‘ಅಲ್ಲಗಳೆಯುವಿಕೆ’ಯ ಹಿಂದಿನ ರಾಜಕೀಯ
ಪರಸ್ಪರ ಪಾಲುದಾರಿಕೆಯುಳ್ಳ ಔಪಚಾರಿಕ ವಲಯದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ಚುನಾವಣಾ ರಾಜಕೀಯ ವಲಯದಲ್ಲಿ ಪರಸ್ಪರ ವಿರುದ್ಧವೆಂದು ತೋರುವ ಎರಡು ಸಂಗತಿಗಳು ಪ್ರಧಾನವಾಗಿ ಕಂಡುಬರುತ್ತವೆ. ಆದರೆ ಸಾರದಲ್ಲಿ ಅವೆರಡೂ ಒಂದೇ ಆಗಿವೆ. ಮೊದಲನೆಯ ನಿಲುವು ತಾವು ತಮ್ಮ ಮತವನ್ನು ಅಭಿವೃದ್ಧಿ, ಒಳ್ಳೆಯ ಆಡಳಿತ ಮತ್ತು ಪ್ರಖರ ರಾಷ್ಟ್ರೀಯವಾದದ ಪರವಾಗಿ ಚಲಾಯಿಸುತ್ತೇವೆಂದು ಸರ್ವೇ ಸಾಮಾನ್ಯವಾಗಿ ಮತದಾರರು ನೀಡುವ ಹೇಳಿಕೆ. ಇಲ್ಲಿ ಮತದಾರರು, ತಾವು ತಮ್ಮ ಸ್ವಂತ ಹಿತಾಸಕ್ತಿಗಳಿಗಿಂತ ಹೆಚ್ಚಾಗಿ ಸರ್ವಜನ ಹಿತಾಸಕ್ತಿಯ ಬಗ್ಗೆ ಕಾಳಜಿ ಉಳ್ಳವರೆಂದು ಸೂಚಿಸುತ್ತಿದ್ದಾರೆ. ಹೀಗಾಗಿ ಯಾವುದು ತಮ್ಮ ಹಿತಾಸಕ್ತಿ ಅಲ್ಲ ಎಂಬುದನ್ನು ಇಲ್ಲಿ ಪರೋಕ್ಷವಾಗಿ ಸೂಚಿಸಲ್ಪಡುತ್ತಿರುತ್ತದೆ. ಆದರೆ ಬೇರೆಬೇರೆ ಹಂತದ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ ರಾಜಕೀಯ ನಾಯಕರು ಮಾತ್ರ ತಾವು ಯಾವುದು ಅಲ್ಲ ಎಂಬ ಬಗ್ಗೆ ನೇರವಾಗಿಯೇ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ಅದನ್ನು ಅವರು ಹೆಚ್ಚು ಒತ್ತುಗಳೊಂದಿಗೆ ಸ್ಪಷ್ಟಪಡಿಸುತ್ತಿರುತ್ತಾರೆ. ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಲೋಕಕಲ್ಯಾಣಕ್ಕಾಗಿಯೇ ವಿನಾ ಸ್ವಂತ ಹಿತಾಸಕ್ತಿಗಳಿಗಾಗಿ ಅಲ್ಲವೆಂದು ತಮ್ಮ ಸಾರ್ವಜನಿಕ ಪ್ರದರ್ಶನಗಳಲ್ಲಿ ಪದೇಪದೇ ಸ್ಪಷ್ಟಪಡಿಸುತ್ತಿರುತ್ತಾರೆ. ಅವರು ಯಾವುದರ ಪರ ಮತ್ತು ಯಾವುದರ ಪರವಲ್ಲವೆಂಬ ರಾಜಕೀಯ ಹೇಳಿಕೆಗಳು ಚುನಾವಣಾ ಸಂದರ್ಭಗಳಲ್ಲಿ ಸಾರೋದ್ಧಾರವಾಗಿ ಸಾರ್ವಜನಿಕರಿಗೆ ಭರವಸೆಗಳನ್ನು ನೀಡುವುದರಲ್ಲಿ ಇನ್ನೂ ಸ್ಪಷ್ಟವಾಗಿ ಪ್ರತಿಬಿಂಬಿತಗೊಳ್ಳುತ್ತವೆ. ಆದರೆ ನಾವು ಇಲ್ಲಿ ಕೇಳಬೇಕಿರುವ ಪ್ರಶ್ನೆಯೇನೆಂದರೆ: ಯಾವ ನೈಜ ಪ್ರೇರಣೆಗಳಿಂದ ರಾಜಕೀಯ ನಾಯಕರು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಾರೆ? ಅದು ಸ್ವಾರ್ಥ ಹಿತಾಸಕ್ತಿಯೋ? ಸಾರ್ವಜನಿಕ ಹಿತಾಸಕ್ತಿಯೋ? ಆದರೆ ಬಹಳಷ್ಟು ಸಾರಿ ಇದಕ್ಕೆ ಉತ್ತರ ಸ್ವಾರ್ಥ ಹಿತಾಸಕ್ತಿಯೇ ವಿನಾ ಸಾರ್ವಜನಿಕ ಹಿತಾಸಕ್ತಿಯಲ್ಲ ಎನ್ನುವುದು ಸ್ಪಷ್ಟ. ಚುನಾವಣಾ ರಾಜಕೀಯ ವಲಯ ಮತ್ತು ಸಾಪೇಕ್ಷವಾಗಿ ರಾಜಕೀಯ ಮತ್ತು ಸಾಂಸ್ಥಿಕ ಅಧಿಕಾರಗಳ ಮೇಲೆ ಅದು ದೊರಕಿಸುವ ನಿಯಂತ್ರಣಗಳು ಪ್ರಧಾನವಾಗಿ ರಾಜಕೀಯ ನಾಯಕರ ಸ್ವಾರ್ಥ ಹಿತಾಸಕ್ತಿಗೆ ಮಾತ್ರ ಸೇವೆ ಸಲ್ಲಿಸಿದೆ. ಮತ್ತದು ಮೂರ್ತ ಮತ್ತು ಅಮೂರ್ತವಾದ ಎರಡೂ ನೆಲೆಗಳಲ್ಲೂ ಪ್ರತಿಫಲಿಸುತ್ತದೆ. ರಾಜಕಾರಣಿಗಳ ಭೌತಿಕ ಆಸ್ತಿಪಾಸ್ತಿಗಳು ವರ್ಷದಿಂದ ವರ್ಷಕ್ಕೆ ಮುಗಿಲಿನೆತ್ತರಕ್ಕೆ ಏರುತ್ತಾ ಹೋಗುವುದು ನಿಚ್ಚಳವಾಗಿ ಕಂಡುಬರುತ್ತದೆ. ಆದರೆ ರಾಜಕಾರಣವೆಂಬ ಈ ಉದ್ಯಮ ದಲ್ಲಿ ರಾಜಕಾರಣಿಗಳು ಮೌಲ್ಯಪ್ರತಿಭೆಗಳಂತಹ ಯಾವುದೇ ನೈತಿಕ ಸಂಪನ್ಮೂಲವನ್ನು ವಿನಿಯೋಗಿಸದೆಯೇ ತಮ್ಮ ಆಸ್ತಿಪಾಸ್ತಿಗಳನ್ನು ಹಲವು ಪಟ್ಟು ಹೆಚ್ಚಿಸಿಕೊಳ್ಳುತ್ತಾ ಹೋಗುವುದು ಮಾತ್ರ ಆಶ್ಚರ್ಯಕರ. ಈ ಮೌಲ್ಯ ಹೀನತೆಯು ವ್ಯಕ್ತಿಸತ್ವವನ್ನು ಒಳಗೊಂಡ ನೈತಿಕ ಸರಕಿನ ಜೊತೆ ರಾಜಿ ಮಾಡಿಕೊಳ್ಳದೆ ಸ್ವಾರ್ಥ ಪ್ರಯೋಜನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಒಂದು ರಾಜಕೀಯ ವ್ಯಕ್ತಿತ್ವವು ಚುನಾವಣಾ ಅಥವಾ ಔಪಚಾರಿಕ ರಾಜಕಾರಣದಲ್ಲಿ ಒಂದು ಅಭೌತಿಕವಾದ ಹಾಗೂ ತನ್ನ ಸ್ವಂತ ಒಡೆತನದಲ್ಲಿರುವ ಖಾಸಗಿ ಆಸ್ತಿಯಾದ ‘ಸ್ವಪ್ರೇಮ’ವನ್ನು ಹೆಚ್ಚಿಸಿಕೊಳ್ಳುವ ಉಜ್ವಲ ಅವಕಾಶವನ್ನು