ಗುರುತಿನ ಚೀಟಿಗೆ ಆಧಾರ್ ಲಿಂಕ್: ಸುಳ್ಳು ಸುದ್ದಿ ಹಬ್ಬುವ ಕಿಡಿಗೇಡಿಗಳು

Update: 2019-10-13 07:14 GMT

►ಮತದಾರರ ಪಟ್ಟಿಯ ಪರಿಷ್ಕರಣೆ

►ಆತಂಕ-ಗೊಂದಲಕ್ಕೀಡಾದ ಮತದಾರರು

►ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ಆಕ್ರೋಶ

►ಚುನಾವಣಾ ಸಿಬ್ಬಂದಿಗೆ ಮಾಹಿತಿಯ ಕೊರತೆ

ಮಂಗಳೂರು, ಅ.12: ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯ ಪರಿಷ್ಕರಣೆಯ ಕಾರ್ಯ ಸೆ.1ರಿಂದ ಆರಂಭಗೊಂಡಿದ್ದು, ಅ.15ರವರೆಗೆ ಇದು ಮುಂದುವರಿಯಲಿದೆ. ಅಂದರೆ ಇನ್ನು ಕೇವಲ ಎರಡು ದಿನದಲ್ಲಿ ಪರಿಷ್ಕರಣೆ ಕಾರ್ಯ ಕೊನೆಗೊಳ್ಳಲಿದೆ. ಈ ಮಧ್ಯೆ ಕೆಲವು ಕಿಡಿಗೇಡಿಗಳು ಇನ್ನೆರಡು ದಿನದೊಳಗೆ ವೋಟರ್ ಐಡಿಗೆ ಆಧಾರ್ ನಂಬರ್ ‘ಲಿಂಕ್’ ಮಾಡದಿದ್ದರೆ ತಮ್ಮ ವೋಟರ್ ಐಡಿ (ಮತದಾರರ ಗುರುತಿನ ಚೀಟಿ)ರದ್ದಾಗಲಿದೆ ಎಂಬ ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ನಂಬಿರುವ ಅನೇಕರು ಅದರಲ್ಲೂ ಹೊರ ರಾಜ್ಯ ಮತ್ತು ಮುಖ್ಯವಾಗಿ ಗಲ್ಫ್‌ನಲ್ಲಿರುವವರು ಮತದಾರರ ಪಟ್ಟಿಯಿಂದ ತಮ್ಮ ಹೆಸರು ಡಿಲೀಟ್ ಆದೀತು ಎಂದು ಆತಂಕಿತರಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗೊಂದಲವೂ ಸೃಷ್ಟಿಯಾಗಿದೆ. ಏತನ್ಮಧ್ಯೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.

ಸಾಮಾನ್ಯವಾಗಿ ಕೆಲವು ಮತದಾರರ ಹೆಸರು ಕೊನೆಯ ಕ್ಷಣದಲ್ಲಿ ಪಟ್ಟಿಯಿಂದ ಕಣ್ಮರೆಯಾಗುತ್ತದೆ. ಇದು ಅನೇಕ ಗೊಂದಲ, ಗುದ್ದಾಟಕ್ಕೆ ಕಾರಣವಾಗುತ್ತದೆ. ಆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆಗೆ ಮುಂದಾಗಿದೆ. ಅಂದರೆ ಮತದಾರರ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ಹೆಸರು ಡಿಲೀಟ್, ಫೋಟೊ ಮತ್ತು ವಿಳಾಸ ಬದಲಾವಣೆ ಸಹಿತ ಇತರ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಅದರಂತೆ ಬಿಎಲ್‌ಒಗಳು ಪರಿಷ್ಕರಣೆಯ ಕಾರ್ಯಕ್ಕೆ ಮುಂದಾಗಿದ್ದಾರೆ.

 ಅಂದರೆ 8 ದಾಖಲೆಗಳ ಪೈಕಿ ಯಾವುದಾದರೊಂದು ದಾಖಲೆಯ ಛಾಯ ಪ್ರತಿಯೊಂದನ್ನು ಹಾಜರುಪಡಿಸಿ ಪರಿಶೀಲಿಸಬಹುದಾಗಿದೆ. ಪಾಸ್‌ಪೋರ್ಟ್, ಚಾಲನಾ ಪರವಾನಿಗೆ, ಸರಕಾರಿ/ಅರೆ ಸರಕಾರಿ ಅಧಿಕಾರಿಗಳ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ ಅಥವಾ ಆಯೋಗ ಅನುಮೋದಿಸಿದ ಇತರ ಯಾವುದೇ ದಾಖಲೆಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ಅಥವಾ ಮನೆ ಮನೆಗೆ ಅಧಿಕಾರಿಗಳು ಭೇಟಿ ನೀಡುವ ಸಂದರ್ಭ ಹಾಜರುಪಡಿಸಬಹುದಾಗಿದೆ.

►ಎಲ್ಲಿ ಪರಿಶೀಲಿಸಬಹುದು?: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿಯೂ ಪರಿಶೀಲಿಸಬಹುದು. ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ನೋಂದಣಾಧಿಕಾರಿ ಬಳಿ ಅಥವಾ ಆಯಾ ಮತಗಟ್ಟೆಯ ಅಧಿಕಾರಿ ಬಳಿಯೂ ಪರಿಶೀಲಿಸಬಹುದು.

►ವೆಬ್‌ಸೈಟ್ ಮೂಲಕವೂ ಪರಿಶೀಲನೆ: ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್ (voter help line), ವೆಬ್ ಪೋರ್ಟಲ್ (www.nvsp.in), ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆ ಮಾಡಿ ಅಥವಾ ಭೇಟಿ ಮಾಡಿ ಪರಿಶೀಲಿಸಿಕೊಳ್ಳಬಹುದು. *ಕರಡು ಪಟ್ಟಿ: ಅ.15ರಂದು ಸಮಗ್ರ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಅ.15ರಿಂದ 30ರೊಳಗೆ ಈ ಪಟ್ಟಿಯ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು. ಡಿಸೆಂಬರ್ 15ರೊಳಗೆ ಆಕ್ಷೇಪಣೆಯ ವಿಲೇವಾರಿ ನಡೆಸಿ ಅಂತಿಮ ಪ್ರಕಟನೆಗೆ ಆಯೋಗದ ಅನುಮತಿಗೆ ಪಟ್ಟಿ ಸಲ್ಲಿಸಲಾಗುತ್ತದೆ. ಬಳಿಕ ಆಯೋಗದ ನಿರ್ಧಾರದಂತೆ ಪರಿಷ್ಕೃತ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ.

►ಈಡೇರದ ಗುರಿ: ದ.ಕ.ಜಿಲ್ಲೆಯಲ್ಲಿ ಸೆ.1ರಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭಿಸಲಾಗಿದ್ದರೂ ಕೂಡ ಜಿಲ್ಲಾಡಳಿತದ ನಿರೀಕ್ಷೆಯಂತೆ ಪರಿಷ್ಕರಣೆಯಲ್ಲಿ ಪ್ರಗತಿ ಸಾಧಿಸಿಲ್ಲ. ಈವರೆಗೆ ಜಿಲ್ಲೆಯಲ್ಲಿ ಶೇ.10.38ರಷ್ಟು ಮತದಾರರು ತಮ್ಮ ಗುರುತಿನ ಚೀಟಿಯನ್ನು ಪರಿಶೀಲಿಸಿದ್ದಾರೆ. ಅಂದರೆ ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ 17,24,458 ಮತದಾರರ ಈ ಪೈಕಿ 1,79,034 ಮಂದಿ ಮಾತ್ರ ತಮ್ಮ ಹೆಸರುಗಳನ್ನು ಪರಿಶೀಲಿಸಿದ್ದಾರೆ.

ಮಾಹಿತಿ ಕೊರತೆ

ಅಂಗನವಾಡಿ/ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಹೀಗೆ ಗ್ರಾಮಮಟ್ಟದ ಅಧಿಕಾರಿ/ನೌಕರರಿಗೆ ಮತದಾರರ ಪರಿಷ್ಕರಣೆಯ ಜವಾಬ್ದಾರಿ ವಹಿಸಲಾಗಿದೆ. ಆದರೆ, ಇವರಿಗೆ ಸೂಕ್ತ ಮಾಹಿತಿಯ ಕೊರತೆ ಇರುವುದರಿಂದ ಮತದಾರರು ಗೊಂದಲಕ್ಕೆ ಸಿಲುಕಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಅಂದರೆ ಮತದಾರರ ಹೆಸರು ಮತ್ತು ವಿಳಾಸ ತಿದ್ದುಪಡಿ, ಹಳೆಯ ಫೋಟೋದ ಬದಲು ಹೊಸ ಫೋಟೋ ಅಳವಡಿಸಲು ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಅಂಗನವಾಡಿ/ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ವರ್ಗವು ಕಡ್ಡಾಯವಾಗಿ ಎಲ್ಲಾ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿಯನ್ನು ಪಡೆಯುತ್ತಿರುವುದು ಕಂಡು ಬರುತ್ತದೆ. ಗ್ರಾಮಾಂತರ ಪ್ರದೇಶದಲ್ಲಂತೂ ಇದು ವ್ಯಾಪಕವಾಗಿದೆ. ಮೊದಲೇ ‘ಎನ್‌ಆರ್‌ಸಿ’ ಬಗ್ಗೆ ಆತಂಕಗೊಂಡಿರುವ ಜನರು ಅದರಲ್ಲೂ ಮುಸ್ಲಿಮರು, ಕ್ರೈಸ್ತರು ಈ ದಾಖಲೆಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಕೊಡದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕುತ್ತಾರೋ ಅಥವಾ ಮತದಾರರ ಗುರುತಿನ ಚೀಟಿಯನ್ನು ಕಳಕೊಳ್ಳಬಹುದೋ ಎಂದು ಆತಂಕಿತರಾಗಿದ್ದಾರೆ.

