ಸ್ವರ ಮಾಧುರ್ಯದ ಸಾಮ್ರಾಟ ಖಯ್ಯಾಂ
ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ನಾಯಕ ನಟರಷ್ಟೇ ತಾರಾ ಪಟ್ಟ ಗಳಿಸಿದ ಒಂದು ವರ್ಗ ಎಂದರೆ ಅದು ಸಂಗೀತ ನಿರ್ದೇಶಕರ ವರ್ಗ. ಕೆ.ಎಲ್. ಸೈಗಲ್ ಕಾಲಘಟ್ಟದಿಂದ ಸಮೀರ್ ಮಲ್ಲಿಕ್ ಜೋಡಿಯವರೆಗೆ ಸಂಗೀತ ನಿರ್ದೇಶಕರು ನೂರಾರು ಚಿತ್ರ ಗಳನ್ನು ಯಶಸ್ಸಿನ ಉತ್ತುಂಗಕ್ಕೇರಿಸುವಲ್ಲಿ ಯಶಸ್ವಿಯಾಗಿರುವುದನ್ನು ಪ್ರತಿಯೊಂದು ಹಂತದಲ್ಲೂ ಗುರುತಿಸಬಹುದು. ಸೈಗಲ್, ಪಂಕಜ್ ಮಲ್ಲಿಕ್, ಕೆ ಸಿ ಡೇ, ಅನಿಲ್ ಬಿಶ್ವಾಸ್, ಗುಲಾಂ ಮುಹಮ್ಮದ್, ನೌಶಾದ್, ಒ.ಪಿ. ನೈಯ್ಯರ್, ಸಚಿನ್ ದೇವ್ ಬರ್ಮನ್, ರೋಷನ್, ಮದನ್ ಮೋಹನ್, ಲಕ್ಷ್ಮೀಕಾಂತ್ ಪ್ಯಾರೆಲಾಲ್, ಆರ್.ಡಿ. ಬರ್ಮನ್, ಕಲ್ಯಾಣ್‌ಜಿ ಆನಂದ್‌ಜಿ, ಸೋನಿಕ್ ಓಮಿ, ರಾಜೇಶ್ ರೋಷನ್, ಉಷಾ ಖನ್ನಾ ಹೀಗೆ ಮಧುರ ಗೀತೆಗಳ ಒಂದು ಹೊಸ ಜಗತ್ತನ್ನೇ ಸೃಷ್ಟಿಸಿದ ಮಾಂತ್ರಿಕ ಪ್ರತಿಭೆಗಳ ಸಾಲಿನಲ್ಲಿ ವಿಶಿಷ್ಟವಾಗಿ ಹೊಳೆ ಯುವ ತಾರೆಯಂತೆ ಮಿನುಗುತ್ತಾರೆ ಮುಹಮ್ಮದ್ ಝಹೂರ್ ಖಯ್ಯಾಂ ಹಷ್ಮಿ. ಖಯ್ಯಿಂ ಎಂದೇ ಚಿರಪರಿಚಿತರು. ಖಯ್ಯಿಂ ಎಂದರೆ ನೆನಪಾಗು ವುದು ಮರ ಸುತ್ತುವ ಯುಗಗಳ ಗೀತೆಗಳಲ್ಲ ಅಥವಾ ಆಕಾಶ ದಲ್ಲಿ ಹಾರಾಡುತ್ತಾ ಹಾಡುವ ನಾಯಕನ ರೊಮ್ಯಾಂಟಿಕ್ ಹಾಡುಗಳಲ್ಲ. ಖಯ್ಯಾಂ ಎಂದರೆ ನೆನಪಾಗುವುದು ಅರ್ಥವತ್ತಾದ ಗಝಲ್‌ಗಳು, ಮುಜಿರಾಗಳು, ಕವಿತೆಗಳು ಮತ್ತು ವಾದ್ಯ ಸಂಗೀತವೇ ಇಲ್ಲವಲ್ಲಾ ಎನಿಸುವ ಮಧುರ ಗೀತೆಗಳು.
