ದೇರಳಕಟ್ಟೆಯ ಈ ಸರಕಾರಿ ಶಾಲೆಯಲ್ಲಿದೆ ನರ್ಸರಿಯಿಂದ 1ನೆ ತರಗತಿವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ
ಮಂಗಳೂರು, ಅ.31: ಸರಕಾರಿ ಶಾಲೆ ಉಳಿಸಲು ಶಾಲಾಭಿವೃದ್ಧಿ ಸಮಿತಿ ಮನಸ್ಸು ಮಾಡಿದರೆ, ಪ್ರಯತ್ನಪಟ್ಟರೆ ಏನೇನು ಮಾಡಬಹುದು ಎಂಬುದಕ್ಕೆ ದೇರಳಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಸಾಕ್ಷಿ.
ಕಳೆದ ವರ್ಷ ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಅನುಮತಿ ನೀಡಿದಾಗ ದೇರಳಕಟ್ಟೆ ಸರಕಾರಿ ಶಾಲೆಯ ಎಸ್ ಡಿಎಂಸಿ ತಕ್ಷಣ ತಕ್ಷಣ ಕಾರ್ಯಪ್ರವೃತ್ತವಾಯಿತು. ಆಗಿನ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್, ಡಿಡಿಪಿಐ, ಬಿಇಒ ಅವರೊಂದಿಗೆ ಚರ್ಚಿಸಿ ಈ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿ ಆರಂಭಿಸಲು ಪ್ರಯತ್ನಿಸಿದರು. ಸರಕಾರವು 30 ಮಕ್ಕಳಿಗೆ ಮಾತ್ರ ಪ್ರವೇಶ ಪಡೆಯಲು ಸೂಚನೆ ನೀಡಿ ಅನುಮತಿ ನೀಡಿತು. ಆದರೆ ಎಸ್‌ಡಿಎಂಸಿ ಪದಾಧಿಕಾರಿಗಳು, ಸದಸ್ಯರು ಪಟ್ಟು ಹಿಡಿದು ಅರ್ಜಿ ಸಲ್ಲಿಸಿದ 93 ಮಕ್ಕಳಿಗೂ ಕಲಿಯಲು ಅವಕಾಶ ಕಲ್ಪಿಸಿದರು. ಅದರಲ್ಲಿ 55 ಬಾಲಕರು ಮತ್ತು 38 ಬಾಲಕಿಯರು ಇದ್ದಾರೆ.
ಇಷ್ಟೇ ಆಗಿದ್ದರೆ ಅದರಲ್ಲಿ ವಿಶೇಷವೇನೂ ಇಲ್ಲ. ದೇರಳಕಟ್ಟೆಯಂತಹ ಬೆಳೆಯುತ್ತಿರುವ ನಗರದಲ್ಲಿರುವ ಖಾಸಗಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ಎಂಬಂತೆ ಈ ಸರಕಾರಿ ಶಾಲೆಯ ಆವರಣದಲ್ಲೇ ನರ್ಸರಿ, ಎಲ್‌ಕೆಜಿ, ಯುಕೆಜಿಯನ್ನೂ ಸ್ಥಾಪಿಸಲು ಅನುಮತಿ ಪಡೆಯುವಲ್ಲಿ ಯಶಸ್ವಿಯಾದರು. ಅದರಂತೆ ಇಲ್ಲಿನ ನರ್ಸರಿಯಲ್ಲಿ 17, ಎಲ್‌ಕೆಜಿಯಲ್ಲಿ 50, ಯುಕೆಜಿಯಲ್ಲಿ 49 ಮಕ್ಕಳು ಕಲಿಯುತ್ತಿದ್ದಾರೆ. ಆಂಗ್ಲ ಮಾಧ್ಯಮದ ಒಂದನೇ ತರಗತಿಯ ಮಕ್ಕಳಿಗೆ ಸರಕಾರವೇ ಅತಿಥಿ ಶಿಕ್ಷಕಿಯರನ್ನು ನಿಯುಕ್ತಿಗೊಳಿಸಿದರೆ, ನರ್ಸರಿ-ಎಲ್‌ಕೆಜಿ-ಯುಕೆಜಿಗೆ ಸ್ವತಃ ಪೋಷಕರಿಂದ ಒಂದಷ್ಟು ಸಹಾಯಧನ ಪಡೆದು ನುರಿತ ಶಿಕ್ಷಕಿಯರನ್ನು ಹಾಗೂ ಇಬ್ಬರು ಆಯಾಗಳನ್ನು ನೇಮಿಸಿಕೊಂಡಿದ್ದಾರೆ.
