ನೋಟ್ ಬ್ಯಾನ್, ಆರ್ಥಿಕ ಕುಸಿತದ ಹೊಡೆತ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ: ಮಾಜಿ ಸಚಿವ ರಮಾನಾಥ ರೈ

Update: 2019-11-11 13:34 GMT

ದ.ಕ.ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಮಂಗಳೂರು ಮಹಾ ನಗರ ಪಾಲಿಕೆಗೆ ನವೆಂಬರ್ 12ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕಳೆದೊಂದು ವಾರದಿಂದೀಚೆಗೆ ರಾತ್ರಿ ಹಗಲೆನ್ನದೆ ಮತ ಯಾಚನೆಯಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. ಮಾಜಿಯಾದರೂ ಪಕ್ಷದಲ್ಲಿ ತನ್ನ ವರ್ಛಸ್ಸು ಉಳಿಸಿಕೊಂಡು ಟಿಕೆಟ್ ಹಂಚಿಕೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ರಮಾನಾಥ ರೈ ಅವರನ್ನು ‘ವಾರ್ತಾಭಾರತಿ’ ಮಾತನಾಡಿಸಿತು.

ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದ ತಮಗೆ ಮತದಾರರಿಂದ ಯಾವ ರೀತಿಯ ಸ್ಪಂದನೆ ಸಿಕ್ಕಿದೆ?
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವಿದ್ದಾಗಲೇ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತವಿತ್ತು. 7 ಮಂದಿ ಶಾಸಕರಿದ್ದೆವು. ಆ ಪೈಕಿ ನಾನು, ಯು.ಟಿ.ಖಾದರ್, ಅಭಯಚಂದ್ರ ಜೈನ್ ಅಲ್ಲದೆ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಹೀಗೆ ಅವಿಭಜಿತ ದ.ಕ.ಜಿಲ್ಲೆಯ ಐವರು ಸಚಿವರಿದ್ದೆವು. ನಾವೆಲ್ಲರೂ ಕರಾವಳಿಯ ಅಭಿವೃದ್ಧಿಗೆ ಶ್ರಮಿಸಿದ್ದೆವು. ಅದರಲ್ಲೂ ಮಂಗಳೂರು ಮಹಾನಗರ ಪಾಲಿಕೆಗೆ ಸುಮಾರು 5,465 ಕೋ.ರೂ. ಅನುದಾನವನ್ನು ಒದಗಿಸಿದ್ದೆವು. ಹೀಗೆ ಸಚಿವರು, ಶಾಸಕರು, ಕಾರ್ಪೊರೇಟರ್‌ಗಳ ಶ್ರಮದಿಂದ ಮಂಗಳೂರು ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಹೊಂದಿದೆ. ರಸ್ತೆಗಳ ಕಾಂಕ್ರಿಟೀಕರಣ, ಕುಡಿಯುವ ನೀರು ಪೂರೈಕೆಯಲ್ಲದೆ ವಿವಿಧ ಭಾಗ್ಯಯೋಜನೆಗಳ ಪ್ರಯೋಜನವನ್ನು ಸಾವಿರಾರು ಮಂದಿ ಪಡೆದಿದ್ದರು. ಇನ್ನು ಕಾಂಗ್ರೆಸ್ ಕಾರ್ಪೊರೇಟರ್‌ಗಳಿರುವ ವಾರ್ಡ್‌ಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಮತ ಯಾಚಿಸಲು ಹೋದಾಗ ಜನರು ಅದನ್ನೇ ನೆನಪಿಸಿಕೊಂಡಿದ್ದಾರೆ.

ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿತ್ತು. ಅದು ಚುನಾವಣೆಯಲ್ಲಿ ಪರಿಣಾಮ ಬೀರೀತೇ?
ಟಿಕೆಟ್ ಹಂಚಿಕೆಯಲ್ಲಿ ಗೊಂದಲವೇ ಆಗಲಿಲ್ಲ. ಟಿಕೆಟ್ ನೀಡುವಾಗ ಮೀಸಲು, ಜಾತಿ, ಹಿರಿತನ, ಸಿಟ್ಟಿಂಗ್ ಕಾರ್ಪೊರೇಟರ್ ಇತ್ಯಾದಿ ಅಂಶವನ್ನು ಪರಿಗಣಿಸಬೇಕಾಗುತ್ತದೆ. ಟಿಕೆಟ್ ವಂಚಿತರು ಪಕ್ಕದ ವಾರ್ಡ್ ಮೇಲೆ ಕಣ್ಣಿಡುವಾಗ ಸಹಜವಾಗಿ ಅಸಮಾಧಾನ ಉಂಟಾಗಿದೆ. ಅದು ಗೊಂದಲವಲ್ಲ. ಹಾಗಾಗಿ ಅದರ ಪರಿಣಾಮ ಚುನಾವಣೆಯ ಮೇಲೆ ಬೀರದು.