ಖಯ್ಯಂ ಯಾವುದೇ ಬ್ಯಾನರ್ ಅಥವಾ ನಿರ್ಮಾಪಕ ನಿರ್ದೇ ಶಕರಿಗೆ ಜೋತುಬಿದ್ದ ಸಂಗೀತ ನಿರ್ದೇಶಕರಲ್ಲ. ಆದರೆ ಕಮರ್ಷಿಯಲ್‌ಅಲ್ಲದ ಯಾವುದೇ ಚಿತ್ರ ನಿರ್ಮಾಣವಾದರೂ ಅಲ್ಲಿ ಖಯ್ಯಾಂ ಅವರ ಛಾಪು ಕೇಳಿಬರುತ್ತಿತ್ತು. ಬೇರೆ ಸಂಗೀತ ನಿರ್ದೇಶಕರೂ ಅನೇಕ ಸಂದ ರ್ಭಗಳಲ್ಲಿ ಖಯ್ಯಿಂ ಅವರ ಮಾದರಿಯನ್ನೇ ಬಳಸಿರುವುದನ್ನೂ ಗಮನಿಸಬಹುದು. 1927ರ ಫೆಬ್ರವರಿ 18ರಂದು ಪಂಜಾಬ್‌ನ ರಾಹೋನ್‌ನಲ್ಲಿ ಜನಿಸಿದ ಖಯ್ಯಿಂ ಎರಡನೇ ಮಹಾಯುದ್ಧದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಪಂಡಿತ್ ಅಮರ ನಾಥ್ ಅವರ ಬಳಿ ಶಾಸ್ತ್ರೀಯ ಸಂಗೀತವನ್ನು ಕಲಿತ ಖಯ್ಯಿಂ ಜಗಜಿತ್ ಕೌರ್ ಅವರನ್ನು ವರಿಸುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಪ್ರಪ್ರಥಮ ಅಂತರ್ ಧರ್ಮೀಯ ವಿವಾಹಕ್ಕೆ ಸಾಕ್ಷಿ ಯಾಗಿದ್ದರು. ತಮ್ಮ 17ನೆಯ ವಯಸ್ಸಿನಲ್ಲಿ ಪಂಜಾಬ್ ನ ಬಾಬಾ ಕ್ರಿಸ್ಟಿ ಅವರ ಬಳಿ ಸಹಾಯಕ ಸಂಗೀತ ನಿರ್ದೇಶಕರಾಗಿ ತಮ್ಮ ಪಯಣ ಆರಂಭಿಸಿದ ಖಯ್ಯಿಂ ತಮ್ಮ ಕರ್ಮಭೂಮಿಯನ್ನು ಕಂಡುಕೊಂಡಿ ದ್ದು ಮುಂಬೈಯ ಹಿಂದಿ ಚಿತ್ರರಂಗದಲ್ಲಿ. 1950ರ ದಶಕದ ಆರಂಭದಲ್ಲಿ ಹಿಂದಿ ಚಿತ್ರರಂಗ ಒಂದು ಹೊಸ ಸಂಗೀತದ ಅಲೆಯನ್ನು ಸೃಷ್ಟಿಸುತ್ತಿತ್ತು. ಕೆ.