ಸವಲತ್ತಿಗಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಲ್ಲ: ನಾರಾಯಣ ಉಚ್ಚಿಲ್

Update: 2019-08-15 05:22 GMT

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳು ಹೆಚ್ಚು ಕಡಿಮೆ ಕಾಲನ ಮರೆ ಸೇರಿದ್ದಾರೆ. ಇನ್ನೂ ಬದುಕಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಹಾಗೆ ಇನ್ನೂ ತಕ್ಕಮಟ್ಟಿಗೆ ಆರೋಗ್ಯವಂತರಾಗಿಯೇ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು ನಾರಾಯಣ ಉಚ್ಚಿಲ್. ನೂರ ಒಂದರ ಹರೆಯದ ನಾರಾಯಣ ಉಚ್ಚಿಲ್ ಪ್ರಸ್ತುತ ಮಂಗಳೂರಿನ ಗೋರಿಗುಡ್ಡದಲ್ಲಿ ತನ್ನ ಮಗಳು ಮೀರಾ ಮತ್ತು ಅಳಿಯ ಶಶಿಕಾಂತ್ ಉಚ್ಚಿಲ್ ರ ಮನೆಯಲ್ಲಿ ವಾಸವಾಗಿದ್ದಾರೆ.

ನಾರಾಯಣ ಉಚ್ಚಿಲ್‌ರದ್ದು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಮಂಗಳೂರು ತಾಲೂಕಿನ ಸೋಮೇಶ್ವರ -ಉಚ್ಚಿಲ ಗ್ರಾಮದ ತಲೇಬಾಡಿ ಎಂಬಲ್ಲಿನ ಕೊರಗಪ್ಪ-ಅಮುಣಿ ಎಂಬ ಮೋಯ (ಮಲಯಾಳಿ ಮೀನುಗಾರ ) ಸಮುದಾಯದ ದಂಪತಿ ನಾಡಿನ ವಿಮೋಚನೆಗಾಗಿ ತಮ್ಮ ಮೂರು ಮಂದಿ ಮಕ್ಕಳನ್ನು ಅರ್ಪಿಸಿದ್ದರು. ಅವರಲ್ಲಿ ಪಿ.ಕೆ.ಉಚ್ಚಿಲ್ (ಪರಮೇಶ್ವರ ಉಚ್ಚಿಲ್) ಹಾಗೂ ಕೆ.ಕೆ.ಉಚ್ಚಿಲ್ (ಕರುಣಾಕರ) ಕಾಲವಾಗಿದ್ದರೆ ಸದ್ಯ ಬದುಕುಳಿದಿರುವವರು ಎನ್.ಕೆ.ಉಚ್ಚಿಲ್ (ನಾರಾಯಣ) ಒಬ್ಬರೇ...

ಇವರು ಮೂವರೂ ಸಂಗ್ರಾಮದ ಕೆಲಸಗಳನ್ನು ಮಾಡಿದ್ದು ಮುಂಬೈಯಲ್ಲೇ ಆದುದರಿಂದ ದಕ್ಷಿಣ ಕನ್ನಡದ ಉಳಿದ ಸ್ವಾತಂತ್ರ್ಯ ಹೋರಾಟಗಾರರಷ್ಟು ಇವರು ಮಂಗಳೂರಿಗರಿಗೆ ಚಿರಪರಿಚಿತರಲ್ಲ. ಪಿ.ಕೆ. ಮತ್ತು ಕೆ.ಕೆ. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಪಡೆಯುತ್ತಿದ್ದರಾದರೆ ನಾರಾಯಣ ಉಚ್ಚಿಲ್ ಅದನ್ನೂ ಪಡೆಯುತ್ತಿಲ್ಲ.
ಪಿ.ಕೆ.ಉಚ್ಚಿಲ್ ನಾರಾಯಣರ ಅಣ್ಣನಾದರೆ, ಕೆ.ಕೆ.ಉಚ್ಚಿಲ್ ತಮ್ಮ.

