ನೊಬೆಲ್ ಸಾಹಿತ್ಯ ಪ್ರಶಸ್ತಿಯ ಸುತ್ತಮುತ್ತ

Update: 2019-10-19 18:25 GMT

ನೊಬೆಲ್ ಪ್ರಶಸ್ತಿ ಪ್ರತಿಷ್ಠಾನವು ಯೂರೋಪ್ ಕೇಂದ್ರಿತ ಹಾಗೂ ಪುರುಷ ಪ್ರಧಾನ ಕೇಂದ್ರಿತ ಎನ್ನುವ ಕಟುಟೀಕೆಗೆ ಗುರಿಯಾಗಿದೆ. ಹೀಗಿರುವಾಗ ಈ ಸಲ ಬೋಸ್ನಿಯಾದ ನರಮೇಧಕ್ಕೆ ಕಾರಣನಾದ ಸ್ಲೊಬೊದನ್ ಮಿಲೊಸೆವಿಚ್ ಪರ ಕ್ಷಮಾಯಾಚನೆ ಮಾಡಿದ ಹಂಡ್ಕೆಯನ್ನು ಪ್ರಶಸ್ತಿಗೆ ಆಯ್ಕೆಮಾಡಿರುವುದು ಸರಿಯಲ್ಲ ಎಂಬುದು ಪ್ರಪಂಚದ ಪ್ರಾಜ್ಞ ವಲಯಗಳಲ್ಲಿ ಕೇಳಿ ಬರುತ್ತಿರುವ ಮಾತು.


ಸಾಹಿತ್ಯ, ಕಲೆ, ವಿಜ್ಞಾನ, ಶಾಂತಿ ಹೀಗೆ ಹಲವು ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆಗಳನ್ನು ಗೈದ ಮಹನೀಯರನ್ನು ಸನ್ಮಾನಿಸುವ ಘನ ಉದ್ದೇಶದಿಂದ ಸ್ಥಾಪಿಸಲಾಗುವ ಪ್ರಶಸ್ತಿಗಳು ಕ್ರಮೇಣ ತಮ್ಮ ಪಾವಿತ್ರ್ಯ ಕಳೆದುಕೊಂಡು ವಾದವಿವಾದಗಳ ಕೇಂದ್ರ ಬಿಂದುವಾಗುವ ವಿದ್ಯಮಾನಕ್ಕೆ ಚರಿತ್ರೆಯಲ್ಲಿ ಹಲವಾರು ನಿದರ್ಶನಗಳು ಸಿಗಬಹುದು. ಇಂತಹ ನಿದರ್ಶನಗಳಲ್ಲಿ ಒಂದು ಜಗದ್ವಿಖ್ಯಾತ ನೊಬೆಲ್ ಸಾಹಿತ್ಯ ಪ್ರಶಸ್ತಿ. 1895ರಲ್ಲಿ ಆಲ್ಫ್ರೆಡ್ ನೊಬೆಲ್ ಹೆಸರಿನಲ್ಲಿ ಈ ಪ್ರಶಸ್ತಿ ಪ್ರತಿಷ್ಠಾನ ಶುರುವಾಯಿತು. ಅಂದಿನಿಂದ ಸಾಹಿತ್ಯ, ವಿಜ್ಞಾನ, ಶಾಂತಿ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೊಬೆಲ್ ಪಶ್ರಸ್ತಿಯನ್ನು ನೀಡಲಾಗುತ್ತಿದ್ದು ಇದು ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಎಂಬ ಕೀರ್ತಿಗೆ ಪಾತ್ರವಾಗಿದೆ.

ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಜಗತ್ತಿನ ಶ್ರೇಷ್ಠ ಸಾಹಿತಿಗೆ ಪ್ರತಿ ವರ್ಷ ನೀಡಲಾಗುತ್ತದೆ. ಪ್ರಶಸ್ತಿಗೆ ಲೇಖಕರ ಕೃತಿಯೊಂದನ್ನು ಆಯ್ಕೆ ಮಾಡಿದರೂ ಒಟ್ಟಾರೆಯಾಗಿ ಆಯ್ಕೆಯಾದ ಲೇಖಕನ ಜೀವಮಾನದ ಸಾಧನೆ ಮುಖ್ಯ ಮಾನದಂಡವಾಗಿರುತ್ತದೆ. ಪ್ರತಿ ವರ್ಷ ನೊಬೆಲ್ ಪ್ರಶಸ್ತಿ ಪ್ರತಿಷ್ಠಾನ ಪ್ರಶಸ್ತಿಗಾಗಿ ಲೇಖಕರನ್ನು ನಾಮಕರಣ ಮಾಡುವಂತೆ ಮನವಿ ಮಾಡಿಕೊಳ್ಳುತ್ತದೆ. ಸಾಹಿತ್ಯ ಅಕಾಡಮಿಗಳು, ಸಂಘಸಂಸ್ಥೆಗಳು, ಸಾಹಿತ್ಯ ಬೋಧಿಸುವ ಪ್ರೊಫೆಸರುಗಳು, ಹಿಂದಿನ ವರ್ಷಗಳ ನೊಬೆಲ್ ಪ್ರಶಸ್ತಿ ವಿಜೇತರು ಸಾಹಿತಿಗಳ ಹೆಸರುಗಳನ್ನು ನಾಮಕರಣ ಮಾಡಬಹುದು. ನಂತರ ಆಯ್ಕೆ ಪ್ರಕ್ರಿಯೆ ಶುರುವಾಗುತ್ತದೆ.