ಎಲ್. ಸೈಗಲ್, ಪಂಕಜ್ ಮಲ್ಲಿಕ್ ಅವರ ಪ್ರಭಾವದಿಂದಲೇ ಹೊರ ಹೊಮ್ಮಿದ ಹಲವು ಸಂಗೀತ ನಿರ್ದೇಶಕರು ಭಾರತದ ಶಾಸ್ತ್ರೀಯ ಸಂಗೀತ ಮತ್ತು ಜನಪದ ಸಂಗೀತವನ್ನು ಸಮ್ಮಿಳಿ ತಗೊಳಿಸುವ ಪ್ರಯತ್ನದಲ್ಲಿದ್ದರು. ನೌಶಾದ್ ಅವರಂತಹ ನಿರ್ದೇಶಕರು ಪಾಶ್ಚಿಮಾತ್ಯ ಮತ್ತು ಅರೇಬಿಕ್ ಮೂಲದ ಸಂಗೀತವನ್ನೂ ಅಳವಡಿಸಲು ಯತ್ನಿಸಿದ್ದರು. ಇಂತಹ ಕ್ಲಿಷ್ಟ ಸನ್ನಿವೇಶದಲ್ಲಿ ಚಿತ್ರರಂಗ ಪ್ರವೇಶಿಸಿದ ಖಯ್ಯಿಂ ಯಾವುದೇ ಮಾದರಿಯನ್ನೂ ಅನುಕರಿಸದೆ ತಮ್ಮದೇ ಆದ ಹೊಸ ಮಾಧುರ್ಯವನ್ನು ಸೃಷ್ಟಿಸಿದ್ದನ್ನು ಅವರ ಬೀವಿ (1950)ಚಿತ್ರದಲ್ಲಿ ಕಾಣ ಬಹುದು. ಈ ಚಿತ್ರದಲ್ಲಿ ಮುಹಮ್ಮದ್ ರಫಿ ಹಾಡಿದ ‘ಅಖೇಲೇ ಮೇ ವೋಹ್ ಘಬ್‌ರಾತೇ ತೊ ಹೋಂಗೇ’ ಇಂದಿಗೂ ಜನಪ್ರಿಯ. ಗೋಲ್ಡನ್ ವಾಯ್ಸಿ ಎಂದೇ ಹೆಸರಾಗಿದ್ದ ತಲತ್ ಮೆಹಮೂದ್ ಅವರ ಕಂಠಸಿರಿಗೆ ಖಯ್ಯಿಂ ನ್ಯಾಯ ಒದಗಿಸಿದ್ದು ಫುಟ್‌ಪಾತ್ (1953) ಚಿತ್ರದ ಶಾಮ್ ಎ ಘಮ್ ಕಿ ಕಸಮ್ ಹಾಡಿನ ಮೂಲಕ. ಈ ಹಾಡಿನಲ್ಲಿ ಕಂಠ ಮಾಧುರ್ಯದೊಡನೆಯೇ ಗಮನಿಸಬೇಕಾ ದದ್ದು ಹಿನ್ನೆಲೆ ವಾದ್ಯ ಸಂಗೀತದ ಮೆದು ದನಿ ಮತ್ತು ತೇಲಿಕೆಯ ವಿಧಾನ.ಖಯ್ಯೆಂ ಅವರ ಈ ಪ್ರಯೋಗವನ್ನು ಅವರ ಕಟ್ಟಕಡೆಯ ಹಾಡಿನವ ರೆಗೂ ಗಮನಿಸುತ್ತಲೇ ಬರಬಹುದು. ರಾಜ್ ಕಪೂರ್ ನಟನೆಯ ಫಿರ್ ಸುಬಹ್ ಹೋಗಿ ಚಿತ್ರದ ಹಾಡುಗಳಿಗೆ ತಮ್ಮ ಮಾಧುರ್ಯದ ಸ್ಪರ್ಶ ನೀಡಿದ್ದ ಖಯ್ಯೆಂ ಈ ಚಿತ್ರದ ಓಹ್ ಸುಬಹ್ ಕಭಿ ತೊ ಆಯೇಗಿ (ಮುಖೇಶ್, ಆಶಾಭೋಂಸ್ಲೆ) ಮತ್ತು ಚೀನ್ ಓ ಅರಬ್ ಹಮಾರ (ಮುಖೇಶ್) ಹಾಡುಗಳಲ್ಲಿನ ಸಾಹಿರ್ ಲುಧಿಯಾನ್ವಿಯವರ ಕಾವ್ಯ ಪ್ರತಿಮೆಗೆ ಒಂದು ಹೊಸ ರೂಪವನ್ನೇ ನೀಡಿದ್ದರು.
