10 ಲಕ್ಷ ರೊಹಿಂಗ್ಯಾ ನಿರಾಶ್ರಿತರ ಮೊಬೈಲ್ ಸಂಪರ್ಕ ಸ್ಥಗಿತಕ್ಕೆ ಬಾಂಗ್ಲಾ ಆದೇಶ

Update: 2019-09-03 14:42 GMT

ಕಾಕ್ಸ್ ಬಜಾರ್ (ಬಾಂಗ್ಲಾದೇಶ), ಸೆ. 3: ಬಾಂಗ್ಲಾದೇಶದ ಆಗ್ನೇಯ ಭಾಗದಲ್ಲಿರುವ ಶಿಬಿರಗಳಲ್ಲಿ ವಾಸಿಸುತ್ತಿರುವ ಸುಮಾರು 10 ಲಕ್ಷ ರೊಹಿಂಗ್ಯಾ ನಿರಾಶ್ರಿತರ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಮೊಬೈಲ್ ಕಂಪೆನಿಗಳಿಗೆ ಅಧಿಕಾರಿಗಳು ಸೋಮವಾರ ಆದೇಶ ನೀಡಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಶಿಬಿರಗಳಲ್ಲಿ ಭಾರೀ ಪ್ರಮಾಣದಲ್ಲಿ ಹಿಂಸೆ ವರದಿಯಾಗಿರುವ ಹಿನ್ನೆಲೆಯಲ್ಲಿ, ಬಾಂಗ್ಲಾದೇಶ ಈ ಕ್ರಮ ತೆಗೆದುಕೊಂಡಿದೆ.

ಈ ಶಿಬಿರಗಳಲ್ಲಿ ವಾಸಿಸುತ್ತಿರುವ ಹೆಚ್ಚಿನ ರೊಹಿಂಗ್ಯಾ ಮುಸ್ಲಿಮರು ಎರಡು ವರ್ಷಗಳ ಹಿಂದೆ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಮ್ಯಾನ್ಮಾರ್ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದವರು.

ಶಿಬಿರಗಳಿಗೆ ಒದಗಿಸಲಾಗಿರುವ ಮೊಬೈಲ್ ಜಾಲಗಳನ್ನು ಮುಚ್ಚಲು ತೆಗೆದುಕೊಂಡ ಕ್ರಮಗಳ ಬಗ್ಗೆ ದೂರಸಂಪರ್ಕ ಕಂಪೆನಿಗಳು ಏಳು ದಿನಗಳಲ್ಲಿ ಸರಕಾರಕ್ಕೆ ವರದಿಗಳನ್ನು ನೀಡಬೇಕಾಗಿದೆ ಎಂದು ಬಾಂಗ್ಲಾದೇಶ ಟೆಲಿಕಮ್ಯುನಿಕೇಶನ್ ರೆಗ್ಯುಲೇಟರಿ ಕಮಿಶನ್ (ಬಿಟಿಆರ್‌ಸಿ) ವಕ್ತಾರ ಝಾಕಿರ್ ಹುಸೈನ್ ಖಾನ್ ಹೇಳಿದರು.

‘‘ಶಿಬಿರಗಳಲ್ಲಿ ತುಂಬಾ ಸಂಖ್ಯೆಯಲ್ಲಿ ನಿರಾಶ್ರಿತರು ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದಾರೆ. ಅದನ್ನು ನಿಲ್ಲಿಸುವಂತೆ ನಾವು ಮೊಬೈಲ್ ಸೇವಾಪೂರೈಕೆದಾರ ಕಂಪೆನಿಗಳಿಗೆ ಸೂಚಿಸಿದ್ದೇವೆ’’ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು. ‘‘ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’’ ಎಂದರು.

ರೊಹಿಂಗ್ಯಾ ನಿರಾಶ್ರಿತರಿಂದ ವಿರೋಧ

ಬಾಂಗ್ಲಾದೇಶ ಸರಕಾರದ ಈ ಆದೇಶಕ್ಕೆ ರೊಹಿಂಗ್ಯಾ ನಿರಾಶ್ರಿತರು ಆಶ್ಚರ್ಯಚಕಿತರಾಗಿದ್ದಾರೆ.

ನಿಷೇಧವು ರೊಹಿಂಗ್ಯಾರ ಜೀವನದ ಮೇಲೆ ಭಾರೀ ಪರಿಣಾಮ ಬೀರಲಿದೆ ಹಾಗೂ ಗಡಿ ಜಿಲ್ಲೆ ಕಾಕ್ಸ್ ಬಝಾರ್‌ನ ವಿವಿಧ ಭಾಗಗಳಲ್ಲಿ ಹಂಚಿಹೋಗಿರುವ ಶಿಬಿರಗಳ ನಡುವಿನ ಸಂಪರ್ಕ ಕಡಿದುಹೋಗಲಿದೆ ಎಂದು ಅನಾಮಧೇಯರಾಗಿ ಉಳಿಯಬಯಸಿದ ರೊಹಿಂಗ್ಯಾ ನಾಯಕರೊಬ್ಬರು ಹೇಳಿದರು.

‘‘ಮ್ಯಾನ್ಮಾರ್ ಅಥವಾ ಜಗತ್ತಿನ ಇತರ ಭಾಗಗಳಲ್ಲಿ ವಾಸಿಸುತ್ತಿರುವ ನಮ್ಮ ಸಂಬಂಧಿಗಳೊಂದಿಗೆ ಸಂಪರ್ಕ ಹೊಂದಲು ನಮಗೆ ಸಾಧ್ಯವಾಗುವುದಿಲ್ಲ’’ ಎಂದು ಅವರು ಹೇಳಿದರು.

ಹೆಚ್ಚಿನ ರೊಹಿಂಗ್ಯಾ ನಿರಾಶ್ರಿತರು ವಿದೇಶಗಳಲ್ಲಿರುವ ರೊಹಿಂಗ್ಯಾ ಮುಸ್ಲಿಮರು ಕಳುಹಿಸುತ್ತಿರುವ ಹಣದಲ್ಲಿ ಜೀವಿಸುತ್ತಿದ್ದಾರೆ ಹಾಗೂ ಹಣ ಕಳುಹಿಸಿರುವ ಬಗ್ಗೆ ಅವರಿಗೆ ಫೋನ್ ಕರೆಗಳು ಬರುತ್ತವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News