 ಎಳವೆಯಲ್ಲೇ ಸ್ವಾತಂತ್ರ್ಯದ ಚಟ ಅಂಟಿಸಿಕೊಂಡ ನಾರಾಯಣ ಮೊತ್ತ ಮೊದಲು ಮಾಡಿದ ಸಂಗ್ರಾಮದ ಕೆಲಸ ಉಪ್ಪುತಯಾರಿಕೆ. ಅವರ ಮನೆಯಿದ್ದದ್ದು ಕಡಲ ತೀರದಲ್ಲೇ... ವೃತ್ತಿಯಲ್ಲಿ ಮೀನುಗಾರರು. ಅತ್ತ ಗಾಂಧೀಜಿ ಉಪ್ಪಿನ ಸತ್ಯಾಗ್ರಹಕ್ಕೆ ಕರೆ ಕೊಡುವ ಹೊತ್ತಿಗೆಲ್ಲಾ ನಾರಾಯಣರ ಇಬ್ಬರು ಸಹೋದರರು ಮುಂಬೈಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿದ್ದರು. ಆಗಿನ್ನೂ ಊರಲ್ಲೇ ಇದ್ದ ನಾರಾಯಣರು ತನ್ನೂರಲ್ಲೇ ಉಪ್ಪುತಯಾರಿಸುವ ಮೂಲಕ ಸಂಗ್ರಾಮದ ಕೆಲಸದಲ್ಲಿ ತೊಡಗಿಸಿಕೊಂಡರು. ತನ್ನ ಮನೆಯ ಅಂಗಳದಲ್ಲೇ ಎರಡು ಬೃಹತ್ ತೊಟ್ಟಿಗಳನ್ನು ತನ್ನ ಕೈಯಾರೆ ನಿರ್ಮಿಸಿ ಕಡಲಿಂದ ನೀರನ್ನು ಹೊತ್ತು ತಂದು ಸುರಿದು ಉಪ್ಪುತಯಾರಿಸುತ್ತಿದ್ದರು.

ಊರಲ್ಲಿದ್ದರೆ ಚಳವಳಿಯ ಕೆಲಸವನ್ನು ಅಷ್ಟೊಂದು ಸಕ್ರಿಯವಾಗಿ ಮಾಡಲಾಗದು ಎಂದು ಸಹೋದರರನ್ನನುಸರಿಸಿ ತನ್ನ ಇಪ್ಪತ್ತಮೂರನೇ ವಯಸ್ಸಿಗೆ ಅಂದರೆ 1941ರಲ್ಲಿ ಮುಂಬೈಗೆ ತೆರಳಿದರು. ಅಲ್ಲಿ ನಾರಾಯಣರು ಹೊಟ್ಟೆಪಾಡಿಗಾಗಿ ಜಾಸ್ಮಿನ್ ಎಂಬ ಬಟ್ಟೆಯ ಮಿಲ್‌ಗೆ ಸೇರಿದರು. ‘‘ಮುಂಜಾನೆ ಏಳು ಗಂಟೆಯಿಂದ ಇಳಿ ಮಧ್ಯಾಹ್ನ ಮೂರು ಗಂಟೆಯವರೆಗೆ ಮಿಲ್‌ನಲ್ಲಿ ಕಾರಕೂನನಾಗಿ ಕೆಲಸ. ಆ ಬಳಿಕ ನೇರವಾಗಿ ಶಿವಾಜಿ ಪಾರ್ಕ್ ಗೆ ಬಂದು ಚಳವಳಿಗಾರರನ್ನು ಸೇರುತ್ತಿದ್ದೆ. ಅಂದು ಮುಂಬೈಯ ಶಿವಾಜಿ ಪಾರ್ಕ್ ಚಳವಳಿಯ ಕೇಂದ್ರ ಸ್ಥಳಗಳಲ್ಲಿ ಒಂದಾಗಿತ್ತು. ಚಳವಳಿಗಾರರೆಲ್ಲಾ ಅಲ್ಲಿ ಸಭೆ ಸೇರಿ ಚಳವಳಿಯ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದರು. ಅಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕೆಲಸವನ್ನು ವಹಿಸುತ್ತಿದ್ದರು. ನಾನು ಚಳವಳಿಯ ಕರಪತ್ರಗಳನ್ನು ಸಾಗಿಸುವ ಕೆಲಸವನ್ನು ಮಾಡುತ್ತಿದ್ದೆ’’ ಎನ್ನುತ್ತಾರೆ ನಾರಾಯಣ.

