ಲಾಭದ ಖಾಸಗೀಕರಣ; ನಷ್ಟದ ಸಾಮಾಜೀಕರಣ!
ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮಿಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ ನ್ಯಾಯಾಧೀಶರನ್ನೂ ಒಳಗೊಂಡ ಒಂದು ಜನತಾ ನ್ಯಾಯಮಂಡಳಿಯನ್ನು ರಚಿಸಿತ್ತು. ಅದರ ಮುಂದೆ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಾಕ್ಷ ಹೇಳಿ ಹಸಿಹಸಿ ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಅವುಗಳ ಆಧಾರದಲ್ಲಿ ಈ ವಿಶೇಷ ಸರಣಿಯನ್ನು ನಿರೂಪಿಸಲಾಗಿದೆ.
ಹೊಸ ಶಿಕ್ಷಣ ನೀತಿಯು ಕಡೆಗಣಿಸಲ್ಪಟ್ಟ ವರ್ಗಗಳ ಮೇಲೆ ಆಗಬಹುದಾದ ದುಷ್ಪರಿಣಾಮಗಳಿಗೆ ಯಾವುದೇ ಪರಿಗಣನೆಯನ್ನು ತೋರದೆ, ಉನ್ನತ ಶಿಕ್ಷಣವನ್ನು ಮಾರಾಟದ ಸರಕನ್ನಾಗಿ ಮಾಡುವ ಅಪಾಯಕಾರಿಯಾದ ಪುನರ್ರಚನೆ ಅಥವಾ ‘ಸುಧಾರಣೆ’ಗಳನ್ನು ಪ್ರಸ್ತಾಪಿಸುತ್ತದೆ. ಮಾತ್ರವಲ್ಲ, ಅದು ಹೆಚ್ಚು ಆಕ್ರಮಣಕಾರಿಯಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯನ್ನು ಅನುಷ್ಠಾನಗೊಳಿಸಲು ಶಿಫಾರಸು ಮಾಡುವ ಮೂಲಕ ಈಗಿರುವ ಸಾರ್ವಜನಿಕ ನಿಧಿಯಿಂದ ನಡೆಯುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಬಯಸುತ್ತಿದೆ ಎಂದು ಪ್ರೊ. ಹಬೀಬ್ ಹೇಳಿದ್ದಾರೆ.
ಸರಕಾರವು ತನ್ನ ಖಾಸಗೀಕರಣ ಮತ್ತು ಕೇಸರೀಕರಣ ಅಜೆಂಡಾದ ಅನುಷ್ಠಾನಕ್ಕಾಗಿ ಹೊಸ ಶಿಕ್ಷಣ ನೀತಿ, 2016ನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಆದರೆ, ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅದನ್ನು ಹಲವು ಬಾರಿ ಹಿಂದೆಗೆದುಕೊಂಡಿದ್ದರೂ, ಹಿಂಬಾಗಿಲ ಮೂಲಕ ನುಗ್ಗಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ಈ ಹೊಸ ಶಿಕ್ಷಣ ನೀತಿಯ ದಮನಕಾರಿ ಸ್ವರೂಪಗಳ ಪರಿಚಯ ನ್ಯಾಯಮಂಡಳಿಯ ಮುಂದೆ ಮಂಡಿಸಲಾದ ಸಾಕ್ಷಗಳಿಂದ ಆಯಿತು.