 ನೊಬೆಲ್ ಸಾಹಿತ್ಯ ಪ್ರಶಸ್ತಿ ಹುಟ್ಟಿನೊಂದಿಗೇ ಆಯ್ಕೆ ಕುರಿತ ವಿವಾದವೂ ಶುರುವಾಗಿದೆ. 1901ರಲ್ಲಿ ಫ್ರೆಂಚ್ ಕವಿ ಸುಲ್ಲಿ ಪ್ರುಡ್ಹೋಮೆ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಿಸಿದಾಗ ಲಿಯೋ ಟಾಲ್ಸ್ಟಾಯ್ ಅವರನ್ನು ಕಡೆಗಣಿಸಲಾಯಿತೆಂದು ಜಗತ್ತಿನ ಸಾಹಿತ್ಯವಲಯಗಳಲ್ಲಿ ಅಸಮಾಧಾನದ ಅಲೆ ಎದ್ದಿತ್ತು. ಸಾಹಿತ್ಯದಲ್ಲಿ ಶ್ರೇಷ್ಠ ಸಾಧನೆಯೊಂದೇ ಆಯ್ಕೆಯ ಮಾನದಂಡವೆಂದು ನೊಬೆಲ್ ಪ್ರಶಸ್ತಿ ಪ್ರತಿಷ್ಠಾನ ಹೇಳುತ್ತದೆಯಾದರೂ, ಆಯ್ಕೆಯಲ್ಲಿ ಸಾಹಿತಿಯ ಸಾಮಾಜಿಕ ಪ್ರತಿಷ್ಠೆ, ರಾಜಕೀಯ ಒಲವುನಿಲುವುಗಳು ಪ್ರಭಾವಿಸುತ್ತವೆ ಎಂಬ ದೂರುಗಳೂ ಇವೆ.

ಪ್ರಶಸ್ತಿಗೆ ಆಯ್ಕೆಗಳು ಯೂರೋಪ್ ಕೇಂದ್ರಿತವಾಗಿರುತ್ತವೆ ಎಂಬುದು ಇನ್ನೊಂದು ದೂರು. ಇತ್ತೀಚೆಗೆ 2018 ಮತ್ತು 2019ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಪ್ರಕಟವಾದ ಕೂಡಲೇ ಆಯ್ಕೆ ವಿರುದ್ಧ ಟೀಕೆಟಿಪ್ಪಣಿಗಳ ದನಿ ಎದ್ದಿದೆ. ವಾದ-ವಿವಾದಗಳು ಶುರುವಾಗಿವೆ. 2018ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ನೀಡಲಿಲ್ಲ. ನೊಬೆಲ್ ಪ್ರತಿಷ್ಠಾನದ ಆಯ್ಕೆ ಸಮಿತಿ ಸದಸ್ಯ ಕತ್ರಿನಾ ಎಂಬವರ ಪತಿ ಲೇಖಕ ಜೀನ್ ಕ್ಲಾಡ್ ಅರ್ನಾಲ್ಟ್ ಎಂಬವರ ಲೈಂಗಿಕ ಹಗರಣ ಹಿನ್ನೆಲೆ ಇದಕ್ಕೆ ಕಾರಣ. ಕತ್ರಿನಾ ಮತ್ತು ಅವರ ಪತಿ ಪ್ರಶಸ್ತಿ ಪ್ರಕಟನೆಗೂ ಮುನ್ನ ಪ್ರಶಸ್ತಿ ವಿಜೇತರ ಹೆಸರನ್ನು ಬಾಜಿಕಟ್ಟುವವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಬಹಿರಂಗ ಪಡಿಸುತ್ತಿದ್ದರೆಂಬ ದೂರೂ ಇತ್ತು. ಇವರ ವಿರುದ್ಧ ಕ್ರಮಕೈಗೊಳ್ಳಲಿಲ್ಲ ಎಂದು ಪ್ರತಿಭಟಿಸಿ ಪ್ರತಿಷ್ಠಾನದ ಸಮಿತಿಯ ಎಂಟು