ಈ ಬಂಧನದ ಹಿಂದಿನ ಮರ್ಮಗಳೇನು!?

Update: 2019-11-11 18:25 GMT

ನರಸಿಂಹ ಮೂರ್ತಿ ಸರಕಾರಕ್ಕೆ ಭಾರೀ ಅಪಾಯಕಾರಿಯಾದ ವ್ಯಕ್ತಿಯೇನೂ ಆಗಿರಲಿಲ್ಲ. ಅವರನ್ನು ಬಂಧಿಸಲು ಇಪ್ಪತ್ತೈದು ವರ್ಷಗಳು ಕಾಯಬೇಕಾದ ಅಗತ್ಯವೂ ಸರಕಾರಕ್ಕೆ ಇರಲಿಲ್ಲ. ನ್ಯಾಯ ಪಥ ಪತ್ರಿಕೆ ಹಾಗೂ ಗೌರಿ ಮೀಡಿಯಾ ಟ್ರಸ್ಟ್ ಸಂಘ ಪರಿವಾರ ಹಾಗೂ ಬಿಜೆಪಿಯ ವಿರುದ್ಧವಿದ್ದರೂ ಅವುಗಳು ದೊಡ್ಡ ಆತಂಕ ಸೃಷ್ಟಿಸುವ ಮಟ್ಟದಲ್ಲಿರಲಿಲ್ಲ. ಇವೆಲ್ಲಾ ಸರಕಾರಕ್ಕೆ ಗೊತ್ತಿಲ್ಲದ ವಿಚಾರವಾಗಿರಲು ಸಾಧ್ಯವಿಲ್ಲ. ಆದರೆ ನರಸಿಂಹ ಮೂರ್ತಿ ಬಂಧನದ ಮೂಲಕ ಸರಕಾರ ಹಲವು ಸಂದೇಶಗಳನ್ನು ಒಮ್ಮೆಗೆ ಜನಪರ ಪತ್ರಕರ್ತರಿಗೆ, ಸಮಾಜಮುಖಿ ಮನಸ್ಸುಗಳಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ನೀಡಲು ಮಾಡಿದ ಒಂದು ಬಲವಾದ ಪ್ರಯತ್ನ ಎನ್ನಬಹುದು.


ಕರ್ನಾಟಕದಲ್ಲಿ ದಶಕಗಟ್ಟಲೆ ಹಿಂದಿನ ಮೊಕದ್ದಮೆಗಳ ನೆಪ ಹಿಡಿದು ಬಂಧಿಸಿಡುವ ಪ್ರಕ್ರಿಯೆ ಶುರುವಾಗಿದೆಯೇ? ಈಗಿನ ವಾತಾವರಣ ಗಮನಿಸಿದಾಗ ಹಾಗೆ ಕಾಣುತ್ತಿದೆ. ಈಗ ಈ ಪ್ರಶ್ನೆ ಬರಲು ಕಾರಣವೂ ಇದೆ. ಸ್ವರಾಜ್ ಇಂಡಿಯಾದ ಕರ್ನಾಟಕದ ಹಾಲಿ ಪದಾಧಿಕಾರಿ, ನ್ಯಾಯ ಪಥ ಪತ್ರಿಕೆಯ ಸಂಪಾದಕ ಬಳಗದ ಸದಸ್ಯ, ಗೌರಿ ಮೀಡಿಯಾ ಟ್ರಸ್ಟ್‌ನ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ದೊಡ್ಡಿ ಪಾಳ್ಯ ನರಸಿಂಹಮೂರ್ತಿಯವರನ್ನು ಇಪ್ಪತ್ತೈದು ವರ್ಷಗಳ ಹಿಂದಿನ ಪ್ರಕರಣಗಳಲ್ಲಿ ಬೇಕಾದವರೆಂದು ಅಕ್ಟೋಬರ್ 25ರಂದು ಬಂಧಿಸಲಾಗಿದೆ. ನರಸಿಂಹಮೂರ್ತಿ ಇದುವರೆಗೂ ತಲೆಮರೆಸಿಕೊಂಡಿದ್ದರು ಅವರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು. ಆ ತಂಡ ಇವರನ್ನು ಬಹಳ ಸಾಹಸ ಪಟ್ಟು ಪತ್ತೆ ಹಚ್ಚಿ ಈಗ ಬಂಧಿಸಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಹೇಳಲಾಗಿದೆ!.