ಧರ್ಮೇಂದ್ರ ನಟಿಸಿದ ಮೊದಲ ಚಿತ್ರ ‘ಶೋಲಾ ಔರ್ ಶಬ್ನಂ’ ಖಯ್ಯಂ ಅವರ ಮತ್ತೊಂದು ಮೈಲಿಗಲ್ಲು. ಈ ಚಿತ್ರದಲ್ಲಿ ಕವಿ ಕೈಫಿ ಅಜ್ಮಿ ರಚಿಸಿದ ಜಾನೇ ಕ್ಯಾ ಧೂಂಡತಿ ರಹತೀ ಹೈ ಎ ಆಂಖೇ ಮುಜ್ ಮೇ (ಮುಹಮ್ಮದ್ ರಫಿ) ಶಾಸ್ತ್ರೀಯ ಸಂಗೀತದ ಆರೋಹಣ ಅವರೋಹಣಗಳ ಒಂದು ಪ್ರಾತ್ಯಕ್ಷಿಕೆ ಎನ್ನಬಹುದು. ರಫಿ ಅವರ ಗಾಯನ ಮತ್ತು ಕೈಫಿ ಅಜ್ಮಿಯವರ ಅದ್ಭುತ ಕಾವ್ಯ ಪ್ರತಿಭೆಗೆ ಮೆರುಗು ನೀಡಿದ್ದು ಖಯ್ಯಿಂ ಎನ್ನಬಹುದು. ಚೇತನ್ ಆನಂದ್ ಅವರ ಆಖ್ರಿ ಖತ್ ಚಿತ್ರದಲ್ಲಿ ಲತಾಮಂಗೇಶ್ಕರ್ ಹಾಡಿರುವ ಬಹಾರೋ ಮೇರಾ ಜೀವನ್ ಭಿ ಸವಾರೋ ಸ್ವರ ಸಾಮ್ರಾಜ್ಞಿಯ ಅತ್ಯುತ್ತಮ ಗೀತೆಗಳಲ್ಲೊಂದು ಎನ್ನಲಡ್ಡಿಯಿಲ್ಲ. ಶಗುನ್ ಚಿತ್ರದಲ್ಲಿ ತಮ್ಮ ಪತ್ನಿ ಜಗಜೀತ್ ಕೌರ್ ಅವರಿಂದಲೂ ತುಂ ಅಪನಾ ರಂಜ್ ಓ ಘಮ್ ಅಪನಿ ಪೆಹಚಾನ್ ಮುಝೆ ದೇದೋ ಎಂಬ ಮಧುರ ಗೀತೆಯನ್ನು ಹಾಡಿಸಿದ ಖಯ್ಯಿಂ, ಕಮಲ್ ಅಮ್ರೋಹಿಯವರ ಮೇರು ಚಿತ್ರ ರಜಿಯಾ ಸುಲ್ತಾನ್ (1983) ಚಿತ್ರದಲ್ಲಿ ವಿವಿಧಭಾರತಿಯ ಪ್ರಸಿದ್ಧ ಕಾರ್ಯಕ್ರಮ ನಿರೂಪಕರಾಗಿದ್ದ ಕಬ್ಬನ್ ಮಿರ್ಜಾ ಅವರಿಂದ ಆಯಿ ಜಂಝೀರ್ ಖುದಾ ಖೈರ್ ಕರೇ ಎಂಬ ಹಾಡನ್ನು ಹಾಡಿಸುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದರು. ತಮ್ಮ 38ನೆಯ ವಯಸ್ಸಿನಲ್ಲೇ ಕ್ಯಾನ್ಸರ್ ರೋಗಕ್ಕೆ ತುತ್ತಾದ ಕಬ್ಬನ್ ಮಿರ್ಜಾ ತಮ್ಮ್ಮಾಳಗೂ ಒಂದು ಮಧುರ ಗಾನ ಕಂಠ ಇದೆ ಎಂದು ಅರಿ ವಾಗಲು ನೆರವಾಗಿದ್ದು ಖಯ್ಯಾಂ ಎಂದರೆ ಅತಿಶಯೋಕ್ತಿಯೇನಲ್ಲ. ರಜಿಯಾ ಸುಲ್ತಾನ್ ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿರುವ ಏ ದಿಲ್ ಏ ನಾದಾನ್ ಹಾಡನ್ನು ಏಕಚಿತ್ತದಿಂದ ಆಲಿಸಿದರೆ ಅಲ್ಲಿ ಖಯ್ಯಾಂ ಎಂಬ ಮಾಂತ್ರಿಕನ ಪರಿಚಯವಾಗುತ್ತದೆ. ಈ ಹಾಡಿನಲ್ಲಿ ಬಳಸಿರುವ ವಾದ್ಯ ಸಂಗೀತ ಮತ್ತು ಸ್ವರಗಳು ಸೌದಿ ಅರೇಬಿಯಾದ ಮರಳು ಗಾಡಿ ನಿಂದ ಭಾರತದ ಮರಳುಗಾಡಿನವರೆಗಿನ ಸಂಗೀತ ಲಹರಿಯನ್ನು ಪರಿಚಯಿಸುತ್ತವೆ. ಲತಾ ಮಂಗೇಶ್ಕರ್ ಅವರ ಕಂಠಸಿರಿ, ಹೇಮಾ ಮಾಲಿನಿಯ ಸೌಂದರ್ಯ, ಮರಳುಗಾಡಿನ ಛಾಯಾಗ್ರಹಣ ಮತ್ತು ಖಯ್ಯಿಂ ಅವರ ಮಧುರ ಸ್ವರ ಸಂಯೋಜನೆ ಈ ಒಂದು ಹಾಡನ್ನು ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಸಿಬಿಡುತ್ತದೆ. ಜನಪ್ರಿಯ ಚಿತ್ರಗಳ ಸಾಲಿನಲ್ಲೂ ಖಯ್ಯಿಂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 1970ರ ದಶಕದ ಯಶ್ ಚೋಪ್ರಾ ಅವರ ಕಭಿ ಕಭಿ ಚಿತ್ರದಲ್ಲಿ ಸಾಹಿರ್ ಲುಧಿಯಾನ್ವಿ ಅವರೊಡನೆ ಖಯ್ಯಿಂ ನಡೆಸಿದ ಜುಗಲ್ ಬಂದಿ ಕಭಿ ಕಭಿ ಮೆರೆ ದಿಲ್ ಮೇ ಖಯಾಲ್ ಆತಾ ಹೈ ಮೈ ಪಲ್ ದೋ ಪಲ್ ಕಾ ಶಾಯರ್ ಹ್ಞೂಂ ಮುಂತಾದ ಮಧುರ ಗೀತೆಗಳನ್ನು ಸೃಷ್ಟಿಸಿತ್ತು. ತ್ರಿಶೂಲ್, ತೋಡಿಸಿ ಬೇವಫಾಯಿ, ಬಾಜಾರ್, ದರ್ದ್, ನೂರಿ, ನಾಖುದಾ, ಸವಾಲ್, ಬೇಪನಾ, ಖಾನ್‌ದಾನ್, ದಿಲ್ ಎ ನಾದಾನ್, ಮುಂತಾದ ಕಮರ್ಷಿಯಲ್ ಚಿತ್ರಗಳಲ್ಲಿನ ಹಾಡುಗಳಲ್ಲೂ ಸಹ ಖಯ್ಯಿಂ ಅವರ ಛಾಪು ಮಾಸಿರಲಿಲ್ಲ ಎನ್ನುವುದು ಗಮನಾರ್ಹ.