ಒದಗಿಸುತ್ತದೆ. ಇಂದಿನ ಸಂದರ್ಭದಲ್ಲಿ ಕೆಲವು ಪ್ರಮುಖ ರಾಜಕಾರಣಿಗಳ ಮಟ್ಟಿಗಂತೂ ಈ ಸ್ವಪ್ರೇಮವೂ ಸ್ವಹಿತಾಸಕ್ತ ಗೀಳಾಗಿಬಿಟ್ಟಿದೆ. ಅಂತಹ ಗೀಳಿಗೆ ಎಂತಹ ದುರಂತ ಸಂದರ್ಭಗಳಲ್ಲೂ ‘ಸೆಲ್ಫಿ’ಗಳು ದೃಶ್ಯಾಭಿವ್ಯಕ್ತಿಯನ್ನೂ, ಟ್ವೀಟ್‌ಗಳು ಶಬ್ದಾಭಿವ್ಯಕ್ತಿಯನ್ನೂ ಒದಗಿಸುತ್ತವೆ. ಸ್ವಪ್ರೇಮವೇ ಸ್ವಸತ್ವಕ್ಕೆ ಪರ್ಯಾಯವಾಗಿಬಿಡುತ್ತಿದೆ. ವಾಸ್ತವವಾಗಿ ಅಂತಹ ಸಂದರ್ಭಗಳಲ್ಲಿ ತಮ್ಮ ಅನುಯಾಯಿಗಳಿಗೆ ಸಾಪೇಕ್ಷವಾಗಿ ಸಣ್ಣಪುಟ್ಟ ಸ್ಥಾನಮಾನಗಳನ್ನು ಒದಗಿಸಬಲ್ಲ ಅಥವಾ ಕೆಲವು ಸೌಲಭ್ಯಗಳನ್ನು ವಿಸ್ತರಿಸಬಲ್ಲ ನಾಯಕರ ಸಾಮರ್ಥ್ಯವೇ ಅವರ ಸತ್ವವನ್ನು ಅಳೆಯುವ ಮಾನದಂಡಗಳೂ ಆಗಿಬಿಡುತ್ತದೆ. ಹೀಗಾಗಿ ಒಬ್ಬ ವ್ಯಕ್ತಿಯ ಸತ್ವವನ್ನು ಸರಿತಪ್ಪುಗಳ ಮಾನದಂಡದಿಂದಲ್ಲದೆ ಎಷ್ಟರಮಟ್ಟಿಗೆ ಸೌಲಭ್ಯಗಳನ್ನು ಒದಗಿಸಬಲ್ಲರು ಎಂಬುದನ್ನು ಕೂಡಾ ಅವಲಂಬಿಸಿಬಿಡುತ್ತದೆ. ತನ್ನದೇ ಆದ ಆಶಯ ಹಾಗೂ ಮಾನದಂಡಗಳನ್ನು ಆಧರಿಸಿ ಔಪಚಾರಿಕ ರಾಜಕೀಯವನ್ನು ಪ್ರವೇಶಿಸುವುದು ರಾಜಕೀಯ ನಾಯಕರಿಗೆ ಸಾಪೇಕ್ಷ ಸ್ವಾಯತ್ತೆಯನ್ನು ಒದಗಿಸುತ್ತದೆ. ಆದರೆ ಸೌಲಭ್ಯಗಳನ್ನು ಮತ್ತು ಪ್ರಲೋಭನೆಗಳನ್ನು ಆಧರಿಸಿ ರಾಜಕೀಯ ನಡೆಸುವುದರಿಂದ ಸರಿತನಗಳ ಮೂಲಕ ಔಪಚಾರಿಕ ರಾಜಕಾರಣ ಪ್ರವೇಶಿಸುವ ಸಾಧ್ಯತೆಯನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ವಿವಿಧ ಹಂತಗಳ ವಿತರಣಾ ಸಂಸ್ಥೆಗಳ ರಾಜಕೀಯ ಸತ್ವಗಳು ಆಯಾ ಹಂತಗಳಲ್ಲಿ ಅಧಿಕಾರ ಸ್ಥಾನದಲ್ಲಿರುವವರ ಮೂಲಕವೇ ಅಳೆಯಲ್ಪಡು ತ್ತದೆ. ಹೀಗಾಗಿ ಅಗತ್ಯ ಮತ್ತು ಅರ್ಹತೆಗಳ ಮಾನದಂಡಗಳನ್ನು ಉಲ್ಲಂಘಿಸಿ ಸೌಲಭ್ಯಗಳನ್ನು ಮತ್ತು ಅವಕಾಶವನ್ನು ಒದಗಿಸುವ ಸಾಮರ್ಥ್ಯವೇ ಆಯಾ ನಾಯಕರ ಸತ್ವವನ್ನು ಅಳೆಯುವ ಮಾನದಂಡವಾಗಿಬಿಡುತ್ತದೆ.
ಸಾಮಾನ್ಯ ಮನುಷ್ಯರು ತಮ್ಮ ನೈತಿಕ ಸತ್ವವನ್ನು ಸಾಬೀತುಪಡಿಸಬೇಕೆಂದರೆ ವೈಯಕ್ತಿಕ ಸಾಮರ್ಥ್ಯವನ್ನು ವಿನಿಯೋಗಿಸಲು ಬೇಕಾದ ರಾಜಕೀಯ ಸ್ವಾಯತ್ತೆಯನ್ನು ಪ್ರತಿಪಾದಿಸುವ ಸಾಧ್ಯತೆ ಇರಬೇಕಾದದ್ದು ಅತ್ಯಗತ್ಯ. ಒಂದು ನೈತಿಕ ಅಂಶವಾದ ಸತ್ವವು ಸರಕಾರಿ ವಲಯದಲ್ಲಿ ಮಾಡುವ ಉದ್ಯೋಗ, ಪ್ರಭುತ್ವವು ನಿಯಂತ್ರಿಸುವ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲಬೆಲೆಯ ನಿರ್ಧರಣೆ, ಇನ್ನಿತ್ಯಾದಿ ಸಾಂಸ್ಥಿಕ ಸಂದರ್ಭಗಳಲ್ಲಿ ಸಕ್ರಿಯವಾಗುತ್ತದೆ. ವಾಸ್ತವವಾಗಿ ಈ ಸಂಸ್ಥೆಗಳು ನಿರುದ್ಯೋಗಿ ಯುವಕರು ಮತ್ತು ಬಿಕ್ಕಟ್ಟಿನಲ್ಲಿರುವ ರೈತರು ತಮ್ಮ ಸಾಮಾಜಿಕಸತ್ವವನ್ನು ಸಾಬೀತುಪಡಿಸಲು ಸಬಲೀಕರಿಸುವಷ್ಟು ಸಾಮರ್ಥ್ಯವನ್ನು ಕಳೆದುಕೊಂಡಿವೆ. ಆದರೂ ಆ ವರ್ಗಗಳ ಸಾಮಾಜಿಕ ಸತ್ವವು ಎಲ್ಲವನ್ನೂ ಮೀರುವಷ್ಟು ಒಳಸಾಮರ್ಥ್ಯವನ್ನು ಹೊಂದಿರುತ್ತವೆ. ಇದು ರಾಷ್ಟ್ರೀಯತೆಯೆಂಬ ಅಮೂರ್ತ ಆದರ್ಶಗಳಲ್ಲಿ ಈ ನಿರುದ್ಯೋಗಿ ಯುವಕರು ಮತ್ತು ಬಿಕ್ಕಟ್ಟಿನಲ್ಲಿರುವ ರೈತಾಪಿ ಪಡೆದುಕೊಳ್ಳುತ್ತಿರುವ ಮಾನಸಿಕ ತೃಪ್ತಿಯಲ್ಲಿ ಕೂಡಾ ಅಭಿವ್ಯಕ್ತಗೊಳ್ಳುತ್ತಿದೆ. ತಮ್ಮ ಸ್ವ ಸತ್ವದ ಬಗೆಗಿನ ಅಭೌತಿಕವಾದ ಪರಿಕಲ್ಪನೆಗಳು ಲೌಕಿಕ ಬದುಕಿನಲ್ಲಿ ಬದುಕುಳಿಯಲು ಬೇಕಾದ ಕನಿಷ್ಠ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಗಳ ಅಗತ್ಯಗಳನ್ನು ಮೀರಿ ನಿಲ್ಲುತ್ತದೆ. ಮತ್ತೊಂದು ಕಡೆ ಒಂದು ನಿರ್ದಿಷ್ಟ ಬಗೆಯ ರಾಜಕಾರಣಿಗಳು ರಾಷ್ಟ್ರೀಯವಾದದಂತಹ ಜನರ ಸ್ವಸತ್ವದ ಬಗೆಗಿನ ಅಭೌತಿಕ ಆಯಾಮಗಳನ್ನು ದುರ್ಬಳಕೆಮಾಡಿಕೊಳ್ಳುತ್ತಾ ನಿರಂತರವಾಗಿ ತಮ್ಮ ಸ್ವಾರ್ಥ ಸಾಧನೆೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅದು ಏನೇ ಇರಲಿ, ರಾಜಕೀಯ ಅಕಾಂಕ್ಷಿಗಳು ಮಾತ್ರ ತಾವು ಏನು ಅಲ್ಲ ಎಂದು ಮಾಡಿಕೊಳ್ಳುವ ಡಿಸ್‌ಕ್ಲೈಮರು(ಅಲ್ಲಗೆಳೆಯುವಿಕೆ)ಗಳ ಮೂಲಕ ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಸಾರ್ವಜನಿಕ ಹಿತಾಸಕ್ತಿಗಳ ಮಾತುಗಳಡಿಯಲ್ಲಿ ಮರೆಮಾಚಲು ಯಶಸ್ವಿಯಾಗುತ್ತಿರುವುದು ಮಾತ್ರ ಮುಖಕ್ಕೆ ರಾಚುವಂತೆ ಎದ್ದುಕಾಣುತ್ತದೆ.
ಕೃಪೆ: Economic and Political Weekly