ಕಾಂಗ್ರೆಸ್‌ನಲ್ಲಿ ಕೆಲವು ಕಡೆ ಬಂಡಾಯ, ಪಕ್ಷಾಂತರ ಇತ್ಯಾದಿ ನಡೆದಿದೆಯಲ್ಲಾ?
ಎಲ್ಲಿ ಬಂಡಾಯ...? ಕಾಂಗ್ರೆಸ್‌ನಲ್ಲಿ ಅಧಿಕಾರ, ಸ್ಥಾನಮಾನ ಎಲ್ಲವನ್ನೂ ಅನುಭವಿಸಿ, ಬಳಿಕ ಪಕ್ಷದಲ್ಲಿದ್ದೂ ಇಲ್ಲದಂತೆ ಕಾಲಹರಣ ಮಾಡಿದವರು ಚುನಾವಣೆಯ ಸಂದರ್ಭ ಟಿಕೆಟ್ ಬೇಕು ಅಂದರೆ ಆಗುತ್ತಾ? ಅಂತಹ ಹಲವರು ಕೆಲವು ಕಡೆ ಸ್ಪರ್ಧಿಸಿರಬಹುದು. ಅದು ಕಾಂಗ್ರೆಸ್‌ನ ಮೇಲೆ ಯಾವ ಪರಿಣಾಮವೂ ಬೀರದು.

ಮಾಜಿ ಕೇಂದ್ರ ಸಚಿವ ಜನಾದರ್ನ ಪೂಜಾರಿಯ ಮುನಿಸು ಬಗ್ಗೆ ಏನು ಹೇಳುವಿರಿ?
ಅವರೆಲ್ಲಿ ಮುನಿಸಿದ್ದಾರೆ... ಅವರನ್ನು ಅವರ ಹಿಂಬಾಲಕರು ಮುನಿಸುವಂತೆ ಮಾತನಾಡಿಸುತ್ತಿದ್ದಾರಷ್ಟೆ. ಪೂಜಾರಿ ಈಗಲೂ ನಮ್ಮ ಹಿರಿಯ ನಾಯಕರು. ಅವರು ಕಾಂಗ್ರೆಸ್‌ಗೆ ಯಾವತ್ತೂ ದ್ರೋಹ ಬಗೆಯುವವರಲ್ಲ. ಆದರೆ, ಅವರ ಹಿಂಬಾಲಕರು ಎಂದು ಹೇಳಿಕೊಳ್ಳುವ ಕೆಲವು ಮಂದಿ ಬಿಜೆಪಿ ಸೇರುವ ಮೂಲಕ ತಾವು ಜಾತ್ಯತೀತರಲ್ಲ ಎಂದು ಸಾಬೀತುಪಡಿಸಿದ್ದಾರೆ. ಪೂಜಾರಿಯ ಮೇಲೆ ಅವರಿಗೆ ನಿಷ್ಠೆ ಇದ್ದಿದ್ದರೆ ಖಂಡಿತಾ ಅವರು ಬಿಜೆಪಿ ಸೇರುತ್ತಿರಲಿಲ್ಲ. ಒಂದು ಲೆಕ್ಕದಲ್ಲಿ ಅವರು ಪಕ್ಷ ತೊರೆದಿರುವುದು ಒಳ್ಳೆಯದೇ ಆಯಿತು, ಬಿಡಿ. ಕಾಂಗ್ರೆಸ್‌ನಲ್ಲಿದ್ದುಕೊಂಡು ‘ಕಪಟ ಜಾತ್ಯತೀತ’ರಾಗಿರುವ ಬದಲು ತಮ್ಮ ನೈಜ ಮುಖ ಪ್ರದರ್ಶಿಸಿದ್ದಾರೆ. ಅಂತಹವರ ವಿರುದ್ಧ ನಾವು ಎಚ್ಚರಿಕೆಯಿಂದಿರಲು ಸಾಧ್ಯವಾಗಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಅವರ ತವರು ಜಿಲ್ಲೆಯಲ್ಲಿ ನಡೆಯುವ ಪ್ರಥಮ ಚುನಾವಣೆ ಇದಾಗಿದೆ. ಈ ಬಗ್ಗೆ ಏನು ಹೇಳುವಿರಿ?
ನಳಿನ್ ಬಿಜೆಪಿ ರಾಜ್ಯಾಧ್ಯಕ್ಷರಾದರೇನಂತೆ. ಅವರಿಗೆ ವೈಯಕ್ತಿಕ ವರ್ಛಸ್ಸು ಉಂಟಾ? ಬಿಜೆಪಿ ಅವರಿಗೆ ಟಾನಿಕ್ ಇದ್ದಂತೆ. ಅವರಿಗೆ ಸ್ವಂತ ಬಲವೇ ಇಲ್ಲ. ಅವರು ಎಷ್ಟೇ ಓಡಾಡಿದರೂ ಮತದಾರರು ಅವರ ಮಾತಿಗೆ ಮರುಳಾಗಲಾರ.

