ಹಿರಿಯರ ಹೆಜ್ಜೆ ಗುರುತಿನಡಿ ಪಕ್ಷ ಸಂಘಟನೆ: ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು

Update: 2019-08-22 05:53 GMT

ಹ್ಯಾಟ್ರಿಕ್ ಸಂಸದರೆಂಬ ಖ್ಯಾತಿಯ ನಳಿನ್ ಕುಮಾರ್ ಕಟೀಲು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಜ್ಯಾಧ್ಯಕ್ಷನಾಗಿ ನೇಮಕಗೊಂಡ ಬಳಿಕ ಬುಧವಾರ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಅವರ ಜತೆ ‘ವಾರ್ತಾಭಾರತಿ’ ನಡೆಸಿದ ಕಿರು ಸಂದರ್ಶನ ಹೀಗಿದೆ.

►ಪಕ್ಷದ ರಾಜ್ಯಾಧ್ಯಕ್ಷರಾಗಿ, ಸಂಸದರಾಗಿ ಎರಡೆರಡು ಹುದ್ದೆ ನಿಮ್ಮ ಹೆಗಲ ಮೇಲಿದೆ. ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತೀರಿ?

ನಳಿನ್: ಲೋಕಸಭಾ ಸದಸ್ಯನಾಗಿ ದ.ಕ. ಜಿಲ್ಲೆಗೂ ನ್ಯಾಯ ಒದಗಿಸಬೇಕು. ಪಕ್ಷದ ರಾಜ್ಯಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷಕ್ಕೂ ನ್ಯಾಯ ಒದಗಿಸಬೇಕು. ಎರಡೂ ಜವಾಬ್ದಾರಿ ಬಂದಿದೆ. ಹಿಂದೆ ಅಧ್ಯಕ್ಷರಾಗಿದ್ದ ಡಿ.ವಿ.ಸದಾನಂದ ಗೌಡರು ಸಂಸದರಾಗಿದ್ದೇ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಹ್ಲಾದ್ ಜೋಶಿಯವರೂ ಇದೇ ರೀತಿ ಕಾರ್ಯ ನಿರ್ವಹಿಸಿದ್ದಾರೆ. ಅವರೆಲ್ಲರೂ ಹಾಕಿಕೊಟ್ಟ ಹೆಜ್ಜೆಯ ಗುರುತಿನಲ್ಲಿ ಈ ಜಿಲ್ಲೆಯ ಅಭಿವೃದ್ಧಿಗೆ ಆಗಬೇಕಾದ ಕಾರ್ಯವನ್ನು ವಿಸ್ತರಿಸುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಆ ಕಾರ್ಯದಲ್ಲೂ ಯಶಸ್ವಿಯಾಗುತ್ತೇನೆಂಬ ವಿಶ್ವಾಸವಿದೆ. ಈ ಬಾರಿ ವಿಶೇಷವೆಂದರೆ ದ.ಕ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿಯ ಶಾಸಕರಿದ್ದಾರೆ. ಸರಕಾರ ನಮ್ಮದೇ. ಉಸ್ತುವಾರಿ ಸಚಿವರೂ ನಮ್ಮವರೇ. ನನ್ನ ಒಂದಷ್ಟು ಭಾರವನ್ನು ಅವರ ಹೆಗಲಿಗೂ ಹಾಕಿ, ಒಟ್ಟಾಗಿ ಈ ಕ್ಷೇತ್ರವನ್ನು ಸಂಸದನಾಗಿಯೂ ಜವಾಬ್ದಾರಿ ನಿರ್ವಹಿಸಲಿದ್ದೇನೆ. ಪಕ್ಷದಲ್ಲಿ ಟೀಮ್ ವರ್ಕ್ ಮುಖ್ಯವಾಗಿದೆ. ಇಲ್ಲಿ ಯಾರೂ ಏಕಾಂಗಿಯಾಗುವುದಿಲ್ಲ. ಸಹಸ್ರಾರು ಕಾರ್ಯಕರ್ತರ ಪಡೆ ಇದೆ. ನಾಯಕರ ತಂಡ ಇದೆ. ಅವರೆಲ್ಲರ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಸಂಘಟನೆಯ ಕಾರ್ಯವನ್ನು ವಿಸ್ತಾರ ಮಾಡಬಲ್ಲೆ ಎಂಬ ವಿಶ್ವಾಸವಿದೆ.