ಈ ಎಲ್ಲ ಶಿಖರಗಳಿಗೆ ಕಳಶಪ್ರಾಯದಂತೆ ಕಂಡುಬರುವ ಒಂದು ಮೇರು ಕೃತಿ ಎಂದರೆ 1981ರಲ್ಲಿ ತೆರೆಕಂಡ ಮುಝಫರ್ ಅಲಿಯವರ ಉಮ್ರಾವ್ ಜಾನ್ ಚಿತ್ರ. ಈ ಚಿತ್ರದಲ್ಲಿನ ಯಾವ ಹಾಡನ್ನು ಉತ್ತಮ ಎಂದು ನಿರ್ಧರಿಸುವುದೇ ಕಷ್ಟವಾಗುತ್ತದೆ. ಆಶಾಭೋಂಸ್ಲೆ ಅವರ ದನಿಯಲ್ಲಿ ಮೂಡಿಬಂದ ದಿಲ್ ಚೀಝ್ ಕ್ಯಾ ಹೈ ಆಜ್ ಮೆರಿ ಜಾನ್ ಲೀಜಿಯೇ ಹಾಡಿಗೆ ರಾಷ್ಟ್ರಪ್ರಶಸ್ತಿ ಬಂದರೂ ಅವರದೇ ದನಿಯಲ್ಲಿ ಮೂಡಿಬಂದ ಇನ್ ಆಂಖೋಂ ಕಿ ಮಸ್ತೀಮೆ ಮಸ್ತಾನೆ ಹಜಾರೋಂ ಹೈ ಮತ್ತು ಏ, ಕ್ಯಾ ಜಗೇ ಹೈ ದೋಸ್ತೋ ಏ ಕೌನ್ ಸಾ ಗುಬಾರ್ ಹೈ ಜುಸ್ತ್ ಜೂ ಕಿಸ್ ಸೆ ಕಿ ಉಸ್ ಕೋ ತೊನ ಪಾಯಾ ಹಮ್ನೇ ಇನ್ನೂ ಉತ್ತಮವಾದ ಸಂಯೋಜನೆಗಳು. ಕನಿಷ್ಠ ಹಿನ್ನೆಲೆ ವಾದ್ಯ ಸಂಗೀತದ ಮೂಲಕವೇ ಮಧುರ ಗೀತೆಗಳಿಗೆ ಭಾವ ಸ್ಪರ್ಶ ನೀಡುವ ಕಲೆಯನ್ನು ಬಹುಶಃ ಖಯ್ಯೆಂ ಅವರಲ್ಲಿ ಮಾತ್ರವೇ ಕಾಣಬಹುದು. ಕವಿತೆಗಳಿಗೆ ಹಾಡಿನ ಸ್ಪರ್ಶ ನೀಡುವ ಕಲೆಗಾರಿಕೆಯನ್ನು ಸಿದ್ಧಿಸಿಕೊಂಡಿದ್ದ ಖಯ್ಯಿಂ ಅನೇಕ ಗಝಲ್‌ಗಳಿಗೆ ಜನಪ್ರಿಯತೆ ಯನ್ನು ತಂದುಕೊಟ್ಟ ಕೀರ್ತಿಗೂ ಭಾಜನರಾಗುತ್ತಾರೆ. ಮಿರ್ಜಾ ಗಾಲಿಬ್, ವಲಿ ಮುಹಮ್ಮದ್ ವಲಿ, ಅಲಿ ಸರ್ದಾರ್ ಜಫ್ರಿ, ಮಜರೂಹ್ ಸುಲ್ತಾನ್‌ಪುರಿ, ಸಾಹಿರ್ ಲುಧಿಯಾನ್ವಿ ಅವರಂತಹ ಹಳೆಯ ತಲೆಮಾರುಗಳಷ್ಟೇ ಅಲ್ಲದೆ, ನಕ್ಷ್‌ಲಾಲ್ ಪುರಿ, ನಿದಾ ಫಾಜ್ಲಿ, ಜಾನ್ ನಿಸಾರ್ ಅಖ್ತರ್, ಅಹಮದ್ ವಾಸಿ, ಜಾವೇದ್ ಅಖ್ತರ್ ಅವರ ಕಾವ್ಯ ಗಳನ್ನೂ ಉತ್ತುಂಗಕ್ಕೇರಿಸುವಲ್ಲಿ ಖಯ್ಯಿಂ ಯಶಸ್ವಿಯಾಗಿದ್ದರು.
