ಬೊಲಿವಿಯದಲ್ಲಿ ಅಮೆರಿಕ ಮಿತ್ರಕೂಟದ ಷಡ್ಯಂತ್ರ
ಅಕ್ಟೋಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೊಲಿವಿಯ ಅಧ್ಯಕ್ಷ ಇವೋ ಮೋರೆಲ್ಸ್ ಭಾರೀ ಅಕ್ರಮಗಳನ್ನು ನಡೆಸಿದ್ದಾರೆಂದು ಹುಯಿಲೆಬ್ಬಿಸಲಾಗಿತ್ತು. ಅವರನ್ನು ಭ್ರಷ್ಟರೆಂದು ಬಿಂಬಿಸಲು ಪ್ರಯತ್ನ ನಡೆಸುತ್ತಲೇ ಬರಲಾಗಿದೆ. ಈ ದುಷ್ಟಾಚಾರಗಳನ್ನು ಟ್ವಿಟರ್‌ನಂತಹ ಸಾಮಾಜಿಕ ತಾಣಗಳ ಮೂಲಕ ಸಾವಿರಾರು ಸುಳ್ಳು ಖಾತೆಗಳನ್ನು ಸೃಷ್ಟಿಸಿ ವ್ಯಾಪಕಗೊಳಿಸಲಾಗಿತ್ತು. ಅದರಲ್ಲಿ ಅಮೆರಿಕ ಪ್ರಾಯೋಜಿತ ‘ಆರ್ಗನೈಝೇಷನ್ ಫಾರ್ ಅಮೆರಿಕನ್ ಸ್ಟೇಟ್ಸ್’ ಎಂಬ ಸಂಘಟನೆಯದೇ ಪ್ರಧಾನ ಪಾತ್ರವಾಗಿದೆ. ಆದರೆ ಚುನಾವಣಾ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಪುರಾವೆಗಳನ್ನು ಒದಗಿಸಲು ಇದುವರೆಗೂ ಸಾಧ್ಯವಾಗಿಲ್ಲ. ಬೊಲಿವಿಯದ ಮೂಲನಿವಾಸಿ ಇನ್ನಿತರ ಜನಸಮುದಾಯಗಳು ಈ ದುಷ್ಟಾಚಾರಗಳನ್ನು ನಂಬದೇ ಇವೋ ಮೋರೆಲ್ಸ್‌ರನ್ನು ಬೆಂಬಲಿಸಿ ಬೀದಿಗಿಳಿದಿದ್ದಾರೆ. ಬಲಪಂಥೀಯ ಶಕ್ತಿಗಳು ಬೀದಿಕಾಳಗದಲ್ಲಿ ನಿರತವಾಗಿವೆ.
ದಕ್ಷಿಣ ಅಮೆರಿಕ ಖಂಡದ ಐದನೇ ದೊಡ್ಡ ರಾಷ್ಟ್ರ ಬೊಲಿವಿಯ ಇಂದು ಪ್ರಕ್ಷುಬ್ಧಗೊಂಡಿದೆ. ಸುಮಾರು 12 ಕೋಟಿಗಳಷ್ಟು ಜನಸಂಖ್ಯೆ ಇರುವ ಲ್ಯಾಟಿನ್ ಅಮೆರಿಕದ ಒಂದು ಪ್ರಮುಖ ರಾಷ್ಟ್ರವಾದ ಬೊಲಿವಿಯದಲ್ಲಿ ಕಳೆದ ಅಕ್ಟೋಬರ್ 20 -2019ರಂದು ಸಾರ್ವತ್ರಿಕ ಚುನಾವಣೆ ನಡೆದಿತ್ತು. ಅದರಲ್ಲಿ ಹಾಲಿ ಅಧ್ಯಕ್ಷ ಇವೋ ಮೋರೆಲ್ಸ್ ಬಹುಮತ ಪಡೆದು ಗೆಲುವು ಸಾಧಿಸಿದ್ದರು. ಕಳೆದ ಹದಿನಾಲ್ಕು ವರ್ಷಗಳಿಂದಲೂ ಬೊಲಿವಿಯ ಅಧ್ಯಕ್ಷರಾಗಿ ಇವೋ ಮೋರೆಲ್ಸ್ ಇದ್ದರು. ಇವೋ ಮೋರೆಲ್ಸ್ ಅವಧಿಯಲ್ಲಿ ಬೊಲಿವಿಯ ಅಂತರ್‌ರಾಷ್ಟ್ರೀಯ ಹಣಕಾಸುನಿಧಿಯ ಹಿಡಿತದಿಂದ ಹೊರಬಂದಿತ್ತು. ಅದಕ್ಕೂ ಮೊದಲು ಸರಕಾರದ ನೀತಿ ನಿರೂಪಣೆಯಲ್ಲಿ ಹಾಗೂ ಆಡಳಿತದಲ್ಲಿ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ನೇರವಾಗಿ ಹಸ್ತಕ್ಷೇಪ ನಡೆಸುತ್ತಾ ಬಂದಿದ್ದವು. ಅದರಿಂದ ಹೊರಬಂದ ನಂತರ ರಾಷ್ಟ್ರದ ಆರ್ಥಿಕತೆಯಲ್ಲಿ ಚೇತರಿಕೆ ಕಾಣ ತೊಡಗಿತ್ತು. ಸಂಪನ್ಮೂಲಗಳನ್ನು ರಾಷ್ಟ್ರದ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಪ್ರಕ್ರಿಯೆ ಚುರುಕು ಕಾಣತೊಡಗಿದ್ದವು. ಇವೋ ಮೋರೆಲ್ಸ್ ನೇತೃತ್ವದ ಸರಕಾರದ ಈ ಕ್ರಮಗಳು ಅಮೆರಿಕ ಹಾಗೂ ಯೂರೋಪ್ ಮೂಲದ ಭಾರೀ ಕಾರ್ಪೊರೇಟ್‌ಗಳ ಹಿತಾಸಕ್ತಿಗೆ ವಿರುದ್ಧವಾಗಿದ್ದವು ಎನ್ನುವುದನ್ನು ಹೇಳಬೇಕಾಗಿಲ್ಲ. ಸಹಜವಾಗಿ ಅಮೆರಿಕ ಸಾಮ್ರಾಜ್ಯಶಾಹಿಯ ಗುಪ್ತ ಹಾಗೂ ಬಹಿರಂಗ ಯಂತ್ರಾಂಗಗಳು ಸಮಾಜವಾದಕ್ಕಾಗಿನ ಚಳವಳಿ (ಮೂವ್ ಮೆಂಟ್ ಫಾರ್ ಸೋಷಿಯಲಿಸಂ) ಪಕ್ಷದ ಇವೋ ಮೋರೆಲ್ಸ್ ನೇತೃತ್ವದ ಸರಕಾರದ ವಿರುದ್ಧ ಜನರನ್ನು, ಅದರಲ್ಲೂ ಮಧ್ಯಮ ಹಾಗೂ ಶ್ರೀಮಂತ ವರ್ಗಗಳನ್ನು ಎತ್ತಿಕಟ್ಟುವ ಕೆಲಸಗಳಲ್ಲಿ ತೊಡಗುತ್ತಾ ಬಂದಿದ್ದವು.
ಲ್ಯಾಟಿನ್ ಅಮೆರಿಕದ ರಾಷ್ಟ್ರಗಳ ಮಾರುಕಟ್ಟೆ ತಮ್ಮ ಹಿಡಿತಗಳಿಂದ ತಪ್ಪಿಹೋಗುವುದು ಅಮೆರಿಕ ಹಾಗೂ ಯೂರೋಪಿನ ಭಾರೀ ಕಾರ್ಪೊರೇಟ್‌ಗಳಿಗೆ ಸಹಿಸಲಾಗದ ಸಂಗತಿಯಾಗಿತ್ತು. ಅದಕ್ಕೆ ಪೂರಕವಾಗಿ ಪ್ರಭುತ್ವ ಸಮಾಜವಾದವನ್ನು ಪ್ರತಿಪಾದಿಸುವ ಹಲವು ಪ್ರಯೋಗಗಳು ಲ್ಯಾಟಿನ್ ಅಮೆರಿಕ ರಾಷ್ಟ್ರಗಳಲ್ಲಿ ನಡೆಯುತ್ತಾ ಬರುತ್ತಿದ್ದವು. ಲ್ಯಾಟಿನ್ ಅಮೆರಿಕ ಎಂದಾಗ ದಕ್ಷಿಣ ಅಮೆರಿಕ ಖಂಡದ ಎಲ್ಲಾ ರಾಷ್ಟ್ರಗಳು ಹಾಗೂ ಮೆಕ್ಸಿಕೋ ರಾಷ್ಟ್ರವನ್ನು ಕೂಡ ಸೇರಿಸಿಕೊಂಡು ಸಾಮಾನ್ಯವಾಗಿ ಗುರುತಿಸಲಾಗುತ್ತದೆ. ಚಿಲಿ, ಈಕ್ವೆಡಾರ್, ಕ್ಯೂಬಾ, ವೆನೆಝುವೆಲಾ, ಬ್ರೆಝಿಲ್, ಬೊಲಿವಿಯ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರಭುತ್ವದ ಮೂಲಕ ಸಮಾಜವಾದವನ್ನು ಸ್ಥಾಪಿಸುವ ಪ್ರಯೋಗಗಳು ನಡೆದಿವೆ, ನಡೆಯುತ್ತಲೂ ಇವೆ. ಅದರಲ್ಲಿ ಕ್ಯೂಬಾ ನಿರಂತರತೆಯನ್ನು ಹಲವಾರು ಪ್ರಾಯೋಗಿಕ ಸಮಸ್ಯೆಗಳೊಂದಿಗೆ ಕಾಯ್ದುಕೊಂಡಿದೆ. ಅಮೆರಿಕ ಮಿತ್ರ ಕೂಟದ ನಿರಂತರ ನಿರ್ಬಂಧಗಳ ನಡುವೆಯೂ ಅಲ್ಲಿನ ಜನರ ಜೀವನ ಮಟ್ಟ, ಆರೋಗ್ಯ, ವಸತಿ, ಶಿಕ್ಷಣಗಳಲ್ಲಿ ಗಮನಾರ್ಹ ಸಾಧನೆಗಳನ್ನು ಸಾಧಿಸಿದೆ.