‘‘1942ರಲ್ಲಿ ಗಾಂಧೀಜಿ ‘ಕ್ವಿಟ್ ಇಂಡಿಯಾ’ ಚಳವಳಿಗೆ ಕರೆ ಕೊಟ್ಟಾಗ ಚಳವಳಿಯ ಕೆಲಸ ಕಾರ್ಯಗಳು ಇನ್ನಷ್ಟು ಬಿರುಸಾಯಿತು. ಅದೇ ಸಂದರ್ಭದಲ್ಲಿ ನಮ್ಮ ಉಚ್ಚಿಲದವರೇ ಆದ ಕೃಷ್ಣಪ್ಪಎಂಬ ಹೋರಾಟಗಾರರೋರ್ವರು ಮುಂಬೈ ಹೈ ಕೋರ್ಟ್‌ನ ಮೇಲಿದ್ದ ಬ್ರಿಟಿಷ್ ಧ್ವಜವನ್ನು ಎಸೆದು ಭಾರತೀಯ ಧ್ವಜವನ್ನು ಹಾರಿಸಿದ ಪ್ರಕರಣ ಎಲ್ಲೆಡೆ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸಂಚಲನ ಮೂಡಿಸಿತ್ತು. ಈ ಸಂದರ್ಭದಲ್ಲಿ ಕೃಷ್ಣಪ್ಪ ಅವರ ತಂಡದಲ್ಲಿ ನಾನು ಸೇರಿದಂತೆ ಹದಿನೈದು ಮಂದಿ ಕಾರ್ಯಚರಿಸಿದ್ದೆವು.’’