ಹೊಸ ಶಿಕ್ಷಣ ನೀತಿಯು ಕಡೆಗಣಿಸಲ್ಪಟ್ಟ ವರ್ಗಗಳ ಮೇಲೆ ಆಗಬಹುದಾದ ದುಷ್ಪರಿಣಾಮಗಳಿಗೆ ಯಾವುದೇ ಪರಿಗಣನೆಯನ್ನು ತೋರದೆ, ಉನ್ನತ ಶಿಕ್ಷಣವನ್ನು ಮಾರಾಟದ ಸರಕನ್ನಾಗಿ ಮಾಡುವ ಅಪಾಯಕಾರಿಯಾದ ಪುನರ್ರಚನೆ ಅಥವಾ ‘ಸುಧಾರಣೆ’ಗಳನ್ನು ಪ್ರಸ್ತಾಪಿಸುತ್ತದೆ. ಮಾತ್ರವಲ್ಲ, ಅದು ಹೆಚ್ಚು ಆಕ್ರಮಣಕಾರಿಯಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯನ್ನು ಅನುಷ್ಠಾನಗೊಳಿಸಲು ಶಿಫಾರಸು ಮಾಡುವ ಮೂಲಕ ಈಗಿರುವ ಸಾರ್ವಜನಿಕ ನಿಧಿಯಿಂದ ನಡೆಯುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಬಯಸುತ್ತಿದೆ ಎಂದು ಪ್ರೊ. ಹಬೀಬ್ ಹೇಳಿದ್ದಾರೆ.
ಇದೇ ವೇಳೆ, ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಲೋಕೇಶ್ ರೆಡ್ಡಿ ತನ್ನ ಸಾಕ್ಷದಲ್ಲಿ, ಪ್ರೊಗ್ರೆಸಿವ್ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ (ಪಿಡಿಎಸ್‌ಯು)ನ ಬಲವಾದ ಆಕ್ಷೇಪಗಳ ಹೊರತಾಗಿಯೂ ತೆಲಂಗಾಣ ವಿಧಾನಸಭೆಯು ಮಾರ್ಚ್ 28, 2018ರಂದು ಖಾಸಗಿ ವಿಶ್ವವಿದ್ಯಾನಿಲಯಗಳ ಮಸೂದೆಯನ್ನು ಅಂಗೀಕರಿಸಿತು ಎಂದು ಹೇಳಿದರು. ಈ ಮಸೂದೆಯು ‘ಕೆಜಿಯಿಂದ ಪಿಜಿ’ ತನಕ ಎಲ್ಲಾ ಸಾರ್ವಜನಿಕ ಶಿಕ್ಷಣವು ಉಚಿತ ಎಂಬ ಚುನಾವಣಾ ಭರವಸೆಗೆ ತದ್ವಿರುದ್ಧವಾಗಿ ಖಾಸಗೀಕರಣದ ಕಡೆಗೆ ಇಟ್ಟ ಉಡಾಫೆಯ ಕ್ರಮವಾಗಿದೆ. ಕ್ಯಾಂಪಸ್‌ಗಳಲ್ಲಿ ಪೊಲೀಸ್ ಕಾವಲು ಮುಂತಾದವುಗಳು ಸೇರಿದಂತೆ ವಿಶ್ವವಿದ್ಯಾನಿಲಯಗಳ ಮೇಲೆ ಹಲವಾರು ನಿರ್ಬಂಧಗಳ ಜೊತೆ ಇದನ್ನು ಮಂಡಿಸಲಾದರೂ, ವಿದ್ಯಾರ್ಥಿ ಸಂಘವು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್)ಯ ಖಾಸಗಿ ವಿಶ್ವವಿದ್ಯಾನಿಲಯಗಳ ಮಸೂದೆಯನ್ನು ವಿರೋಧಿಸಿತ್ತು ಎಂದು ವಿವರಿಸಿದರು.