ಚಿಲಿಯಲ್ಲಿ ಆ ಪ್ರಯೋಗ ಅದರ ಚುನಾಯಿತ ಅಧ್ಯಕ್ಷ ಸಾಲ್ವಾಡಾರ್ ಅಲಂಡೆಯನ್ನು 1973ರಲ್ಲಿ ಅಮೆರಿಕ ಪ್ರಾಯೋಜಿತ ಸೈನಿಕ ದಂಗೆಯಲ್ಲಿ ಕೊಲ್ಲುವುದರೊಂದಿಗೆ ಪರ್ಯಾವಸಾನ ಕಂಡಿತ್ತು. ಸ್ವತಃ ವೈದ್ಯರಾಗಿದ್ದ ಅಲೆಂಡೆ ಚಿಲಿ ರೀತಿಯ ಸಮಾಜವಾದವೆಂದು ತಮ್ಮ ಸಿದ್ಧಾಂತವನ್ನು ಹಾಗೂ ಪ್ರಯೋಗವನ್ನು ಕರೆದುಕೊಂಡಿದ್ದರು. ಅಮೆರಿಕ ಹಾಗೂ ಯೂರೋಪಿನ ಭಾರೀ ಕಾರ್ಪೊರೇಟ್‌ಗಳ ಹಿಡಿತದಲ್ಲಿದ್ದ ಚಿಲಿ ರಾಷ್ಟ್ರದ ಭೂಮಿ ಇನ್ನಿತರ ಸಂಪತ್ತನ್ನು ರಾಷ್ಟ್ರೀಕರಣ ಮಾಡಿ, ಭೂಮಿ ಹಂಚಿಕೆ ನಡೆಸಿದ ಬೆನ್ನಲ್ಲೇ ಸೇನಾ ದಂಗೆ ನಡೆದು ಕೊಲ್ಲಲ್ಪಟ್ಟರು. ಆಸ್ತಿವಂತರು ಹಾಗೂ ಬಂಡವಾಳಶಾಹಿಗಳು ಸೇರಿದಂತೆ ಬಲ ಪಂಥೀಯ ಶಕ್ತಿಗಳು ಈ ದಂಗೆಯನ್ನು ಬೆಂಬಲಿಸಿದ್ದವು. ಸೇನಾ ಜನರಲ್ ಅಗಸ್ಟೋ ಪಿನೋಷೆ ಅಮೆರಿಕದ ಕೈಗೊಂಬೆಯಾಗಿ ಈ ಸೈನಿಕ ದಂಗೆಯ ನೇತೃತ್ವ ವಹಿಸಿ ನಂತರ ಚಿಲಿಯ ಅಧ್ಯಕ್ಷನಾಗಿ ಅಧಿಕಾರದಲ್ಲಿ ಮುಂದುವರಿದ. ಸೇನಾ ನಿರಂಕುಶ ಅಧಿಕಾರವನ್ನು ಚಿಲಿಯನ್ನರ ಮೇಲೆ ಹೇರಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದ್ದ. ಈತನ ಅಧಿಕಾರಾವಧಿಯಲ್ಲಿ ವ್ಯಾಪಕವಾದ ಪ್ರಭುತ್ವ ಹಿಂಸಾಚಾರಗಳು, ಕಗ್ಗೊಲೆಗಳು, ಮಾನವ ಹಕ್ಕು ಹರಣಗಳು ನಡೆದು ಅಂತರ್‌ರಾಷ್ಟ್ರೀಯ ಸಮುದಾಯದ ಗಮನವನ್ನೂ ಸೆಳೆದಿತ್ತು. ಅಮೆರಿಕ ಆತನ ಬೆಂಬಲಕ್ಕೆ ನಿಂತಿತ್ತು.