ರಾಜ್ಯ ಸರಕಾರದ ಈ ಕ್ರಮ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ರಾಜ್ಯಾದ್ಯಂತ ಈ ಬಂಧನ ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಜಡವಾಗಿದ್ದ ಪತ್ರಕರ್ತ ಸಂಘಗಳು ಸ್ವಲ್ಪ ಮಟ್ಟಕ್ಕೆ ಜಡತ್ವದಿಂದ ಎದ್ದು ಕುಳಿತ ಹಾಗೆ ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಭಟನಾ ಅಭಿಯಾನಗಳು ನಡೆಯುತ್ತಿವೆ. ನರಸಿಂಹಮೂರ್ತಿಯವರ ಮೇಲೆ ಹೊರಿಸಿರುವ ಆರೋಪಗಳಲ್ಲಿ ಶಸ್ತ್ರಾಸ್ತ್ರ ನಿಷೇಧ ಕಾಯ್ದೆ, ಸ್ಫೋಟಕ ನಿಷೇಧ ಕಾಯ್ದೆ ಮೊದಲಾದ ಗಂಭೀರ ಸ್ವರೂಪದವೂ ಸೇರಿವೆ. ಸದ್ಯ ಅವರ ಮೇಲೆ ನಾಲ್ಕು ಪ್ರಕರಣಗಳಿವೆಯೆಂದು ಹೇಳಲಾಗಿದೆ. ಅದರಲ್ಲಿ ಒಂದು ಪ್ರಕರಣದ ವಾರೆಂಟ್‌ನಡಿ ಈಗ ಬಂಧನ ನಡೆದಿದೆ. ಆದರೆ ನರಸಿಂಹಮೂರ್ತಿಯವರ ಮೇಲೆ ಸಾರ್ವಜನಿಕರು ಯಾರೂ ದೂರು ದಾಖಲಿಸಿಲ್ಲವೆಂದು ಹೇಳಲಾಗಿದೆ. ಪೊಲೀಸರೇ ಈ ಪ್ರಕರಣಗಳ ದೂರುದಾರರಾಗಿದ್ದಾರೆ. ಆದರೆ ಪೂರಕ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಪೊಲೀಸ್ ಸಾಕ್ಷಿ ಮಾತ್ರ ನ್ಯಾಯಾಲಯದಲ್ಲಿ ಪರಿಗಣಿತವಾಗುವುದಿಲ್ಲ ಎನ್ನುವುದು ಪೊಲೀಸರಿಗೆ ಹಾಗೂ ರಾಜ್ಯ ಸರಕಾರಕ್ಕೆ ಗೊತ್ತಿರದ ವಿಚಾರವೇನಲ್ಲ. ಇವೇ ಪ್ರಕರಣಗಳಡಿ ಬಂಧಿಸಿದವರನ್ನು ಆ ಆರೋಪಗಳಿಂದ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನ್ಯಾಯಾಲಯ ಖುಲಾಸೆಗೊಳಿಸಿದೆ. ಅಲ್ಲದೇ ನರಸಿಂಹಮೂರ್ತಿ ಈ ಇಪ್ಪತ್ತೈದು ವರ್ಷಗಳಲ್ಲಿ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಇದ್ದವರು. ಇದು ಅವರ ಒಡನಾಟದಲ್ಲಿದ್ದ ಹಲವರು ಖಚಿತಪಡಿಸಿರುವ ವಿಚಾರ ಕೂಡ.

