ಸರ್ವಜ್ಞನ ವಚನಗಳಲ್ಲಿ ವೈದ್ಯಕೀಯ ವಿಚಾರಧಾರೆ

Update: 2019-11-07 05:41 GMT

ಸರ್ವಜ್ಞನ ತ್ರಿಪದಿಗಳೆಂದರೆ ನಮ್ಮ ಮನಸ್ಸು ಬೆಳಗುತ್ತದೆ. ಲೌಕಿಕ, ಪಾರಲೌಕಿಕ ಎರಡನ್ನೂ ಅತ್ಯಂತ ತೀಕ್ಷ್ಣವಾಗಿ ವಿಡಂಬಿಸುವ ಈ ಅನಾಮಿಕ ಕವಿಯನ್ನು ಹೊರತು ಪಡಿಸಿ ಕನ್ನಡ ಸಾಹಿತ್ಯವಿಲ್ಲ. ಈತನ ಲೋಕಾನುಭವ ವಿಶೇಷವಾದುದು. ಸ್ತ್ರೀ ಪುರುಷ ಸಂಬಂಧಗಳ ಬಗ್ಗೆಯೂ ಈತ ನೂರಾರು ವಚನಗಳನ್ನು ರಚಿಸಿದ್ದಾನೆ.

ಆತ ಒಂದು ವಿಶ್ವಕೋಶವಿದ್ದಂತೆ. ಆಗಿನ ಸಮಾಜದಲ್ಲಿ ಕಂಡು ಬರುವ ಎಲ್ಲ ವಿಚಾರಗಳನ್ನೂ ಬರೆದಿದ್ದಾರೆ. ಈತನ ಸಾಹಿತ್ಯದ ಇನ್ನೊಂದು ಹೆಗ್ಗಳಿಕೆಯೆಂದರೆ ಎಲ್ಲರಿಗೂ ತಲುಪುವ ಸರಳ ಗನ್ನಡ. ಇಂತಹ ಸರ್ವಜ್ಞ ವೈದ್ಯಕೀಯ ವಿಷಯಗಳ ಬಗ್ಗೆಯೂ ಬರೆದಿದ್ದಾನೆ ಎಂದರೆ ಅದು ಕುತೂಹಲ ಹುಟ್ಟಿಸುವ ಸಂಗತಿ.

‘ಸರ್ವಜ್ಞನ ವಚನಗಳಲ್ಲಿ ವೈದ್ಯಕೀಯ ವಿಚಾರಧಾರೆ’ ಕೃತಿಯಲ್ಲಿ ಸರ್ವಜ್ಞ ಬರೆದ ವೈದ್ಯಕೀಯ ಮತ್ತು ಆರೋಗ್ಯ ವಿಚಾರಧಾರೆಯ ಕುರಿತಂತೆ ಶೋಧನೆ ನಡೆದಿದೆ. ವೈದ್ಯರತ್ನ ಡಾ. ಸಿ. ಎಸ್.ಕೆ. ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಅಸಾಧಾರಣ ಪಾಂಡಿತ್ಯ ಹೊಂದಿದ್ದ ಸರ್ವಜ್ಞನು ತಮ್ಮ ಪದ್ಯಗಳಲ್ಲಿ ಜೀವಶಾಸ್ತ್ರ, ಸಸ್ಯ ಶಾಸ್ತ್ರ, ಶರೀರ ಶಾಸ್ತ್ರ, ಆಹಾರ ಶಾಸ್ತ್ರ, ಅರ್ಥಶಾಸ್ತ್ರ, ಧರ್ಮಶಾಸ್ತ್ರ, ಯೋಗ ಶಾಸ್ತ್ರ ಹೀಗೆ ಬೇರೆ ಬೇರೆ ವಿಚಾರಗಳನ್ನು ಮಂಡಿಸಿರುವುದನ್ನು ಈ ಕೃತಿ ವಿವರಿಸುತ್ತದೆ.