ಹಾಗಿದ್ದಾಗ್ಯೂ ಅಂತಹ ಪ್ರಭುತ್ವ ಸಮಾಜವಾದಿ ಪ್ರಯೋಗಗಳು ಲ್ಯಾಟಿನ್ ಅಮೆರಿಕದ ಹಲವಾರು ರಾಷ್ಟ್ರಗಳಲ್ಲಿ ನಿಂತಿರಲಿಲ್ಲ. ಕ್ಯೂಬಾ ಕ್ರಾಂತಿಯ ನಾಯಕತ್ವದಲ್ಲಿ ಒಬ್ಬರಾಗಿದ್ದ ಅರ್ನೆಷ್ಟೋ ಚೆಗುವಾರ ಕ್ಯೂಬಾದ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗೋ-ಕಿನ್ಸಾಸ ನಂತರ ಬೊಲಿವಿಯವನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿ ಮಾಡಿದ್ದರು. ಕ್ಯೂಬಾ ರೀತಿಯ ಕ್ರಾಂತಿ ನಡೆಸಲು ಕೈಗೂಡಿಸಿದ್ದರು. ಆ ಪ್ರಕ್ರಿಯೆಯಲ್ಲೇ ಅಮೆರಿಕದ ಕುಖ್ಯಾತ ಗೂಢಚಾರಿ ಸಂಸ್ಥೆ ಸಿಐಎಯ ಕುತಂತ್ರದಿಂದಾಗಿ ಅಕ್ಟೋಬರ್ 9-1967ರಲ್ಲಿ ಕೊಲೆಗೀಡಾಗಿದ್ದರು. ಲ್ಯಾಟಿನ್ ಅಮೆರಿಕಾದ್ಯಂತ ಚೆಗುವಾರ ಈಗಲೂ ಭಾರೀ ಜನಬೆಂಬಲವನ್ನು ಹೊಂದಿದ್ದಾರೆ.
ಚೆಗುವಾರ ತಮ್ಮ ಕೊನೆಯ ದಿನಗಳಲ್ಲಿ ಕ್ರಾಂತಿಕಾರಿ ಚಟುವಟಿಕೆಗಳ ಕರ್ಮ ಭೂಮಿಯಾಗಿಸಿಕೊಂಡಿದ್ದ ಬೊಲಿವಿಯ ಮತ್ತದೇ ಅಮೆರಿಕ ನೇತೃತ್ವದ ಸಾಮ್ರಾಜ್ಯಶಾಹಿ ಶಕ್ತಿಗಳ ಕುತಂತ್ರಗಳಿಂದಾಗಿ ಇಂದು ರಾಜಕೀಯ ಅರಾಜಕತೆಯ ತಾಣವಾಗಿ ಮಾರ್ಪಟ್ಟಿದೆ. ಅಲ್ಲಿನ ಸೇನಾ ಮುಖ್ಯಸ್ಥರು ಹಾಗೂ ಪೊಲೀಸ್ ಮುಖ್ಯಸ್ಥರು ಕೂಡ ಅದರಲ್ಲಿ ಶಾಮೀಲಾಗಿದ್ದಾರೆ. ಸಂವಿಧಾನದತ್ತವಾಗಿ ಜನರಿಂದ ಚುನಾಯಿತರಾಗಿದ್ದ ಅಧ್ಯಕ್ಷ ಇವೋ ಮೋರೆಲ್ಸ್‌ರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಲಾಗಿದೆ. ಅವರ ಜೀವಕ್ಕೆ ಅಪಾಯವೊಡ್ಡಿ ದೇಶಭ್ರಷ್ಟರಾಗಿ ಮೆಕ್ಸಿಕೋದಲ್ಲಿ ಆಶ್ರಯವನ್ನು ಪಡೆಯಬೇಕಾದ ಸ್ಥಿತಿಯನ್ನು ನಿರ್ಮಿಸಲಾಗಿದೆ. ಜೀನೈನ್ ಅನೀಜ್ ಎಂಬ ಬಲ ಪಂಥೀಯ ಸೆನೆಟರ್ ಆಗಿರುವ ಮಹಿಳೆಯೊಬ್ಬರನ್ನು ಆ ರಾಷ್ಟ್ರದ ಸಂವಿಧಾನ ಹಾಗೂ ಶಾಸನ ಸಭೆಯ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಹಂಗಾಮಿ ಅಧ್ಯಕ್ಷರನ್ನಾಗಿ ಕುಳ್ಳಿರಿಸಲಾಗಿದೆ.