ಬೆಂಗಳೂರಿನಿಂದ ಹಿಡಿದು ಮೈಸೂರುವರೆಗೂ ಅವರ ಹೋರಾಟದ ಮೂಲಕ ಅವರನ್ನು ಬಲ್ಲವರು ಸಾಕಷ್ಟು ಜನರಿದ್ದಾರೆ. ರಾಯಚೂರು ಜಿಲ್ಲೆಗೂ ಅವರು ಸಾಕಷ್ಟು ಬಾರಿ ಭೇಟಿ ನೀಡಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಹಿಂದೆ ಹಲವು ಪತ್ರಿಕೆಗಳಲ್ಲಿ ಲೇಖನ, ವರದಿಗಳನ್ನು ಪ್ರಕಟಿಸಿದ್ದಾರೆ. ಹೀಗೆ ಹತ್ತು ಹಲವು ಚಟುವಟಿಕೆಗಳಲ್ಲಿ ನಿರತರಾಗಿದ್ದ ನರಸಿಂಹಮೂರ್ತಿಯವರನ್ನು ಇಪ್ಪತ್ತೈದು ವರ್ಷಗಳ ಹಿಂದಿನ, ಅದೂ ಕೂಡ ನ್ಯಾಯಾಲಯಗಳಲ್ಲಿ ಬಿದ್ದುಹೋಗಿರುವ ಪ್ರಕರಣಗಳಲ್ಲಿನ ಆರೋಪಿಯೆಂದು ಬಂಧಿಸುವುದರ ಹಿಂದೆ ಹಲವು ವಿಚಾರಗಳಿವೆ. ನರಸಿಂಹ ಮೂರ್ತಿ ಸರಕಾರಕ್ಕೆ ಭಾರಿ ಅಪಾಯಕಾರಿಯಾದ ವ್ಯಕ್ತಿಯೇನೂ ಆಗಿರಲಿಲ್ಲ. ಅವರನ್ನು ಬಂಧಿಸಲು ಇಪ್ಪತ್ತೈದು ವರ್ಷಗಳು ಕಾಯಬೇಕಾದ ಅಗತ್ಯವೂ ಸರಕಾರಕ್ಕೆ ಇರಲಿಲ್ಲ. ನ್ಯಾಯ ಪಥ ಪತ್ರಿಕೆ ಹಾಗೂ ಗೌರಿ ಮೀಡಿಯಾ ಟ್ರಸ್ಟ್ ಸಂಘ ಪರಿವಾರ ಹಾಗೂ ಬಿಜೆಪಿಯ ವಿರುದ್ಧವಿದ್ದರೂ ಅವುಗಳು ದೊಡ್ಡ ಆತಂಕ ಸೃಷ್ಟಿಸುವ ಮಟ್ಟದಲ್ಲಿರಲಿಲ್ಲ. ಇವೆಲ್ಲಾ ಸರಕಾರಕ್ಕೆ ಗೊತ್ತಿಲ್ಲದ ವಿಚಾರವಾಗಿರಲು ಸಾಧ್ಯವಿಲ್ಲ. ಆದರೆ ನರಸಿಂಹ ಮೂರ್ತಿ ಬಂಧನದ ಮೂಲಕ ಸರಕಾರ ಹಲವು ಸಂದೇಶಗಳನ್ನು ಒಮ್ಮೆಗೆ ಜನಪರ ಪತ್ರಕರ್ತರಿಗೆ, ಸಮಾಜಮುಖಿ ಮನಸ್ಸುಗಳಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ನೀಡಲು ಮಾಡಿದ ಒಂದು ಬಲವಾದ ಪ್ರಯತ್ನ ಎನ್ನಬಹುದು.

ರಾಜ್ಯದಲ್ಲಿ ಪತ್ರಕರ್ತರ, ಸಾಮಾಜಿಕ ಹೋರಾಟಗಾರರ ಬಂಧನ ಹೊಸದೇನೂ ಅಲ್ಲ. ಇಪ್ಪತ್ತೈದು ವರ್ಷಗಳ ಹಿಂದಿನ ಪ್ರಕರಣದ ಆರೋಪಿ ಎಂದು ಬಂಧಿಸಿರುವುದು ಹೊಸದು ಅಷ್ಟೆ. ಹಿಂದೆ ಮಂಗಳೂರಿನಲ್ಲಿ ಜನಪರ ಪತ್ರಕರ್ತರೊಬ್ಬರನ್ನು ಸಂಘ ಪರಿವಾರದ ದುಷ್ಕೃತ್ಯಗಳನ್ನು ವರದಿ ಮಾಡಿದ ನೆಪದಲ್ಲೇ ಬಂಧಿಸಿ ತಿಂಗಾಳಾನುಗಟ್ಟಲೆ ಕಾರಾಗೃಹದಲ್ಲಿಡಲಾಗಿತ್ತು. ಇದು ಕೂಡ ಒಂದಷ್ಟು ಪ್ರತಿರೋಧ ಹಾಗೂ ವಿವಾದವನ್ನು ಹುಟ್ಟಿಸಿತ್ತು. ನಂತರ ಬಂದ ಸರಕಾರ ಆ ಪ್ರಕರಣವನ್ನು ಹಿಂದೆಗೆದುಕೊಂಡದ್ದೂ ಆಯಿತು. ಆದರೆ ಅದು ಮಾಧ್ಯಮ ವರದಿ ಮಾಡಿದ್ದಕ್ಕೇ ವೃತ್ತಿಪರ ಪತ್ರಕರ್ತರೊಬ್ಬರನ್ನು ಬಂಧಿಸಿ ತಿಂಗಳಾನುಗಟ್ಟಲೆ ಕಾರಾಗೃಹದಲ್ಲಿ ಕೂಡಿಹಾಕಿದ ವಿರಳ ಪ್ರಕರಣವಾಗಿತ್ತು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಅಂದರೆ ನಮ್ಮ ದೇಶದ ಸರಕಾರ ಹಾಗೂ ಪೊಲೀಸ್ ವ್ಯವಸ್ಥೆಯು ತಮಗಾಗದ ಯಾವುದೇ ವ್ಯಕ್ತಿಗಳನ್ನು ಹಾಲಿ ಇರುವ ಕಾನೂನು ವ್ಯವಸ್ಥೆಯನ್ನೇ ಬಳಸಿ ಹೇಗೆ ಬೇಕಾದರೂ ಬಂಧಿಸಿ ಇಡಬಹುದು ಎನ್ನುವುದಕ್ಕೆ ಇವುಗಳೂ ಕೂಡ ಉದಾಹರಣೆಗಳಾಗಿವೆ.

ಕಳೆದ ವರ್ಷ ದೇಶದ ಪ್ರಧಾನಿಯನ್ನೇ ಹತ್ಯೆ ಮಾಡುವ ಸಂಚು ಹೂಡಿದ್ದರು ಎಂಬ ಆರೋಪ ಹೊರಿಸಿ ಮಹಾರಾಷ್ಟ್ರ, ದಿಲ್ಲಿ, ತೆಲಂಗಾಣ, ಗೋವಾಗಳಲ್ಲಿ ಹಲವಾರು ಸಾಮಾಜಿಕ ಕಾರ್ಯಕರ್ತರ, ವಕೀಲರ, ಸಾಹಿತಿಗಳ, ಬರಹಗಾರರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಕ್ರಾಂತಿಕಾರಿ ಕವಿ, ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ವರವರರಾವ್, ಜನ ಪರ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್, ಮಾನವ ಹಕ್ಕು ಕಾರ್ಯಕರ್ತೆ ಹಾಗೂ ಪ್ರಾಧ್ಯಾಪಕಿ ಶೋಮಾ ಸೇನ್, ಮಾನವ ಹಕ್ಕು ಕಾರ್ಯಕರ್ತ ವೆರ್ನಾಮ್ ಗೊನ್ಸಾಲ್ವಿಸ್, ಮಾನವ ಹಕ್ಕು ಕಾರ್ಯಕರ್ತ ಅರುಣ್ ಫೆರೇರಾ ಮೊದಲಾದವರನ್ನು ಬಂಧಿಸಿ ಇದುವರೆಗೂ ಜಾಮೀನು ಸಿಗದಂತೆ ನೋಡಿಕೊಂಡು ಬರಲಾಗುತ್ತಿದೆ. ಇವರ ಮೇಲೆ ಭೀಮಾ ಕೋರೆಗಾಂವ್‌ನಲ್ಲಿ ನಡೆಸಿದ ಹಿಂಸಾತ್ಮಕ ಕೃತ್ಯಗಳಡಿ ಕೂಡ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇ ಪ್ರಕರಣದಡಿ ನೂರಾರು ದಲಿತ ಹಿನ್ನೆಲೆಯವರನ್ನು ಬಂಧಿಸಲಾಗಿತ್ತು. ಆದರೆ ಆ ಕೃತ್ಯಗಳಿಗೆ ನೇರ ಕಾರಣರಾದ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳ ಮೇಲೆ ಯಾವುದೇ ಕ್ರಮ ಇದುವರೆಗೂ ಜರುಗಿಸಲಿಲ್ಲ.