ಅಯೋಧ್ಯೆಯ ತೀರ್ಪಿನ ಲಾಭವನ್ನು ಬಿಜೆಪಿಗರು ಪಡೆದುಕೊಂಡಾರೇ?
ಸುಪ್ರೀಂ ಕೋರ್ಟ್ ತೀರ್ಪಿನ ಮುನ್ನವೇ ದೇಶದ ಜನರು ‘ತೀರ್ಪು ಹೇಗೆ ಬಂದರೂ ಸ್ವಾಗತಿಸುವೆವು’ ಎಂದಿದ್ದರು. ಅದರಂತೆ ನಾಡಿನ ಜನರು ಅದನ್ನು ಸಮಚಿತ್ತದಿಂದಲೇ ಸ್ವೀಕರಿಸಿದ್ದಾರೆ. ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಹಾಗಾಗಿ ಬಿಜೆಪಿಗರು ಅದರ ಲಾಭ ಪಡೆಯಲು ಸಾಧ್ಯವೇ ಇಲ್ಲ. ಯಾಕೆಂದರೆ ವಾಸ್ತವ ಏನು ಎಂದು ಜನರಿಗೆ ಗೊತ್ತು. 2016ರ ನವೆಂಬರ್ 8ರಂದು ಕೇಂದ್ರದ ಮೋದಿ ಸರಕಾರ ನೋಟ್ ಬ್ಯಾನ್ ಮಾಡಿದ್ದು, ಜಿಎಸ್‌ಟಿ ಜಾರಿಗೊಳಿಸಿದ್ದು ಎಲ್ಲರಿಗೂ ತಿಳಿದ ವಿಚಾರ. ಆವಾಗ ಅದರ ನೋವು, ಕಷ್ಟ ಅನುಭವಿಸಿದವರೂ ಕೂಡಾ ಮೌನವಾಗಿದ್ದರು. ಮೂರು ವರ್ಷದ ಬಳಿಕ ಅದರ ಪರಿಣಾಮ ಏನೂಂತ ಜನರಿಗೆ ಮನವರಿಕೆಯಾಗಿದೆ. ಅಲ್ಲದೆ ಜನರು ಮೋದಿ, ಬಿಜೆಪಿಯನ್ನು ಪ್ರಶ್ನಿಸಲು ಶುರು ಮಾಡಿದ್ದಾರೆ. ಯಾರನ್ನು ಗೆಲ್ಲಿಸಬೇಕು ಎಂಬುದನ್ನು ಮತದಾರರು ಈಗಾಗಲೆ ತೀರ್ಮಾನಿಸಿದ್ದಾರೆ. ನವೆಂಬರ್ 14ರಂದು ಮತದಾರರು ನೀಡಿದ ತೀರ್ಪು ಪ್ರಕಟಗೊಳ್ಳಲಿದೆ.

60 ಸ್ಥಾನಗಳ ಪೈಕಿ ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ?
ನಾವು ಕಳೆದ ಅವಧಿಯಲ್ಲಿ ಮಾಡಿದ ಸಾಧನೆಯನ್ನು ಅವಲೋಕಿಸುವುದಾದರೆ ಮತ್ತು ಮತಯಾಚನೆಯ ಸಂದರ್ಭ ಮತದಾರರ ಅನಿಸಿಕೆಯ ಆಧಾರದ ಮೇಲೆ ಹೇಳುವುದಾದರೆ, ಖಂಡಿತಾ ನಾವು ಕನಿಷ್ಠ 40 ಸ್ಥಾನಗಳನ್ನು ಗೆಲ್ಲಲಿದ್ದೇವೆ.

Writer - ಸಂದರ್ಶನ : ಹಂಝ ಮಲಾರ್

contributor

Editor - ಸಂದರ್ಶನ : ಹಂಝ ಮಲಾರ್

contributor

Similar News