ಮಂದಿ ಸದಸ್ಯರು ರಾಜೀನಾಮೆ ನೀಡಿದರು. ಹೀಗಾಗಿ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲು ಅಗತ್ಯವಾದಷ್ಟು ಸದಸ್ಯರ ಕೊರತೆಯ ಕಾರಣ ನೀಡಿ 2018ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಪ್ರಕಟಿಸಲಿಲ್ಲ. ಈ ವರ್ಷ ಎರಡು ವರ್ಷದ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. 2018ರ ಸಾಹಿತ್ಯ ಪ್ರಶಸ್ತಿಯನ್ನು ಪೋಲೆಂಡಿನ ಕಾದಂಬರಿಕಾರ್ತಿ ಓಲ್ಗಾ ತೊಕಾರ್ಜಕ್ ಅವರಿಗೂ 2019ರ ಪ್ರಶಸ್ತಿಯನ್ನು ಆಸ್ಟ್ರಿಯಾದ ಪೀಟರ್ ಹಂಡ್ಕೆ ಅವರಿಗೂ ನೀಡಲಾಗಿದೆ. ಪ್ರಶಸ್ತಿ ಘೋಷಣೆಯಾದದ್ದೇ ವಿವಾದ ಭುಗಿಲೆದ್ದಿದೆ.

2018 ಮತ್ತು 2019ರ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಇಬ್ಬರೂ ಮಧ್ಯ ಯೂರೋಪಿಯನ್ನರು. ಹಂಡ್ಕೆ ಮತ್ತು ಓಲ್ಗಾ ಇಬ್ಬರೂ ಮುಚ್ಚು ಮರೆಯಿಲ್ಲದ ಖಂಡಿತವಾದಿ ಮಾತಿಗೆ ಹೆಸರಾದವರು. ಕೆಲವೊಮ್ಮೆ ಇವರ ಮಾತು ರಾಜಕೀಯ ಧ್ರುವೀಕರಣ ಪ್ರಚೋದಿಸುವ ರೀತಿಯದೂ ಆಗಿರುತ್ತವೆ ಎನ್ನುವ ಅಭಿಪ್ರಾಯವೂ ಇದೆ. ಹಂಡ್ಕೆ ಕಾದಂಬರಿಕಾರ, ನಾಟಕಕಾರ. ಪ್ರಬಂಧಕಾರನೂ ಹೌದು. ಓಲ್ಗಾಳ ಬರವಣಿಗೆಗೆ ಒಲಿದಿರುವುದು ಕಾದಂಬರಿ ಪ್ರಕಾರ. ‘ದಿ ಜರ್ನಿ ಆಫ್ ದಿ ಬುಕ್ ಪೀಪಲ್’, ‘ಫ್ಲೈಟ್ಸ್’, ‘ದಿ ಬುಕ್ಸ್ ಆಫ್ ಜೇಕಬ್’ ಅವಳ ಪ್ರಮುಖ ಕೃತಿಗಳು. ಪೀಟರ್ ಹಂಡ್ಕೆ 2014ರಲ್ಲಿ ಆಸ್ಟ್ರಿಯಾದ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘‘ನೊಬೆಲ್ ಪ್ರಶಸ್ತಿಯನ್ನು ನಿಷೇಧಿಸಬೇಕು. ಅ ಪ್ರಶಸ್ತಿಯನ್ನು ಪಡೆಯುವುದೆಂದರೆ, ಸಾಹಿತ್ಯದಲ್ಲಿ ಮಿಥ್ಯಾ ಸಂತಪದವಿಗೇರಿದಂತೆ’’ ಎಂದು ಖಂಡಿಸಿದ್ದನೆಂದು ವರದಿಯಾಗಿದೆ.

