಕ್ಕೆ ಅದರದ್ದೇ ಆದ ಬಟ್ಟೆ ತೊಡುತ್ತಾರೆ. ಕೃಷಿಕಾರ್ಯವೂ ದೇವರ ಪೂಜೆಯಷ್ಟೇ ಪವಿತ್ರ ಎಂದು ನಂಬಿದವರು ಇವರು, ಪ್ರ್ಯಾಂಕಿ ಡಿಸೋಜ, ಬಾಬಣ್ಣ, ಪ್ರಕಾಶ್, ಸೇಸಪ್ಪ, ಐರಿನ್, ಲಲಿತ, ಚಿನ್ನಮ್ಮ, ಪ್ರಮೋದ್, ವಿನೋದ್ ಹಾಗೂ ಮೋಹನ್ ನಾಯ್ಕರ ಜೊತೆಗೆ ತೋಟದಲ್ಲಿ ಕಾರ್ಮಿಕರಾಗಿ ತೊಡಗಿಸಿ ಕೊಂಡಿರುತ್ತಾರೆ.

ಸಾವಯವ ಕೃಷಿಗೆ ಎಲ್ಲಿಲ್ಲದ ಬೇಡಿಕೆ:

ಬೊರಿಮಾರ್ ಚರ್ಚ್ ಆವರಣದಲ್ಲಿ ಬೆಳೆದ ಸಾವಯವ ಕೃಷಿಗೆ ಎಲ್ಲಿಲ್ಲದ ಬೇಡಿಕೆ ಇದ್ದು, ಸ್ಥಳೀಯವಾಗಿ ಸರ್ವ ಸಮುದಾಯದ ಗ್ರಾಹಕರಿದ್ದಾರೆ. ಅಲ್ಲದೆ ಮಂಗಳೂರಿನ ಪಾದರ್ ಮುಲ್ಲರ್ಸ್ ಆಸ್ಪತ್ರೆ, ಧರ್ಮಗುರುಗಳ ತರಬೇತಿ ಕೇಂದ್ರ ಜೆಪ್ಪು ಸೆಮಿನರಿ, ಬಜ್ಜೋಡಿಯ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮುಖ್ಯ ಕಚೇರಿಗೂ ಬೊರಿಮಾರ್ ಚರ್ಚ್‌ನ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಸಾವಯವ ಉತ್ಪನ್ನ ದೊರಕುವ ಹಿನ್ನೆಲೆಯಲ್ಲಿ ಇವುಗಳಿಗೆ ಬೇಡಿಕೆ ಹೆಚ್ಚಿದೆ. ಚರ್ಚ್‌ನಲ್ಲಿ ಪ್ರತೀ ವಾರ ನಡೆಯುವ ಪೂಜೆಯ ಬಳಿಕದ ಧಾರ್ಮಿಕ ಶಿಕ್ಷಣದಲ್ಲಿ ಪಾಲ್ಗೊಳ್ಳುವ ಪೂರ್ವ ಪ್ರಾಥಮಿಕ ದಿಂದ ತೊಡಗಿ, ಪಿಯುಸಿ ವರೆ ಗಿನ ವಿದ್ಯಾರ್ಥಿಗಳಿಗೆ ನೀಡಲಾಗುವ ಉಚಿತ ಉಪಹಾರಕ್ಕೂ ಇಲ್ಲಿನ ಸಾವಯವ ಕೃಷಿಯ ಉತ್ಪನ್ನ ಆಧಾರವಾಗಿದೆ.

