ಸಂಸತ್ತನ್ನು ಅಮಾನತಿನಲ್ಲಿಡುವ ಜಾನ್ಸನ್ ನಿರ್ಧಾರ ಕಾನೂನುಬಾಹಿರ: ಬ್ರಿಟನ್ ಸುಪ್ರೀಂ ಕೋರ್ಟ್
Update: 2019-09-24 15:59 GMT
ಲಂಡನ್, ಸೆ. 24: ಬ್ರೆಕ್ಸಿಟ್ ಗಡುವು ಕೊನೆಗೊಳ್ಳುವ ಐದು ವಾರಗಳ ಮುಂಚಿನ ಅವಧಿಯಲ್ಲಿ ಬ್ರಿಟನ್ ಸಂಸತ್ತನ್ನು ಅಮಾನತಿನಲ್ಲಿಡಲು ಪ್ರಧಾನಿ ಬೊರಿಸ್ ಜಾನ್ಸನ್ ತೆಗೆದುಕೊಂಡಿರುವ ನಿರ್ಧಾರವು ಕಾನೂನುಬಾಹಿರವಾಗಿದೆ ಎಂದು ಬ್ರಿಟನ್‌ನ ಅತ್ಯುನ್ನತ ನ್ಯಾಯಾಲಯವಾಗಿರುವ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಸಂಸತ್ತನ್ನು ಅಮಾನತಿನಲ್ಲಿಡುವ ಆದೇಶವು ‘ಶೂನ್ಯವಾಗಿದೆ ಹಾಗೂ ಯಾವುದೇ ಪರಿಣಾಮವನ್ನು ಹೊಂದಿಲ್ಲ’ ಎಂದು ಸುಪ್ರೀಂ ಕೋರ್ಟ್ ಸರ್ವಾನುಮತದ ತೀರ್ಪಿನಲ್ಲಿ ಹೇಳಿದೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಲು (ಬ್ರೆಕ್ಸಿಟ್) ಅಕ್ಟೋಬರ್ 31 ಕೊನೆಯ ದಿನವಾಗಿದೆ. ಅದಕ್ಕಿಂತ ಐದು ವಾರಗಳ ಮುಂಚಿನ ಅವಧಿಯಲ್ಲಿ ಸಂಸತ್ತನ್ನು ಅಮಾನತಿನಲ್ಲಿಡುವಂತೆ ಬೊರಿಸ್ ಜಾನ್ಸನ್ ರಾಣಿ ಎಲಿಝಬೆತ್‌ರಿಗೆ ಸಲಹೆ ನೀಡಿದ್ದರು.
ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗವಹಿಸುವುದಕ್ಕಾಗಿ ಈಗ ನ್ಯೂಯಾರ್ಕ್‌ನಲ್ಲಿದ್ದಾರೆ.