ಈಗ ಹಂಡ್ಕೆಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ನೀಡಿರುವುದನ್ನು ನೋಡಿದರೆ ಅವರ ಅಂದಿನ ಮಾತು ನಿಜವೆನ್ನಿಸುತ್ತದೆ ಎನ್ನುತ್ತಾರೆ ಟೀಕಾಕಾರರು. ಆದರ್ಶಪ್ರಾಯವಾದ ದಿಕ್ಕಿನಲ್ಲಿ ಸಾಗುವ, ಮಾರ್ಗದರ್ಶನ ಮಾಡುವ ಶ್ರೇಷ್ಠ ಸಾಹಿತ್ಯವನ್ನು ರಚಿಸಿದ ಸಾಹಿತಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ನೀಡಬೇಕೆಂಬುದು ಪ್ರಶಸ್ತಿ ಸ್ಥಾಪಿಸಿದ ಆಲ್ಫ್ರೆಡ್ ಆಶಯ. ಆದರೆ ಸ್ವೀಡಿಷ್ ನೊಬೆಲ್ ಪ್ರಶಸ್ತಿ ಪ್ರತಿಷ್ಠಾನದ ಈ ಆಶಯ ನುಡಿಗಳಲ್ಲಿ ಅಂತಹ ಗೌರವ ವಿಶ್ವಾಸಗಳೇನೂ ಕಂಡುಬರುತ್ತಿಲ್ಲ ಎನ್ನುತ್ತಾರೆ ಟೀಕಾಕಾರರು. ನೊಬೆಲ್ ಪ್ರಶಸ್ತಿ ಪ್ರತಿಷ್ಠಾನವು ಯೂರೋಪ್ ಕೇಂದ್ರಿತ ಹಾಗೂ ಪುರುಷ ಪ್ರಧಾನ ಕೇಂದ್ರಿತ ಎನ್ನುವ ಕಟುಟೀಕೆಗೆ ಗುರಿಯಾಗಿದೆ. ಹೀಗಿರುವಾಗ ಈ ಸಲ ಬೋಸ್ನಿಯಾದ ನರಮೇಧಕ್ಕೆ ಕಾರಣನಾದ ಸ್ಲೊಬೊದನ್ ಮಿಲೊಸೆವಿಚ್ ಪರ ಕ್ಷಮಾಯಾಚನೆ ಮಾಡಿದ ಹಂಡ್ಕೆಯನ್ನು ಪ್ರಶಸ್ತಿಗೆ ಆಯ್ಕೆಮಾಡಿರುವುದು ಸರಿಯಲ್ಲ ಎಂಬುದು ಪ್ರಪಂಚದ ಪ್ರಾಜ್ಞ ವಲಯಗಳಲ್ಲಿ ಕೇಳಿ ಬರುತ್ತಿರುವ ಮಾತು.

ಹಂಡ್ಕೆ ಬಲಪಂಥೀಯ ರಾಷ್ಟ್ರೀಯತೆಯ ಪ್ರತಿಪಾದಕ. ಬಾಲ್ಕನ್ ಯುದ್ಧದಲ್ಲಿ ಸೆರ್ಬಿಯನ್ನರ ಅತ್ಯಾಚಾರ, ಹಿಂಸಾಚಾರಗಳನ್ನು ಲಘುವಾಗಿ ಪರಿಗಣಿಸಿದ್ದ ಹಂಡ್ಕೆ ಆ ಯುದ್ಧದಲ್ಲಿ ನಡೆದ ಮುಸ್ಲಿಮರ ನರಮೇಧದ ಬಗ್ಗೆ ಬಹಿರಂಗವಾಗಿ ಅನುಮಾನ ವ್ಯಕ್ತಪಡಿಸಿರುವುದುಂಟು. ಯುದ್ಧಾಪರಾಧಗಳಿಗಾಗಿ ಖಂಡನೆಗೊಳಗಾದ ಸೆರ್ಬಿಯನ್ ಅಧ್ಯಕ್ಷ ಮಿಲೊಸೆವಿಚ್‌ನ ಅಂತ್ಯಸಂಸ್ಕಾರದಲ್ಲಿ ಶ್ರದ್ಧಾಂಜಲಿ ಭಾಷಣ ಮಾಡಿದ ಹಂಡ್ಕೆಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ನೀಡಿರುವುದನ್ನು ‘ಪೆನ್ ಅಮೆರಿಕ’ ಸಾಹಿತ್ಯ ಸಂಘಟನೆ ಖಂಡಿಸಿದೆ. ‘‘ಮಿಲೊಸೆವಿಚ್ ನಡೆಸಿದ ನರಹತ್ಯೆಯ ಐತಿಹಾಸಿಕ ಸತ್ಯವನ್ನು ಮರೆಮಾಚುವ ನಿಟ್ಟಿನಲ್ಲಿ ತನ್ನ ದನಿಯನ್ನು ಬಳಸಿದ ಹಂಡ್ಕೆಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ನೀಡಿರುವುದನ್ನು