ಅಂದಹಾಗೆ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವ ಕಾರ್ಯ ಇನ್ನೂ ಅಧಿಕೃತಗೊಂಡಿಲ್ಲ. ಹೀಗಿರುವಾಗ ಆಧಾರ್ ಕಾರ್ಡ್ ಯಾಕೆ? ಒಂದು ವೇಳೆ ಎರಡು ಕಡೆ ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಆಧಾರ್ ಕಾರ್ಡ್‌ನ ಆಧಾರದ ಮೇಲೆ ಸಿಕ್ಕಿಬೀಳಬಹುದೇ? ಸಿಕ್ಕಿಬಿದ್ದರೆ ಶಿಕ್ಷೆಯಾಗಬಹುದೇ ಎಂದೂ ಕೂಡ ಹಲವರು ಆತಂಕಿತರಾಗಿದ್ದಾರೆ. ಈ ಮಧ್ಯೆ ಗಲ್ಫ್ ರಾಷ್ಟ್ರಗಳಲ್ಲಿರುವ ಅನೇಕ ಮುಸ್ಲಿಂ ಯುವಕರ ಹೆಸರು ಪಡಿತರ ಚೀಟಿಯಿಂದ ಅಳಿಸಿ ಹಾಕಲಾಗಿದೆ. ಪಡಿತರ ಚೀಟಿಯಲ್ಲಿ ಹೆಸರಿಲ್ಲದವರ ಮತದಾರರ ಗುರುತಿನ ಚೀಟಿಯು ರದ್ದಾದೀತೇ? ಎಂಬ ಆತಂಕವೂ ಹಲವರಿಗೆ ಕಾಡತೊಡಗಿದೆ.

ಗುರುತಿನ ಚೀಟಿಯ ನಂಬ್ರ ಮತ್ತು ಮೊಬೈಲ್ ಸಂಖ್ಯೆ ಜೋಡಣೆಗಾಗಿ ರೇಶನ್ ಕಾರ್ಡನ ಜೆರಾಕ್ಸ್ ಪ್ರತಿ, ಮೊಬೈಲ್ ಸಂಖ್ಯೆಯನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ನೀಡಬೇಕು ಎಂಬ ಒಕ್ಕಣೆಯುಳ್ಳ ಭಿತ್ತಿಪತ್ರವನ್ನು ತಹಶೀಲ್ದಾರರ ಉಲ್ಲೇಖದೊಂದಿಗೆ ಗ್ರಾಮಾಂತರ ಪ್ರದೇಶದ ಹಲವು ಕಡೆ ಅಳವಡಿಸಲಾಗಿದೆ. ಆದರೆ, ಇಂತಹ ಯಾವುದೇ ಸೂಚನೆಯನ್ನು ನೀಡಿಲ್ಲ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆಧಾರ್ ಲಿಂಕ್ ಇಲ್ಲ

ಜಿಲ್ಲೆಯಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಬಗ್ಗೆ ಯಾವುದೇ ಗೊಂದಲವೂ ಬೇಡ. ಗುರುತಿನ ಚೀಟಿ ಇದ್ದರೂ ಕೂಡ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತದಾನದಿಂದ ವಂಚಿತರಾಗಲಿದ್ದಾರೆ. ಇದನ್ನು ತಪ್ಪಿಸಲು ಚುನಾವಣೆಗೆ ಮುನ್ನವೇ ಮತದಾರರ ಪಟ್ಟಿಯ ಪರಿಷ್ಕರಣೆಗೆ ಚುನಾವಣಾ ಆಯೋಗ ಮುಂದಾಗಿದೆ. ಆಯೋಗದ ಸೂಚನೆಯಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗುತ್ತದೆ. ಈ ಅವಕಾಶವನ್ನು ಎಲ್ಲ ಮತದಾರರು ಬಳಸಿಕೊಂಡರೆ ಒಳ್ಳೆಯದು. ಅಂದರೆ ಈಗಲೇ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು. ಅದಕ್ಕೆ ಬಿಎಲ್‌ಒ ಬಳಿಯೇ ಹೋಗಬೇಕಾಗಿಲ್ಲ. ಆ್ಯಪ್ ಬಳಸಿ ಮೊಬೈಲ್‌ನಿಂದಲೂ ನೋಡಬಹುದು. ಗುರುತಿನ ಚೀಟಿಯಲ್ಲಿರುವ ಹೆಸರು, ವಿಳಾಸವನ್ನು ಪೂರಕ ದಾಖಲೆ ಸಲ್ಲಿಸಿ ಬದಲಿಸಬಹುದು ಅಥವಾ ತಿದ್ದುಪಡಿ ಮಾಡಬಹುದು. ಹಳೆಯ ಫೋಟೋವನ್ನೂ ಬದಲಿಸಬಹುದು. ಹಾಗಂತ ಇದೇನೂ ಕಡ್ಡಾಯವಲ್ಲ. ದಾಖಲೆಗಳನ್ನು ಕೊಟ್ಟು ಪರಿಷ್ಕರಣೆಗೆ ಸಹಕರಿಸುವುದು ಐಚ್ಛಿಕವಾಗಿದೆ.

ಸಿಂಧೂ ರೂಪೇಶ್

ಜಿಲ್ಲಾಧಿಕಾರಿ, ದ.ಕ.ಜಿಲ್ಲೆ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News