ಮಾನವ ಹಕ್ಕು ಕಾರ್ಯಕರ್ತ ಹಾಗೂ ಬರಹಗಾರ ಗೌತಮ್ ನವ್ಲಾಖ, ಪ್ರಾಧ್ಯಾಪಕ, ಸಾಮಾಜಿಕ ಕಾರ್ಯಕರ್ತ ಹಾಗೂ ಬರಹಗಾರ ಆನಂದ್ ತೇಲ್ತುಂಬ್ಡೆಯವರ ಮೇಲೆ ಇವೇ ಪ್ರಕರಣಗಳನ್ನು ಹೊರಿಸಲಾಗಿದೆ. ನ್ಯಾಯಾಲಯದಲ್ಲಿ ತಾತ್ಕಾಲಿಕ ಜಾಮೀನು ಸಿಕ್ಕಿರುವುದರಿಂದ ಅವರಿಬ್ಬರು ಬಂಧನದಲ್ಲಿ ಇಲ್ಲ. ಅದರೆ ಬಂಧನದ ಸಾಧ್ಯತೆಗಳು ಇಲ್ಲವೆನ್ನಲು ಸಾಧ್ಯವಿಲ್ಲ. ಈ ಬಂಧನಗಳ ವಿರುದ್ಧ ದೇಶ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ಮಟ್ಟದ ಪ್ರತಿರೋಧ ಪ್ರಕಟವಾಗಿತ್ತು. ಆದರೆ ಕರ್ನಾಟಕದಲ್ಲಿ ಈ ಬಂಧನದ ವಿರುದ್ಧ ಗಟ್ಟಿ ದನಿ ಎದ್ದಿರಲಿಲ್ಲ. ಒಂದೆರಡು ಸಭೆ ಹಾಗೂ ಖಂಡನಾ ಹೇಳಿಕೆಗೆ ಸಹಿ ಸಂಗ್ರಹ ನಡೆದಿದ್ದು ಬಿಟ್ಟರೆ ಹೇಳಿಕೊಳ್ಳುವಂತಹ ಪ್ರತಿರೋಧ ದಾಖಲಾಗಲಿಲ್ಲ. ಈ ಸಭೆಗಳೂ ಕೂಡ ಕೆಲವು ಯುವ ಪತ್ರಕರ್ತರು ಹಾಗೂ ನ್ಯಾಯವಾದಿಗಳ ಮುಂದೊಡಗಿನಿಂದ ನಡೆದವು. ಕರ್ನಾಟಕದ ಬುದ್ಧಿಜೀವಿ ವಲಯದ ಕೆಲವರು ಮಾತ್ರ ತಣ್ಣಗಿನ ಪ್ರತಿಕ್ರಿಯೆಗಳನ್ನು ನೀಡಿದ್ದರೆನ್ನಬಹುದು. ಕೆಲವು ಲೇಖನಗಳು ಪ್ರಕಟವಾದವು. ಆದರೆ ಇವ್ಯಾವುವೂ ಸಂದರ್ಭದ ಅಗತ್ಯಕ್ಕೆ ತಕ್ಕಂತಹ ಪ್ರತಿಕ್ರಿಯೆಯಾಗಿರಲಿಲ್ಲವೆಂಬುದನ್ನು ಗಮನಿಸಬೇಕು.

ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಬರಹಗಾರರ, ಸಾಹಿತಿಗಳ, ಪತ್ರಕರ್ತರ, ಮಾದ್ಯಮಗಳ, ಸಾಮಾಜಿಕ ಕಾರ್ಯಕರ್ತರ ಸಾಮಾಜಿಕ ಕ್ರಿಯಾಶೀಲತೆ ಬಹಳ ಕಡಿಮೆಯೆನ್ನಬಹುದು. ಇರುವ ಅಲ್ಪಸಕ್ರಿಯತೆಗಳಲ್ಲಿ ಏಕಮುಖವಾಗಿ ಇಲ್ಲವೇ ತಮ್ಮ ಆಯ್ಕೆಯ, ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಅನುಕೂಲ ಸಿಂಧು ಮನೋಭಾವವೇ ಮೇಲುಗೈ ಪಡೆದಿದೆ ಎನ್ನಬಹುದು. ಇದನ್ನು ನಾವು ಹಲವಾರು ಉದಾಹರಣೆಗಳಿಂದ ಅರ್ಥ ಮಾಡಿಕೊಳ್ಳಬಹುದು.