ತಿಳಿದು ನಾವು ಮೂಕವಿಸ್ಮಿತರಾಗಿದ್ದೇವೆ, ದಿಗ್ಭ್ರಮೆಗೊಂಡಿದ್ದೇವೆ. ರಾಷ್ಟ್ರೀಯತೆ, ನಿರಂಕುಶ ನಾಯಕತ್ವ ಮತ್ತು ಉದ್ದೇಶಪೂರ್ವಕವಾಗಿ ತಪ್ಪು ಸುದ್ದಿಗಳನ್ನು, ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಜಗತ್ತಿನ ಸಾಹಿತ್ಯ ವಲಯ ಹಂಡ್ಕೆಯವರಿಗಿಂತ ಉತ್ತಮವಾದ ಆಯ್ಕೆಗೆ ಅರ್ಹವಾಗಿತ್ತು. ನೊಬೆಲ್ ಪ್ರಶಸ್ತಿಯ ಈ ಆಯ್ಕೆ ಬಗ್ಗೆ ನಮಗೆ ತೀವ್ರ ವಿಷಾದವೆನಿಸುತ್ತದೆ’’ ಎಂದು ‘ಪೆನ್ ಅಮೆರಿಕ’ದ ಅಧ್ಯಕ್ಷೆ, ಕಾದಂಬರಿಕಾರ್ತಿ ಜೆನ್ನಿಫರ್ ನೀಡಿರುವ ಹೇಳಿಕೆ ಪ್ರಪಂಚದ ಸಾಹಿತ್ಯವಲಯಗಳಿಂದ ಕೇಳಿಬರುತ್ತಿರುವ ವಿರೋಧದ ತಿರುಳಾಗಿದೆ.

‘ಮನುಜ ಮತ, ವಿಶ್ವಪಥ’ ಎನ್ನುವ ಈ ಕಾಲಘಟ್ಟದಲ್ಲಿ ಮಾನವ ಕುಲವನ್ನು ಒಡೆಯುವ, ಧರ್ಮದ ಆಧಾರದಲ್ಲಿ ಧ್ರುವೀಕರಣಗೊಳಿಸುವ ಹಂಡ್ಕೆಯಂತಹ ಸಾಹಿತಿಯನ್ನು ಪ್ರಶಸ್ತಿಗೆ ಆಯ್ಕೆಮಾಡುವುದು ನೊಬೆಲ್ ಪ್ರತಿಷ್ಠಾನಕ್ಕೆ ಅನಿವಾರ್ಯವಾಗಿತ್ತೆ? 2019ರ ಸಾಹಿತ್ಯ ಪ್ರಶಸ್ತಿಗೆ, ಕೆನಡಾದ ಬೂಕರ ಪ್ರಶಸ್ತಿ ವಿಜೇತ ಸಾಹಿತಿ ಮಾರ್ಗರೆಟ್ ಆಟ್ವುಡ್, ರಶ್ಯದ ಲ್ಯೂಡಿಮಿಲಾ ಯುಲಿಟ್ರೋಕ್ಸ್ಯಾ, ಕೀನ್ಯಾದ ಎನ್‌ಗೂಗಿ ವಾ ಥಿಯಾಂಗೊ, ಜಪಾನಿನ ಹರೂಕಿ ಮಾರಾಕುಮಿ ಮೊದಲಾದವರು ನಾಮಕರಣಗೊಂಡಿದ್ದರು. ಅವರನ್ನೆಲ್ಲ ಬಿಟ್ಟು ಪೀಟರ್ ಹಂಡ್ಕೆಯನ್ನೇ ಆಯ್ಕೆಮಾಡಲು ಕಾರಣಗಳೇನು ಎನ್ನುವುದು ಟೀಕಾಕಾರರ ಪ್ರಶ್ನೆ. ಈ ಪ್ರಶಸ್ತಿ ಸ್ವತ: ಪೀಟರ್ ಹಂಡ್ಕೆಯವರಿಗೇ ಆಶ್ಚರ್ಯ ಉಂಟುಮಾಡಿದೆ. ‘‘ತನ್ನನ್ನು ಆಯ್ಕೆಮಾಡಿ ಪ್ರತಿಷ್ಠಾನ ಅತೀವ ಧೈರ್ಯವನ್ನು ಪ್ರದರ್ಶಿಸಿದೆ’’ ಎಂಬುದು ಹಂಡ್ಕೆಯವರ ಪ್ರತಿಕ್ರಿಯೆ. ‘‘ಹಂಡ್ಕೆ ಹಲವು ಸಲ ವಿವಾದಗಳನ್ನು ಸೃಷ್ಟಿಸಿದ್ದರಾದರೂ ಅವರನ್ನು ಸಾರ್ತ್ರೆಯವರು ಹೇಳುವಂತೆ ಬದ್ಧಲೇಖಕನೆಂದು ಪರಿಗಣಿಸಲಾಗದು. ಅವರು ರಾಜಕೀಯ ಬದ್ಧತೆ ಮೆರೆಸುವ ಕಾರ್ಯಕ್ರಮಗಳನ್ನು ಕೊಡುವುದಿಲ್ಲ’’ ಎಂದು ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಪ್ರತಿಷ್ಠಾನ, ಮಾನವ ಅನುಭವಗಳ ಶೋಧದಲ್ಲಿ ತೋರಿರುವ ಸೃಜನಾತ್ಮಕ ಬರವಣಿಗೆಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಹಂಡ್ಕೆ ಅವರ ರಾಜಕೀಯ ಒಲವು ನಿಲುವುಗಳು ಆಯ್ಕೆಯಲ್ಲಿ ಪ್ರಭಾವ ಬೀರಿವೆ ಎನ್ನುವುದು ಟೀಕಾಕಾರರ ಆರೋಪ. ‘‘ನಾವು ಪ್ರಪಂಚದಾದ್ಯಂತ ದೃಷ್ಟಿ ಹರಿಸಿದ್ದೇವೆ’’ ಎನ್ನುವುದು ಕಳೆದ ವರ್ಷದ ಹಗರಣದ ನಂತರ ನೊಬೆಲ್ ಪ್ರತಿಷ್ಠಾನದ ಅಧ್ಯಕ್ಷರು ನೀಡಿದ ಹೇಳಿಕೆ. ಆದರೆ ಪ್ರಶಸ್ತಿ ನೀಡಿಕೆಯಲ್ಲಿ ಭೌಗೋಳಿಕ ಸಮತೋಲನ ಸಾಧಿಸುವ ಪ್ರಯತ್ನವನ್ನೇನೂ ಮಾಡಿಲ್ಲ ಎಂಬುದು ಪ್ರಶಸ್ತಿ ಪ್ರಕಟನೆ ಹೊರಬಿದ್ದಾಗ ಬಯಲಾಯಿತು. ಆಸ್ಟ್ರಿಯಾ ಮತ್ತು ಪೋಲೆಂಡಿನ ಸಾಹಿತಿಗಳನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಮಾಡುವ ಮೂಲಕ ಭೌಗೋಳಿಕ ಸಮತೋಲನ ಕಾಪಾಡುವ ಮಾತಿನಲ್ಲಿ ಪ್ರತಿಷ್ಠಾನ ಹಿಂದೆಸರಿದಿರುವುದು ಸ್ಪಷ್ಟ. 2018ರ ಪ್ರಶಸ್ತಿಗೆ ಆಯ್ಕ್ಕೆಯಾಗಿರುವ ಪೋಲೆಂಡಿನ ಲೇಖಕಿ ಓಲ್ಗಾ ತೊಕಾರ್ಜಕ್ ಅವರು ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವ ಮಹಿಳಾ ಸಾಹಿತಿಗಳಲ್ಲಿ ಹದಿನೈದನೆಯವರು. ಓಲ್ಗಾ ಅವರೂ ಬಲಪಂಥೀಯ ರಾಜಕೀಯ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾದವರೇ. ‘‘ವಸಾಹತುಶಾಹಿಯಾಗಿ ಪೋಲೆಂಡ್ ಘೋರ ಕೃತ್ಯಗಳನ್ನು ಎಸಗಿದೆ’’ ಎನ್ನುವ ಹೇಳಿಕೆ ನೀಡಲು ಹಿಂಜರಿಯದ ಲೇಖಕಿ. ಈ ಹೇಳಿಕೆಗಾಗಿ ಅವರು ಜೀವಭಯವನ್ನೇ ಎದುರಿಸಬೇಕಾಯಿತು. ಆಗ ಪ್ರಕಾಶನ ಸಂಸ್ಥೆಗಳು ಅವರಿಗೆ ಅಂಗರಕ್ಷಕ ಭದ್ರತಾ ಪಡೆಯ ವ್ಯವಸ್ಥೆಯನ್ನೂ ಏರ್ಪಾಟುಮಾಡಿದವಂತೆ. 2016ರಲ್ಲಿ ಅಮೆರಿಕದ ಗಾಯಕ ಮತ್ತು ಗೀತರಚನಾಕಾರ ಬಾಬ್ ಡಿಲಾನ್ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ನೀಡಿದಾಗಲೂ ಪ್ರತಿಷ್ಠಾನ ಟೀಕೆಗಳನ್ನು ಎದುರಿಸಬೇಕಾಯಿತು. ಸಾಹಿತ್ಯಕ್ಕೆ ಮೀಸಲಾದ ಪ್ರಶಸ್ತಿಯನ್ನು ಗಾಯಕನಿಗೆ ಮತ್ತು ಹಾಡುಗಳ ರಚನಕಾರನಿಗೆ ನೀಡಿದ್ದು ಶುದ್ಧ ಸಾಹಿತಿಗಳನ್ನು ಕೆರಳಿಸಿತ್ತು.