ಚುನಾಯಿತ ಸದಸ್ಯರಿಗೆ ಸಂಸತ್ತು ಪ್ರವೇಶಿಸಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಹಂಗಾಮಿ ಅಧ್ಯಕ್ಷೆ ಆದಷ್ಟು ಬೇಗ ಚುನಾವಣೆ ನಡೆಸುವುದಾಗಿಯೂ ಹೇಳಿಕೆ ನೀಡಿದ್ದಾರೆ. ಜೊತೆಜೊತೆಯಲ್ಲೇ ಇವೋ ಮೋರೆಲ್ಸ್ ಆ ಚುನಾವಣೆಯ ಭಾಗವಾಗದಂತೆ ನೋಡಿಕೊಳ್ಳುವ ನಡೆಗಳು ಆರಂಭವಾಗಿವೆ. ವಿಶೇಷವೆಂದರೆ ಸ್ವತಹ ಚುನಾಯಿತ ಅಧ್ಯಕ್ಷ ಇವೋ ಮೋರೆಲ್ಸ್ ಕೂಡ ವಿವಾದವನ್ನು ಕೊನೆಗೊಳಿಸಲು ಮತ್ತೊಮ್ಮೆ ಚುನಾವಣೆ ನಡೆಸುವ ನಡೆಯನ್ನು ಘೋಷಿಸಿದ್ದರು. ಆದರೂ ಅವರನ್ನು ಬಲವಂತವಾಗಿ ಪದಚ್ಯುತರನ್ನಾಗಿ ಮಾಡಲಾಗಿದೆ. ಇದರ ಹಿಂದಿರುವ ಅಮೆರಿಕ ಮಿತ್ರಕೂಟದ ಉದ್ದೇಶ ಸ್ಪಷ್ಟ. ಇವೋ ಮೋರೆಲ್ಸ್ ಹಾಗೂ ಅವರ ಪಕ್ಷವನ್ನು ಆ ರಾಷ್ಟ್ರದ ರಾಜಕೀಯ ಪ್ರಕ್ರಿಯೆಗಳಿಂದಲೇ ಹೊರಗಿಡುವ ಕುತಂತ್ರವೇ ಇದಾಗಿದೆ.
ಹಾಗಾದಾಗ ಮಾತ್ರ ತಮ್ಮ ಕೈಗೊಂಬೆ ಸರಕಾರವನ್ನು ಬೊಲಿವಿಯದಲ್ಲಿ ಸ್ಥಾಪಿಸಲು ಸಾಧ್ಯ ಎನ್ನುವುದಾಗಿದೆ. ಬ್ರೆಝಿಲ್‌ನಲ್ಲಿ ಇಂತಹುದೇ ಪ್ರಯೋಗಗಳನ್ನು ಅಮೆರಿಕ ಮಿತ್ರ ಕೂಟ ಮಾಡಿ ಸಾಕಷ್ಟು ಯಶಸ್ಸು ಪಡೆದುಕೊಂಡಿದೆ. ಅಲ್ಲಿ ಜನಾದರಣೆಯಲ್ಲಿ ಮುಂದಿದ್ದ ಲೂಯಿಸ್ ಇನಾಷಿಯೋ ಲೂಲ ಡಿ’ ಸಿಲ್ವಾರನ್ನು ಹಣಕಾಸು ಅವ್ಯವಹಾರದ ಆರೋಪದಡಿ ಪದಚ್ಯುತಗೊಳಿಸಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲಾಗಿತ್ತು. ಆನಂತರ ಅವರ ಮೇಲಿನ ಆರೋಪಗಳು ಸಾಬೀತಾಗಿದೆಯೆಂದು ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಲೂಲರಿಗೆ ಶಿಕ್ಷೆ ನೀಡಿದ ಸೆರ್ಜಿ ಮೋರೋ ಎಂಬ ನ್ಯಾಯಾಧೀಶರು ನಂತರದ ಜೈರ್ ಬೊಲ್ಸೊನಾರೋ ನೇತೃತ್ವದ ಬಲಪಂಥೀಯ ಸರಕಾರದಲ್ಲಿ ನ್ಯಾಯ ಮಂತ್ರಿಯೂ ಆದರು. ಈಗ ಮೋದಿ ಸರಕಾರ ಜೈರ್ ಬೊಲ್ಸೊನಾರೋ ರನ್ನು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದೆ.