ಕರ್ನಾಟಕ ದಲಿತರ, ಮಹಿಳೆಯರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳಲ್ಲಿ ಮುಂಚೂಣಿ ರಾಜ್ಯವಾಗಿದ್ದರೂ ಅದರ ವಿರುದ್ಧ ಹೋರಾಟ ಪ್ರತಿಭಟನೆಗಳಲ್ಲಿ ರಾಜ್ಯ ಹಿಂದೆ ಬಿದ್ದಿದೆ. ಪ್ರಗತಿಪರ ವಲಯದಲ್ಲೂ ಸಂಘ ಪರಿವಾರದ ದೌರ್ಜನ್ಯಗಳ ವಿರುದ್ಧ ಮಾತನಾಡುವವರು ಉಳಿದವರ ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರಿಸುವುದು ಬಹಳ ಕಡಿಮೆ. ಯಾವುದೇ ಶಕ್ತಿ ಜನಸಾಮಾನ್ಯರ ಮೇಲೆ ದೌರ್ಜನ್ಯ ನಡೆಸಿ, ಅವರ ಹಕ್ಕುಗಳ ಮೇಲೆ ಪ್ರಹಾರ ನಡೆಸಿ, ಅವರ ಬದುಕುಗಳನ್ನು ಕಸಿದುಕೊಳ್ಳುತ್ತಿರುವುದರ ವಿರುದ್ಧ ನಿಲ್ಲಬೇಕೆಂಬ ಪ್ರಜಾತಾಂತ್ರಿಕ ಪ್ರಜ್ಞೆಯ ಕೊರತೆ ಬಹಳವಿದೆ. ರಾಜಕೀಯ ಅವಕಾಶವಾದದ ಪರಿಣಾಮ ಹಾಗೂ ಪ್ರಭಾವಗಳಿಂದಾಗಿಯೂ ಸಾಮಾಜಿಕವಾಗಿ ಭಾರೀ ಹಾನಿಗಳು ಸಂಭವಿಸುತ್ತಿವೆ. ರಾಜಕೀಯ ಅವಕಾಶವಾದಿ ಶಕ್ತಿಗಳು ತಮ್ಮ ಸ್ವಾರ್ಥದ ಲಾಭ ಹಾಗೂ ನಷ್ಟದ ಲೆಕ್ಕಾಚಾರ ಹಾಗೇನೆ ಚುನಾವಣಾ ಲೆಕ್ಕಾಚಾರಗಳಲ್ಲಿ ಒಂದು ಪಕ್ಷವನ್ನು ವಿರೋಧಿಸುತ್ತಾ ಮತ್ತೊಂದು ಅವೇ ಗುಣಗಳಿರುವ ಪಕ್ಷಕ್ಕೋ, ವ್ಯಕ್ತಿಗೋ ಬೆಂಬಲಿಸುವ ಕಾರ್ಯಗಳನ್ನು ಮಾಡುತ್ತವೆ. ಅದರಲ್ಲಿ ಕೊಚ್ಚಿ ಹೋಗುತ್ತಾ ಹಲವಾರು ಸಮಾಜಮುಖಿ ಮನಸ್ಸುಗಳನ್ನೂ ತಮ್ಮಾಂದಿಗೆ ಕೊಚ್ಚಿಕೊಂಡು ಹೋಗುತ್ತಿವೆ. ಹೊಸದಾಗಿ ಬೆಳೆದು ಬರುತ್ತಿರುವ ಸಮಾಜ ಮುಖಿ ಮನಸುಗಳನ್ನು ಸಂಕುಚಿತಗೊಳಿಸುವ, ದಾರಿ ತಪ್ಪಿಸುವ ಕೆಲಸಗಳೇ ಇಂಥವರಿಂದ ಹೆಚ್ಚಾಗಿ ಆಗುತ್ತಿರುವುದು. ಆಳುವ ಶಕ್ತಿಗಳು ಮತ್ತವರ ಬೆಂಬಲಿಗರನ್ನು ಸರಿಯಾಗಿ ಗುರುತಿಸಿ ಅವರು ಮುಂದಕ್ಕೆ ತರುತ್ತಿರುವ ಫ್ಯಾಶಿಸ್ಟ್ ನಿರಂಕುಶವಾದವನ್ನು ಸರಿಯಾಗಿ ಗ್ರಹಿಸದ ಹೊರತು ಇಂತಹ ದೂರುಗಳು, ಬಂಧನಗಳ ಮರ್ಮಗಳು ಅರ್ಥವಾಗ ಲಾರವು. ಅದನ್ನು ಗ್ರಹಿಸದೆ ಜನರ ಪ್ರತಿರೋಧಗಳನ್ನು ಒಗ್ಗೂಡಿಸಲು ಸಾಧ್ಯವಾಗದು. ಪರಸ್ಪರ ಅಪನಂಬಿಕೆ ಅನುಮಾನಗಳು ಮೂಡುವುದರಿಂದಾಗಿ ಜನಚಳವಳಿಗಳ ಬೆಳವಣಿಗೆಗೆ ಭಾರೀ ನಷ್ಟವನ್ನು ಮಾಡುತ್ತವೆ.