ಈ ಸಾವಯವ ಕೃಷಿಯಿಂದ ಚರ್ಚ್‌ಗೆ 1.5 ಲಕ್ಷಕ್ಕೂ ಅಧಿಕ ಆದಾಯಗಳಿಸಿದೆ. ಧರ್ಮಗುರುವಿನ ಸಮಾಜ ಪ್ರೀತಿಯ ಕಾರ್ಯಗಳ ಹಂಬಲಕ್ಕೆ ಚರ್ಚ್‌ನ ಪಾಲನಾ ಸಮಿತಿಯೂ ಬೆಂಬಲವಾಗಿ ನಿಂತಿದೆ. ವರ್ಷವೊಂದರಲ್ಲೇ ಬೆರಗು ಮೂಡಿಸುವ ರೀತಿಯಲ್ಲಿ ಕೃಷಿಕಾರ್ಯ ನಡೆಸಿರುವ ವಂ.ಪಾದರ್ ಗ್ರೆಗರಿ ಪಿರೇರಾ ಅವರ ಬಗ್ಗೆ ಕ್ರೈಸ್ತವರು ಭಾರೀ ಅಭಿಮಾನ ಇರಿಸಿಕೊಂಡಿದ್ದಾರೆ.

ಫಾ.ಗ್ರೆಗರಿ ಪಿರೇರ

ಕಳೆದ 1 ವರ್ಷದಲ್ಲಿ ಇವರ ಕೃಷಿಯ ಮೇಲಿನ ಅಭಿರುಚಿ ಚರ್ಚ್ ವ್ಯಾಪ್ತಿಯ ಕ್ರೈಸ್ತವರಲ್ಲಿ ಕೃಷಿಯ ಬಗ್ಗೆ ಅಭಿಮಾನ ಹೆಚ್ಚಿಸುವಂತೆ ಮಾಡಿದ್ದು, ಇದೀಗ ಧರ್ಮಗುರು ಫಾದರ್ ಗ್ರೆಗರಿ ಪಿರೇರ, ಎಲ್ಲರ ಪ್ರೀತಿಯ ಪಪ್ಪಾಯಿ ಪಾದರ್ ಆಗಿದ್ದಾರೆ. ಧರ್ಮಗುರು ಕೇವಲ ಪೂಜೆಗಷ್ಟೇ ಸೀಮಿತರಲ್ಲ. ಅವರ ನಡೆನುಡಿಯೂ ಆದರ್ಶವಾಗಬೇಕು ಎಂಬುದನ್ನು ತಮ್ಮ ಆತ್ಮೀಯ ಹಾಗೂ ಆದರ್ಶ ನಡೆನುಡಿಗಳಿಂದ ತೋರಿಸಿಕೊಟ್ಟಿರುವ ಧರ್ಮಗುರು ಈ ಹಿಂದೆ ಸೇವೆ ನೀಡಿದ ಚರ್ಚ್‌ಗಳಲ್ಲಿಯೂ ಇದೇ ತೆರನಾದ ಕೃಷಿಕ್ರಾಂತಿ ಮಾಡಿದವರು.

ನಮ್ಮ ಚರ್ಚ್ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸಂದರ್ಭದಲ್ಲಿಯೆ ಕ್ರಿಯಾಶೀಲ ಧರ್ಮಗುರುವನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್, ನಮ್ಮ ಚರ್ಚ್‌ಗೆ ನೇಮಿಸಿರುವುದು ನಮ್ಮ ಭಾಗ್ಯ. ಅವರ ಕೆಲಸಗಳಿಗೆ ನಮ್ಮ ಪಾಲನಾ ಸಮಿತಿ ಹಾಗೂ ಎಲ್ಲ ಕ್ರೈಸ್ತರು ಸಹಕಾರ ನೀಡುತ್ತಿದ್ದೇವೆ.

-ರೋಷನ್ ಬೊನಿಪಾಸ್ ಮಾರ್ಟಿಸ್, ಉಪಾಧ್ಯಕ್ಷರು ಚರ್ಚ್ ಪಾಲನಾ ಸಮಿತಿ

Writer - ಅಬ್ದುಲ್ ರಹಿಮಾನ್ ತಲಪಾಡಿ

contributor

Editor - ಅಬ್ದುಲ್ ರಹಿಮಾನ್ ತಲಪಾಡಿ

contributor

Similar News