ಜೆಎನ್‌ಯು ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು)ದ ಮಾಜಿ ಉಪಾಧ್ಯಕ್ಷರಾದ ಸಿಮೋನ್ ರೆಯಾ ಖಾನ್ ಸಲ್ಲಿಸಿದ ಲಿಖಿತ ಸಾಕ್ಷದಲ್ಲಿ, ಪ್ರಜಾಪ್ರಭುತ್ವವಾದಿ ಚೈತನ್ಯವನ್ನು ದಬ್ಬಿಹಾಕಿ, ವಿದ್ಯಾರ್ಥಿಗಳ ವೈವಿಧ್ಯತೆಗೆ ಬೆದರಿಕೆ ಒಡ್ಡುವ ಸಲುವಾಗಿ ವಿಶ್ವವಿದ್ಯಾನಿಲಯದ ಮೇಲೆ ನಡೆಯುತ್ತಿರುವ ಹಲವು ರೀತಿಯ ಖಾಸಗೀಕರಣದ ಆಕ್ರಮಣಗಳನ್ನು ಚಿತ್ರಿಸಲಾಗಿದೆ. ಈ ನ್ಯಾಯಮಂಡಳಿಯು ಅಸ್ತಿತ್ವಕ್ಕೆ ಬರುವುದಕ್ಕೆ ಕೆಲವು ತಿಂಗಳುಗಳಿಗೆ ಮುಂಚೆ ಜೆಎನ್‌ಯು ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿದ ಬದಲಾವಣೆಗಳನ್ನು ಅನುಷ್ಠಾನಗೊಳಿಸಲು ಕೆಲವು ಧೋರಣಾತ್ಮಕ ಸುತ್ತೋಲೆಗಳನ್ನು ಹೊರಡಿಸಿತು, ಅವುಗಳನ್ನು ಕ್ಯಾಂಪಸಿನೊಳಗಿನ ವಿದ್ಯಾರ್ಥಿ ಮತ್ತು ಅಧ್ಯಾಪಕ ಸಮುದಾಯಗಳು ವಿರೋಧಿಸಿದವು. ಹಲವಾರು ಪ್ರತೀಕಾರದ ಕ್ರಮಗಳ ಹೊರತಾಗಿಯೂ, ಜೆಎನ್‌ಯು, ಜೆಎನ್‌ಯುಟಿಎ ಮತ್ತು ಕ್ಯಾಂಪಸಿನೊಳಗಿರುವ ಹಲವಾರು ಶಾಲೆಗಳು ಡಿಸೆಂಬರ್ 2017ರಲ್ಲಿ 2018ರ ಚಳಿಗಾಲದ ಸೆಮಿಸ್ಟರ್‌ನಲ್ಲಿ ಅನ್ವಯವಾಗುವಂತಹ ಹಾಜರಾತಿಯನ್ನು ಕಡ್ಡಾಯ ಮಾಡುವ ನಿಯಮಗಳನ್ನು ವಿರೋಧಿಸಿದ್ದವು. ಫೆಬ್ರವರಿ 20, 2018ರಲ್ಲಿ ಜೆಎನ್‌ಯುಎಸ್‌ಯು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯಕ್ಕೆ ಆರೋಪಪಟ್ಟಿಯೊಂದನ್ನು ಸಲ್ಲಿಸುವ ಮುಖಾಂತರ ಉಪಕುಲಪತಿಯವರ ಉಚ್ಛಾಟನೆಯನ್ನೂ ಕೋರಿತ್ತು. ಭಾರೀ ಸಂಖ್ಯೆಯಲ್ಲಿ ಸಂಶೋಧನಾ ಸೀಟುಗಳ ಕಡಿತ, ಮೀಸಲಾತಿಯಲ್ಲಿ ಹತ್ತನೇ ಒಂದರಷ್ಟು ಕಡಿತ, ಅಂಕಗಳನ್ನು ನೀಡದಿರುವುದು, ಜಿಎಸ್‌ಸಿಎಎಸ್‌ಎಚ್ ತೆಗೆದುಹಾಕುವುದು, ಸಂಯೋಜಿತ ಬಿಎ-ಎಂಎ ಮತ್ತು ಎಂಫಿಲ್- ಪಿಎಚ್‌ಡಿಯನ್ನು ಪ್ರತ್ಯೇಕಿಸಲು ಯತ್ನ, ಬೋಧಕ ಸಿಬ್ಬಂದಿ ಆಯ್ಕೆ ಸಮಿತಿಗಳಲ್ಲಿ ಅಕ್ರಮ, ಪಕ್ಷಪಾತದ ನೇಮಕಾತಿಗಾಗಿ ನಿಯಮಗಳ ಜಾರಿ, ‘ಕಡ್ಡಾಯ ಹಾಜರಾತಿ’ ಹೆಸರಿನಲ್ಲಿ ಯದ್ವಾತದ್ವಾ ಮಿಲಿಟರಿ ಶಿಸ್ತಿನ ಹೇರಿಕೆ ಇತ್ಯಾದಿಯಾಗಿ ಅವರ ಧೋರಣೆಗಳನ್ನು ಈ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
ಮಾರ್ಚ್ 20, 2018ರಂದು 60 ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಸ್ವಾಯತ್ತತೆ ನೀಡುವ ಕ್ರಮ ಮತ್ತು ಜೆಎನ್‌ಯುನಂತಹ ಸಂಸ್ಥೆಗಳಿಗೆ ಹೊಸ ಕೋರ್ಸುಗಳನ್ನು ಆರಂಭಿಸುವ, ಸ್ವಂತ ಪಠ್ಯಕ್ರಮಗಳನ್ನು ರೂಪಿಸುವ ಮತ್ತು ವಿದೇಶಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದುವ ಹೆಚ್ಚುವರಿ ‘ಸ್ವಾಯತ್ತತೆ’ ನೀಡುವ ಕ್ರಮಗಳನ್ನು ಜೆಎನ್‌ಯುಎಸ್‌ಯು, ಇವು ವಾಣಿಜ್ಯೀಕರಣ ಮತ್ತು ಖಾಸಗೀಕರಣಗಳನ್ನು ಉತ್ತೇಜಿಸುವ ಧೋರಣೆಗಳೆಂಬ ನೆಲೆಯಲ್ಲಿ ಬಲವಾಗಿ ವಿರೋಧಿಸಿತ್ತು ಎಂದು ಅವರು ಇಂತಹ ಪ್ರಯತ್ನಗಳ ಹಿನ್ನೆಲೆಯನ್ನು ವಿವರಿಸಿದರು.
ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ)ದ ಅಧ್ಯಕ್ಷೆ ಮತ್ತು ಜೆಎನ್‌ಯುಎಸ್‌ಯುವಿನ ಮಾಜಿ ಅಧ್ಯಕ್ಷೆ ಸುಚೇತಾ ದೇ ಅವರು ‘ಯುಜಿಸಿಯನ್ನು ವಶಪಡಿಸಿ’ ಚಳವಳಿಯ ಆರಂಭಕ್ಕೆ ಕಾರಣವಾದ 2015ರ ಎನ್‌ಇಟಿಯೇತರ (non-NET) ಫೆಲೋಶಿಪ್‌ಗಳನ್ನು ರದ್ದುಗಳಿಸುವ ಕ್ರಮದ ಹಿಂದಿನ ಉದ್ದೇಶವನ್ನು ವಿವರಿಸಿದರು. ಇದು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಒ)ಯ ಹತ್ತನೇ ಸಚಿವ ಮಟ್ಟದ ಸಭೆ ಇನ್ನೇನು ನಡೆಯಲಿರುವ ಸಮಯದಲ್ಲಿ ಬಂದಿತ್ತು. ಅಲ್ಲಿ ಭಾರತ ಸರಕಾರವು ಉನ್ನತ ಶಿಕ್ಷಣವನ್ನು ವಿಶ್ವ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಲ್ಲ ಸೇವೆ ಎಂದು ಒಪ್ಪಲು ಹೊರಟಿತ್ತು ಮತ್ತು