ಗಝಲ್‌ಗಳಿಗೆ ಶಾಸ್ತ್ರೀಯ ಸಂಗೀತದ ಸ್ಪರ್ಶ ವನ್ನು ನೀಡುವ ಕಲೆಯನ್ನು ಬಹುಶಃ ಖಯ್ಯಂ ಅವರಂತೆ ಮತ್ತಾರೂ ಪಡೆದಿಲ್ಲ ಎನ್ನಬಹುದು. ಜನಪ್ರಿಯತೆ, ಮಾರುಕಟ್ಟೆ ಮತ್ತು ಬ್ಯಾನರ್‌ಗಳ ಹಿಂದೆ ಬೀಳದೆಯೇ ತಮ್ಮ ಸಂಗೀತ ಲಹರಿಯನ್ನು ಆರು ದಶಕಗಳಿಗೂ ಹೆಚ್ಚು ಕಾಲ ಪ್ರವಹಿಸಿದ ಖಯ್ಯಾಂ ತಮ್ಮ 89ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಖಯ್ಯಾಂ ಜಗಜೀತ್ ಕೌರ್ ಕೆಪಿಜಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ತಮ್ಮ ಬಳಿ ಇದ್ದು ಹತ್ತು ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸಂಪೂರ್ಣ ಆಸ್ತಿಯನ್ನು ಟ್ರಸ್ಟ್‌ಗೆ ಒಪ್ಪಿಸಿದ್ದರು. ಈ ಟ್ರಸ್ಟ್ ಮೂಲಕ ಉದಯೋನ್ಮುಖ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರೋತ್ಸಾಹ ನೀಡುವುದು ಖಯ್ಯಾಂ ಅವರ ಅಭಿಲಾಷೆಯಾಗಿತ್ತು. ಪುಲ್ವಾಮ ಘಟನೆಯ ನಂತರ ತಮ್ಮ ಹುಟ್ಟುಹಬ್ಬ ಆಚರಿಸುವುದಕ್ಕೆ ನಿರಾಕರಿಸಿದ ಖಯ್ಯೆಂ ಶಾಶ್ವತವಾಗಿ ತಮ್ಮ ಈ ನಿಲುವಿಗೆ ಬದ್ಧರಾಗಿ ಅಸಂಖ್ಯಾತ ಸಂಗೀತ ಪ್ರೇಮಿಗಳನ್ನು ಅಗಲಿದ್ದಾರೆ.
ಉಮ್ರಾವ್ ಜಾನ್ ಚಿತ್ರದ ಏ, ಕ್ಯಾ ಜಗೇ ಹೈ ದೋ, ಸ್ತೋ ಏ ಕೌನ್ ಸಾ ಗುಬಾರ್ ಹೈ ಹಾಡಿನ ಮೂಲಕವೇ ಖಯ್ಯೋಂ ಹೆಸರಿನ ಒಂದು ಕಲಾಕೃತಿಗೆ ವಿದಾಯ ಹೇಳಬಹುದೇನೋ. ಖಯ್ಯೋಂ ಇಲ್ಲದ ಸಂಗೀತದ ದುನಿಯಾ ಪ್ರವೇಶಿಸಿದಾಗ ಈ ಹಾಡಿನ ಅರ್ಥವೇ ಧ್ವನಿಸುತ್ತದೆ ಎನಿಸುವುದಿಲ್ಲವೇ?
ಹೋಗಿ ಬನ್ನಿ ಖಯ್ಯಿಂ ಸಾಬ್- ಖುದಾ ಖೈರ್ ಕರೇಂ.