►ಏಳು ಶಾಸಕರಿದ್ದರೂ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಪಕ್ಷದೊಳಗಿನ ಅಸಮಾಧಾನದ ಬಗ್ಗೆ ಏನನ್ನುತ್ತೀರಿ?

ನಳಿನ್: ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಅಧಿಕಾರ ಪಡೆದಿದ್ದೇವೆ. ಅನಿವಾರ್ಯವಾಗಿ ಸರಕಾರ ರಚನೆ ಮಾಡಿದ್ದೇವೆ. ಎಲ್ಲ ಕ್ಷೇತ್ರ, ಎಲ್ಲ ವ್ಯವಸ್ಥೆಗಳನ್ನು ನಿಭಾಯಿಸುವಲ್ಲಿ ಕೆಲವರಿಗೆ ಜವಾಬ್ದಾರಿ ದೊರಕಿದೆ. ಅಧಿಕಾರ ಸಿಗದಿದ್ದಾಗ ನೋವು, ಅಸಮಾಧಾನ ಸಹಜ. ಪಕ್ಷದಲ್ಲಿ ನೋವು ಭಾವನೆಗಳನ್ನು ವ್ಯಕ್ತಪಡಿಸಿದಾಗ ಅದನ್ನು ಸಮಾಧಾನಪಡಿಸುವ ಶಕ್ತಿವಂತರ ತಂಡ ನಮ್ಮಲ್ಲಿದೆ. ನೋವಾದವರನ್ನು ಮಾತನಾಡಿಸುವ ಕೆಲಸ ಆಗಿದೆ. ಮುಂದಕ್ಕೆ ಅವಕಾಶ ಇದೆ. ಪರಿಪೂರ್ಣ ಅಧಿಕಾರ ಪಡೆಯಲು ಇದು ದಾರಿ.

►ಕೆಲ ಜಿಲ್ಲೆಗಳಲ್ಲಿ ಜಾತಿ ಪ್ರಾಮುಖ್ಯತೆ ಪಡೆದಿದೆ, ಅಂತಹ ಪರಿಸ್ಥಿತಿಯಲ್ಲಿ ಪಕ್ಷ ಸಂಘಟನೆ ಹೇಗೆ?

ನಳಿನ್: ರಾಜಕಾರಣದಲ್ಲಿ ಇದು ಸಾಮಾನ್ಯ. ಒಂದೊಂದು ಊರಿನ ಒಂದು ವ್ಯತ್ಯಾಸವನ್ನು ರಾಜಕಾರಣ ಹೊಂದಿದೆ. ಅವೆಲ್ಲವನ್ನೂ ಅಧ್ಯಯನ ಮಾಡಿಕೊಂಡು ಪಕ್ಷವನ್ನು ಹೇಗೆ ಸಂಘಟನಾತ್ಮವಾಗಿ ಬಲಪಡಿಸಬಹುದೆಂಬುದನ್ನು ಪಕ್ಷದ ಸಿದ್ಧಾಂತದೊಳಗೆ ಕ್ರೋಡೀಕರಿಸಲಾಗುವುದು.

►ದ.ಕ. ಜಿಲ್ಲೆ ಹಾಗೂ ಇಡೀ ರಾಜ್ಯ ಬರ- ನೆರೆಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪಕ್ಷದ ಪ್ರಮುಖನಾಗಿ, ಸಂಸದನಾಗಿ ಹೇಗೆ ನಿಭಾಯಿಸುತ್ತೀರಿ?

ನಳಿನ್: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಳೆದ 15 ದಿನಗಳಿಂದ ಪೂರ್ತಿಯಾಗಿ ಬರ ಮತ್ತು ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಿಂದಿನ ಯಾವ ಮುಖ್ಯಮಂತ್ರಿಯೂ ಈ ರೀತಿಯಲ್ಲಿ ದಿನದ 24 ಗಂಟೆಗಳನ್ನೂ ಅದಕ್ಕಾಗಿಯೇ ವಿನಿಯೋಗಿಸಿ, ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ, ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿ, ವೀಕ್ಷಣೆ ಮಾಡಿ ಸ್ಥಳದಲ್ಲೇ ಪರಿಹಾರವನ್ನು ಘೋಷಣೆ ಮಾಡಿ ಅನುಷ್ಠಾನ ಮಾಡುವ ಕೆಲಸ ಮಾಡಿಲ್ಲ. ಇದೀಗ ಮಂತ್ರಿಮಂಡಲ ರಚನೆಯಾಗಿದೆ. ಎಲ್ಲ ಸಚಿವರಿಗೆ ಕ್ಷೇತ್ರದ ಬರ, ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಕೇಂದ್ರ ಸರಕಾರ ಈಗಾಗಲೇ 1,029 ಕೋಟಿ ರೂ. ಬಿಡುಗಡೆ ಮಾಡಿದೆ. ಪಕ್ಷದ ಅಧ್ಯಕ್ಷನಾಗಿ ಪೂರ್ಣ ಬೆಂಬಲ, ಸಹಕಾರ ನೀಡಲಿದ್ದೇನೆ.

►ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ನೆರೆ ವೀಕ್ಷಣೆ ಮಾಡಿ ಹೋಗಿದ್ದರೂ ಪರಿಹಾರ ನೀಡುವಲ್ಲಿ ವಿಳಂಬ ಆಗಿದೆಯಲ್ಲ?

ನಳಿನ್: ಕೇಂದ್ರ ಸರಕಾರಕ್ಕೆ ಪರಿಹಾರ ವಿತರಣೆ ಮಾಡುವಾಗ ಮಾನದಂಡವಿರುತ್ತದೆ. ಅದರಂತೆ ಇಲ್ಲಿಂದ ಪ್ರಸ್ತಾವ ಸಲ್ಲಿಕೆಯಾಗಬೇಕು. ತಂಡ ಅಧ್ಯಯನ ಮಾಡಿ ತುರ್ತು ಪರಿಹಾರವನ್ನು ಬಿಡುಗಡೆಗೊಳಿಸುತ್ತದೆ. ಅದನ್ನು ಈಗಾಗಲೇ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಈಗಾಗಲೇ ಮೂರು ಬಾರಿ ಸಂಸದರು ಒಟ್ಟಾಗಿ ಚರ್ಚಿಸಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿ ಸರ್ವಪಕ್ಷಗಳ ನಿಯೋಗ ಯಾವ ರೀತಿಯಲ್ಲಿ ಪ್ರಧಾನ ಮಂತ್ರಿಯನ್ನು ಭೇಟಿಯಾಗುವುದು ಎಂಬ ಬಗ್ಗೆ ಚರ್ಚಿಸಲಾಗಿದೆ.

ಪಕ್ಷ ಸಂಘಟನೆಗೆ ನಿಮ್ಮದೇ ಆದ ಹೊಸ ಆಲೋಚನೆ ಇದೆಯಾ?

ನಳಿನ್: ನಮ್ಮ ಜಿಲ್ಲೆ ಸಂಘಟನಾತ್ಮಕವಾಗಿ ಇರುವ ಜಿಲ್ಲೆ. ಬಹಳ ವ್ಯವಸ್ಥಿತವಾದ, ಮತಗಟ್ಟೆ ಆಧಾರಿತ ಶಕ್ತಿ ಕೇಂದ್ರಗಳ ರೂಪಿತವಾಗಿ ಕಾರ್ಯಕರ್ತ ಪ್ರಮುಖವಾಗಿ ಸಂಘಟನೆ ರೂಪದಲ್ಲಿ ಕರಾವಳಿ, ಮಲೆನಾಡು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು ಬೆಳೆದಿದೆ. ಇದೇ ಮಾದರಿಯಲ್ಲಿ ಇಡೀ ರಾಜ್ಯದಲ್ಲಿ ಹೆಚ್ಚು ಬಲಾಢ್ಯವಾಗಿರದ ಮಂಡ್ಯ, ಹಾಸನ ಮೊದಲಾದ ಪ್ರದೇಶಗಳಲ್ಲಿ ಪಕ್ಷವನ್ನು ಶಿಸ್ತು, ಅನುಶಾಸನದ ಒಳಗೆ ಸಂಘಟನಾತ್ಮಕವಾಗಿ ಪಕ್ಷವನ್ನು ಬೆಳೆಸಲಿದ್ದೇವೆ.

Full View

Writer - ಸಂದರ್ಶನ: ಸತ್ಯಾ ಕೆ.

contributor

Editor - ಸಂದರ್ಶನ: ಸತ್ಯಾ ಕೆ.

contributor

Similar News