ಭಾರೀ ಕಾರ್ಪೊರೇಟ್ ಹಾಗೂ ಭಾರೀ ಆಸ್ತಿವಂತರನ್ನೊಳಗೊಂಡ ಆಳುವ ಶಕ್ತಿಗಳು ದೇಶದ ಜನಸಾಮಾನ್ಯರನ್ನು ಸಂಪೂರ್ಣವಾಗಿ ಹುರಿದು ಮುಕ್ಕುತ್ತಿರುವ ಕಾಲಘಟ್ಟವಿದು. ಇದುವರೆಗೂ ತೋರಿಸುತ್ತಾ ಬಂದಿದ್ದ ಪ್ರಜಾತಾಂತ್ರಿಕತೆಯ ಮುಸುಕನ್ನೂ ಕೂಡ ತೋರಿಸಲಾಗದ ಪರಿಸ್ಥಿತಿಯಲ್ಲಿ ಅವರಿದ್ದಾರೆ. ದೇಶದ ಆಡಳಿತ ವ್ಯವಸ್ಥೆಯ ಯಂತ್ರಾಂಗಗಳು, ಸಂವಿಧಾನ, ನ್ಯಾಯಾಂಗ ಹೀಗೆ ಎಲ್ಲವನ್ನೂ ನಾಮ ಮಾತ್ರಕ್ಕೆ ಸೀಮಿತಗೊಳಿಸಿ ಜನಸಾಮಾನ್ಯರ ಎಲ್ಲಾ ದುಡಿಮೆಯ ಮೇಲೆ ನೇರ ಹಿಡಿತ ಸಾಧಿಸುವ ನಿರಂಕುಶ ಆಡಳಿತ ಹೇರುವ ಪ್ರಯತ್ನಗಳನ್ನು ದಿನೇ ದಿನೇ ತೀವ್ರಗೊಳಿಸಲಾಗುತ್ತಿದೆ. ಅದು ಕೇವಲ ಸಂಘ ಪರಿವಾರ ಮಾತ್ರ ಮಾಡುತ್ತಿದೆ ಎಂದು ಭಾವಿಸುವುದು ಕೂಡ ಒಮ್ಮುಖ ಚಿಂತನೆ ಮಾತ್ರ ಆಗುತ್ತದೆ. ಇದುವರೆಗೂ ದೇಶ ಹಾಗೂ ರಾಜ್ಯವನ್ನು ಅತೀ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ಸೇರಿದಂತೆ ಚುನಾವಣೆಗಾಗಿಯೇ ಇರುವ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರ್ಯಕ್ರಮ ಇದೇ ಆಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿಯೇ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ದಾಳಿಗಳು, ದೌರ್ಜನ್ಯಗಳು, ಕೋಮು ಗಲಭೆಗಳು, ಅತ್ಯಾಚಾರಗಳು, ಜಾತಿ ದೌರ್ಜನ್ಯಗಳು, ಕಗ್ಗೊಲೆಗಳು, ಬಂಧನಗಳು, ಚಿತ್ರಹಿಂಸೆಗಳು ಇತ್ಯಾದಿಗಳನ್ನು ಗ್ರಹಿಸಬೇಕಿದೆ. ಜನಪರ ಪತ್ರಕರ್ತರು, ಜನಪರ ಬುದ್ಧಿಜೀವಿಗಳು, ಸಮಾಜಮುಖಿ ಮನಸ್ಸುಗಳು ಒಕ್ಕೊರಲಿನಿಂದ ಗಟ್ಟಿದನಿ ಮೊಳಗಿಸಿ ಪ್ರಜಾತಾಂತ್ರಿಕ ಪ್ರತಿರೋಧ ಒಡ್ಡಿ ನಿಲ್ಲಬೇಕಾದ ತುರ್ತು ಅಗತ್ಯ ಇಂದಿದೆ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News