ಹಾಗಾಗಿ 2019-20ನೇ ಸಾಲಿನಿಂದ ಯಾವುದೇ ಸಮಸ್ಯೆಯಿಲ್ಲದೆ ಸರಕಾರಿ ಶಾಲೆಯಲ್ಲಿ ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯುತ್ತಿದ್ದಾರೆ. ಈ ಪ್ರಕ್ರಿಯೆಯಿಂದ ಮಕ್ಕಳ ಹೆತ್ತವರು ಕೂಡ ನಿರಾಳರಾಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯವರು ಕೇಳಿದಷ್ಟು ಡೊನೇಶನ್ ಕೊಡಲು ನಮಗೆ ಸಾಧ್ಯವಿಲ್ಲ. ಹಾಗಾಗಿ ಇಲ್ಲೇ ನರ್ಸರಿ, ಎಲ್‌ಕೆಜಿ, ಯುಕೆಜಿಯನ್ನು ಕಡಿಮೆ ಶುಲ್ಕದಲ್ಲಿ ಹಾಗೂ 1ನೇ ತರಗತಿ ಶಿಕ್ಷಣವನ್ನು ಉಚಿತವಾಗಿ ಪಡೆದರೆ, ಭವಿಷ್ಯದಲ್ಲಿ ನಮ್ಮ ಮಕ್ಕಳು ನಿರಂತರವಾಗಿ ಕನ್ನಡ ಸಹಿತ ಆಂಗ್ಲ ಮಾಧ್ಯಮದಲ್ಲೇ ಉಚಿತ ಶಿಕ್ಷಣ ಪಡೆಯಬಹುದು ಎಂಬ ನಿರೀಕ್ಷೆಯ ನ್ನಿಟ್ಟುಕೊಂಡಿದ್ದಾರೆ.
ದಾನವಾಗಿ ನೀಡಲ್ಪಟ್ಟ ಜಮೀನು: ಈ ಸರಕಾರಿ ಶಾಲೆಯ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲದೆ ಅಂಗನವಾಡಿಯೂ ಇದೆ. ಹೀಗೆ ಒಂದು ಸರಕಾರಿ ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದ ಕಲರವ ಕೇಳಿ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಾಗಂತಡಿಗುತ್ತುವಿನ ತಿಮ್ಮಪ್ಪ ಮೇಲಾಂಟ. ಅವರು ಸುಮಾರು 1 ಎಕರೆ ಜಮೀನನ್ನು ಸರಕಾರಕ್ಕೆ ದಾನವಾಗಿ ನೀಡಿದ್ದರಿಂದ ಈ ಮೈಲಿಗಲ್ಲು ಏರಲು ಸಾಧ್ಯವಾಗಿದೆ. ಅಂದರೆ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಭರಾಟೆಯ ಮಧ್ಯೆ ಸರಕಾರಿ ಶಾಲೆಯು ಮುಚ್ಚುವ ಭೀತಿಯನ್ನು ಮನಗಂಡ ಎಸ್‌ಡಿಎಂಸಿ ಪದಾಧಿಕಾರಿಗಳು ಒಂದೇ ಕಡೆ ಕನ್ನಡ ಮತ್ತು ಆಂಗ್ಲಮಾಧ್ಯಮ ಶಿಕ್ಷಣ ನೀಡಲು ನಡೆಸಿದ ಸತತ ಪ್ರಯತ್ನದ ಫಲವಾಗಿ ಸರಕಾರಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುತ್ತಿದ್ದಾರೆ.