ಜಾರ್ಜ್ ಲೂಯಿಸ್ ಬೊರ್ಗೆಸ್, ಜೇಮ್ ್ಸಜಾಯ್ಸಿ ಅಂತಹವರಿಗೆ ನಿರಾಕರಿಸಲಾದ ನೊಬೆಲ್ ಸಾಹಿತ್ಯ ಪ್ರಶಸ್ತಿ, ಜನಪ್ರಿಯ ಗಾಯಕನೊಬ್ಬನಿಗೆ ಒಲಿದದ್ದು ಕಂಡು ವಿಶ್ವದಾದ್ಯಂತ ಅನೇಕ ಸಾಹಿತಿಗಳು ಅಚ್ಚರಿಯಿಂದ ಹುಬ್ಬೇರಿಸಿದ್ದರು. ‘ಅಮಾಂಗ್ ದಿ ಬಿಲೀವರ್ಸ್‌’ ಭಾರತೀಯ ಸಂಜಾತ ವಿ.ಎಸ್.ನೈಪಾಲ್ ಅವರ, ಏಶ್ಯಾದಲ್ಲಿನ ಇಸ್ಲಾಂ ಆಚರಣೆ ಕುರಿತ ವಿಮರ್ಶಾತ್ಮಕ ಕೃತಿ. 2001ರಲ್ಲಿ ನೊಬೆಲ್ ಪ್ರತಿಷ್ಠಾನ ಈ ಕೃತಿಗೆ ಪ್ರಶಸ್ತಿ ಘೋಷಿಸಿದಾಗ ಅವರ ‘ಎ ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್’ ಪ್ರಶಸ್ತಿಗೆ ಹೆಚ್ಚು ಯೋಗ್ಯವಾದ ಕೃತಿ ಎಂದು ಸಾಹಿತ್ಯವಲಯಗಳಲ್ಲಿ ಆಕ್ಷೇಪದ ದನಿ ಎದ್ದಿತ್ತು. ನೊಬೆಲ್ ಶಾಂತಿ ಪ್ರಶಸ್ತಿಯಂತೆ ಸಾಹಿತ್ಯ ಪ್ರಶಸ್ತಿ ಆಯ್ಕೆಯಲ್ಲೂ ರಾಜಕೀಯದ ಕೈವಾಡವಿದೆ ಎನ್ನುವ ಆರೋಪವೂ ಆಗಾಗ ಕೇಳಿಬರುತ್ತದೆ. ಈ ಪ್ರಶಸ್ತಿಯನ್ನು ಗಂಭಿರವಾಗಿ ಪರಿಗಣಿಸಲೇ ಬೇಕಾಗಿಲ್ಲ ಎನ್ನುವ ಸಾಹಿತಿಗಳೂ ಇದ್ದಾರೆ. ಆಯ್ಕೆಯಲ್ಲಿ ರಾಜಕೀಯ ಪ್ರಭಾವ ಇಲ್ಲ ಎನ್ನುವ ಸಮರ್ಥನೆಯನ್ನು ಅಲ್ಲಗಳೆಯುವ ದೃಷ್ಟಾಂತಗಳೂ ಇವೆ.