ಅದರ ಅರ್ಥ ಸರಕಾರ ಶಿಕ್ಷಣಕ್ಕಾಗಿ ಖರ್ಚು ಮಾಡುವುದಿಲ್ಲ ಎಂಬುದಾಗಿತ್ತು ಎಂದು ಅವರು ಹೇಳಿದರು. ವಾರ್ಧಾದ ಎಂಜಿಎಎಚ್‌ವಿಯ ವಿದ್ಯಾರ್ಥಿ ರಾಕೇಶ್ ವಿಶ್ವಕರ್ಮ ಹೇಳಿದಂತೆ ಅವರ ವಿಶ್ವವಿದ್ಯಾನಿಲಯವು ಅಕ್ಟೋಬರ್ 21, 2015ರಲ್ಲಿ ಇದನ್ನು ಪ್ರತಿಭಟಿಸಿದ ಮೊತ್ತಮೊದಲ
ವಿಶ್ವವಿದ್ಯಾನಿಲಯವಾಗಿತ್ತು. ಆದರೆ, ನಿರಂತರ ದೇಶವ್ಯಾಪಿ ಅಭಿಯಾನದ ಹೊರತಾಗಿ ಅನುದಾನ ಕಡಿತದ ರೂಪದಲ್ಲಿ ಆಕ್ರಮಣವು ಮುಂದುವರಿಯಿತು ಮತ್ತು 2016ರಲ್ಲಿ ಸೀಟುಗಳನ್ನು ಕಡಿತಗೊಳಿಸುವ ನಿಯಮಗಳನ್ನು ಜಾರಿಗೊಳಿಸಿ ಪ್ರವೇಶಾತಿಯಲ್ಲಿಯೇ ಇಳಿಕೆ ಮಾಡಲಾಯಿತು ಎಂದು ಅವರು ಹೇಳಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ವಿರೋಧಿ ಮತ್ತು ಜನವಿರೋಧಿ ಧೋರಣೆಗಳ ಆಕ್ರಮಣವನ್ನು ತಡೆದುನಿಲ್ಲಿಸಲು ವಿದ್ಯಾರ್ಥಿಗಳು ಮತ್ತು ಅಧ್ಯಾಪಕವೃಂದದ ಪ್ರತಿರೋಧವು ನಿರ್ಣಾಯಕವಾಗಿದೆ. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯು ಕೆಟ್ಟದಾಗಿ ಯೋಜಿಸಲಾದ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ರಾಜಕೀಯ ಒತ್ತಡ ಹೇರಿ ಹಿಂದೆಗೆದುಕೊಳ್ಳಲು ಕಾರಣವಾಯಿತು ಎಂದು ಪ್ರೊ. ಕುಮಾರ್ ಹೇಳಿದರು. ಆದರೆ, ಏಕಾಏಕಿಯಗಿ ಸೆಮಿಸ್ಟರ್ ಪದ್ಧತಿಯನ್ನು ಹೇರಿದ ಪ್ರಕರಣದಲ್ಲಿ ಮಾತ್ರ ಎಲ್ಲಾ ಅಧ್ಯಾಪಕರು ಅವರ ಸಂಘಟನೆಯಾದ ಡಿಯುಟಿಎ ಸೇರಿದಂತೆ ಪ್ರತಿಭಟಿಸಿದರೂ, ಅದನ್ನು ಜಾರಿಗೊಳಿಸಿದುದರಿಂದ ಸರಿಪಡಿಸಲಾಗದ ಹಾನಿಯಾಯಿತು ಎಂದು ಅವರು ಹೇಳಿದರು. ಈ ಹಾನಿಯ ಕುರಿತು ಮಾತನಾಡಿದ ಪ್ರೊ. ನಾರಾಯಣ್, ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಹಿಂದೆ ನೀಡಲಾಗುತ್ತಿದ್ದ ಶಿಕ್ಷಣದ ಗುಣಮಟ್ಟಕ್ಕೆ ಹೋಲಿಸಿದರೆ ಅದು ಈಗ ಪಾತಾಳ ತಲುಪಿದೆ ಎಂದರು.