 ‘‘ಕಸ ಗುಡಿಸುವವರಂತೆ ವೇಷ ಮರೆಸಿ ಬಂದ ಕೃಷ್ಣಪ್ಪತನ್ನ ಹೊಟ್ಟೆಗೆ ತಿರಂಗಾವನ್ನು ಕಟ್ಟಿ ಅದರ ಮೇಲೆ ಬಟ್ಟೆ ಧರಿಸಿ, ಕೈಯಲ್ಲಿ ಪೊರಕೆ ಹಿಡಿದು ಕೋರ್ಟ್ ಕಟ್ಟಡಕ್ಕೆ ಹೋದರು. ಬಿಗಿ ಪೊಲೀಸ್ ಬಂದೋ ಬಸ್ತನ್ನು ಕಸಗುಡಿಸುವವರ ವೇಷದಲ್ಲಿದ್ದ ಕೃಷ್ಣಪ್ಪಅವರು ಭೇದಿಸಿ ಕಸ ಗುಡಿಸುವವರಂತೆ ನಟಿಸಿ ಹೈಕೋರ್ಟಿನ ನಾಲ್ಕನೇ ಮಹಡಿ ಹತ್ತಿ ಅದರ ತುದಿಯಲ್ಲಿದ್ದ ಬ್ರಿಟಿಷ್ ಧ್ವಜವನ್ನು ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದರು. ಕೂಡಲೇ ಕೃಷ್ಣಪ್ಪರನ್ನು ಪೊಲೀಸರು ಬಂಧಿಸಿದರು. ಹಾಗೆ ಬಂಧನಕ್ಕೊಳಗಾದ ಕೃಷ್ಣಪ್ಪಮತ್ತೆ ಬಿಡುಗಡೆ ಹೊಂದಿದ್ದು ಸ್ವತಂತ್ರ ಭಾರತದಲ್ಲೇ’’ ಎಂದು ನಾರಾಯಣ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತಾರೆ.
 1942 ಅಗಸ್ಟ್ 9ರಂದು ನಡೆದ ಕ್ವಿಟ್ ಇಂಡಿಯಾ ಚಳವಳಿಯ ಕರಪತ್ರ ಹಂಚುವ, ಬೇರೆ ಬೇರೆಡೆಗೆ ತಲುಪಿಸುವ ಕೆಲಸದಲ್ಲೂ ನಾರಾಯಣ ಉಚ್ಚಿಲ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಆ ಕುರಿತು ನಾರಾಯಣ ಉಚ್ಚಿಲ್ ಹೀಗೆನ್ನುತ್ತಾರೆ.
‘‘1947ರ ಪ್ರಾರಂಭದ ದಿನಗಳಲ್ಲಿ ಚಳವಳಿಯ ಕಾವು ಹಿಂದೆಂದೂ ಇರದಷ್ಟು ಏರಿತ್ತು. ಬ್ರಿಟಿಷ್ ಪೊಲೀಸರ ಅಶ್ರುವಾಯುಗಳಿಗೆ ಹೋರಾಟಗಾರರು ಬಗ್ಗುತ್ತಿರಲಿಲ್ಲ. ಒಮ್ಮೆ ಶಿವಾಜಿ ಪಾರ್ಕ್ ಬಳಿ ಸಾವಿರಾರು ಹೋರಾಟಗಾರರು ಸೇರಿದಾಗ ಪೊಲೀಸರು ಹೋರಾಟಗಾರರ ಮೇಲೆ ಗುಂಡು ಹಾರಿಸಿದರು. ಅವರು ಕೇವಲ ಆರು ಮಂದಿ ಪೊಲೀಸರಿದ್ದದ್ದು ನಮ್ಮ ಗಮನಕ್ಕೆ ಬಂತು. ಅವಿತು ನಿಂತು ಕಲ್ಲು ತೂರಾಟ ಮಾಡಿದೆವು. ಅವರ ಬಂದೂಕಿನ ಗುಂಡುಗಳು ಮುಗಿಯುವವರೆಗೂ ನಾವವರನ್ನು ಸತಾಯಿಸಿದೆವು. ಅವರ ಬಂದೂಕುಗಳ ಗುಂಡುಗಳು ಮುಗಿದದ್ದು ಖಚಿತವಾದ ಬಳಿಕ ನಾವು ಮುಂದೆ ಬಂದು ಅವರ ಮೇಲೆ ಕಲ್ಲು ತೂರಾಟ ತೀವ್ರಗೊಳಿಸಿದ್ದೆವು.’’

ಸ್ವಾತಂತ್ರ್ಯ ಹೋರಾಟಗಾರರೆಲ್ಲಾ ಪಿಂಚಣಿ ಪಡೆಯುತ್ತಿದ್ದರೆ, ವಿವಿಧ ಸವಲತ್ತುಗಳನ್ನು ಪಡೆದಿದ್ದರೆ ನಾರಾಯಣ ಅವ್ಯಾವುದರ ಹಿಂದೆಯೂ ಬೀಳಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾದ ಬಳಿಕ ತಾನಾಯಿತು ತನ್ನ ಕಸುಬಾಯಿತು ಎಂದು ಹೊಟ್ಟೆ ಪಾಡಿನ ದುಡಿಮೆಯಲ್ಲಿ ತಲ್ಲೀನರಾಗಿದ್ದರು. ತಾವ್ಯಾಕೆ ಯಾವುದೇ ಸವಲತ್ತಿಗೆ ಯತ್ನಿಸಲಿಲ್ಲ ಎಂದರೆ ‘‘ನಾನು ಸವಲತ್ತಿಗೋಸ್ಕರ ಚಳವಳಿಯ ಕೆಲಸದಲ್ಲಿ ಭಾಗವಹಿಸಿದ್ದಲ್ಲ. ದೇಶದ ವಿಮೋಚನಾ ಹೋರಾಟಕ್ಕೆ ನನ್ನದೂ ಕಿಂಚಿತ್ತು ಪಾಲಿರಲಿ ಎಂದು ಮಾತ್ರ ಭಾಗವಹಿಸಿದ್ದೆ. ಅದು ನನ್ನ ಕರ್ತವ್ಯವಾಗಿತ್ತು’’ ಎನ್ನುತ್ತಾರೆ.