ತರಕಾರಿ ತೋಟ: ಶಾಲೆಯ ಆವರಣದಲ್ಲಿ ಅಳಸಂಡೆ, ಬಸಳೆ, ಬೆಂಡೆಕಾಯಿ, ಪಪ್ಪಾಯಿಯಲ್ಲದೆ, ಬಾಳೆಗಿಡವೂ ಇದೆ. ಎಳವೆಯಲ್ಲೇ ವಿದ್ಯಾರ್ಥಿಗಳಲ್ಲಿ ಕೃಷಿಯತ್ತ ಆಸಕ್ತಿ ಮೂಡಿಸುವ ಶಿಕ್ಷಕಿಯರ ಪ್ರಯತ್ನಕ್ಕೆ ಪೋಷಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. 6,7, 8ನೇ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಸಲುವಾಗಿ ಪ್ರೊಜೆಕ್ಟರ್ ಕೂಡ ಇದೆ. ಇದನ್ನು ಶೀಘ್ರದಲ್ಲೇ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಡಲು ಪ್ರಯತ್ನ ಮುಂದುವರಿದಿದೆ. ಒಂದನೇ ತರಗತಿಯ ಮಕ್ಕಳಿಗೆ ಸರಕಾರ ಒಂದು ಜೊತೆ ಸಮವಸ್ತ್ರವಲ್ಲದೆ ಎಸ್‌ಡಿಎಂಸಿಯವರೂ ದಾನಿಗಳ ಹಾಗೂ ಪೋಷಕರ ನೆರವು ಪಡೆದು ಎರಡು ಜೊತೆ ಸಮವಸ್ತ್ರ, ಬೆಲ್ಟ್, ನೋಟ್‌ಬುಕ್, ಐಡಿಕಾರ್ಡ್ ಇತ್ಯಾದಿ ನೀಡಿ ಮಕ್ಕಳಿಗೆ ಯಾವ ಕೊರತೆಯೂ ಕಾಡದಂತೆ ನೋಡಿಕೊಂಡಿದ್ದಾರೆ.
ಒಂದಷ್ಟು ಕೊರತೆ
ಇಷ್ಟೆಲ್ಲಾ ಸೌಲಭ್ಯಗಳ ನಡುವೆ ಒಂದಷ್ಟು ಕೊರತೆ ಇಲ್ಲಿದೆ. ಶಾಲೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಹೆಂಚಿನಿಂದ ಕೂಡಿದ ಈ ಕಟಡದಲ್ಲಿ ಕೊಠಡಿಯ ಕೊರತೆಯೂ ಇದೆ. ಮುಂದಿನ ವರ್ಷದಿಂದ ಮಕ್ಕಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹೊಸ ಕೊಠಡಿಗಾಗಿ ಕಟ್ಟಡ ನಿರ್ಮಾಣದ ಬೇಡಿಕೆಯನ್ನು ಶಾಸಕರು, ಡಿಡಿಪಿಐ, ಬಿಇಒ ಮುಂದೆ ಎಸ್‌ಡಿಎಂಸಿ ಪದಾಧಿಕಾರಿಗಳು ಮುಂದಿಟ್ಟಿದ್ದಾರೆ. ಸರಕಾರ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆ ಮಾಡದಿದ್ದರೆ 2020-21ನೇ ಸಾಲಿನಲ್ಲಿ ಮಕ್ಕಳಿಗೆ ತರಗತಿಯ ಕೊರತೆ ಮತ್ತಷ್ಟು ಕಾಡಲಿದೆ. ಈ ಮಧ್ಯೆ ಸರಕಾರಿ ಶಾಲೆಯ ಆವರಣದ ಗೋಡೆಯಲ್ಲೂ ಬಿರುಕು ಬಿಟ್ಟಿದೆ. ಎಗ್ಗಿಲ್ಲದೆ ಸುರಿಯುವ ಮಳೆಗೆ ಯಾವುದೇ ಕ್ಷಣ ಆವರಣ ಗೋಡೆಯು ಕುಸಿದರೂ ಅಚ್ಚರಿ ಇಲ್ಲ ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ. ಅದಲ್ಲದೆ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಸುಸಜ್ಜಿತ ವೇದಿಕೆಯ ಆವಶ್ಯಕತೆಯೂ ಇದೆ.
ಸರಕಾರಿ ಶಾಲೆ ಉಳಿಯಬೇಕು ಎಂದು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು. ಅದನ್ನು ಕಾರ್ಯರೂಪಕ್ಕೆ ತರಬೇಕು. ಈ ನಿಟ್ಟಿನಲ್ಲಿ ನಮ್ಮ ಎಸ್‌ಡಿಎಂಸಿ ಪ್ರಯತ್ನ ನಡೆಸಿದ್ದಕ್ಕೆ ಉತ್ತಮ ಪ್ರತಿಫಲ ಲಭಿಸಿದೆ. ನನ್ನ ಮಗನನ್ನು ಒಂದನೇ ತರಗತಿಗೆ ಸೇರಿಸುವಾಗ ಸ್ವಲ್ಪ ಅಳುಕಿತ್ತು. ಆದರೆ, ಇಲ್ಲೀಗ ನೀಡಲಾಗುವ ಶಿಕ್ಷಣದ ಗುಣಮಟ್ಟ ಗಮನಿಸುವಾಗ ತುಂಬ ಖುಷಿ ಹಾಗೂ ಹೆಮ್ಮೆಯಾಗುತ್ತದೆ.