ಲೂಲರನ್ನು ಅಧ್ಯಕ್ಷ ಪದವಿಯಿಂದ ಹೊರಗಿರುವಂತೆ ನೋಡಿಕೊಳ್ಳಲು ಮತ್ತು ಶಿಕ್ಷೆ ನೀಡಿ ಕಾರಾಗೃಹಕ್ಕೆ ಕಳಿಸಲು ಸಂಬಂಧಪಟ್ಟ ನ್ಯಾಯಾಧೀಶರೇ ಭಾರೀ ಮೊತ್ತವನ್ನು, ಇನ್ನಿತರ ಸೌಲಭ್ಯಗಳನ್ನು ಪಡೆದುಕೊಂಡಿದ್ದರು, ಸಂಚಿನಲ್ಲಿ ಪಾಲುದಾರರಾಗಿದ್ದರು ಎಂಬುದು ಹಲವಾರು ದಾಖಲೆಗಳ ಮೂಲಕ ಇತ್ತೀಚೆಗೆ ಬಹಿರಂಗವಾಯಿತು. ಇದೀಗ ಲೂಲ ಡಿ’ಸಿಲ್ವಾ ಕಾರಾಗೃಹದಿಂದ ಹೊರಬಂದಿದ್ದಾರೆ.
ಅಕ್ಟೋಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬೊಲಿವಿಯ ಅಧ್ಯಕ್ಷ ಇವೋ ಮೋರೆಲ್ಸ್ ಭಾರೀ ಅಕ್ರಮಗಳನ್ನು ನಡೆಸಿದ್ದಾರೆಂದು ಹುಯಿಲೆಬ್ಬಿಸಲಾಗಿತ್ತು. ಅವರನ್ನು ಭ್ರಷ್ಟರೆಂದು ಬಿಂಬಿಸಲು ಪ್ರಯತ್ನ ನಡೆಸುತ್ತಲೇ ಬರಲಾಗಿದೆ. ಈ ದುಷ್ಟಾಚಾರಗಳನ್ನು ಟ್ವಿಟರ್‌ನಂತಹ ಸಾಮಾಜಿಕ ತಾಣಗಳ ಮೂಲಕ ಸಾವಿರಾರು ಸುಳ್ಳು ಖಾತೆಗಳನ್ನು ಸೃಷ್ಟಿಸಿ ವ್ಯಾಪಕಗೊಳಿಸಲಾಗಿತ್ತು. ಅದರಲ್ಲಿ ಅಮೆರಿಕ ಪ್ರಾಯೋಜಿತ ‘ಆರ್ಗನೈಝೇಷನ್ ಫಾರ್ ಅಮೆರಿಕನ್ ಸ್ಟೇಟ್ಸ್’ ಎಂಬ ಸಂಘಟನೆಯದೇ ಪ್ರಧಾನ ಪಾತ್ರವಾಗಿದೆ. ಆದರೆ ಚುನಾವಣಾ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಪುರಾವೆಗಳನ್ನು ಒದಗಿಸಲು ಇದುವರೆಗೂ ಸಾಧ್ಯವಾಗಿಲ್ಲ. ಬೊಲಿವಿಯದ ಮೂಲನಿವಾಸಿ ಇನ್ನಿತರ ಜನಸಮುದಾಯಗಳು ಈ ದುಷ್ಟಾಚಾರಗಳನ್ನು ನಂಬದೇ ಇವೋ ಮೋರೆಲ್ಸ್‌ರನ್ನು ಬೆಂಬಲಿಸಿ ಬೀದಿಗಿಳಿದಿದ್ದಾರೆ. ಬಲಪಂಥೀಯ ಶಕ್ತಿಗಳು ಬೀದಿಕಾಳಗದಲ್ಲಿ ನಿರತವಾಗಿವೆ.
ಸೇನೆ ಹಾಗೂ ಪೊಲೀಸ್ ಇವೋ ಮೋರೆಲ್ಸ್‌ರ ಬೆಂಬಲಿಗರ ಮೇಲೆ ಹಿಂಸಾಚಾರಗಳನ್ನು ನಡೆಸುತ್ತಿವೆ. ಈಗಾಗಲೇ ಹತ್ತಾರು ಸಾವು ನೋವುಗಳಾಗಿವೆ. ಪ್ರತಿಭಟನೆಗಳು ರಾಷ್ಟ್ರಾದ್ಯಂತ ನಡೆಯತೊಡಗಿವೆ. ಸ್ವತಃ ಚುನಾಯಿತ ಅಧ್ಯಕ್ಷ ಇವೋ ಮೋರೆಲ್ಸ್ ತಮ್ಮ ರಾಜೀನಾಮೆಗೆ ಮುಖ್ಯ ಕಾರಣ ಹಿಂಸಾಚಾರಗಳಾಗದಂತೆ ತಡೆಯುವುದೇ ಆಗಿದೆ ಎಂದಿದ್ದಾರೆ. ತಾವು ಮತ್ತೆ ಬರುವುದಾಗಿಯೂ ಗೆಲುವು ತಮ್ಮದೇ ಆಗುತ್ತದೆ ಎಂಬಂತೆ ಜನರಲ್ಲಿ ಭರವಸೆಯ ಮಾತುಗಳನ್ನಾಡಿದ್ದಾರೆ. ಅಮೆರಿಕ ಇಂತಹುದೇ ಆರೋಪಗಳನ್ನು ಮಾಡಿ ವೆನೆಝುವೆಲಾದಲ್ಲಿ ಬುಡಮೇಲು ಕೃತ್ಯಗಳಲ್ಲಿ ತೊಡಗಿರುವುದನ್ನು ಇಲ್ಲಿ ಗಮನಿಸಬಹುದು. ಅಲ್ಲಿನ ಚುನಾಯಿತ ನಿಕೋಲಸ್ ಮಡುರೋ ಸರಕಾರವನ್ನು ಬೀಳಿಸಿ ತನ್ನ ಕೈಗೊಂಬೆಯಾದ ವಿರೋಧ ಪಕ್ಷದ ನಾಯಕನ ಸರಕಾರವನ್ನು ಸ್ಥಾಪಿಸಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದರೂ ಅಲ್ಲಿನ ಎಚ್ಚೆತ್ತ ಜನರ ಪ್ರತಿರೋಧದಿಂದಾಗಿ ಅದು ಇದುವರೆಗೂ ಸಾಧ್ಯವಾಗಿಲ್ಲ. ಈಗ ಬೊಲಿವಿಯದಲ್ಲಿ ಅಮೆರಿಕ ಮಿತ್ರ ಕೂಟ ಅಕ್ರಮಗಳಲ್ಲಿ ತೊಡಗಿದೆ. ಅಂತಹವುಗಳನ್ನು ಬೊಲಿವಿಯದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದೇ ಬಿಂಬಿಸಿಕೊಳ್ಳುತ್ತಿರುವುದು ಇಂದಿನ ಸಂದರ್ಭದಲ್ಲಿ ಮತ್ತೂ ಹಾಸ್ಯಾಸ್ಪದವಾಗಿದೆ.
ಯಾಕೆಂದರೆ ಅಮೆರಿಕ ತನ್ನ ನೆಲದಲ್ಲಿಯೇ ಅವರು ಪ್ರತಿಪಾದಿಸುವ ಪ್ರಜಾಪ್ರಭುತ್ವ ಮೇಲ್ಮಟ್ಟದಲ್ಲೂ ಪಾಲಿಸದಂತಹ ಸ್ಥಿತಿಯಲ್ಲಿದೆ. ಅದು ಬಹುಸಂಖ್ಯಾತ ಅಮೆರಿಕನ್ನರ ಇಂದಿನ ಅನುಭವಗಳಾಗಿವೆ. ಅಮೆರಿಕ ಹತ್ತು ಹಲವು ಸುಳ್ಳು ಆರೋಪಗಳಡಿ ಇರಾಕ್, ಲಿಬಿಯಾ ಮೊದಲಾದ ರಾಷ್ಟ್ರಗಳ ಮೇಲೆ ಯುದ್ಧ ಮಾಡಿ ನೂರಾರು ಅಮೆರಿಕದ ಸೈನಿಕರನ್ನು ಬಲಿ ಕೊಟ್ಟಿರುವುದು, ನಂತರ ಅಮೆರಿಕ ಮತ್ತದರ ಮಿತ್ರಕೂಟ ಮುಂದೊಡ್ಡಿದ ಆರೋಪಗಳು ಸುಳ್ಳೆಂದು ಒಪ್ಪಿಕೊಳ್ಳಬೇಕಾದ ಸ್ಥಿತಿಯೊದಗಿದ್ದು ಅಮೆರಿಕದ ಜನರಿಗೆ ಅರ್ಥವಾಗಿರುವ ವಿಚಾರ. ಜಾಗತಿಕವಾಗಿ ಹಿಂದೆ ಇದ್ದ ಬಂಡವಾಳಶಾಹಿ ಪ್ರಜಾಪ್ರಭುತ್ವ ಕೂಡ ಅಮೆರಿಕ ಹಾಗೂ ಯೂರೋಪಿನ ಹತ್ತಾರು