ಫುಟ್ಬಾಲ್ ಪಟು:
ಮುಂಬೈಯಲ್ಲಿದ್ದ ಕಾಲದಲ್ಲಿ ಫುಟ್ಬಾಲ್ ಆಟವನ್ನು ಬಹುವಾಗಿ ನೆಚ್ಚಿಕೊಂಡಿದ್ದ ಉಚ್ಚಿಲ್, ‘ಯುನೈಟೆಡ್ ಉಚ್ಚಿಲ್ಸ್’ ಎಂಬ ಮುಂಬೈ ಉಚ್ಚಿಲಿಗರ ಫುಟ್ಬಾಲ್ ಕ್ಲಬ್ ಗೆ ಆಡುತ್ತಿದ್ದರಂತೆ. ಊರಿಗೆ ಬಂದ ಬಳಿಕವೂ ಹಲವು ವರ್ಷಗಳ ಕಾಲ ಅವರು ಫುಟ್ಬಾಲ್ ಆಡುತ್ತಿದ್ದರು ಎಂದು ಅವರ ಪುತ್ರಿ ಮೀರಾ. ಎಸ್.ಉಚ್ಚಿಲ್ ಹೇಳುತ್ತಾರೆ.

1954ರ ವರೆಗೆ ಮುಂಬೈಯಲ್ಲಿದ್ದ ನಾರಾಯಣ ಉಚ್ಚಿಲ್ ಬಳಿಕ ಊರಿಗೆ ಮರಳಿ ರಂಪಣಿ ಬೋಟು ಖರೀದಿಸಿ ತಮ್ಮ ಕುಲಕಸುಬಾದ ಮೀನುಗಾರಿಕೆಯನ್ನು ಮುಂದುವರಿಸಿದರು. ತನ್ನ ಎಂಬತ್ತೈದರ ಹರೆಯದವರೆಗೂ ಉಚ್ಚಿಲ್ ಮೀನುಗಾರಿಕೆ ಮಾಡುತ್ತಿದ್ದರು. ಎಂಬತ್ತೈದರ ಹರೆಯದಲ್ಲಿ ಅವರ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯಾಯಿತು. ಆಗ ವೈದ್ಯರು ಕೆಲ ಸಮಯ ಕಣ್ಣಿಗೆ ನೀರು ತಾಗಿಸಬಾರದೆಂದಿದ್ದರಂತೆ. ಹಾಗೆ ವಿಶ್ರಾಂತಿಗೆ ಜಾರಿದವರಿಗೆ ಮತ್ತೆ ಕಸುಬಿಗೆ ಹೋಗಲಾಗಿಲ್ಲ ಎಂದು ಅವರ ಅಳಿಯ ಶಶಿಕಾಂತ್ ಉಚ್ಚಿಲ್ ಹೇಳುತ್ತಾರೆ.

ಇದೀಗ ನಾರಾಯಣರಿಗೆ ನೂರ ಒಂದು ವರ್ಷ. ಈಗಲೂ ಪ್ರತೀದಿನ ಬೆಳಗ್ಗೆ ಒಂದು ಗಂಟೆ ಕಡ್ಡಾಯವಾಗಿ ಗಾಂಧಿ ಟೊಪ್ಪಿಧರಿಸುತ್ತಾರೆ. ಮಕ್ಕಳೆಂದರೆ ಅವರಿಗೆ ತುಂಬಾ ಪ್ರೀತಿ. ಗೋರಿಗುಡ್ಡೆಯ ತಮ್ಮ ಮನೆಯ ಗೇಟ್ ಬಳಿ ಒಂದು ಕುರ್ಚಿ ಹಾಕಿ ಪ್ರತಿನಿತ್ಯ ಬೆಳಗ್ಗೆ ಕೂರುವ ಅವರು ರಸ್ತೆಯಲ್ಲಿ ಹೋಗುವ ಶಾಲಾಮಕ್ಕಳಿಗೆ ಟಾಟಾ ಮಾಡುತ್ತಿರುತ್ತಾರೆ.