-ರಾಹಿಲಾ ಬದ್ಯಾರ್, ಪೋಷಕರು
ಒಂದೂವರೆ ವರ್ಷದ ಹಿಂದೆ ಈ ಶಾಲೆಯ ಜವಾಬ್ದಾರಿ ವಹಿಸಿಕೊಂಡ ನಮ್ಮ ತಂಡದಲ್ಲಿ ಮಕ್ಕಳ ಪೋಷಕರು, ಪದನಿಮಿತ್ತ ಸದಸ್ಯರು ಸೇರಿ 24 ಮಂದಿ ಇದ್ದೇವೆ. ನಾವೆಲ್ಲಾ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅವರು ಕೇಳಿದಷ್ಟು ಡೊನೇಶನ್ ಕೊಡಲು ಸಾಧ್ಯವಿಲ್ಲದ ಮಕ್ಕಳಿಗೆ ಉಚಿತ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣವು ಒಂದೇ ಸೂರಿನಲ್ಲಿ ಸಿಗಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ನಮ್ಮ ಮಕ್ಕಳೂ ಇಲ್ಲೇ ಕಲಿಯುತ್ತಿದ್ದಾರೆ. ದಿನಲೂ ಎಸ್‌ಡಿಎಂಸಿ ಯಾರಾದರೊಬ್ಬ ಶಾಲೆಗೆ ಭೇಟಿ ನೀಡಿ ಸಮಸ್ಯೆಗಳಿದ್ದಲ್ಲಿ ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ. ನಮ್ಮೆಲ್ಲರ ಪ್ರಯತ್ನ, ಶಾಸಕರು, ಅಧಿಕಾರಿಗಳು, ಶಿಕ್ಷಕಿಯರ, ಪೋಷಕರ ಸಹಕಾರದಿಂದ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ ತೃಪ್ತಿ ಇದೆ.
-ಬಿ.ಎ.ಖಾದರ್ (ತ್ರಿಸ್ಟಾರ್ ಅಬ್ಬು) ಅಧ್ಯಕ್ಷರು ಐ. ಅಬ್ದುಲ್ ಖಾದರ್ (ಉಪಾಧ್ಯಕ್ಷರು), ಎಸ್‌ಡಿಎಂಸಿ ದೇರಳಕಟ್ಟೆ
ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುವುದು ಎಂದ ತಕ್ಷಣ ಆಸುಪಾಸಿನ ಮಕ್ಕಳ ನೂರಾರು ಪೋಷಕರು, ಹೆತ್ತವರು ಸೀಟಿಗಾಗಿ ದುಂಬಾಲು ಬಿದ್ದರು. ಶಾಸಕರ, ಎಸ್‌ಡಿಎಂಸಿಯವರ, ಅಧಿಕಾರಿಗಳ ಸಹಕಾರದಿಂದ ಎಲ್ಲರಿಗೂ ಇಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. 1ನೇ ತರಗತಿಯ ಆಂಗ್ಲ ಮಾಧ್ಯಮದ 13 ಪಠ್ಯಪುಸ್ತಕ ಕೊರತೆ ಇತ್ತು. ಎಸ್‌ಡಿಎಂಸಿಯವರು ಸರಕಾರದಿಂದ ಬರುವವರೆಗೆ ಕಾಯದೆ ತಕ್ಷಣ ಪುಸ್ತಕದ ಝೆರಾಕ್ಸ್ ಪ್ರತಿ ಮಾಡಿಸಿಕೊಂಡು ಎಲ್ಲ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ. ಬದ್ಧತೆ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಇದೊಂದು ಸಾಕ್ಷಿ. ನಾವೆಲ್ಲಾ ಸೇರಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಸರಕಾರ ಮತ್ತು ಗ್ರಾಮಸ್ಥರು ಪ್ರೋತ್ಸಾಹ ನೀಡಿದರೆ ಈ ಶಾಲೆಯನ್ನು ಮತ್ತಷ್ಟು ಬೆಳೆಸಲು ಸಾಧ್ಯವಿದೆ.
- ಆಲಿಸ್ ವಿಮಲಾ (ಮುಖ್ಯಶಿಕ್ಷಕಿ), ಚಂದ್ರಕಲಾ/ ಹಫ್ಸಾ ಬಾನು/ಆಶಾ (ಶಿಕ್ಷಕಿಯರು)