ರಾಷ್ಟ್ರಗಳಲ್ಲಿ ಇಂದು ತನ್ನ ಅಸ್ತಿತ್ವ ಕಳೆದುಕೊಂಡಾಗಿದೆ. ಅಲ್ಲೆಲ್ಲ ಒಂದಲ್ಲಾ ಒಂದು ರೀತಿಯಲ್ಲಿ ಸರ್ವಾಧಿಕಾರಿ, ಇಲ್ಲವೇ ಬಹುತೇಕವಾಗಿ ನಿರಂಕುಶ ಆಡಳಿತ ವ್ಯವಸ್ಥೆಯನ್ನು ಚಾಲ್ತಿಗೆ ತರಲಾಗಿದೆ. ಅದರಲ್ಲಿ ಬಹುಪಾಲು ಆಯಾ ರಾಷ್ಟ್ರಗಳ ಸಂವಿಧಾನ ಹಾಗೂ ಶಾಸನಾತ್ಮಕ ಮನ್ನಣೆಯೊಂದಿಗೆ ಜಾರಿಗೆ ತರಲಾಗಿದೆ ಎನ್ನುವ ಮುಖ್ಯ ಅಂಶವನ್ನು ನಾವಿಲ್ಲಿ ಗಮನಿಸಬೇಕು. ಅಂದರೆ ಸಂವಿಧಾನಬದ್ಧವೆಂದು ಬಿಂಬಿಸಿಕೊಂಡೇ ಅಲ್ಲೆಲ್ಲಾ ನಿರಂಕುಶ ಫ್ಯಾಶಿಸ್ಟ್ ಆಳ್ವಿಕೆ ಜಾರಿಯಾಗಿವೆ. ಜಾಗತಿಕ ಭಾರೀ ಕಾರ್ಪೊರೇಟ್‌ಗಳಿಗೆ ಮಾರುಕಟ್ಟೆಯ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಬೊಲಿವಿಯದಂತಹ ರಾಷ್ಟ್ರಗಳಲ್ಲಿ ಬುಡಮೇಲು ಕೃತ್ಯಗಳನ್ನು ಸಂಘಟಿಸುತ್ತಿರುವುದು ಅಲ್ಲಿನ ಆಡಳಿತ ವ್ಯವಸ್ಥೆಗಳನ್ನು ತಮ್ಮ ನೇರ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವುದು ಇಂದಿನ ವಿದ್ಯಮಾನಗಳಾಗಿವೆ. ಬೊಲಿವಿಯ ಜನತೆ ಅದಕ್ಕೆ ಬಲಿಯಾಗುವರೇ ಕಾದು ನೋಡಬೇಕಿದೆ.
ಭಾರತದ ಜನಸಾಮಾನ್ಯರು ಬೊಲಿವಿಯ, ಬ್ರೆಝಿಲ್, ವೆನೆಝುವೆಲಾದ ಬೆಳವಣಿಗೆಗಳನ್ನು ಗ್ರಹಿಸುವ ಅವಶ್ಯಕತೆಯಿದೆ. ಅಮೆರಿಕ ಮೊದಲಾದ ಜಾಗತಿಕ ಸಾಮ್ರಾಜ್ಯಶಾಹಿ ರಾಷ್ಟ್ರಗಳು ನಮ್ಮ ದೇಶದ ಆಡಳಿತ ವ್ಯವಸ್ಥೆಯ ಮೇಲಿನ ಹಿಡಿತಗಳನ್ನು ಯಾವ್ಯಾವ ರೀತಿಗಳಲ್ಲಿ ಚಲಾಯಿಸುತ್ತಾ ಇಂದು ದೇಶ ತಲುಪಿರುವ ಅಪಾಯಕಾರಿ ಸ್ಫೋಟಕ ಸ್ಥಿತಿಗೆ ಪ್ರಧಾನ ಕಾರಣವಾಗಿವೆ ಎನ್ನುವುದನ್ನು ಗಮನಿಸಬೇಕು. ನಮ್ಮ ದೇಶದ ಎಲ್ಲಾ ಸಂಪನ್ಮೂಲಗಳಲ್ಲಿ ಬಹುಪಾಲನ್ನು ಯಾವ್ಯಾವ ರೀತಿಗಳಲ್ಲಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮ ರಾಷ್ಟ್ರಗಳಿಗೆ ಸಾಗಿಸುತ್ತಾ ಬಂದಿವೆ ಎನ್ನುವುದನ್ನು ಗ್ರಹಿಸಬೇಕು. ಇಲ್ಲಿನ ಚುನಾವಣೆಯೂ ಸೇರಿದಂತೆ ರಾಜಕೀಯ ಅಧಿಕಾರದ ಪ್ರಕ್ರಿಯೆಗಳಲ್ಲಿ ಮತ್ತು ಅಂಗಗಳಲ್ಲಿ ಅವರ ಹಿಡಿತಗಳನ್ನು ತಪ್ಪಿಸುವ ಬಗೆ ಹೇಗೆಂಬುದನ್ನು ಬಹಳ ಗಂಭೀರವಾಗಿ ನೋಡಬೇಕಿದೆ.
ಮಿಂಚಂಚೆ: nandakumarnandana67gmail.com