ಆಫ್ರಿಕಾದ ಪ್ರಸಿದ್ಧ ಸಾಹಿತಿ ವೋಲೆ ಸೋಯಂಕ ಈ ಪ್ರಶಸ್ತಿಗಾಗಿ 1986ರವರೆಗೆ ಕಾಯಬೇಕಾಯಿತು. ನೈಜೀರಿಯಾದ ಮಹಾನ್ ಸಾಹಿತಿ ಚಿನು ಅಚೀಬೆ ಈ ಪ್ರಶಸ್ತಿಯಿಂದ ವಂಚಿತರಾದುದು ಹೇಗೆ? ಶುರುವಾದ ವರ್ಷವೇ ಈ ಪ್ರಶಸ್ತಿಗೆ ಟಾಲ್ಸ್ಟಾಯ್ ಅವರನ್ನು ಕಡೆಗಣಿಸಿದ್ದರ ಹಿಂದಿನ ಕಾರಣ ಏನಿರಬಹುದು? ಈ ಪ್ರಶ್ನೆಗಳನ್ನು ಇಂದಿಗೂ ಕೇಳಲಾಗುತ್ತಿದೆ. ಮಹಾನ್ ಸಾಹಿತಿಗಳು ಹಲವರು ನೊಬೆಲ್ ಸಾಹಿತ್ಯ ಪ್ರಶಸ್ತಿಯ ಗೌರವದಿಂದ ವಂಚಿತರಾದಂತೆಯೇ ಈ ಪ್ರಶಸ್ತಿ ಪಡೆದ ನಂತರ ಅನಾಮಧೇಯ ಸಾಹಿತಿಗಳು ಓದುಗರ ಗಮನಸೆಳೆದಿರುವ ಪ್ರಸಂಗಗಳೂ ಉಂಟು. ಸ್ವೆಟ್ಲಾನ ಅಲೆಕ್ಸಿವಿಚ್ ಬೈಲೋ ರಶ್ಯದ ಪ್ರಸಿದ್ಧ ಲೇಖಕಿ. ಎರಡನೇ ಮಹಾಯುದ್ಧದ ಭೀಕರತೆಯನ್ನು ಚಿತ್ರಿಸುವ ‘ದಿ ಅನ್‌ಉಮನ್ಲೀ ಫೇಸ್ ಆಫ್ ವಾರ್’, ಸೋವಿಯತ್ ಒಕ್ಕೂಟದ ಪತನ ಕುರಿತ ‘ಸೆಕೆಂಡ್ ಹ್ಯಾಂಡ್ ಟೈಮ್’ ಹಾಗೂ ಚರ್ನೋಬಿಲ್ ಪರಮಾಣು ದುರಂತ ಕುರಿತ ‘ವಾಯ್ಸಸ್ ಆಫ್ ಚರ್ನೋಬಿಲ್’ ಸ್ವೆಟ್ಲಾನಾಳ ಪ್ರಮುಖ ಕೃತಿಗಳು.

ಸ್ವೆಟ್ಲಾನಾಳಿಗೆ ನೊಬೆಲ್ ಪ್ರಶಸ್ತಿ ಪ್ರಕಟನೆಯ ನಂತರ ಈ ಕೃತಿಗಳು ಹೊರಪ್ರಪಂಚದ ಸಾಹಿತ್ಯಾಸಕ್ತರ ಗಮನ ಸೆಳೆದವು. ನೊಬೆಲ್ ಪ್ರಶಸ್ತಿ ಸಿಗದೇ ಹೋಗಿದ್ದರೆ ಜಗತ್ತು ಚರಿತ್ರೆಯ ವಿಮರ್ಶಾತ್ಮಕ ದಾಖಲೆಗಳು ಎನ್ನಬಹುದಾದ ಈ ಕೃತಿಗಳ ಓದಿನಿಂದ ವಂಚಿತವಾಗುತ್ತಿತ್ತು ಎನ್ನುವ ಅಭಿಪ್ರಾಯವೂ ಇದೆ. ಹಾಗೆಯೇ, ಹಣ ಮತ್ತು ಅಧಿಕಾರ ಇವೆರಡೂ ಸೇರಿದ ಯಾವುದೇ ವ್ಯವಸ್ಥೆಯೂ ಆಸ್ಥಾನವಾಗುತ್ತದೆ (ಎಸ್ಟಾಬ್ಲಿಷ್ ಮೆಂಟ್). ಇಂತಹ ಆಸ್ಥಾನದ ಮುಲಾಜು ನನಗೆ ಬೇಡ ಎಂದು 1964ರಲ್ಲಿ ವಿಶ್ವವಿಖ್ಯಾತ ತತ್ತ್ವಶಾಸ್ತ್ರಜ್ಞ ಸಾಹಿತಿ ಜಿನ್ಪಾಲ್ ಸಾರ್ತ್ರೆ 1964ರಲ್ಲಿ ದಿವ್ಯ ನಿರ್ಲಕ್ಷ್ಯದಿಂದ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದೂ ನೊಬೆಲ್ ಸಾಹಿತ್ಯ ಪ್ರಶಸ್ತಿಯ ಇತಿಹಾಸದಲ್ಲಿ ಒಂದು ದೃಷ್ಟಿಬೊಟ್ಟು ಆಗಿ ಉಳಿಯಲಿದೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News