ಶಿಕ್ಷಣದ ಖಾಸಗೀಕರಣದ ದುಷ್ಪರಿಣಾಮಗಳು ಈಗಾಗಲೇ ಕಾಣಿಸಿಕೊಳ್ಳಲು ಆರಂಭಿಸಿವೆ. ಸರಕಾರ ಶಿಕ್ಷಣದ ಕುರಿತು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಪರಿಣಾಮವು ಸಾಕ್ಷರತೆ ಪ್ರಮಾಣ ಶೇಕಡಾ 75 ರಲ್ಲಿಯೇ ಸ್ಥಿರಗೊಂಡಿರುವುದರಲ್ಲಿ ಪ್ರತಿಫಲಿಸುತ್ತಿದ್ದು, ಈ ದಶಕದಲ್ಲಿ ಬೆಳವಣಿಗೆ ದರ ಕೇವಲ ಐದು ಶೇಕಡಾಕ್ಕೆ ಸೀಮಿತಗೊಂಡಿದೆ ಎಂದು ಪ್ರೊ. ರಘುರಾಮ್ ಹೇಳಿದರು. 2014-2015ರಲ್ಲಿ ಪ್ರಾಥಮಿಕ ಶಾಲೆಗಳ ದಾಖಲಾತಿಯಲ್ಲಿ ಇಳಿಕೆಯಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯಗಳ ಸಂಖ್ಯೆಯಲ್ಲಿ ಕೇವಲ ಮೂರನೇ ಒಂದರಷ್ಟು ಮಾತ್ರ ಸರಕಾರದ ಅಸ್ತಿತ್ವ ಇದ್ದು, ಕೇವಲ ಸರಕಾರಿ ವಿಶ್ವವಿದ್ಯಾನಿಲಯಗಳು ಮಾತ್ರ ತಮ್ಮ ಕೆಳಗೆ ಅಧೀನ ಕಾಲೇಜುಗಳನ್ನು ಹೊಂದಿವೆ ಎಂದು ಅವರು ಹೇಳಿದರು. ಖಾಸಗೀಕರಣದ ಹೆಸರಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಆಗ ವಿದ್ಯಾರ್ಥಿ ನಾಯಕರಾಗಿದ್ದ ಕನ್ಹಯ್ಯಾ ಕುಮಾರ್ ಪರಿಕಲ್ಪನಾತ್ಮಕವಾಗಿ ವಿವರಿಸಿ, ಅದು ಲಾಭದ ಖಾಸಗೀಕರಣ ಮತ್ತು ನಷ್ಟದ ಸಾಮಾಜೀಕರಣ ಎಂದರು. ಶಿಕ್ಷಣ ವ್ಯವಸ್ಥೆಯು ಈಗ ಅನುಭವಿಸುತ್ತಿರುವ ಶಿಥಿಲೀಕರಣವನ್ನು ತಡೆಯಲು ಅದರ ಪುನರುಜ್ಜೀವನ ಮಾತ್ರವಲ್ಲ, ಪುನರ್ರಚನೆಯ ಅಗತ್ಯವಿದೆ ಎಂದು ಪ್ರೊ. ಕುಮಾರ್ ಹೇಳಿದರು. ಖಾಸಗೀಕರಣ ಮಾದರಿಯನ್ನು ಸಾರ್ವಜನಿಕ ಉನ್ನತ ಶಿಕ್ಷಣಕ್ಕೆ ವಿಸ್ತರಿಸಬೇಕೆಂಬ ಧೋರಣಾತ್ಮಕ ವಾದವು ಅಪಾಯಕಾರಿ ಎಂದು ಎಚ್ಚರಿಸಿದ ಅವರು, ಇಡೀ ಶಿಕ್ಷಣ ವ್ಯವಸ್ಥೆಗೆ ನಿಧಿ ಒದಗಿಸುವುದು ಸರಕಾರದ ಜವಾಬ್ದಾರಿ ಎಂದರು.
ಆದರೂ, ಸರಕಾರ ಹಿಂದಿ ಹೇರಿಕೆ ಹೊಸ ಅಜೆಂಡಾದ ಸೇರ್ಪಡೆಯ ಮೂಲಕ ಹೊಸ ಶಿಕ್ಷಣ ನೀತಿಯ ಜಾರಿಗೆ ಯತ್ನಿಸುತ್ತಲೇ ಇದ್ದು, ಬಲಪ್ರಯೋಗದ ಮೂಲಕವಾದರೂ ಅದನ್ನು ಜಾರಿಗೊಳಿಸಲೇಬೇಕು ಎಂದು ಟೊಂಕಕಟ್ಟಿದಂತಿದೆ.