ವರ್ಷದಲ್ಲಿ ನಾಲ್ಕು ಬಾರಿ ರಸ್ತೆಯಲ್ಲಿ ಸಾಗುವ ಎಲ್ಲಾ ಶಾಲಾ ಮಕ್ಕಳನ್ನು ಕರೆದು ಚಾಕಲೇಟ್ ಹಂಚುತ್ತಾರೆ. ಆ ರಸ್ತೆಯಲ್ಲಿ ಸಾಗುವ ಎಲ್ಲಾ ಶಾಲಾ ವಾಹನಗಳನ್ನು ನಿಲ್ಲಿಸಿ ಮಕ್ಕಳಿಗೆಲ್ಲಾ ಸ್ವತಃ ತನ್ನ ಕೈಯಿಂದ ಚಾಕಲೇಟ್ ಹಂಚುತ್ತಾರೆ. ಆ ನಾಲ್ಕು ದಿನಗಳು 1.ಶಾಲಾರಂಭದ ದಿನ, 2.ಸ್ವಾತಂತ್ರೋತ್ಸವ ದಿನ, 3. ಮಕ್ಕಳ ದಿನಾಚರಣೆ ಮತ್ತು 4. ಗಣರಾಜ್ಯೋತ್ಸವ ದಿನ

ನಾರಾಯಣ ಉಚ್ಚಿಲ್‌ರಿಗೆ ದೈಹಿಕ ಶ್ರಮದ ಕ್ರೀಡೆಗಳಾದ ಫುಟ್ಬಾಲ್, ಕಬಡ್ಡಿ ಎಂದರೆ ತುಂಬಾ ಇಷ್ಟ. ಕ್ರಿಕೆಟ್ ಕೂಡಾ ಅವರ ಮೆಚ್ಚಿನ ಕ್ರೀಡೆಗಳಲ್ಲೊಂದು. ಅವರ ಈ ವಯಸ್ಸಲೂ ಕ್ರೀಡೆಯ ಹುಚ್ಚು ಒಂದಿನಿತೂ ಕಡಿಮೆಯಾಗಿಲ್ಲ. ಫುಟ್ಬಾಲ್ ಮತ್ತು ಕಬಡ್ಡಿ ಲೈವ್ ಇರಲಿ, ಇಲ್ಲದಿರಲಿ ಅದನ್ನು ವೀಕ್ಷಿಸುತ್ತಾರೆ. ಕ್ರಿಕೆಟ್ ಆದರೆ ಲೈವ್ ಮಾತ್ರ ವೀಕ್ಷಿಸುತ್ತಾರೆ. ಇವ್ಯಾವುವೂ ಇಲ್ಲದಿದ್ದರೆ wrestling ವೀಕ್ಷಿಸುವುದೆಂದರೆ ಅವರಿಗೆ ಅಚ್ಚು ಮೆಚ್ಚು.

ಒಟ್ಟಿನಲ್ಲಿ ಅವರ ಜೀವನೋತ್ಸಾಹ ಹದಿನೆಂಟರ ಯುವಕರನ್ನೂ ನಾಚಿಸುವಂತಿದೆ. ತನ್ನ ಕೆಲಸಗಳನ್ನು ಇಂದಿಗೂ ತಾನೇ ಮಾಡುವ ನಾರಾಯಣ ಉಚ್ಚಿಲ್ ಇನ್ನಷ್ಟು ಕಾಲ ಆರೋಗ್ಯವಂತರಾಗಿ ಬದುಕಲಿ ಎಂದು ಹಾರೈಸೋಣ.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News