ಕೃತಿಯ ಆರಂಭದಲ್ಲಿ ಸರ್ವಜ್ಞನ ಹುಟ್ಟು, ವಿದ್ಯಾಭ್ಯಾಸ, ಕಾವ್ಯ ಶಕ್ತಿ ಇತ್ಯಾದಿಗಳ ಕುರಿತಂತೆ ವಿವರಗಳಿವೆ. ಕವಿಯಾಗಿ, ವಚನಕಾರನಾಗಿ ಸರ್ವಜ್ಞನ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಸರ್ವಜ್ಞನ ಲೋಕನೀತಿಯ ಪದ್ಧತಿಗಳ ಬಗ್ಗೆಯೂ ಸರಳ ವಿವರಗಳಿವೆ. ಪ್ರಾಚೀನ ಸಾಹಿತ್ಯದಲ್ಲಿ ಆರೋಗ್ಯ ಶಾಸ್ತ್ರ, ಆಹಾರಶಾಸ್ತ್ರ, ಸ್ವಾದಿಷ್ಟ ಭೋಜನದ ರಸಿಕತೆ, ವೈವಿಧ್ಯತೆಗಳು, ಉಪ್ಪು ಮತ್ತು ನೀರಿನ ಅವಶ್ಯಕತೆ, ಹಸಿವು, ಆಹಾರ ನಿಯಮ, ಊಟದಲ್ಲಿ ಆತ್ಮೀಯತೆ, ಆರೋಗ್ಯದ ಸ್ವಯಂ ಪರಿಪಾಲನೆ, ದೈಹಿಕ ಶ್ರಮ, ಪರಿಸರ ಮತ್ತು ಶುಚಿತ್ವ, ಮನೆ ಮತ್ತು ಪರಿಸರ, ಚಿಕಿತ್ಸಾ ಶಾಸ್ತ್ರ, ಔಷಧ ಶಾಸ್ತ್ರ...ಹೀಗೆ ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಹೇಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸರಳ ಸುಂದರ ಸಾಲುಗಳಲ್ಲಿ ವಿವರಿಸಿದ್ದ ಎನ್ನುವುದನ್ನು ಕೃತಿ ಹೇಳುತ್ತದೆ. ‘ಆಹಾರವುಳ್ಳಲ್ಲಿ ಬೇಹಾರ ಘನವಕ್ಕು

ಆಹಾರದೊಳಗ ನರಿದಿಪ್ಪ ಸೆಟ್ಟಿಗೇ

ಬೇಹಾರವಕ್ಕು ಸರ್ವಜ್ಞ’

ಆಹಾರವನ್ನು ಹೇಗೆ ಬಳಸಬೇಕು ಎನ್ನುವುದನ್ನು ಈ ತ್ರಿಪದಿಯಲ್ಲಿ ಎಚ್ಚರಿಸುತ್ತಾನೆ. ಅಂತೆಯೇ

‘ಎಲೆಯು ಕೊಳೆತರೆ ಹೊಲ್ಲ

ತೊಲೆಯು ಮುರಿದರೆ ಹೊಲ್ಲ

ಕೊಲೆ ಹೊಲ್ಲ ಊರ ಜನರೊಳಗೆ ಸುಜನ ಮೂದಲೆಯೊಳಿರ ಹೊಲ್ಲ ಸರ್ವಜ್ಞ’ ಈ ಮೂಲಕ ಯಾವುದು ಹೊಲ್ಲ ಎನ್ನುವುದನ್ನು ಸರ್ವಜ್ಞ ಹೇಳುತ್ತಾನೆ.

ಇಂತಹ ಹಲವು ತ್ರಿಪದಿಗಳ ಮೂಲಕ ಸರ್ವಜ್ಞ ಜನರ ಆರೋಗ್ಯದ ಬಗ್ಗೆ ಮಾತನಾಡಿರುವುದನ್ನು ಹೇಳಿದ್ದಾನೆ. ವೈದ್ಯ ವಾರ್ತಾ ಪ್ರಕಾಶನ ಮೈಸೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 160. ಮುಖಬೆಲೆ 140 ರೂಪಾಯಿ. ಆಸಕ್ತರು 94484 02092 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News